Ticker

6/recent/ticker-posts

Ad Code

Responsive Advertisement

ಬೆಲೆ ಇಳಿಸದ, ಉದ್ಯೋಗ ಖಾತ್ರಿ ಇಲ್ಲದ ಕೇಂದ್ರ ಬಜೆಟ್ - ಬಿಎಸ್ಪಿ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2023 - 24 ನೇ ಸಾಲಿನ ಬಜೆಟ್ ಅಗತ್ಯ ವಸ್ತುಗಳ ಬೆಲೆ ಇಳಿಸದ, ಯುವಜನತೆಗೆ ಉದ್ಯೋಗ ಖಾತ್ರಿ ನೀಡದ ಬಜೆಟ್ ಆಗಿದೆ ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಎಂ. ಕೃಷ್ಣ ಮೂರ್ತಿ ಟೀಕಿಸಿದ್ದಾರೆ.



ಪತ್ರಿಕಾ ಹೇಳಿಕೆ ನೀಡಿರುವ ಅವರು ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿರುವ ಸಂದರ್ಭದಲ್ಲಿ ಜನಸಾಮಾನ್ಯರ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ, ಬೆಲೆಗಳನ್ನು ಇಳಿಸಲು ಬಜೆಟ್ ನಲ್ಲಿ ಕ್ರಮ ಕೈಗೊಳ್ಳಬಹುದೆಂಬ ನಿರೀಕ್ಷೆ ಸುಳ್ಳಾಗಿದೆ. 

   ಆ ಮೂಲಕ ಆದಾಯ ತೆರಿಗೆ ಮಿತಿ ಏರಿಸಿರುವುದು ಸಹ ಪರೋಕ್ಷವಾಗಿ ಜಿಎಸ್‌ಟಿ ಮೂಲಕ ಜನರ ದುಡ್ಡನ್ನು ಕೊಳ್ಳೆಹೊಡೆಯುವುದು ಕೇಂದ್ರ ಸರ್ಕಾರದ ಉನ್ನಾರವಾಗಿದೆ ಎಂದು ಆರೋಪ ಮಾಡಿದ್ದಾರೆ .

   ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದ್ದು, ನಿರುದ್ಯೋಗಿ ಯುವಕರ ಆತ್ಮಹತ್ಯೆ ಹೆಚ್ಚಳವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಉದ್ಯೋಗ ಸೃಷ್ಟಿಗೆ ಗರಿಷ್ಠ ಆದ್ಯತೆ ನೀಡುವುದರ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿರುವ ಲಕ್ಷಾಂತರ ಖಾಲಿ ಉದ್ಯೋಗ ಭರ್ತಿಗೆ ಬಜೆಟ್ ನಲ್ಲಿ ಅನುದಾನ ಒದಗಿಸಬಹುದಿತ್ತು . ಈ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲದಿರುವುದು ವಿದ್ಯಾವಂತ ನಿರುದ್ಯೋಗಿಗಳಿಗೆ ನಿರಾಶೆಯಾಗಿದೆ.

  ಇದರ ಜೊತೆಗೆ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಸುಮಾರು 30 ಸಾವಿರ ಕೋಟಿ ರೂಪಾಯಿಗಳನ್ನು ಕಡಿತ ಮಾಡಿ ಕೇವಲ 60 ಸಾವಿರ ಕೋಟಿ ರೂಪಾಯಿಗಳನ್ನು ಮಾತ್ರ ಬಜೆಟ್ ನಲ್ಲಿ ನೀಡಿರುವುದು ಕೃಷಿ ಕಾರ್ಮಿಕರಿಗೆ ಮಾಡಿರುವ ದ್ರೋಹವಾಗಿದೆ ಕಿಡಿ ಕಾರಿದ್ದಾರೆ.

    ಕೋವಿಡ್ ಸಂದರ್ಭದಲ್ಲಿ ನಗರಗಳನ್ನು ತೊರೆದು ಹಳ್ಳಿಗಳಿಗೆ ಹಿಂತಿರುಗಿದ ಕೋಟ್ಯಂತರ ಜನರಿಗೆ ನರೇಗಾ ಯೋಜನೆ ಸಾಂತ್ವನ ನೀಡಿತ್ತು. ಈಗ ಈ ಯೋಜನೆಯನ್ನು ದುರ್ಬಲಗೊಳಿಸಿರುವುದು ಮತ್ತಷ್ಟು ಯುವಜನರು ನಗರಗಳಿಗೆ ವಲಸೆ ಹೋಗಲು ಕಾರಣವಾಗುತ್ತದೆ ಎಂದಿದ್ದಾರೆ .

   ಇನ್ನು ಆಹಾರಕ್ಕೆ ನೀಡುವ ಸಬ್ಸಿಡಿಯಲ್ಲಿ 90,000 ಕೋಟಿಯಷ್ಟು ಕಡಿತಗೊಳಿಸಿರುವುದರಿಂದ ಮುಂದಿನ ದಿನಗಳಲ್ಲಿ ಆಹಾರ ಭದ್ರತಾ ಯೋಜನೆಗೆ ಹೊಡೆತ ಬೀಳಲಿದೆ.

   ಕೈಗಾರಿಕಾ ಯೋಜನೆಗಳಿಗೆ 5000 ಕೋಟಿ ರೂಪಾಯಿ ಕಡಿತ ಮಾಡಿರುವುದು ಕೈಗಾರಿಕಾ ಅಭಿವೃದ್ಧಿ ಮೇಲೆ ದುಷ್ಪರಿಣಾಮ ಬೀರಲಿದೆ.

   ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅನುದಾನವನ್ನು ಸುಮಾರು 23 ಸಾವಿರ ಕೋಟಿಯಷ್ಟು ಕಡಿತಗೊಳಿಸಿರುವುದರಿಂದ ಗ್ರಾಮೀಣ ಅಭಿವೃದ್ಧಿ ಕುಂಟಿತಗೊಳ್ಳಲಿದೆ ಎಂದಿದ್ದಾರೆ .

    ಅಲ್ಪಸಂಖ್ಯಾತ ಸಚಿವಾಲಯಕ್ಕೆ ಸುಮಾರು 2000 ಕೋಟಿ  ಅನುದಾನವನ್ನು ಕಡಿತ ಮಾಡಿರುವುದು ಬಿಜೆಪಿಯ ಅಲ್ಪಸಂಖ್ಯಾತ ವಿರೋಧಿ ಧೋರಣೆಗೆ ಸಾಕ್ಷಿಯಾಗಿದೆ ಎಂದು ಟೀಕಿಸಿದ್ದಾರೆ.

  ಇಡೀ ಬಜೆಟ್ ರೈತರನ್ನು ಸದೃಢಗೊಳಿಸುವುದರ ಬದಲು, ಕೃಷಿ ಕಾರ್ಪೊರೇಟ್ ಧಣಿಗಳನ್ನು ಕೊಬ್ಬಿಸುವ ಯೋಜನೆಗಳಿಗೆ ಹೇರಳವಾಗಿ ಹಣ ನೀಡಲಾಗಿದೆ.

    ಆಹಾರ, ರಸಗೊಬ್ಬರ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸಬ್ಸಿಡಿ ಮೊತ್ತವನ್ನ 5.21 ಲಕ್ಷ ಕೋಟಿಯಿಂದ

3.75 ಲಕ್ಷ ಕೋಟಿಗೆ ಅಂದರೆ ಸುಮಾರು ಎರಡು ಲಕ್ಷ ಕೋಟಿಯಷ್ಟು ಕಡಿತ ಮಾಡಿರುವುದು ಮುಂದಿನ ದಿನಗಳಲ್ಲಿ ಇವುಗಳ ಮೇಲಿನ ಬೆಲೆ ಅಗಾಧವಾಗಿ ಏರಿಕೆಯಾಗುವುದು ಎಂದು ಎಚ್ಚರಿಸಿದ್ದಾರೆ.

    ಈ ಬಜೆಟ್ ನಲ್ಲಿ ಯಾವುದೇ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಗೊಳಿಸಲು ಹಣ ಕಾಯ್ದಿರಿಸದಿರುವುದು ಸರ್ಕಾರದ ರೈತ ವಿರೋಧಿ ಧೋರಣೆ ಮುಂದುವರೆದಿರುವುದಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ 

     ಸಾಲದ ವಿಷಯದಲ್ಲಿ ವಿಶ್ವ ದಾಖಲೆ ಮಾಡಲು ಹೊರಟಿರುವ ನರೇಂದ್ರ ಮೋದಿ ಸರ್ಕಾರ ಸುಮಾರು ಹದಿನೈದು ಲಕ್ಷ ಕೋಟಿ ಹಣವನ್ನು ಬಜೆಟ್ ನ ಅನುಷ್ಠಾನಕ್ಕಾಗಿ ಸಾಲ ಮಾಡಲಿದೆ.

    ಇದರ ಪರಿಣಾಮ ಒಟ್ಟು ಬಜೆಟ್ ನಲ್ಲಿ ಸಾಲದ ಮೇಲಿನ ಬಡ್ಡಿಗೆ 10.79 ಲಕ್ಷ ಕೋಟಿ ರೂಪಾಯಿಗಳನ್ನು ನೀಡಬೇಕಾಗಿದೆ. ಇದರ ಜೊತೆಗೆ ದೇಶದ ಒಟ್ಟು ಸಾಲ 113 ಲಕ್ಷ ಕೋಟಿಗೆ ಏರಿಕೆಯಾಗಲಿದೆ. ಇದು ದೇಶದ ಆರ್ಥಿಕ ಭದ್ರತೆಗೆ ಅಪಾಯ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

     ದೇಶದ ಶಿಕ್ಷಣ ವ್ಯವಸ್ಥೆಯನ್ನು ಸದೃಢಗೊಳಿಸಲು ಜಿಡಿಪಿಯ ಕನಿಷ್ಠ 7% ಹಣ ಖರ್ಚು ಮಾಡಬೇಕೆಂಬ ಹಾಗೂ ಆರೋಗ್ಯ ವ್ಯವಸ್ಥೆ ಸುಧಾರಿಸಲು ಜಿಡಿಪಿಯ ಕನಿಷ್ಠ 4% ಹಣ ವೆಚ್ಚ ಮಾಡಬೇಕೆಂಬ ಅಂತರಾಷ್ಟ್ರೀಯ ಮಾನದಂಡವನ್ನು ಪಾಲಿಸಿಲ್ಲ. ಆ ಮೂಲಕ ಸರ್ಕಾರ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ತನ್ನ ಆದ್ಯತಾ ವಲಯದಲ್ಲಿ ಇಲ್ಲ ಎಂಬ ಸಂದೇಶವನ್ನು ಸಾರಿದೆ ಎಂದಿದ್ದಾರೆ.

    ಇಡೀ ಬಜೆಟ್ ನಲ್ಲಿ ದೇಶದ ಒಟ್ಟು ಜನಸಂಖ್ಯೆಯಲ್ಲಿ 30 % ರಷ್ಟಿರುವ ಎಸ್ಸಿ ಎಸ್ಟಿಗಳ ಕಲ್ಯಾಣದ ಬಗ್ಗೆ ಪ್ರಸ್ತಾಪವಿಲ್ಲದಿರುವುದು ಹಾಗೂ 40% ಹಿಂದುಳಿದ ಮತ್ತು ಅತಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಆದ್ಯತೆ ನೀಡದಿರುವುದು ಈ ಸರ್ಕಾರ ಯಾರ ಪರವಾಗಿದೆ ಎಂಬುದನ್ನು ತೋರಿಸಿಕೊಟ್ಟಿದೆ ಎಂದಿದ್ದಾರೆ .

      ಜೊತೆಗೆ 2014 ರಿಂದ ವೋಟಿಗಾಗಿ ಜನತೆಯಲ್ಲಿ ಭ್ರಮೆಯ ಮಂಕು ಬೂದಿ ಎರಚುತ್ತಾ ಬಂದಿರುವ ವರ್ಷಕ್ಕೆ ಎರಡು ಕೋಟಿ ಉದ್ಯೋಗದ ಭರವಸೆ, ಸ್ವಿಸ್ ಬ್ಯಾಂಕ್ ನ ಕಪ್ಪು ಹಣ ವಾಪಸ್, 100 ಸ್ಮಾರ್ಟ್ ಸಿಟಿ ಗಳು, ಬುಲೆಟ್ ಟ್ರೈನ್, ಮೂಲಸೌಕರ್ಯಕ್ಕೆ 100 ಲಕ್ಷ ಕೋಟಿ ವೆಚ್ಚ, ಬೇಟಿ ಬಚಾವೋ ಬೇಟಿ ಪಡಾವೋ  ಯೋಜನೆ ಬಗ್ಗೆ ಪ್ರಸ್ತಾಪವೇ ಇಲ್ಲದಿರುವುದು ಪರಿಸ್ಥಿತಿಯ ವ್ಯಂಗ್ಯ ವಾಗಿದೆ .

    ಇನ್ನು ಕಳೆದ ಹತ್ತು ವರ್ಷಗಳಿಂದ ದೇಶದ ಸಂಪತ್ತನ್ನು  ಪರೋಕ್ಷವಾಗಿ ಕೊಳ್ಳೆ ಹೊಡೆದಿರುವ ಉದ್ಯಮಿಗಳ ಮೇಲೆ ವೈಯಕ್ತಿಕ ಸಂಪತ್ತಿನ ಮೇಲೆ ಕನಿಷ್ಠ ತೆರಿಗೆ ಹಾಕಿ ಸಾಲದ ಹೊರೆಯನ್ನು ಇಳಿಸಬಹುದಿತ್ತು. ಆದರೆ ಉದ್ಯಮಿಗಳ ಮುಲಾಜಿನಲ್ಲಿರುವ ಈ ಸರ್ಕಾರಕ್ಕೆ ಆ ತಾಕತ್ತು ಇಲ್ಲ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ.

     ಒಟ್ಟಾರೆಯಾಗಿ ಯುವಜನರ ರೈತರ ಬಡವರ ಮಧ್ಯಮ ವರ್ಗದವರ ಕಾರ್ಮಿಕರ ದುರ್ಬಲ ಸಮಾಜಗಳ ಹೊರೆಯನ್ನು ಇಳಿಸುವ ಬದಲು ಅವರನ್ನು ಸಂಕಷ್ಟಕ್ಕೆ ದೂಡಿ ಜಿಎಸ್‌ಟಿ ಮೂಲಕ ಅವರನ್ನು ಮತ್ತಷ್ಟು ಶೋಷಿಸುವ ಬಜೆಟನ್ನು ಬಣ್ಣ ಬಣ್ಣಗಳ ಪದದಲ್ಲಿ ಮಂಡಿಸಲಾಗಿದೆ ಎಂದು ಕಿಡಿ ಕಾರಿದ್ದಾರೆ.


Post a Comment

0 Comments

Ad Code

Responsive Advertisement