ಒ0ದನೇ ತರಗತಿಯಿಂದ ಎಂಟನೇ ತರಗತಿಯವರೆಗೆ ಹಿಂದುಳಿದ ಜಾತಿ, ಧಾರ್ಮಿಕ ಅಲ್ಪಸಂಖ್ಯಾತ ಮತ್ತು ಎಸ್ಸಿಎಸ್ಟಿ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನವನ್ನು ರದ್ದು ಮಾಡಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ ನಿರ್ಧಾರವನ್ನು ಬಹುಜನ ಸಮಾಜ ಪಾರ್ಟಿ ರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ ಖಂಡಿಸಿದ್ದಾರೆ.
ತಕ್ಷಣ ರದ್ದು ಮಾಡಿರುವ ವಿದ್ಯಾರ್ಥಿವೇತನವನ್ನು ಮರು ಜಾರಿಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ಈಗಾಗಲೇ ಕೋವಿಡ್ ಮತ್ತು ಇನ್ನಿತರ ಕಾರಣಗಳಿಂದ ಎಲ್ಲಾ ವರ್ಗದ ಬಡವರ ಮಕ್ಕಳು ಶಾಲೆಗಳಿಂದ ಹೊರಗುಳಿದು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿ ವೇತನ ರದ್ದು ಮಾಡಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಕಿಡಿ ಕಾರಿದ್ದಾರೆ.
ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸಿ ಶೈಕ್ಷಣಿಕ ಕ್ಷೇತ್ರವನ್ನು ಬದಲಾವಣೆ ಮಾಡುತ್ತೇವೆ ಎಂದು ಹೇಳಿದ್ದ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಈಗ ವಿದ್ಯಾರ್ಥಿ ವೇತನವನ್ನು ರದ್ದುಗೊಳಿಸಿ ವಿದ್ಯಾರ್ಥಿಗಳು ಶಿಕ್ಷಣದಿಂದ ವಿಮುಖಗೊಳ್ಳುವಂತೆ ಮಾಡಿರುವುದು ಅನುಮಾನಕ್ಕೆ ಕಾರಣವಾಗಿದೆ.
ಬಡವರ ಮಕ್ಕಳು ಶಿಕ್ಷಣ ಪಡೆಯದೆ ಗುಲಾಮರಾಗಬೇಕು ಎನ್ನುವುದು ಮನುವಾದಿ ಬಿಜೆಪಿ ಸರ್ಕಾರದ ಹುನ್ನಾರವಾಗಿದೆ ಎಂದು ಆರೋಪಿಸಿದ್ದಾರೆ.
ಕಳೆದ ವರ್ಷ ಸುಮಾರು 60 ಲಕ್ಷ ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ರದ್ದು ಮಾಡಿದ್ದಾರೆ. ಹಾಗೆಯೇ ಸುಮಾರು 2000 ಸಂಶೋಧನಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿಲ್ಲ. ಜೊತೆಗೆ ವಿದೇಶಗಳಿಗೆ ಹೋಗುವ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿವೇತನ ನಿಲ್ಲಿಸಲಾಗಿದೆ.
ಇದೆಲ್ಲವನ್ನು ಗಮನಿಸಿದರೆ ಹಿಂದುಳಿದ, ಧಾರ್ಮಿಕ ಅಲ್ಪಸಂಖ್ಯಾತರ ಮತ್ತು ಎಸ್ಸಿ ಎಸ್ಟಿಗಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವುದು ಬಿಜೆಪಿ ಸರ್ಕಾರದ ಉದ್ದೇಶವಾಗಿದೆ ಎನಿಸುತ್ತದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯ ಈ ಶಿಕ್ಷಣ ವಿರೋಧಿ ನೀತಿಯ ವಿರುದ್ಧ ಬಿಜೆಪಿಯಲ್ಲಿರುವ ಎಸ್ಸಿ ಎಸ್ಟಿ ಮತ್ತು ಒಬಿಸಿ ಶಾಸಕರು ಮತ್ತು ಸಂಸದರು ಧ್ವನಿ ಎತ್ತದಿರುವುದು ನಾಚಿಕೆಗೇಡು. ತಮ್ಮ ಸಮುದಾಯಗಳ ವಿದ್ಯಾರ್ಥಿಗಳಿಗೆ ಇಷ್ಟೆಲ್ಲಾ ಅನ್ಯಾಯವನ್ನು ಬಿಜೆಪಿ ಸರ್ಕಾರ ಮಾಡುತ್ತಿದ್ದರು ಸುಮ್ಮನಿರುವುದು ಸರಿಯಲ್ಲ ಎಂದು ಟೀಕಿಸಿದ್ದಾರೆ.
ಇನ್ನು ರಾಜ್ಯದ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉಪಯೋಜನೆಯಡಿ ಈ ವರ್ಷ ಹಂಚಿಕೆಯಾದ 29,165 ಕೋಟಿ ಹಣದಲ್ಲಿ ಕೇವಲ 4033 ಕೋಟಿ ಹಣವನ್ನು ಮಾತ್ರ ವೆಚ್ಚ ಮಾಡಿರುವುದು ದ್ರೋಹವಾಗಿದೆ.
ಈ ವೈಫಲ್ಯದ ನೈತಿಕ ಹೊಣೆ ಹೊತ್ತು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ ನೀಡಬೇಕೆಂದು ಬಹುಜನ ಸಮಾಜ ಪಾರ್ಟಿ ಆಗ್ರಹಿಸುತ್ತದೆ ಎಂದಿದ್ದಾರೆ.
ಎಸ್ಸಿ ಎಸ್ಟಿಗಳ ಓಟು ಗಳಿಕೆಗಾಗಿ ಸುಳ್ಳು ಜಾಹೀರಾತು ಮತ್ತು ಭರವಸೆ ನೀಡುವ ಬಿಜೆಪಿ ಸರ್ಕಾರದ ಅಸಲಿ ಮುಖ ಈಗ ಅನಾವರಣವಾಗಿದೆ.
ಕರ್ನಾಟಕದಲ್ಲಿ ಉನ್ನತ ಶಿಕ್ಷಣ, ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಮತ್ತು ಪದವಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಿಡುಗಡೆ ಮಾಡದೇ ಸತಾಯಿಸುತ್ತಿರುವುದು ನಾಚಿಕೆಗೇಡು.
ತಕ್ಷಣ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವಿರೋಧಿ ನಿಲುವನ್ನು ಬದಲಾಯಿಸಿಕೊಳ್ಳದಿದ್ದರೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಬಿಎಸ್ಪಿ ಎಚ್ಚರಿಕೆ ನೀಡುತ್ತದೆ ಎಂದಿದ್ದಾರೆ.

0 Comments