Ticker

6/recent/ticker-posts

Ad Code

Responsive Advertisement

*ವೈಕುಂಠ ಏಕಾದಶಿಯಂದು ವೈಯಾಲಿಕಾವಲ್ ನಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ವಿಶೇಷ ವ್ಯವಸ್ಥೆ*

*ವೈಕುಂಠ ಏಕಾದಶಿಯಂದು ವೈಯಾಲಿಕಾವಲ್ ನಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ವಿಶೇಷ ವ್ಯವಸ್ಥೆ* 

ಬೆಂಗಳೂರು : ವೈಕುಂಠ ಏಕಾದಶಿ ಸನಾತನ ಧರ್ಮಾನುಯಾಯಿಗಳು ಶ್ರದ್ಧಾ ಭಕ್ತಿಗಳಿಂದ ವಿಷ್ಣುವನ್ನು ಪೂಜಿಸುವ ಮಹತ್ವದ ದಿನ. ಏಕಾದಶಿ ಅಂದರೆ ಹನ್ನೊಂದು ಎಂಬ ಅರ್ಥವಿದೆ. ಒಂದು ತಿಂಗಳಲ್ಲಿ 2 ಏಕಾದಶಿಗಳಿರುತ್ತವೆ. ಈ ದಿನಗಳಂದು ಉಪವಾಸವಿದ್ದು, ವ್ರತಾಚರಣೆ ಮಾಡುವ ಸಂಪ್ರದಾಯವಿದೆ. ಇನ್ನೂ ಕೆಲವರು ಏಕಾದಶಿಯ ದಿನದಂದು ಮೌನ ವ್ರತಾಚರಣೆಯನ್ನೂ ಸಹ ಪಾಲನೆ ಮಾಡುತ್ತಾರೆ. 

    ಪ್ರತಿ ತಿಂಗಳ ಏಕಾದಶಿಗಳಿಗಿಂತಲೂ, ಚಾಂದ್ರಮಾನ ಪುಷ್ಯಮಾಸ ಶುಕ್ಲಪಕ್ಷದಂದು ಬರುವ ವೈಕುಂಠ ಏಕಾದಶಿ ಅತ್ಯಂತ ವಿಶೇಷವಾದದ್ದು. ಈ ದಿನದಂದು ವೈಕುಂಠ (ವಿಷ್ಣುಲೋಕ, ಸ್ವರ್ಗದ) ಬಾಗಿಲು ತೆರೆದಿರುವ ದಿನ ಎಂಬ ಪ್ರತೀತಿ ಇರುವುದರಿಂದ, ಅಂದು ಶ್ರೀ  ವಿಷ್ಣು ಸ್ವಾಮಿ /  ಶ್ರೀ ವೆಂಕಟೇಶ್ವರ ಸ್ವಾಮಿ  ದೇವಾಲಯ ದರ್ಶನ ಅತ್ಯಂತ ಮಹತ್ವ ಪಡೆದುಕೊಂಡಿದೆ.  ಈ ದಿನ ವಿಷ್ಣು ದೇವಾಲಯಗಳಲ್ಲಿ ದರ್ಶನ ಪಡೆದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. 



    "ಶರೀರಮಾಧ್ಯಂ ಖಲು ಧರ್ಮಸಾಧನಂ" ಎಂಬ ಮಾತಿನಂತೆ ಯಾವುದೇ ಒಳ್ಳೆಯ, ಧಾರ್ಮಿಕ ಕೆಲಸಗಳನ್ನು ಮಾಡಬೇಕಿದ್ದರೂ, ಅದಕ್ಕೆ ದೇಹ ಸದೃಢವಾಗಿರುವುದು ಅತ್ಯಗತ್ಯ. ಏಕಾದಶಿ ವ್ರತ ಮಾಡುವುದರಿಂದ ದೇಹದ ಮತ್ತು ಮನಸ್ಸಿನ ಸ್ವಾಸ್ಥ್ಯ ಕಾಪಾಡಿಕೊಳ್ಳುವುದಕ್ಕೆ ಸಹಕಾರಿ ಎಂದೂ, ಆ ಮೂಲಕ ಜೀವನದಲ್ಲಿ ಎದುರಾಗುವ ಅಸಾಮರ್ಥ್ಯಗಳನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಬಹುದು,  ಈ ಮೂಲಕ ಪರಮಪದವನ್ನು ಸೇರಬಹುದು ಎಂಬುದು ವೈಕುಂಠ ಏಕಾದಶಿಯ ವ್ರತಾಚರಣೆಯಲ್ಲಿರುವ ಗೂಢಾರ್ಥವಾಗಿದೆ ಎಂಬ ಅಭಿಪ್ರಾಯವಿದೆ. 


    ಇನ್ನೂ ಕೆಲವೇ ಘಂಟೆಗಳು ಬಾಕಿ ಉಳಿದಿವೆ ನಂತರ ಆಂಗ್ಲ  ನೂತನ ಸಂವತ್ಸರ  2023 ರ ಮೊದಲ ತಿಂಗಳು ಜನವರಿ ಆರಂಭವಾಗಲಿದ್ದು, 1 ನೇ ತಾರೀಖು ನೂತನ ವರ್ಷಾಚರಣೆಯ ಮರುದಿನವೇ, ಈ ಬಾರಿ 2 ನೇ ತಾರೀಖಿನಂದು ವೈಕುಂಠ ಏಕಾದಶಿ ಆಚರಣೆಯು ಜೊತೆಯಾಗಿ ಬಂದಿರುವ ಈ ಸಂದರ್ಭದಲ್ಲಿ, ನಗರದ ಮಲ್ಲೇಶ್ವರಂನ ವೈಯಾಲಿಕಾವಲ್ ನಲ್ಲಿರುವ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಆಂಗ್ಲ ನೂತನ ವರ್ಷ  ಹಾಗೂ ವೈಕುಂಠ ಏಕಾದಶಿ ಪ್ತಯುಕ್ತ 1-01-2023 ಹಾಗೂ 2-01-2023 ರಂದು ಜರುಗಲಿರುವ ವಿಶೇಷ ಕಾರ್ಯಕ್ರಮಗಳ ಬಗ್ಗೆ ಟಿ.ಟಿ.ಡಿ. ಬೆಂಗಳೂರು ಸಲಹಾ ಸಮಿತಿಯ ಪದಾಧಿಕಾರಿಗಳು ವಿಧಾನ ಪರಿಷತ್ ಸದಸ್ಯರು ಹಾಗೂ ಟಿ.ಟಿ.ಡಿ. ಸದಸ್ಯರಾದ  ಡಾ. ಟಿ.ಎ.ಶರವಣರವರ ನೇತೃತ್ವದಲ್ಲಿ ನಾಳೆ ಆಂಗ್ಲ ನೂತನ ಸಂವತ್ಸರದ ಆರಂಭದ ಜನವರಿ 1, 2023 ಹಾಗೂ ನಾಡಿದ್ದು ಜನವರಿ 2, 2023 ದಿನಗಳಂದು  ವೈಯಾಲಿಕಾವಲ್ ನಲ್ಲಿರುವ ಟಿ.ಟಿ.ಡಿ. ನಿರ್ವಹಣೆಯಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಆಯೋಜಿಸಲಾಗುತ್ತಿರುವ ವಿಶೇಷ ದರ್ಶನದ ಏರ್ಪಾಟುಗಳನ್ನು ವೀಕ್ಷಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಟಿ.ಎ.ಸರವಣ ಅವರು, ಈ ಬಾರಿ ಸಾರ್ವಜನಿಕರಿಗೆ ಜನವರಿ ಒಂದನೇ ತಾರೀಖು ಹಾಗೂ ಎರಡನೆಯ ತಾರೀಖಿನಂದು  ದೇವರ ದರ್ಶನವನ್ನು ಪಡೆಯಲು ಅನುಕೂಲವಾಗುವಂತೆ ಕೆಲವು ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಇದರಿಂದ ಬರುವ ಭಕ್ತಾದಿಗಳು ಸ್ವಾಮಿಯ ದರ್ಶನ ಹಾಗೂ ಪ್ರಸಾದವನ್ನು ಸ್ವೀಕರಿಸಿ ಸಾವಕಾಶವಾಗಿ ತೆರಳಲು ಅನುಕೂಲ ಕಲ್ಪಿಸಲು ಎರಡೂ ದಿನಗಳೂ ನಡುರಾತ್ರಿಯಿಂದಲೇ ನಿರಂತರ ದರ್ಶನಕ್ಕೆ (ನೈವೇದ್ಯ ಸಮಯಗಳಾದ ಬೆಳಗಿನ ಜಾವ 1.30 a.m. ರಿಂದ 2.00 a.m., ಮುಂಜಾನೆ 9.00 a.m. ರಿಂದ 9.30 a.m., ಮತ್ತು ಸಂಜೆ 4.00 p.m. ರಿಂದ 4.30 p.m. ಹೊರತುಪಡಿಸಿ) ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಕಳೆದ ವರ್ಷ ವೈಕುಂಠ ಏಕಾದಶಿಯಂದು ಅಂದಾಜು ಎಪ್ಪತ್ತೈದು ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ದೇವರ ದರ್ಶನ ಪಡೆದಿದ್ದರು. ಈ ಬಾರಿ ಅದು ಒಂದು ಲಕ್ಷವನ್ನೂ ಮೀರಬಹುದೆಂಬ ನಿರೀಕ್ಷೆಯಿದ್ದು, ಈ ಬಾರಿ ಧರ್ಮದರ್ಶನ, ವಿಐಪಿ ದರ್ಶನ ಹಾಗೂ ಒಬ್ಬರಿಗೆ ಪ್ರವೇಶ ಕಲ್ಪಿಸುವ 200/- ರೂ.ಗಳ ಶೀಘ್ರ ದರ್ಶನ ಟಿಕೇಟ್ ಗಳನ್ನು ಕೊಡುವ ವ್ಯವಸ್ಥೆಯನ್ನು ಮಾಡಲಾಗಿದ್ದು ಇದರ ಅನುಕೂಲವನ್ನೂ ಹೆಚ್ಚಿನ  ಸಮಯಾವಕಾಶವಿರದ ಭಕ್ತಾದಿಗಳು ಈ ಬಾರಿ ಪಡೆಯಬಹುದಾಗಿದೆ. 

ಈ ಶುಲ್ಕವು ಸಹ ನೇರವಾಗಿ ತಿರುಮಲ ಸ್ವಾಮಿಯ ಸನ್ನಿಧಾನಕ್ಕೆ ಸೇರುತ್ತದೆ ಎಂಬ ಮಾಹಿತಿ ನೀಡಿ, ಈ ಸಲ ತಿರುಪತಿಯ ಸ್ವಾಮಿ ಶ್ರೀವಾರು ಲಡ್ಡು ಪ್ರಸಾದವು (ಪ್ರಸಾದ ಕೊಂಡುಕೊಳ್ಳಲು  ಒಂದಕ್ಕೆ ಐವತ್ತು ರೂ.ಗಳು)  ಭಕ್ತಾದಿಗಳಿಗೆ ಎರಡೂ ದಿನಗಳು ಸಿಗುವಂತಾಗಲು ಅಲ್ಲಿಂದಲೂ ಲಾಡುಗಳನ್ನು ತರಿಸುವ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದ್ದು, ಲಡ್ಡುಗಳಿಗೆ  ಬೇಡಿಕೆ ಹೆಚ್ಚಾಗಿರುವ ಕಾರಣ, ನಿರೀಕ್ಷಿತ ಸಂಖ್ಯೆಯಲ್ಲಿ ತಿರುಪತಿಯ ಲಾಡು ಪ್ರಸಾದವು ಅಲ್ಲಿಂದ ಬಾರದಿದ್ದ ಪಕ್ಷದಲ್ಲಿ, ಅದಕ್ಕೆ ಪರ್ಯಾಯವಾಗಿ ನಮ್ಮ ಬೆಂಗಳೂರಿನಲ್ಲೇ ವೈಕುಂಠ ಏಕಾದಶಿಗಾಗಿಯೇ ತಯಾರಿಸಲ್ಪಡುವ  ಲಡ್ಡುಗಳನ್ನು ಈ ಸಂದರ್ಭದಲ್ಲಿ  ಪ್ರಸಾದವನ್ನಾಗಿಯೂ ಭಕ್ತಾದಿಗಳಿಗೆ ಹಂಚುವ ವ್ಯವಸ್ಥೆಯನ್ನು ಶರವಣರವರು ಮಾಡಲು ಮುಂದಾಗಿದ್ದಾರೆ.   ಈ ವೇಳೆ ಕಾರ್ಯದರ್ಶಿ ಕೆ. ಭಕ್ತವತ್ಸಲ ರೆಡ್ಡಿ,  ಪ್ರಚಾರ ಸಮಿತಿ ಅಧ್ಯಕ್ಷ ಪಟ್ಟುಬಾಲ ಭಾಸ್ಕರಾನಂದ, ಸೂಪರಿಂಟೆಂಡೆಂಟ್ ಜಯಂತಿ, ಟಿ.ಟಿ.ಡಿ. ಯ ಎಸ್.ವಿ.ಬಿ.ಸಿ. ನಿರ್ದೇಶಕಿ ವಸಂತ ಕವಿತಾ,  ಮುಂತಾದವರು  ಉಪಸ್ಥಿತರಿದ್ದರು. ಈ ವಿಶೇಷ ಸಂದರ್ಭದಲ್ಲಿ ಬರುವ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ವಿಐಪಿ ಪಾಸು ಹೊಂದಿದವರು ಬೆಳಗಿನಜಾವ 3 a.m.  ನಿಂದ ಬೆಳಿಗ್ಗೆ 8 a.m. ಗಂಟೆಯ ಒಳಗೆ ದರ್ಶನಕ್ಕೆ ಆಗಮಿಸುವುದರಿಂದಾಗಿ ಪಾಸು ಹೊಂದಿರುವವರಿಗೂ ಹಾಗೂ ಸಾರ್ವಜನಿಕರಿಗೂ ಹೆಚ್ಚು ಅನುಕೂಲವಾಗುತ್ತದೆ, ಜೊತೆಗೆ ಬರುವ ಭಕ್ತಾದಿಗಳು ತಮ್ಮ ವಾಹನಗಳನ್ನು ತುಸು ದೂರದಲ್ಲೇ ಇರುವ ಆಟದ ಮೈದಾನದಲ್ಲಿ ನಿಲುಗಡೆ ಮಾಡಿ ದೇವಸ್ಥಾನಕ್ಕೆ ನಡೆದುಬರುವುದರಿಂದ ಸುತ್ತಮುತ್ತಲಿನ ವಸತಿಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಆಗದಂತೆ ಮನವಿ ಮಾಡಿಕೊಂಡು, ವಿಐಪಿ ಲೇನ್ ನಲ್ಲಿ ಗರ್ಭಿಣಿಯರಿಗೆ, ವಯೋವೃದ್ಧರಿಗೆ, ಒಂದು ವರ್ಷ ಮೀರದ ಕಂದಮ್ಮಗಳನ್ನು ಜೊತೆಯಲ್ಲಿ ಕರೆತರುವ ತಾಯಂದಿರಿಗೆ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ ಹಾಗೂ ವಿಕಲಚೇತನರಿಗೆ ವಿಶೇಷ ಲಿಫ್ಟ್ ವ್ಯವಸ್ಥೆ ಇರಲಿದೆ ಎಂಬುದಾಗಿ ಪ್ರಚಾರ ಸಮಿತಿ ಅಧ್ಯಕ್ಷ ಪಟ್ಟುಬಾಲ ಭಾಸ್ಕರಾನಂದ ಮಾಹಿತಿ ನೀಡಿದರು.


 *ಭಕ್ತರ ವಿಶೇಷ ಗಮನಕ್ಕೆ* 

ಇತ್ತೀಚೆಗೆ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ತಿರುಮಲ ದೇವಾಲಯದಲ್ಲಿ ನಡೆಯಲಿರುವ ದುರಸ್ಥಿ ಕಾರ್ಯಗಳಿಗೆ ಸಂಬಂಧಿಸಿದಂತೆ ದೇವಾಲಯವು ಭಕ್ತರ ದರ್ಶನಕ್ಕೆ ಇಷ್ಟು ದಿನ - ಅಷ್ಟು ದಿನಗಳ ಕಾಲ ವಿರಾಮ ನೀಡಲಾಗುವುದು ಎಂಬ ಸುದ್ದಿ ಹರಿದಾಡುತ್ತಿದ್ದುದ್ದನ್ನು ಗಮನಿಸಿ, ಆ ಕುರಿತು ಟಿ ಟಿ ಡಿ ಆಡಳಿತ ಮಂಡಳಿಯವರನ್ನು ಸಂಪರ್ಕಿಸಿದಾಗ ತಿಳಿದು ಬಂದ ಖಚಿತ ಮಾಹಿತಿಯ ಅನುಸಾರ ದೇಗುಲದ ಗೋಪುರಕ್ಕೆ ಚಿನ್ನದ ಲೇಪನವನ್ನು ಮಾಡಿ ಸುಮಾರು ಮೂವತ್ತು ವರ್ಷಗಳು ಕಳೆದಿರುವ ಕಾರಣ, ಈಗ ಮತ್ತೊಮ್ಮೆ ಪುನಃ ಚಿನ್ನದ ಲೇಪನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಸದರಿ ಚಿನ್ನದ ಲೇಪನದ ಕಾಮಗಾರಿಗೂ ಭಕ್ತಾದಿಗಳು  ದೇವಸ್ಥಾನಕ್ಕೆ ಬಂದು ದರ್ಶನ ಪಡೆಯಲು ಯಾವುದೇ ವಿಧದಲ್ಲೂ ಅಡಚಣೆ ಇರುವುದಿಲ್ಲ. ದೇವಸ್ಥಾನದ ನಿತ್ಯ ಕೈಂಕರ್ಯಗಳು ಸೇವೆಗಳು ಎಂದಿನಂತೆ ಜರುಗಲಿವೆ ಹಾಗೂ ಭಕ್ತರಿಂದ ಸ್ವಾಮಿಯ ದರ್ಶನಕ್ಕೂ  ಯಾವುದೇ ಕಾರಣಕ್ಕೂ ಅಡಚಣೆ ಆಗುವುದಿಲ್ಲ  ಎಂಬ ಮಾಹಿತಿಯು ಶ್ರೀ ವೆಂಕಟೇಶ್ವರ ಸ್ವಾಮಿಯವರ ಭಕ್ತ ಜನರಿಗೆ ತಲುಪಲಿ ಎಂದು ಸರವಣರವರು ಈ ವೇಳೆ ತಿಳಿಸಿದರಲ್ಲದೆ, ಈ ಸಂಬಂಧವಾಗಿ ಉಹಾಪೋಹ, ತಪ್ಪು ಮಾಹಿತಿಗಳನ್ನು ನೀಡುವವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನು ಒಳಗೊಂಡ ಮಾಹಿತಿಯನ್ನು ಅವರು ನೀಡಿದರು.

ವರದಿ : ಕೆ.ಸುಕುಮಾರ್ ರಾಜು

Post a Comment

0 Comments

Ad Code

Responsive Advertisement