ಯಾವುದೇ ಜನಪರ ಕಾಳಜಿ, ದೂರದೃಷ್ಟಿ ಇಲ್ಲದಂತಹ ಬಿಬಿಎಂಪಿ ಆಯವ್ಯಯವನ್ನು ಮಂಡಿಸಲಾಗಿದ್ದು, ಹಣವನ್ನು ಕೊಳ್ಳೆ ಹೊಡೆಯುವುದೊಂದೇ ಇದರ ಉದ್ದೇಶವಾಗಿದೆ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಕಾರ್ಯಾಧ್ಯಕ್ಷ ಮೋಹನ್ ದಾಸರಿ ಹೇಳಿದರು.
ಮಾಧ್ಯಮಗಳಿಗೆ ಹೇಳಿಕೆ ನೀಡಿದ ಮೋಹನ್ ದಾಸರಿ, “ಬಿಬಿಎಂಪಿಯ 2023-24ನೇ ಸಾಲಿನ ಆಯವ್ಯಯವನ್ನು ಸರಿಯಾಗಿ ಗಮನಿಸಿದರೆ, ರಾಜ್ಯದ ಸಚಿವರು ಹಾಗೂ ಶಾಸಕರು ಜನರ ತೆರಿಗೆ ಹಣವನ್ನು ಲೂಟಿ ಮಾಡಲೆಂದೇ ಬಜೆಟ್ ಮಂಡಿಸಿರುವುದು ಸ್ಪಷ್ಟವಾಗುತ್ತದೆ. ಯಾವುದೇ ಹೊಸ ಯೋಜನೆಗಳು ಈ ಬಜೆಟ್‌ನಲ್ಲಿ ಇಲ್ಲ. ಶಾಲೆಗಳು ಹಾಗೂ ಆಸ್ಪತ್ರೆಗಳ ನಿರ್ಮಾಣ ಯೋಜನೆಗಳ ಕುರಿತೂ ಈ ಬಜೆಟ್‌ನಲ್ಲಿ ಪ್ರಸ್ತಾಪ ಇಲ್ಲದಿರುವುದು ವಿಪರ್ಯಾಸ. ಕೋವಿಡ್ ಮಹಾಮಾರಿಯನ್ನು ನೋಡಿದ ನಂತರವೂ ಆರೋಗ್ಯ ಕ್ಷೇತ್ರವನ್ನು ನಿರ್ಲಕ್ಷಿಸಿರುವುದು ಖಂಡನೀಯ. ಬೆಂಗಳೂರಿನ ಬಹುದೊಡ್ಡ ಸಮಸ್ಯೆಯಾಗಿರುವ ರಸ್ತೆಗುಂಡಿಗಳಿಗೆ ಪರಿಹಾರ ಕಂಡುಕೊಳ್ಳುವುದರಲ್ಲಿಯೂ ಬಜೆಟ್ ವಿಫಲವಾಗಿದೆ” ಎಂದರು.
“ಮುಂದಿನ ವರ್ಷಗಳಲ್ಲಿ ಬೆಂಗಳೂರು ಯಾವ ರೀತಿ ಬೆಳೆಯಲಿದೆ ಎಂಬ ಮಾಹಿತಿಯನ್ನು ಆಧರಿಸಿ, ಅದಕ್ಕೆ ಈಗೇನು ಮಾಡಬೇಕು ಎಂದು ಯೋಚಿಸಿ ಬಜೆಟ್ ಮಂಡಿಸಬೇಕು. ಹೆಚ್ಚುತ್ತಿರುವ ಬೆಂಗಳೂರಿನ ಜನಸಂಖ್ಯೆಗೆ ಅನುಗುಣವಾಗಿ ನೀರಿನ ವ್ಯವಸ್ಥೆ, ರಸ್ತೆಗಳು, ಶಾಲೆಗಳು, ಆಸ್ಪತ್ರೆಗಳು ಮುಂತಾದ ಮೂಲಸೌಕರ್ಯಗಳನ್ನು ಕಲ್ಪಿಸಲು ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ತೀವ್ರ ನಿರ್ಲಕ್ಷ್ಯ ತೋರುತ್ತಿದೆ. 40% ಕಮಿಷನ್ ಹೊಡೆದು, ಚುನಾವಣೆ ವಿಧಾನಸಭಾ ಚುನಾವಣೆ ಎದುರಿಸಲು ಬಿಜೆಪಿಯು ಈ ಬಜೆಟನ್ನು ಬಳಸಿಕೊಂಡಿರುವುದು ದುರದೃಷ್ಟಕರ” ಎಂದು ಮೋಹನ್ ದಾಸರಿ ಹೇಳಿದರು.
“ಬಿಬಿಎಂಪಿಗೆ ಚುನಾವಣೆ ನಡೆದು ಎಂಟು ವರ್ಷಗಳಾಗಿದ್ದರೂ, ಸದ್ಯದಲ್ಲೇ ಚುನಾವಣೆ ನಡೆಯುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ರಾಜ್ಯ ಸರ್ಕಾರಕ್ಕೆ ತಾಕತ್ತಿದ್ದರೆ ಶೀಘ್ರವೇ ಬಿಬಿಎಂಪಿ ಚುನಾವಣೆ ನಡೆಸಿ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೌರವ ನೀಡಲಿ. ಯಾವಾಗ ಚುನಾವಣೆ ನಡೆದರೂ ಬಿಜೆಪಿ ಸೋಲುವುದು ನಿಶ್ಚಿತವಾಗಿದೆ. ಇದನ್ನು ಅರಿತಿರುವ ಸಿಎಂ ಬಸವರಾಜ ಬೊಮ್ಮಾಯಿಯವರು ಕುಂಟು ನೆಪಗಳನ್ನು ಹುಡುಕಿಕೊಂಡು ಮುಖಭಂಗವನ್ನು ಮುಂದೂಡುವ ಪ್ರಯತ್ನ ಮಾಡುತ್ತಿದ್ದಾರೆ” ಎಂದು ಮೋಹನ್ ದಾಸರಿ ಹೇಳಿದರು.

0 Comments