Ticker

6/recent/ticker-posts

Ad Code

Responsive Advertisement

ಶ್ರೀ ಜಯತೀರ್ಥರ ಮೂಲ ವೃಂದಾವನ ಕುರಿತು ಅಪಪ್ರಚಾರ ಖಂಡಿಸಿ, ಜಯತೀರ್ಥ ಭಕ್ತ ವೃಂದ ಪ್ರತಿಭಟನೆ-ಮನವಿ ಪತ್ರ ಸಲ್ಲಿಕೆ

ಬಳ್ಳಾರಿ ಜುಲೈ 05. ಕಲಬುರ್ಗಿ ಜಿಲ್ಲೆಯ ಮಳಖೇಡ ಶ್ರೀ ಜಯತೀರ್ಥ ಗುರುಗಳ ಮೂಲ ವೃಂದಾವನದ ಕುರಿತು ರಾಯರ ಮಠದ ಭಕ್ತರು ಮಾಡುತ್ತಿರುವ ಅಪಪ್ರಚಾರ ಕ್ರಮ ಖಂಡಿಸಿ ಇಲ್ಲಿನ ಶ್ರೀ ಜಯತೀರ್ಥ ಗುರುಗಳ ಭಕ್ತ ವೃಂದದವರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡಸಿದರು. ನಗರದ ಸತ್ಯನಾರಾಯಣ ಪೇಟೆಯ ಶ್ರೀಮದುತ್ತರಾಧಿಮಠದ ಬಳಿ ಜಮಾಯಿಸಿದ ಜಯತೀರ್ಥ ಭಕ್ತ ವೃಂದದವರು, ಸಂಗಮ್ ವೃತ್ತ, ರಾಯಲ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿದರು. ಶ್ರೀಜಯತೀರ್ಥರ ನಾಮಸ್ಮರಣೆ ಹಾಗೂ ಅವರ ಹಾಡುಗಳನ್ನು ಪಠಿಸುವ ಮೂಲಕ ಮೌನ ಹಾಗೂ ಶಾಂತಿಯುತ ಪ್ರತಿಭಟನೆ ನಡೆಸಿದರು. ಮಳಖೇಡದ ಶ್ರೀ ಜಯತೀರ್ಥರ ವೃಂದಾವನವೇ ಮೂಲ ವೃಂದಾವನವಾಗಿದ್ದು, ಈ ಕುರಿತು ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಇಲ್ಲಿನ ಭಕ್ತರು, ಜಿಲ್ಲಾಧಿಕಾರಿಗಳವರ ಮೂಲಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಪತ್ರವನ್ನು ರವಾನಿಸಿದರು.


ನಂತರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಸಮಾವೇಶದಲ್ಲಿ ಶ್ರೀಮದುತ್ತರಾಧಿಮಠದ ಪಂ.ಪ್ರವೀಣ್ ಆಚಾರ್ ಹಾಗೂ ಪಂ.ನವೀನ್ ಆಚಾರ್ ಅವರು ಮಾತನಾಡಿ, ಮಳಖೇಡ ಶ್ರೀ ಜಯತೀರ್ಥರ ವೃಂದಾವನವೇ ಮೂಲ ವೃಂದಾವನವಾಗಿದ್ದು, ಅದನ್ನು ಶ್ರೀರಾಯರ ಮಠದ ಭಕ್ತರು ಗಂಗಾವತಿಯ ಆನೆಗುಂದಿಯ ನವ ವೃಂದಾವನದಲ್ಲಿ ಶ್ರೀ ಜಯತೀರ್ಥರ ಮೂಲ ವೃಂದಾವನವಿದೆ ಎಂದು ಹೇಳಿಕೆ ನೀಡುವ ಮೂಲಕ ಭಕ್ತರಲ್ಲಿ ಅನಗತ್ಯ ಗೊಂದಲವನ್ನು ಉಂಟು ಮಾಡುತ್ತಿದ್ದಾರೆ, ನವ ವೃಂದಾವನದಲ್ಲಿನ ಶ್ರೀ ರಘುವರ್ಯ ತೀರ್ಥರ ವೃಂದಾವನಕ್ಕೆ ಶ್ರೀ ಜಯತೀರ್ಥರ ಮೂಲ ವೃಂದಾವನ ಎಂದು ಹೇಳಿಕೆ ನೀಡುವುದು ಸರಿಯಲ್ಲ, ಇದು ಭಕ್ತ ವೃಂದಕ್ಕೆ ಹಾಗೂ ಇಡೀ ಸಮುದಾಯಕ್ಕೆ ತಪ್ಪು ಸಂದೇಶ ರವಾನೆಯಾಗಲಿದೆ. ಸೂರ್ಯ, ಚಂದ್ರ ಇರುವುದು ಎಷ್ಟು ಸತ್ಯನೋ ಅಷ್ಟೇ ಮಳಖೇಡದಲ್ಲಿರುವ ಶ್ರೀ ಜಯತೀರ್ಥರ ಮೂಲ ವೃಂದಾವನ ಇರುವುದು ಅಷ್ಟೇ ಸತ್ಯವಾಗಿದೆ. ಉತ್ತರಾಧಿಮಠದ ರಘುವರ್ಯ ತೀರ್ಥರ ವೃಂದಾವನವನ್ನೇ ಶ್ರೀ ಜಯತೀರ್ಥರ ವೃಂದಾವನ ಎಂದು ಅಪಪ್ರಚಾರ ಮಾಡುವ ಮೂಲಕ ಆ ಸ್ಥಳದಲ್ಲೇ ಆರಾಧನೆ, ಪೂಜಾ ಕಾರ್ಯಕ್ರಮಗಳನ್ನು ಮಾಡುವುದನ್ನು ತಡೆಗಟ್ಟುವ ಮೂಲಕ ಸಮಾಜದಲ್ಲಿ ಸಾಮರಸ್ಯವನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು. ಈ ವರ್ಷದ ಆಷಾಡ ಮಾಸದಲ್ಲಿ 17, 18, 19 ರಂದು ಮೂರು ದಿನಗಳ ಕಾಲ ನವ ವೃಂದಾವನದಲ್ಲಿ ಶ್ರೀ ಜಯತೀರ್ಥರ ಆರಾಧನೆಯನ್ನು ವೈಭವವಾಗಿ ಆಚರಿಸಲಾಗುವುದು ಎಂದು ರಾಯರ ಮಠದವರು ಭಕ್ತರಿಗೆ ಕರೆ ನೀಡಿರುವುದು ಸರಿಯಲ್ಲ, ಇದು ಜಯತೀರ್ಥರ ಭಕ್ತ ವೃಂದಕ್ಕೆ ತೀವ್ರ ನೋವನ್ನುಂಟು ಮಾಡಿದೆ.  ಕಳೆದ 600 ವರ್ಷಗಳ ಇತಿಹಾಸ ಇರುವ ಶ್ರೀ ಜಯತೀರ್ಥರ ಮೂಲ ವೃಂದಾವನ ಮಳಖೇಡದಲ್ಲೇ ಇಂಬುದು ಸಾಕಷ್ಟು ಇತಿಹಾಸವಿದೆ. ಹೀಗಿರುವಾಗ ಆನೆಗುಂದಿಯಲ್ಲೇ ಶ್ರೀ ಜಯತೀರ್ಥರ ಮೂಲ ವೃಂದಾವನವಿದೆ, ಅಲ್ಲಿಯೇ ಪ್ರಸಕ್ತ ವರ್ಷ ಆರಾಧನೆಯನ್ನು ವಿಜೃಂಭಣೆಯಿಂದ ಆಚರಿಸೋಣ ಎಂದು ಭಕ್ತರಿಗೆ ಕರೆ ನೀಡವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಜು.17, 18, 19 ರಂದು ಮೂರು ದಿನಗಳ ಕಾಲ ನವ ವೃಂದಾನದಲ್ಲಿ ಹಮ್ಮಿಕೊಂಡಿರುವ ಆರಾಧನೆಯನ್ನು ತಡೆಗಟ್ಟಬೇಕು, ಇದರ ಜೊತೆಗೆ ಎದುರಾದ ಘರ್ಷಣೆಗೆ ತೆರೆ ಎಳೆಯಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಶ್ರೀ ಜಯತೀರ್ಥ ಭಕ್ತರಾದ ಡಾ.ಶ್ರೀನಾಥ್, ಜಯತೀರ್ಥ ಆಚಾರ್, ಕರಣಂ ಶ್ರೀನಿವಾಸ್ ಆಚಾರ್, ಜಯಸಿಂಹ ಆಚಾರ್, ಸುಬ್ಬರಾವ್, ಎಸ್.ಕೆ.ಶ್ರೀಧರ್, ಎಸ್.ಕೆ.ಬದರಿ, ಬದರಿನಾಥ್, ಸುದರ್ಶನ್, ಗೊಪಿಕೃಷ್ಣ, ಶ್ರೀನಾಥ್ ಕಾಫಿಪುಡಿ, ಡಿ.ಗಿರಿ, ಬಿ.ವಿ.ಗಿರಿಶ್, ಅನಂತ ಪದ್ಮನಾಭ, ಅನಂತ ಕೃಷ್ಣ, ಅಶೋಕ್ ಕುಲಕರ್ಣಿ, ಪರಿಮಳಾ ಬಾಯಿ, ಚಂದ್ರಿಕಾ, ಸೌಭಾಗ್ಯ ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದ್ದರು.


 

Post a Comment

0 Comments

Ad Code

Responsive Advertisement