*ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2023 ; ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ತುಷಾರ್ ಗಿರಿ ನಾಥ್*
ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ 28 ವಿಧಾನಸಭಾ ಕ್ಷೇತ್ರಗಳಿಗೆ ರಾಜಕೀಯ ಪಕ್ಷಗಳಿಂದ ಬೂತ್ ಮಟ್ಟದ ಏಜೆಂಟ್(BLA)ಗಳನ್ನು ನಿಯೋಜಿಸಿ ಸೋಮವಾರ(26-12-2022) ಏಜೆಂಟ್ ಗಳ ಪಟ್ಟಿಯನ್ನು ಸಲ್ಲಿಸಲು *ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು* ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಸೂಚನೆ ನೀಡಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2023ರ ಕಾರ್ಯಚಟುವಟಿಕೆಗಳ ಕುರಿತು ರಾಜಕೀಯ ಪಕ್ಷದ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ತುಷಾರ್ ಗಿರಿ ನಾಥ್, ಪಾಲಿಕೆಯಿಂದ ಈಗಾಗಲೇ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬೂತ್ ಮಟ್ಟದ ಅಧಿಕಾರಿ(BLO)ಗಳನ್ನು ನಿಯೋಜಿಸಲಾಗಿದ್ದು, ಮತದಾರರ ಪಟ್ಟಿ ಪರಿಷ್ಕರಣೆಯ ಕಾರ್ಯವು ಪ್ರಗತಿಯಲ್ಲಿರುತ್ತದೆ. ಈ ಪೈಕಿ ರಾಜಕೀಯ ಪಕ್ಷಗಳಿಂದಲೂ ಕೂಡಲೆ ಬೂತ್ ಮಟ್ಟದ ಏಜೆಂಟ್ ಗಳನ್ನು ನಿಯೋಜಿಸಲು ರಾಜಕೀಯ ಪಕ್ಷದ ಪ್ರತಿನಿಧಿಗಳಿಗೆ ತಿಳಿಸಿದರು.
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯ ಕುರಿತು ರಾಜಕೀಯ ಪ್ರತಿನಿಧಿಗಳ ಜೊತೆ ಪ್ರತಿ ವಾರವೂ ಜಿಲ್ಲಾ ಚುನಾವಣಾಧಿಕಾರಿಯ ಅಧ್ಯಕ್ಷತೆಯಲ್ಲಿ ಒಂದು ಸಭೆ ನಡೆಯಲಿದೆ. ಇದರ ಜೊತೆಗೆ ಆಯಾ 28 ವಿಧಾನ ಸಭಾ ಕ್ಷೇತ್ರಗಳಲ್ಲಿಯೂ ಅಪರ ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಬೂತ್ ಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದರು.
ರಾಜಕೀಯ ಪಕ್ಷಗಳಿಗೆ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದ ಸಂಪೂರ್ಣ ವಿವರವನ್ನು ಪ್ರತಿ 3 ದಿನಕ್ಕೊಮ್ಮೆ ರಾಜಕೀಯ ಪಕ್ಷಗಳ ಕಛೇರಿಯ ಇ-ಮೇಲ್ ಐಡಿ ಗೆ ಕಳುಹಿಸಿಕೊಡಲಾಗುವುದು. ಇನ್ನೂ ಹೆಚ್ಚಿನ ಇ-ಮೇಲ್ ಐಡಿಗೆ ಕಳುಹಿಸಿಕೊಡಬೇಕಾದರೆ ರಾಜಕೀಯ ಪಕ್ಷಗಳಿಂದ ಅಧಿಕೃತ ಇ-ಮೇಲ್ ಐಡಿ ಎಂದು ದೃಢೀಕರಿಸಿಕೊಂಡು ಪಾಲಿಕೆಗೆ ಸಲ್ಲಿಸಿದರೆ ಅದಕ್ಕೂ ವಿವರಗಳನ್ನು ಕಳುಹಿಸಿಕೊಡಲಾಗುವುದು ಎಂದು ಮಾಹಿತಿ ನೀಡಿದರು.
*ವೆಬ್ ಸೈಟ್ ನಲ್ಲಿ ಬೂತ್ ಮಟ್ಟದ ಅಧಿಕಾರಿ(BLO)ಗಳ ವಿವರ ಪ್ರಕಟ:*
ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಬರುವ ಬೂತ್ ಗಳಿಗೆ ಬೂತ್ ಮಟ್ಟದ ಅಧಿಕಾರಿ(ಬಿ.ಎಲ್.ಒ)ಗಳನ್ನು ನಿಯೋಜಿಸಿರುವ ಸಂಬಂಧ ಪಾಲಿಕೆಯ ವೆಬ್ ಸೈಟ್(https://site.bbmp.gov.in/Election1.html)ನಲ್ಲಿ ಎಲ್ಲಾ ಬೂತ್ ಮಟ್ಟದ ಅಧಿಕಾರಿಗಳ ವಿವರ(ವಿಧಾನಸಭಾ ಕ್ಷೇತ್ರದ ವಿವರ, ಹೆಸರು, ಪದನಾಮ, ಮೊಬೈಲ್ ಸಂಖ್ಯೆ, ಭಾವಚಿತ್ರ ಹಾಗೂ ಸಹಿಯೊಂದಿಗಿನ ಪಟ್ಟಿ)ವನ್ನು ಪ್ರಕಟಿಸಲಾಗಿದ್ದು, ರಾಜಕೀಯ ಪಕ್ಷಗಳು ಅಥವಾ ಸಾರ್ವಜನಿಕರು ಸಂಬಂಧಪಟ್ಟ ಬಿಎಲ್‌ಒಗಳನ್ನು ಸಂಪರ್ಕಿಸಿ ಅಗತ್ಯ ಮಾಹಿತಿಯನ್ನು ಪಡೆಯಬಹುದಾಗಿದೆ.
*ಸಭೆಯಲ್ಲಿ ಚರ್ಚೆಯಾದ ಪ್ರಮುಖ ಅಂಶಗಳು:*
28 ವಿಧಾನ ಸಭಾ ಕ್ಷೇತ್ರಗಳಲ್ಲಿ ನೂಮೂನೆಗಳ ವಿಲೇವಾರಿ ಮಾಡಿರುವ, ಮನೆ ಮನೆ ಸಮೀಕ್ಷೆ ನಡೆಸುತ್ತಿರುವ, ಬೂತ್ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಿರುವ, ಚಿಕ್ಕಪೇಟೆ-ಶಿವಾಜಿನಗರ-ಮಹದೇವಪುರ ವ್ಯಾಪ್ತಿಯಲ್ಲಿ ಸೇರ್ಪಡೆ ಹಾಗೂ ಮತದಾರರ ಪಟ್ಟಿಯಿಂದ ತೆಗೆದು ಹಾಕಿರುವ, ಮತದಾನ ಗುರುತಿನ ಚೀಟಿ ವಿತರಣೆ ಸೇರಿದಂತೆ ಇನ್ನಿತರೆ ವಿಷಯಗಳ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಚುನಾವಣಾ ವಿಭಾಗದ ವಿಶೇಷ ಆಯುಕ್ತ ಉಜ್ವಲ್ ಕುಮಾರ್ ಘೋಷ್, ಆಡಳಿತ ವಿಭಾಗದ ವಿಶೇಷ ಆಯುಕ್ತ ಹರೀಶ್ ಕುಮಾರ್, ಜಿಲ್ಲಾಧಿಕಾರಿ ದಯಾನಂದ, ಅಪರ ಜಿಲ್ಲಾ ಚುನಾವಣಾಧಿಕಾರಿಗಳು, ರಾಜಕೀಯ ಪಕ್ಷದ ಪ್ರತಿನಿಧಿಗಳು ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

0 Comments