ಬೆಂಗಳೂರು; ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಉಳಿದದ್ದು ಕೇವಲ ಐದೇ ತಿಂಗಳು. ಬಿಜೆಪಿ, ಕಾಂಗ್ರೆಸ್, ಜೆಡಿ (ಎಸ್)ಗಳು ಚುನಾವಣೆ ರಣ ಕಹಳೆ ಮೊಳಗಿಸಿವೆ. ಇದೀಗ ತಾನೇಕೆ ಒಂದು ಕೈ ನೋಡಬಾರದು ಎನ್ನುತ್ತಿರುವಂತಿದೆ ಆಮ್ ಆದಿಮಿ ಪಕ್ಷ (ಎಎಪಿ). ಸಮೀಕ್ಷೆಗಳ ಪ್ರಕಾರ ಎಎಪಿ ದೇಶದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ರಾಜಕೀಯ ಪಕ್ಷ. ಆದರೆ ಕರ್ನಾಟಕದಲ್ಲಿ ಎಎಪಿ ನಿರೀಕ್ಷೆಗೆ ತಕ್ಕಂತೆ ಬೆಳೆಯುತ್ತಿಲ್ಲ.
ಹೀಗಾಗಿ ಆಮ್ ಆದಿಮಿ ವರಿಷ್ಠರು, ಎಎಪಿ ಸಿದ್ಧಾಂತದ ಪ್ರಕಾರ ಪಕ್ಷಕ್ಕೆ ವರ್ಚಸ್ಸು ತಂದು ಕೊಡಬಲ್ಲ ಹೋರಾಟ ಮನೋಭಾವದ ಹೊಸ ಮುಖಗಳ ಶೋಧ ಆರಂಭಿಸಿದ್ದಾರೆ.
ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಆಂದೋಳನದಿಂದ ಹುಟ್ಟಿದ್ದು ಎಎಪಿ (ಆಪ್). ದೆಹಲಿ, ಪಂಜಾಬ್ ಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಅರವಿಂದ ಕೇಜರಿವಾಲ್ ನೇತೃತ್ವದ ದೆಹಲಿ ಸರಕಾರ, ಇಡೀ ದೇಶವೇ ಗಮನ ಸೆಳೆಯುವಂಥ ಮಾದರಿ ಆಡಳಿತವನ್ನು ನೀಡುತ್ತಿದೆ. ಸಂವಿಧಾನದ ನೀತಿ ನಿರ್ದೇಶಕ ತತ್ವಗಳನ್ನು ಬಹುತೇಕವಾಗಿ ಚಾಚು ತಪ್ಪದೇ ಪಾಲಿಸುತ್ತಿದೆ. ನೀತಿ ನಿರ್ದೇಶಕಗಳಲ್ಲಿನ ಉಚಿತ ಶಿಕ್ಷಣ, ಸರ್ವರಿಗೂ ಆರೋಗ್ಯ, ಮಿತಿಗೊಳಪಟ್ಟ ಉಚಿತ ವಿದ್ಯುತ್, ಕುಡಿಯುವ ನೀರು, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಹೀಗೆ ಹತ್ತು ಹಲವು ಜನಪ್ರಿಯ ಯೋಜನೆಗಳಿಂದ ದೇಶದಲ್ಲಿ ಮನೆ ಮಾತಾಗಿದೆ ಎಎಪಿ.
ದೆಹಲಿ, ಪಂಜಾಬ್ ಗಳಲ್ಲಿಯ ಜಯಭೇರಿ ಮೂಲಕ ಗುಜರಾತಿನಲ್ಲಿ ಬಿಜೆಪಿಗೆ ನಡುಕ ಹುಟ್ಟಿಸಿರುವ ಆಮ್ ಆದಿಮಿ ಪಕ್ಷ, ಇದೀಗ ಕರ್ನಾಟಕ ವಿಧಾನಸಭೆ ಚುನಾವಣೆ ಮೇಲೆ ಕಣ್ಣು ಹಾಕಿದೆ.
ಹೌದು.., ಕಳೆದ 10ವರ್ಷಗಳಿಂದ ಕರ್ನಾಟಕದಲ್ಲಿ ನೆಲೆ ಊರಿರುವ ಆಪ್, ಚುನಾವಣೆಯನ್ನು ಎದುರಿಸಿದ್ದು ಕಡಿಮೆಯೇ. ಈಚೆಗೆ ಅದು ಎದುರಿಸಿದ ಕೆಲವು ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸಾಧಿಸಿದ್ದು ಅಷ್ಟಕ್ಕಷ್ಟೆಯೇ. ಯಾಕೆ? ಕರ್ನಾಟಕದ ದೃಷ್ಟಿಯಿಂದ ಹೇಳಬೇಕಾದರೆ ಆಮ್ ಆದಿಮಿ ಪಕ್ಷದಲ್ಲಿ ವರ್ಚಸ್ವೀ ನಾಯಕರ ಕೊರತೆ ಎದ್ದು ಕಾಣುತ್ತಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜರಿವಾಲ್ ಅವರ ಆಪ್ತ ವಲಯದವರೇ ಆದ ಪೃಥ್ವಿರೆಡ್ಡಿ ಕಳೆದ 10 ವರ್ಷಗಳಿಂದ ಪಕ್ಷದ ಚುಕ್ಕಾಣಿ ಹಿಡಿದಿದ್ದಾರೆ. ರಾಜ್ಯದಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳಿದ್ದರೂ ಪರಿಣಾಮಕಾರಿ ಹೋರಾಟಗಳು ನಡೆದಿಲ್ಲ. ಸ್ವಯಂ ನಿವೃತ್ತಿ ಘೋಷಿಸಿ ಎಎಪಿ ಸೇರಿದ ಪೊಲೀಸ್ ಅಧಿಕಾರಿ ಭಾಸ್ಕರರಾವ್ ಮೊನಚನ್ನು ಪ್ರದರ್ಶಿಸುತ್ತಿಲ್ಲ. ಮುಖ್ಯಮಂತ್ರಿ ಚಂದ್ರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಸ್ಥಿತಿಯಲ್ಲಿದ್ದಾರೆ.
ದೆಹಲಿ, ಪಂಜಾಬ್ ಸೇರಿ ಉತ್ತರದ ರಾಜ್ಯಗಳಲ್ಲಿರುವ ಎಎಪಿ ವರ್ಚಸ್ಸನ್ನು ಪ್ರಬಲ ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳುವಲ್ಲಿ ಕರ್ನಾಟಕದ ಮುಂಚೂಣಿ ನಾಯಕರು ಎಡವಿದ್ದಾರೆ. 2023ರ ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಜರಿವಾಲ್ ತಂಡ ಇದೀಗ ಪ್ರಾಮಾಣಿಕ, ಹೋರಾಟ ಮನೋಭಾವದ ನಾಯಕರ ಹುಡುಕಾಟ ಆರಂಭಿಸಿದೆ. ಈ ನಿಟ್ಟಿನಲ್ಲಿ ದಶಕಗಳಿಂದ ಜನಪರ ಹೋರಾಟ ನಡೆಸಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರ ನಿದ್ದೆಗೆಡಿಸಿರುವ ಸಾಮಾಜಿಕ ಹೋರಾಟಗಾರ, ಉದ್ಯಮಿ ಆಲಮ್ ಪಾಶಾ ಅವರತ್ತ ಗಾಳ ಬೀಸಿದೆ.
ರಾಜಕೀಯ ಪ್ರವೇಶಕ್ಕೂ ಮುನ್ನ ಕೇಜರಿವಾಲ್ ಅವರು ಭ್ರಷ್ಟಾಚಾರದ ವಿರುದ್ಧ ನಡೆಸಿದಷ್ಟೇ ಪರಿಣಾಮಕಾರಿ ಹೋರಾಟಗಳನ್ನು ನಡೆಸಿರುವ ಆಲಮ್ ಪಾಶಾ ಅವರನ್ನು ಎಎಪಿಗೆ ಸೆಳೆದುಕೊಂಡರೆ ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಕುದಿಯುತ್ತಿರುವ ಮತದಾರ ಸಮೂಹವನ್ನು ಆಕರ್ಷಿಸುವ ಜೊತೆಗೆ ಅಲ್ಪ ಸಂಖ್ಯಾತರು ಮತ್ತು ದಲಿತ ಸಮೂಹಗಳನ್ನು ಸುಲಭವಾಗಿ ಸೆಳೆಯುವ ಲೆಕ್ಕಾಚಾರನ್ನು ಆಪ್ ವರಿಷ್ಠರು ಹಾಕುತ್ತಿದ್ದಾರೆ.
ಇಡೀ ದೇಶದ ಗಮನ ಸೆಳೆದ ಐಎಮ್ಎ ಮತ್ತು ಅಮಾನತ್ ಬ್ಯಾಂಕಿನ ಬಹುಕೋಟಿ ವಂಚನೆ ಹಗರಣದ ಸಂತ್ರಸ್ತರ ಪರ ಧ್ವನಿಯೆತ್ತಿ ಅವರಿಗೆ ನ್ಯಾಯ ಕೊಡಿಸುವಲ್ಲಿ ನಿರಂತರ ಹೋರಾಟ ನಡೆಸಿರುವ ಆಲಮ್ ಪಾಶಾ ಅವರು, ವಕ್ಫ್ ಆಸ್ತಿ ಕಬಳಿಸಿರುವ ಪ್ರಭಾವೀ ರಾಜಕಾರಣಿಗಳ ವಿರುದ್ಧ ನಿರ್ಣಾಯಕ ಸಮರ ಸಾರಿದ್ದಾರೆ. ಇಂಥ ಹೋರಾಟ ಮನೋಭಾವದ ಪ್ರಾಮಾಣಿಕರನ್ನು ಸೆಳೆದು ಪಕ್ಷಕ್ಕೆ ಶಕ್ತಿ, ಹುಮ್ಮಸ್ಸು ತುಂಬುವ ಇರಾದೆ ದೆಹಲಿ ನಾಯಕರದ್ದಾಗಿದೆ.
ಈ ನಿಟ್ಟಿನಲ್ಲಿ ರಾಜ್ಯದ ಎಎಪಿ ಪ್ರಮುಖರಾದ ನಾಗರಾಜ ಹೊಂಗಲ್ ಮತ್ತು ಶಿವರಾಯಪ್ಪ ಜೋಗಿನ ಅವರು ಆಲಮ್ ಪಾಶಾ ಅವರನ್ನು ಸಂಪರ್ಕಿಸಿ ಹಲವು ಸುತ್ತಿನ ಚರ್ಚೆಗಳನ್ನು ನಡೆಸಿದ್ದಾಗಿದೆ. ಕರ್ನಾಟಕದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುವ ಕೇಜರಿವಾಲ್ ಆಪ್ತ ಹಾಗೂ ದೆಹಲಿ ಸರಕಾರದ ಮುಖ್ಯ ಸಚೇತಕರಾದ ದಿಲೀಪ್ ಪಾಂಡೆ ಅವರೊಂದಿಗೆ ದೆಹಲಿಯಲ್ಲಿ ಆಲಮ್ ಪಾಶಾ, ನಾಗರಾಜ್ ಹೊಂಗಲ್ ಅವರು ಚರ್ಚೆ ನಡೆಸಿದ್ದಾರೆ. ಅಮ್ ಆದಿಮಿ ಪಕ್ಷ ಇದೇ ರೀತಿ ಕರ್ನಾಟಕದಾದ್ಯಂತ ಇನ್ನೂ ಹಲವು ಹೊಸ ಮುಖಗಳ ಶೋಧದಲ್ಲಿ ನಿರತವಾಗಿದೆ. ಕಾನೂನಾತ್ಮಕ ಹೋರಾಟದ ಮೂಲಕ ತಮ್ಮದೇ ವಿಶೇಷ ಛಾಪು ಮೂಡಿಸಿರುವ ಆಲಮ್ ಪಾಶಾ ಅವರು ಸೇರಿದಂತೆ ಹೊಸ ಮುಖಗಳ ಸೇರ್ಪಡೆ ವಿಚಾರ ಗುಜರಾತ್ ಚುನಾವಣೆ ಫಲಿತಾಂಶದ ನಂತರವೇ ಖಚಿತವಾಗಲಿದೆ.

0 Comments