ಬೆಂಗಳೂರು: ವಾರಾಣಸಿಯ ಬನಾರಸ್ ಹಿಂದು ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಸಂಸ್ಕೃತ ವಿವಿಗಳ ರಾಷ್ಟ್ರಮಟ್ಟದ 60ನೇ ಅಖಿಲ ಭಾರತ ಶಾಸ್ತ್ರೀಯ ಭಾಷಣ ಸ್ಪರ್ಧೆಯಲ್ಲಿ ಹಾಸನ ಜಿಲ್ಲೆ ಹೊಳೆನರಸೀಪುರದ ಶ್ರುತಕೀರ್ತಿಗೆ ಪ್ರಥಮ ಬಹುಮಾನ ಸಹಿತ ಸ್ವರ್ಣ ಪದಕ ಲಭಿಸಿದೆ.
ಹೊಳೆನರಸೀಪುರದ ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಶ್ರೀ ಉತ್ತರಾದಿ ಮಠದ ಶ್ರೀ ಸತ್ಯಧರ್ಮ ವಿದ್ಯಾಪೀಠದ ವಿದ್ಯಾರ್ಥಿಯಾದ ಎನ್.ಆರ್. ಶ್ರುತಕೀರ್ತಿ ‘ದರ್ಶನ’ ಭಾಷಣ ಸ್ಪರ್ಧೆಯಲ್ಲಿ ವಿಷಯ ಮಂಡಿಸಿ ಬಂಗಾರದ ಪದಕ ಗಳಿಸುವುದರೊಂದಿಗೆ ವಿದ್ಯಾಪೀಠಕ್ಕೆ ಮತ್ತು ಕರ್ನಾಟಕಕ್ಕೆ ಕೀರ್ತಿ ತಂದಿದ್ದಾನೆ. ಈತ ಬೆಂಗಳೂರಿನ ವಿದ್ವಾಂಸರಾದ ರಘುನಾಥಾಚಾರ್ಯ, ಮಲ್ಲಿಕಾಬಾಯಿ ದಂಪತಿ ಪುತ್ರ. ಈತನೊಂದಿಗೆ ಇದೇ ವಿದ್ಯಾಪೀಠದ ವಿದ್ಯಾರ್ಥಿಗಳಾದ ಪ್ರಣವ ಜಿ. ಕಲ್ಲಾಪುರ ಮತ್ತು ಶ್ರೀರಂಗ ಎಸ್. ಕುಲಕರ್ಣಿ ಅವರೂ ‘ಶಾಸ್ತ್ರಾರ್ಥ ಪಾಠ ಸ್ಪರ್ಧೆ’ಯಲ್ಲಿ ಭಾಗವಹಿಸಿ ವಿಶಿಷ್ಠ ಶ್ರೇಣಿ ಪಡೆದಿರುವುದು ಇನ್ನೊಂದು ಹೆಗ್ಗಳಿಕೆ.
ಶ್ರೀ ಸತ್ಯಧರ್ಮ ವಿದ್ಯಾಪೀಠದ ಗುರುಗಳಾದ ಪಂಡಿತ ವಿಜಯ ವಿಠಲಾಚಾರ್ಯರಲ್ಲಿ ನ್ಯಾಯ, ಮೀಮಾಂಸಾ, ವ್ಯಾಕರಣ, ವೇದಾಂತಾದಿ ಶಾಸ್ತ್ರ ಪಾಠ ಕಲಿಯುತ್ತಿರುವ ಈ ಮೂವರು ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ಸಂಸ್ಕೃತ ವಿವಿ ಆಯೋಜಿಸಿದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ವಾರಾಣಸಿಯಲ್ಲಿ ಹಮ್ಮಿಕೊಂಡಿದ್ದ ಅಖಿಲ ಭಾರತ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು ಎಂಬುದು ವಿಶೇಷ.
ವಾರಾಣಸಿಯ ಬನಾರಸ್ ಹಿಂದು ವಿವಿಯಲ್ಲಿ ಆಯೋಜಿಸಿದ್ದ ಸಂಸ್ಕೃತ ವಿವಿಗಳ ರಾಷ್ಟ್ರಮಟ್ಟದ 60ನೇ ಅಖಿಲ ಭಾರತ ಶಾಸ್ತ್ರೀಯ ಭಾಷಣ ಸ್ಪರ್ಧೆಯಲ್ಲಿ ಹೊಳೆನರಸೀಪುರದ ಶ್ರುತಕೀರ್ತಿಗೆ ಪ್ರಥಮ ಬಹುಮಾನ ಸಹಿತ ಸ್ವರ್ಣ ಪದಕ ನೀಡಿ ಗೌರವಿಸಲಾಯಿತು. ಕೇಂದ್ರೀಯ ಸಂಸ್ಕೃತ ವಿವಿ ಕುಲಪತಿ ಡಾ. ಶ್ರೀನಿವಾಸ ವರಖೇಡಿ, ಬನಾರಸ್ ಹಿಂದು ವಿವಿ ಕುಲಪತಿ ವಿಜಯಕುಮಾರ ಶುಕ್ಲಾ, ಉತ್ತರಾಖಂಡ ವಿವಿ ಕುಲಪತಿ ದಿನೇಶ ಚಂದ್ರ ಶಾಸ್ತ್ರಿ, ಸೋಮನಾಥ ವಿವಿ ಕುಲಪತಿ ಲಲಿತ್ ಕುಮಾರ್ ಪಟೇಲ್, ಕಾಶಿ ವಿಶ್ವನಾಥಮಂದಿರ ನ್ಯಾಸ್ ಸದಸ್ಯ ವ್ರಜಭೂಷಣ ಇತರರು ಇದ್ದರು.


0 Comments