ಮಂಡ್ಯ: ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರೈತ ಸಂಘದ ಸಂಘಟನಾ ಕರ‍್ಯದರ್ಶಿ ಎಸ್.ಸಿ. ಮಧುಚಂದನ್ S.C.MADHUCHANDAN ಅವರು ಮಂಡ್ಯ MANDYA CONSTITUENCY ನಗರದ ಮತದಾರರ ಮನ ಗೆಲ್ಲಲು ಮತ್ತೊಂದು ವಿನೂತನ ಕಾರ್ಯತಂತ್ರದ ಮೊರೆ ಹೋಗಿದ್ದಾರೆ.
ಈಗಾಗಲೇ ಮಂಡ್ಯ ನಗರದ ಪ್ರತಿ ಬಡಾವಣೆಯ ಮನೆ ಮನೆಗಳಿಗೆ ಪಾದಯಾತ್ರೆ ಮೂಲಕ ತೆರಳಿ ಖುದ್ದು ಮತದಾರರನ್ನು ಭೇಟಿ ಮತ ಕೋರಿರುವ ಇವರು, ಶನಿವಾರ ಬೈಕ್ ರ‍್ಯಾಲಿಯ ಮೂಲಕ ಮತದಾರರ ಆಶೀರ್ವಾದ ಪಡೆಯಲು ಮುಂದಾಗಿದ್ದಾರೆ.
ಶನಿವಾರ ನಗರದ ಗುತ್ತಲು ಬಡಾವಣೆಯಲ್ಲಿರುವ ಶ್ರೀ ಅರ್ಕೇಶ್ವರ ದೇವಾಲಯದಲ್ಲಿ ಎಸ್.ಸಿ. ಮಧುಚಂದನ್ ಅವರು ವಿಶೇಷ ಪೂಜೆ ಸಲ್ಲಿಸಿದರೆ, ಬೈಕ್ ರ‍್ಯಾಲಿಗೆ ಮೇಲುಕೋಟೆ ಕ್ಷೇತ್ರದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ, ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಸುನೀತಾ ಪುಟ್ಟಣ್ಣಯ್ಯ, ಎ.ಎಲ್.ಕೆಂಪೂಗೌಡ, ಶ್ರೀರಂಗಪಟ್ಟಣ ಕ್ಷೇತ್ರದ ಅಭ್ಯರ್ಥಿ ತಗ್ಗಹಳ್ಳಿ ವೆಂಕಟೇಶ್, ಮುಖಂಡರಾದ ಪ್ರಸನ್ನ ಎನ್.ಗೌಡ, ತಗ್ಗಹಳ್ಳಿ ಪ್ರಸನ್ನ ಅವರು ಚಾಲನೆ ನೀಡಿದರು.
ಈಗಾಗಲೇ ನಗರದ ಎಲ್ಲ ವಾರ್ಡ್ಗಳಲ್ಲೂ ಪಾದಯಾತ್ರೆ ಮೂಲಕ ಜನರ ಮನೆ ಬಾಗಿಲಿಗೆ ಹೋಗಿ ಜನರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿರುವ ಮಧುಚಂದನ್, ನನಗೆ ಜನತೆ ಆಶೀರ್ವಾದ ಮಾಡಿದರೆ, ಮಂಡ್ಯ ಕ್ಷೇತ್ರದ ಅಭಿವೃದ್ಧಿಗೆ ಏನೆಲ್ಲ ಯೋಜನೆಗಳನ್ನು ಹಾಕಿಕೊಂಡಿದ್ದೇನೆ ಎಂಬುದನ್ನು ಮತದಾರರಿಗೆ ರ‍್ಯಾಲಿ ಮೂಲಕ ತಿಳಿಸುತ್ತಿದ್ದಾರೆ.
ಗುತ್ತಲು ರಸ್ತೆಯಲ್ಲಿ ಮೆರವಣಿಗೆ ನಡೆಸಿದಾಗ ರೈತ ಸಂಘದ ಮುಖಂಡರು ಹಾಗೂ ಅಭಿಮಾನಿಗಳು ಎಸ್.ಸಿ. ಮಧುಚಂದನ್ ಅವರಿಗೆ ಭಾರೀ ಗಾತ್ರದ ಹೂವಿನ ಹಾರ ಹಾಕುವ ಮೂಲಕ ಅಭಿಮಾನ ಮೆರೆದರು. ಅಲ್ಲದೆ, ಕೆಲವರು ವಿವಿಧ ಪುಷ್ಪಗಳನ್ನು ಎರಚುವ ಮೂಲಕ ಖುಷಿಪಟ್ಟರು.
ಅರ್ಕೇಶ್ವರ ದೇವಾಲಯದ ಆವರಣದಿಂದ ಆರಂಭವಾದ ಬೈಕ್ ರ‍್ಯಾಲಿಯು ಗುತ್ತಲು ಬಡಾವಣೆ, ಮೈಶುಗರ್ ವೃತ್ತ, ಕಾಳಿಕಾಂಬ ದೇವಸ್ಥಾನ, ಹೊಳಲು ವೃತ್ತ, ಶಂಕರ ಮಠ, ಕಲ್ಲಹಳ್ಳಿ, ವಿ.ವಿ.ನಗರ, ಬನ್ನೂರು ರಸ್ತೆ, ನೂರಡಿ ರಸ್ತೆ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಹೊಸಹಳ್ಳಿ, ವಿ.ವಿ. ರಸ್ತೆ ಮೂಲಕ ಹಾಲಹಳ್ಳಿಯ ಹರಿಶ್ಚಂದ್ರ ವೃತ್ತದ ವರೆಗೆ ಬೈಕ್ ರ‍್ಯಾಲಿ ನಡೆಯಿತು.
ರೈತ ಮುಖಂಡರಾದ ಮಲ್ಲನಾಯಕನಕಟ್ಟೆ ವಿಜಯ್ ಕುಮಾರ್, ಪಿ.ಡಿ.ರಮೇಶ್, ಹಾಲಹಳ್ಳಿ ಮಹೇಶ್ ಸೇರಿದಂತೆ ನೂರಾರು ಮಂದಿ ಪ್ರಚಾರದಲ್ಲಿ ಭಾಗವಹಿಸಿದ್ದರು.
ವರದಿ: ಮೋಹನ್ ಬಿ.ಟಿ.
.jpg)
0 Comments