ಮೂರು ಗಂಟೆಗಳ ಕಾಲ ವಿಶ್ವವಿದ್ಯಾಲಯದ ಕಾರ್ಯವೈಖರಿ ಪರಿಶೀಲನೆ
ಬೆಂಗಳೂರು 23.01.2023: ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಸೋಮವಾರ ಗಾಂಧಿ ಕೃಷಿ ವಿಜ್ಞಾನ ಕೇಂದ್ರ(ಜಿಕೆವಿಕೆ)ದ ಆವರಣದಲ್ಲಿರುವ ಬೆಂಗಳೂರು ಕೃಷಿ ವಿಶ್ವವಿದ್ಯಾಲಯಕ್ಕೆ ಅನಿರೀಕ್ಷಿತ ಭೇಟಿ ನೀಡಿ, ಸತತ ಮೂರು ಗಂಟೆಗಳ ಕಾಲ ವಿವಿಧ ಕೇಂದ್ರಗಳ ಬಗ್ಗೆ ಪರಿಶೀಲನೆ ನಡೆಸಿದರು.
ವಿಶ್ವ ವಿದ್ಯಾನಿಲಯದ ಕಾರ್ಯವೈಖರಿ ಮತ್ತು ವಿಶ್ವವಿದ್ಯಾನಿಲಯದ ಸಾಧನೆಯ ಬಗ್ಗೆ ಚರ್ಚಿಸಿದರು ಹಾಗೂ ವಿಶ್ವವಿದ್ಯಾನಿಲಯದ ಅಭಿವೃದ್ಧಿಯ ಹಿತದೃಷ್ಟಿಯಿಂದ ಎಲ್ಲಾ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ನಂತರ ಅವರು, ನಾವೀನ್ಯತೆ ಕೇಂದ್ರ, ಗ್ರಂಥಾಲಯ, ಪ್ರಾದೇಶಿಕ ವಿಜ್ಞಾನ ಕೇಂದ್ರ, ಜೈವಿಕ ಯಂತ್ರ ಗ್ಯಾಲರಿ ಮತ್ತು ಸಂಶೋಧನೆ ಕೇಂದ್ರ, ಮಣ್ಣುರಹಿತ ವಾಣಿಜ್ಯ ಬೀಜೋತ್ಪಾದನಾ ಘಟಕ, ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರ, ಖುಷ್ಕಿ ಬೇಸಾಯ ಸಂಶೋಧನಾ ಪ್ರಾಯೋಜನೆ, ತೋಟಗಾರಿಕೆಯ ಸಸ್ಯ ಅಂಗಾಂಶ ಕೃಷಿ ಪ್ರಯೋಗಾಲಯ ವಿಭಾಗ, ಕೀಟಗಳ ಪ್ರಯೋಗಾಲಯ ಸೇರಿದಂತೆ ವಿವಿಧ ಕೇಂದ್ರಗಳಿಗೆ ಭೇಟಿ ನೀಡಿ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿ, ಮಾಹಿತಿ ಕಲೆ ಹಾಕಿದರು.
ರಾಜ್ಯಪಾಲರು ಭತ್ತದ ಉತ್ಪಾದನೆ, ತೋಟಗಾರಿಕೆ ಕೃಷಿ, ರಾಗಿ ಬೆಳೆಯಲು ಅಳವಡಿಸಿಕೊಂಡ ಹೊಸ ತಂತ್ರಜ್ಞಾನಗಳ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ತೋರಿಸಿದರು ಮತ್ತು ಕೀಟನಾಶಕಗಳ ಬಳಕೆ ಮತ್ತು ಸಾವಯವ ಕೃಷಿಗೆ ಅಳವಡಿಸಿಕೊಂಡಿರುವ ಹೊಸ ವಿಧಾನಗಳ ಬಗ್ಗೆ ವಿಚಾರಿಸಿದರು.
ಸ್ನಾತಕೋತ್ತರ ವಿದ್ಯಾರ್ಥಿನಿಯರ ವಿದ್ಯಾರ್ಥಿನಿಲಯದ ಅಡುಗೆ ಮನೆಗೆ ಭೇಟಿ ನೀಡಿ, ವಿದ್ಯಾರ್ಥಿನಿಯರಿಗೆ ನೀಡಲಾಗುವ ಆಹಾರ ತಯಾರಿಕೆ ಹಾಗೂ ಅಲ್ಲಿನ ಸ್ವಚ್ಛತೆ ಬಗ್ಗೆ ಪರಿಶೀಲಿಸಿದರು. ನಂತರ ವಿದ್ಯಾರ್ಥಿನಿಯರೊಂದಿಗೆ ಮಾತನಾಡಿದ ಅವರು, ವ್ಯವಸ್ಥೆ ಕುರಿತು ಚರ್ಚಿಸಿ, ಸಮಸ್ಯೆಗಳಿದ್ದರೆ ತಿಳಿಸಿ ಬಗೆ ಹರಿಸಲಾಗುವುದು ಎಂದು ಭರವಸೆ ನೀಡಿದರು.
ನಂತರ ಗ್ರಂಥಾಲಯಕ್ಕೆ ತೆರಳಿ, ವಿವಿಧ ವಿಭಾಗಗಳಲ್ಲಿ ಲಭ್ಯವಿರುವ ಪುಸ್ತಕಗಳನ್ನು ಪರಿಶೀಲಿಸಿದರು. ಅಲ್ಲಿ ಓದುತ್ತಿರುವ ಮಕ್ಕಳೊಂದಿಗೆ ಸಂವಾದ ನಡೆಸಿದ ಅವರು, ಪುಸ್ತಕ ಲಭ್ಯತೆ ಕುರಿತು ಮಾಹಿತಿ ಪಡೆದರು. ನಂತರ ಗ್ರಂಥಾಲಯದ ಅಧಿಕಾರಿಗಳೊಂದಿಗೆ ವಿಶ್ವದಲ್ಲಿ ಕೃಷಿಯಲ್ಲಿ ಅತಿ ಹೆಚ್ಚು ಪ್ರಖ್ಯಾತಗಳಿಸಿರುವ ದೇಶಗಳಿಂದ ಅಲ್ಲಿನ ಕೃಷಿ ಪದ್ಧತಿ ಸಂಬಂಧಿಸಿದಂತೆ ಪುಸ್ತಕಗಳನ್ನು ಸಂಗ್ರಹಿಸಿ ಗ್ರಂಥಾಲಯದಲ್ಲಿರಿಸಲು ಸೂಚಿಸಿದರು. ಇದರಿಂದ ವಿದ್ಯಾರ್ಥಿಗಳಿಗೆ ಹೊಸ ಅಧ್ಯಯನಕ್ಕೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳೊಂದಿಗೆ ತರಗತಿಯಲ್ಲಿ ಕುಳಿತ ರಾಜ್ಯಪಾಲರು
ಕೃಷಿ ವಿದ್ಯಾರ್ಥಿಗಳಿಗೆ ಅಧ್ಯಾಪಕರು ಯಾವ ರೀತಿ ಬೋಧನೆ ಮಾಡುತ್ತಾರೆ ಎಂಬುದನ್ನು ಅರಿಯುವ ಸಲುವಾಗಿ ರಾಜ್ಯಪಾಲರು ವಿಶ್ವವಿದ್ಯಾಲಯದ ಸ್ಮಾರ್ಟ್ ಕ್ಲಾಸ್ ಗೆ ಭೇಟಿ ನೀಡಿ, ಅಲ್ಲಿನ ವಿದ್ಯಾರ್ಥಿಗಳೊಡನೆ ವಿದ್ಯಾರ್ಥಿಯಂತೆ ಕುಳಿತು ಕೃಷಿ ಸಂಬಂಧಿಸಿದ ಬೋಧನೆಯನ್ನು ಆಲಿಸಿದರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಅಧ್ಯಾಪಕರ ಬೋಧನೆ ಅರ್ಥವಾಗದಿದ್ದರೆ ಧೈರ್ಯವಾಗಿ ಮತ್ತೊಮ್ಮೆ ಕೇಳಿ ತಿಳಿದುಕೊಳ್ಳಿ ಎಂದ ಅವರು, ಭಾರತ ಕೃಷಿ ಪ್ರದಾನ ರಾಷ್ಟ್ರ ಕೃಷಿ ಕ್ಷೇತ್ರವು ದೇಶದ ಆರ್ಥಿಕ ಸಾಮಾಜಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದು ಇಂದಿನಯುವ ಪಿಳಿಗೆ ಕೃಷಿ ಸಂಬಂಧಿಸಿದ ಅಧ್ಯಯನಕ್ಕೆ ಆದ್ಯತೆ ನೀಡಬೇಕು ಸಲಹೆ ನೀಡಿದರು.
ರೇಷ್ಮೆ ವಿಭಾಗಕ್ಕೆ ಭೇಟಿ ನೀಡಿದ ರಾಜ್ಯಪಾಲರು, ರೇಷ್ಮೆಯಿಂದ ತಯಾರಿಸಲಾದ ವಿವಿಧ ಬಗೆಯ ಅಲಂಕಾರಿಕಾ ವಸ್ತಗಳ ಪ್ರದರ್ಶನವನ್ನು ವೀಕ್ಷಿಸಿ, ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಪ್ರಶಂಸಿದರು. ಈ ಸಂದರ್ಭದಲ್ಲಿ ಮಲ್ಬೆರಿ ಗಾರ್ಡನ್‌ಗೆ ಸಂವೇದಕ ಆಧಾರಿತ ಸ್ವಯಂಚಾಲಿತ ನೀರಾವರಿ ವ್ಯವಸ್ಥೆಯನ್ನು ರಾಜ್ಯಪಾಲರು ಉದ್ಘಾಟಿಸಿದರು.
ನಂತರ ಸಿರಿಧಾನ್ಯಗಳ ಪ್ರದರ್ಶನಕ್ಕೆ ಭೇಟಿ ನೀಡಿ, ವಿವಿಧ ಧಾನ್ಯಗಳ ಬಗ್ಗೆ ಕುರಿತು ಮಾಹಿತಿ ಪಡೆದರು. ವಿಜ್ಞಾನಿ ಪ್ರಭು ಗಾಣಿಗರ್ ಅವರು ಗೌರವಾನ್ವಿತ ರಾಜ್ಯಪಾಲರಿಗೆ ಕೃಷಿ ವಿಶ್ವವಿದ್ಯಾಲಯದಿಂದ ಅಭಿವೃದ್ಧಿ ಪಡಿಸಲಾಗಿರುವ ನವಣೆಯ ತಳಿ:ಜಿಪಿಯು ಎಫ್ 3, ಸಾಮೆಯ ತಳಿ: ಜಿಪಿಯು ಎಲ್ 6, ಬರಗು ತಳಿ ಜಿ.ಪಿ.ಯು.28, ಕೊರಲೆ ತಳಿ ಜಿಪಿಯುಬಿಟಿ2 ತಳಿಗಳ ಬಗ್ಗೆ ಹಾಗೂ ಕರ್ನಾಟಕದಲ್ಲಿ ಸಿರಿಧಾನ್ಯದ ಉತ್ಪಾದನೆ ಬಗ್ಗೆ ವಿವರಿಸಿದರು. ನಂತರ ವಿವಿ ಆವರಣದಲ್ಲಿ ಗೌರವಾನ್ವಿತ ರಾಜ್ಯಪಾಲರು ತಬೆಬುಯಾ ಅರ್ಜೆಂಟೀಯಾ ಸಸಿಯನ್ನು ನೆಟ್ಟರು. ಗೋಶಾಲೆಗೆ ಭೇಟಿ ಅವುಗಳ ಸಾಕಾಣಿಕೆಯ ವ್ಯವಸ್ಥೆಯನ್ನು ಪರಿಶೀಲಿಸಿ, ಗೋವುಗಳಿಗೆ ಫಲಹಾರವನ್ನು ನೀಡಿದರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ವಿ. ಸುರೇಶ್, ಕುಲಸಚಿವರಾದ ಬಸವೇಗೌಡ, ಆಡಳಿತ ಮಂಡಳಿಯ ಸದಸ್ಯರುಗಳಾದ ಡಾ.ಪಿ.ಹೆಚ್.ರಾಮಂಜಿನಿ ಗೌಡ, ಅರವಿಂದ್, ಡೀನ್ ಡಾ.ಪ್ರಕಾಶ್ ಸೇರಿದಂತೆ ಮುಂತಾದ ಅಧಿಕಾರಿಗಳು ಉಪಸ್ಥಿತರಿದ್ದರು.






0 Comments