Ticker

6/recent/ticker-posts

Ad Code

Responsive Advertisement

ರಾಜ್ಯ ಬಿಜೆಪಿ ಸರ್ಕಾರವನ್ನು ವಜಾ ಮಾಡಲು ಬಿಎಸ್ಪಿ ಆಗ್ರಹ

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹಾಗೂ ಭ್ರಷ್ಟಾಚಾರವನ್ನು ನಿಯಂತ್ರಣ ಮಾಡಲು ಸಂಪೂರ್ಣವಾಗಿ ವಿಫಲವಾಗಿರುವ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರವನ್ನು ವಜಾ ಮಾಡಬೇಕೆಂದು ಬಹುಜನ ಸಮಾಜ ಪಾರ್ಟಿ ರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ ಆಗ್ರಹಿಸಿದ್ದಾರೆ. 


ಕಳೆದ ಹತ್ತು ದಿನಗಳಲ್ಲಿ ಮಂಗಳೂರಿನಲ್ಲಿ ಮೂರು ಹತ್ಯೆಗಳು ನಡೆದಿರುವುದು, ಬಿಜೆಪಿ ಸರ್ಕಾರ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.

ತನ್ನದೇ ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರು ಮತ್ತು ಮುಖಂಡರ ಹತ್ಯೆಯನ್ನು ತಡೆಯಲು ಸಾಧ್ಯವಾಗದ ಬಿಜೆಪಿ ಸರ್ಕಾರ, ಇನ್ನು  ಜನಸಾಮಾನ್ಯರನ್ನು ಹೇಗೆ ರಕ್ಷಣೆ ಮಾಡಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.

ಸ್ವತಹ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರೇ ಬಸವರಾಜ್ ಬೊಮ್ಮಾಯಿ ಅವರನ್ನು ದುರ್ಬಲ ಮುಖ್ಯಮಂತ್ರಿ ಎಂದೂ ಮತ್ತು ಅರಗ ಜ್ಞಾನೇಂದ್ರ ಅವರನ್ನು 

ಅಸಮರ್ಥ ಗೃಹ ಮಂತ್ರಿ ಎಂದು ಘೋಷಣೆ ಕೂಗಿ, ತಮ್ಮ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುತ್ತಿರುವುದು ಈ ಸರ್ಕಾರದ ಕಾರ್ಯವೈಕರಿಗೆ ಹಿಡಿದ ಕನ್ನಡಿಯಾಗಿದೆ. 

ತಮ್ಮದೇ ಪಕ್ಷದ ಕಾರ್ಯಕರ್ತರ ವಿಶ್ವಾಸ ಕಳೆದುಕೊಂಡಿರುವ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಮತ್ತು ಅರಗ ಜ್ಞಾನೇಂದ್ರ ಗೃಹ ಮಂತ್ರಿಯಾಗಿ ಮುಂದುವರಿಯುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದಿದ್ದಾರೆ.

ಇಂಥ ಸಂದರ್ಭದಲ್ಲಿ ರಾಜ್ಯದಲ್ಲಿ ಶಾಂತಿ ಮತ್ತು ಸಂಯಮ ಕಾಪಾಡುವ ಬದಲು ಮಾಜಿ ಸಚಿವ ಈಶ್ವರಪ್ಪ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರಿಗೆ ಮುಸ್ಲಿಂ ಗುಂಡಾಗಳ ವಿರುದ್ಧ ಹೋರಾಡಿ ಎಂದಿರುವುದು ಹಾಗೂ ಸಂಸದ ತೇಜಸ್ವಿ ಸೂರ್ಯ ಕಾಂಗ್ರೆಸ್ ಸರ್ಕಾರ ಇದ್ದರೆ ಕಲ್ಲು ಹೊಡೆಯಬಹುದಿತ್ತು ಎಂದು ಹೇಳಿರುವುದು ನಾಚಿಕೆಗೇಡಿನ ಸಂಗತಿ. ಇಂಥ ಬೇಜವಾಬ್ದಾರಿ ಬಿಜೆಪಿ ನಾಯಕರ ಮೇಲೆ ಮೇಲೆ ರಾಜ್ಯ ಪೊಲೀಸರು ಸುಮೋಟೋ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

      ಬಿಜೆಪಿಯ ವೋಟ್ ಬ್ಯಾಂಕ್ ರಾಜಕಾರಣದಿಂದ ಕರಾವಳಿಯಲ್ಲಿ ಮತ್ತು ರಾಜ್ಯಾದ್ಯಂತ ನಿರಂತರವಾಗಿ ಧರ್ಮದ ಹೆಸರಿನಲ್ಲಿ ಹಿಂದೂ ಮತ್ತು ಮುಸ್ಲಿಂ ಎರಡು ಸಮುದಾಯಗಳ ಅಮಾಯಕ ಜನ ಬಲಿಯಾಗುತ್ತಿದ್ದಾರೆ.

ಒಂದು ಕಡೆ ರಾಜ್ಯಾದ್ಯಂತ ಅಶಾಂತ ವಾತಾವರಣವಿದ್ದರೆ ಮತ್ತೊಂದು ಕಡೆ ಭ್ರಷ್ಟಾಚಾರ ಉತ್ತುಂಗಕ್ಕೇರಿದೆ.

ರಾಜ್ಯದ ಗುತ್ತಿಗೆದಾರರ ಸಂಘ ಬಿಜೆಪಿ ಸರ್ಕಾರ ಶೇಕಡ 40 ರಷ್ಟು ಕಮಿಷನ್ ಪಡೆಯುತ್ತಿದೆ ಎಂದು ರಾಜ್ಯಪಾಲರು ಮತ್ತು ಪ್ರಧಾನ ಮಂತ್ರಿಗೆ ಪತ್ರ ಬರೆದಿದ್ದಾರೆ.

ಇದೇ ಕಾರಣಕ್ಕೆ ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಎಂಬ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡರು.

ಮತ್ತೊಂದು ಕಡೆ ಪಿಎಸ್ಐ ನೇಮಕಾತಿ ಹಗರಣ ನಡೆದು ರಾಜ್ಯದ ಇತಿಹಾಸದಲ್ಲೇ ಎಡಿಜಿಪಿ ಮಟ್ಟದ ಹಿರಿಯ ಐಪಿಎಸ್ ಅಧಿಕಾರಿ ಬಂಧನವಾಗಿದೆ. ಲಂಚ ಸ್ವೀಕಾರ ಆರೋಪದ ಮೇಲೆ ಐಎಎಸ್ ಅಧಿಕಾರಿ ಬಂಧನವಾಗಿದೆ.

ಮತ್ತೊಂದು ಕಡೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಸಂಬಂಧಿಸಿದಂತೆ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ಇದೇ ಮೊದಲ ಬಾರಿಗೆ ನೌಕರರ ವರ್ಗಾವಣೆ ಜವಾಬ್ದಾರಿಯನ್ನು ಸಂಪೂರ್ಣವಾಗಿ ಸಚಿವರಿಗೆ ವಹಿಸಿದ್ದರಿಂದ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ ಎಂದು ಕಿಡಿಕಾರಿದ್ದಾರೆ.

    ಇಷ್ಟೊಂದು ಅವಾಂತರಗಳು ನಡೆಯುತ್ತಿದ್ದರು ಕಣ್ಣು ಮುಚ್ಚಿ ಕುಳಿತಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಹಾಗೂ ಮೌನ ವಹಿಸಿರುವ ಬಿಜೆಪಿ ಹೈಕಮಾಂಡ್ ವರ್ತನೆ ಖಂಡನೀಯ.  ಇಂಥ ಜನ ವಿರೋಧಿ ಸರ್ಕಾರವನ್ನು ತಕ್ಷಣ ವಜಾ ಮಾಡಿ, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿ ಮಾಡಬೇಕೆಂದು ನಮ್ಮ ಪಕ್ಷ ಆಗ್ರಹಿಸುತ್ತದೆ ಎಂದಿದ್ದಾರೆ.


Post a Comment

0 Comments

Ad Code

Responsive Advertisement