Ticker

6/recent/ticker-posts

Ad Code

Responsive Advertisement

*ಶ್ರೀಮನ್ನ್ಯಾಯಸುಧೆಗೆ* *ಸುಧೆಯಾದವರು* *ಶ್ರೀಜಯತೀರ್ಥರು*

(ಜುಲೈ 18, ಗುರುಗಳ ಆರಾಧನೆಯ ಪ್ರಯುಕ್ತ ಈ ಲೇಖನ)

ಚಿತ್ರೈ: ಪದೈಶ್ಚ ಗಂಭೀರೈ- ರ್ವಾಕ್ಯೈರ್ಮಾನೈರಖಂಡಿತೈ: | 

 ಗುರುಭಾವಂ ವ್ಯಂಜಯಂತೀ 

ಭಾತಿ ಶ್ರೀಜಯತೀರ್ಥವಾಕ್ ||

 ನಾದಬ್ರಹ್ಮನಾದ, ತುಳಸಿಪ್ರಿಯನಾದ, ಪಾಂಡುರಂಗನಿರುವ ಪಂಢರಾಪುರದ ಬಳಿಯ ಮಂಗಳವೇಡೆ ಗ್ರಾಮದಲ್ಲಿ ಹರಿಯ ಹೃದಯ ಪದ್ಮದಲ್ಲಿ ಹೊಳೆಯುವ, ಹರಿಸೇವೆಗಾಗಿಯೇ ಮುಡಿಪಾದ,ಶ್ರೀಮದಾಚಾರ್ಯರ ಸಿದ್ಧಾಂತದ ಮುತ್ತು ಮಾಣಿಕ್ಯವಾಗಿ , ಮುಂದೆ ಮನುಕುಲಕ್ಕೆ ಸುಧೆಯ ಪಾಲ್ಗಡಲನ್ನು ಹರಿಸಿದ, ಮಂಗಳಮಯವಾದ ಮಂಗಳಾತ್ಮಕರು, ಮಧ್ವರ ಮುದ್ದಿನರಗಿಣಿ ಶ್ರೀ ಜಯತೀರ್ಥರು, ದೋಂಡೋಪಂತರಾಗಿ  ದೇಶಪಾಂಡೆ ಮನೆತನದಲ್ಲಿ ಜನಿಸಿದರು. 

ವಿದ್ಯಾಗುರುಗಳು, ಆಶ್ರಮಗುರುಗಳು, ಶ್ರೀ ಅಕ್ಷೋಭ್ಯತೀರ್ಥರು.

ಸನ್ಯಾಸಾಶ್ರಮ ಕಾಲ 1364 - 1387.

ಮಧ್ವರಾಯರಲ್ಲಿ ವೃಷಭರೂಪದಿ ನೇರ ಶಿಷ್ಯರಾಗಿದ್ದ ಶ್ರೀಜಯತೀರ್ಥರು, ಆಚಾರ್ಯರ ಗ್ರಂಥಗಳನ್ನು ಹೃದಯದಲ್ಲಿ ಹೊತ್ತವರು. ಇಡೀ ಭೂಮಂಡಲಕ್ಕೆ ಹರಿ ಸರ್ವೋತ್ತಮ ವಾಯು ಜೀವೋತ್ತಮ ತತ್ವದ ಸಿದ್ಧಾಂತ ಸಾರವನ್ನು ಹರಿಸಿ ಇಡೀ ಮನುಕುಲವನ್ನು ಉದ್ಧರಿಸಿದವರು. ಶ್ರೀಮನ್ನ್ಯಾಯಸುಧೆಯ ಸಮುದ್ರದಲ್ಲಿ ಸದಾ ಸನ್ನಿಹಿತರಾಗಿ ಕರುಣದಿಂದ ಕುಲಕೋಟಿಯನ್ನು ಉದ್ಧರಿಸುತ್ತಿರುವ ಮಹಾಮಹಿಮರು.

 ಕುಭಾಷ್ಯಗಳ ಕುಟ್ಟಿದವರು, ದುರ್ವಾದಿ ಖಳರೆದೆಯ ಅಟ್ಟಿದವರು. 

ಅಷ್ಟಮದಗಳ ಮೆಟ್ಟಿದವರು, 

ಕಾಗಿಣಿಯ ತೀರದಿ, ಸರ್ಪಚಿನ್ಹಿತವಾದ ವೃಂದಾವನದಲಿ ಶೋಭಿಸುತಿರುವ ಗುರು ಮಧ್ವರಾಯರ ಮುದ್ದಿನ ಮುಕುಟಮಣಿ , ಶ್ರೀಜಯತೀರ್ಥರು.  ಗುರುಗಳಾದ ಶ್ರೀ ಅಕ್ಷೋಭ್ಯತೀರ್ಥರು,ಶ್ರೀರಘುನಾಥತೀರ್ಥರ ಪಕ್ಕದಲ್ಲಿ ಶ್ರೀಟೀಕಾರಾಯರ ವೃಂದಾವನವಿದೆ.

 ಶಸ್ತ್ರ ಹಿಡಿದವರು ಶಾಸ್ತ್ರ ಪ್ರಪಂಚವನ್ನೇ ಸೃಷ್ಟಿಸಿದರು.

ಭಗವಂತನ ಸಂಕಲ್ಪ ಹಾಗೇ ಅಲ್ಲವೇ, ದೇವತೆಗಳು ಭೂಮಿಗೆ ಬಂದು ಮನು ಕುಲವನ್ನು ಉದ್ಧರಿಸಲೆಂದೇ ಮನುಷ್ಯರೂಪದಲ್ಲಿ ಬಂದಿರುತ್ತಾರೆ.

ಶ್ರೀಜಯತೀರ್ಥರು ಪೂರ್ವಾಶ್ರಮದಲ್ಲಿ ದೇಶಪಾಂಡೇ ಮನೆತನದಲ್ಲಿ ಜನಿಸಿದ ಇವರು ಕುದುರೆ ಸವಾರಿ,ಕತ್ತಿವರಸೆ, ಯುದ್ಧಕಲೆ, ಶಸ್ತ್ರವಿದ್ಯಾಪ್ರವೀಣರಾಗಿದ್ದರು. 

ಆದರೆ ಅವರ ಸ್ವರೂಪವೇ ಬೇರೆ, ಅವರು ಭೂಮಿಗೆ ಬಂದಿರುವ ಕೆಲಸವೇ ಬೇರೆ, ನಮ್ಮ ಜನ್ಮದ ಭಾಗ್ಯದ ಫಲವೆಂಬಂತೆ ಇಂತಹ ಸಂತಮಹಂತರು ಈ ಪವಿತ್ರ ನೆಲದಲ್ಲಿ ನಡೆದಾಡಿ, ಆ ನೆಲವನ್ನು ನೋಡುವ, ಅವರ ಶಾಸ್ತ್ರಗಳನ್ನು ಕಿಂಚಿತ್ತಾದರೂ ತಿಳಿಯುವ ಭಾಗ್ಯ ನಮ್ಮದು. 

"ಸುಧಾ ವಾ ಪಠಾನೀಯಾ, ವಸುಧಾ ವಾ ಪಾಲನೀಯಾ" ಸುಧಾ ಓದಬೇಕು. ಪ್ರಪಂಚವನ್ನಾಳಬೇಕು ಎಂದು. ವೇದಾಂತ ಪ್ರಪಂಚದಲ್ಲಿ ಇವರ ಶ್ರೀಮನ್ನ್ಯಾಯಸುಧಾ ಗ್ರಂಥಕ್ಕೆ ಅತ್ಯಂತ ಮಹತ್ವದ ಮನ್ನಣೆಯಿದೆ.

ವಿದ್ಯಾಪೀಠ ದಂತಹ ಗುರುಕುಲದಲ್ಲಿ ಸುಮಾರು ವರ್ಷಗಳ ಕಾಲ ಶ್ರೀಮನ್ನ್ಯಾಯಸುಧೆ ಓದಿ, ಸುಧಾಮಂಗಳ ಮುಗಿಸಿ,ಸುಧಾ ಪಂಡಿತರೆನಿಸಿ, ಒಂದೊಂದು ವ್ಯಕ್ತಿಯೂ ಬಹು ದೊಡ್ಡ ಶಾಸ್ತ್ರಪ್ರಪಂಚದ ಶಕ್ತಿಯಾಗಿ, ಸಮಾಜಕ್ಕೆ ಅತ್ಯದ್ಭುತ ಕೊಡುಗೆಯಾಗಿ ನಿಲ್ಲುವ ಸೌಭಾಗ್ಯ ಕೊಟ್ಟವರು ಶ್ರೀ ಜಯತೀರ್ಥರು.

"ಕಿಂ ಪಶು ಪೂರ್ವದೇಹೇ"

 ಒಮ್ಮೆ ಮಧ್ಯಾಹ್ನ ಉರಿಬಿಸಿಲಿನ ಝಳ, ತೀರಾ ಬಾಯಾರಿಕೆ ಆದಂತಾಗಿ ಕುದುರೆಯ ಮೇಲಿದ್ದವರು ಹಾಗೆಯೇ ನದಿಯ ಕಡೆ ಸಾಗಿದರು.  ವಿಚಿತ್ರವೆಂಬಂತೆ ಕುದುರೆ ಮೇಲೆ ಕುಳಿತೇ ಬಗ್ಗಿ ನದಿಗೇ ಬಾಯಿಹಚ್ಚಿ ನದಿ  ನೀರು ಕುಡಿಯಲು ಶುರುಮಾಡಿದರು.

ಅಲ್ಲಿಯೇ ಕುಳಿತಿದ್ದ ವೃದ್ಧ ಯತಿಶ್ರೇಷ್ಠರೊಬ್ಬರು ಇದನ್ನೆಲ್ಲ ನೋಡುತ್ತಿದ್ದರು.ಅವರ ಸ್ವರೂಪ ಇವರಿಗೆ ತಿಳಿದಿತ್ತು. ಈ ಸನ್ನಿವೇಶದಿಂದ ಮುಂದಿನ  ಮನುಕುಲದ ಭಾಗ್ಯವನ್ನು ನೆನೆದು ಸಂತೋಷಪಟ್ಟರು, ಅಲ್ಲಿ ಕುಳಿತಿದ್ದವರು ಬೇರೆ ಯಾರೂ ಅಲ್ಲ. ಮುಂದೆ ಇವರಿಗೆ ಆಶ್ರಮ ನೀಡಿದ  ಯತಿ ಶ್ರೇಷ್ಠರಾದ ಶ್ರೀಅಕ್ಷೋಭ್ಯತೀರ್ಥರು . 

 ನೀರು ಕುಡಿಯುತ್ತಿರುವ ರೀತಿಯನ್ನು ನೋಡಿ,ಆ ತರುಣರನ್ನು ಕುರಿತು ಅವರಿಗೆ ಕೇಳಿಸುವಂತೆ," ಕಿಂ ಪಶುಃ ಪೂರ್ವದೇಹೇ" ಎಂದರು. " ಹಿಂದಿನ ಜನ್ಮದಲ್ಲಿ ನೀನು ಪಶುವೇನಾದರೂ ಆಗಿದ್ದೆಯಾ ಎಂದು ಕೇಳಿದರಂತೆ. 

ಈ ಪ್ರಶ್ನೆಯಿಂದ ಜಾಗೃತವಾದ ಆ ತರುಣನ ಮನಸ್ಸು,   ತಮ್ಮ ಪೂರ್ವ ಜನ್ಮದಲ್ಲಿ ಎತ್ತಾಗಿ ಅವತರಿಸಿದ್ದರು.ಒಂದು ಅರ್ಥದಲ್ಲಿ ಶ್ರೀಮದಾಚಾರ್ಯರನ್ನು ನೇರವಾಗಿ ನೋಡಿದವರು. ಆಚಾರ್ಯ ಮಧ್ವರ ಗ್ರಂಥಗಳನ್ನು ಹೊತ್ತವರು, ಆಚಾರ್ಯರ ಪಾಠಗಳನ್ನು ಆಲಿಸಿದ್ದ ಈ ಮಹಾನುಭಾವರ ಆಚಾರ್ಯರ ಅತ್ಯಂತ ನಿಕಟ ನೇರ ಶಿಷ್ಯರು. ಇದೆಲ್ಲಾ ನೆನಪಿಗೆ ಬಂದಿತು.

ತಕ್ಷಣವೇ ಶ್ರೀ ಅಕ್ಷೋಭ್ಯತೀರ್ಥರ ಗುರುಗಳ ಬಳಿಗೆ ಧಾವಿಸಿ ಬಂದರು. ಭಕ್ತಿಪೂರ್ವಕವಾಗಿ ನಮಸ್ಕರಿಸಿದರು.  ಭಗವತ್ಸಂಕಲ್ಪದಂತೆಯೇ ಎಲ್ಲವೂ ನಡೆಯುವುದು ಎಂಬುದಕ್ಕೆ ಈ ಸನ್ನಿವೇಶವೂ ಸಾಕ್ಷಿಯಾಗಿತ್ತು. 

ಆಚಾರ್ಯರ ಕಾಲದಲ್ಲಿ ಒಮ್ಮೆ ಶ್ರೀಮದಾಚಾರ್ಯರನ್ನು ಶಿಷ್ಯರು ಪ್ರಶ್ನಿಸಿದರಂತೆ. ಮುಂದೆ, ನಿಮ್ಮ ಗ್ರಂಥಗಳನ್ನೆಲ್ಲ ವಿಶ್ಲೇಷಿಸಿ ಬರೆಯುವವರು ಯಾರು?” ಶ್ರೀ ಮದಾಚಾರ್ಯರು ಕೂಡಲೇ ತಮ್ಮ ಮುಂದೆ ತನ್ಮಯದಿಂದ ಕುಳಿತಿದ್ದ ಎತ್ತನ್ನು ತೋರಿಸಿ ಈ ಎತ್ತು ಮುಂದೆ ಗ್ರಂಥಗಳನ್ಬು ವ್ಯಾಖ್ಯಾನಿಸುತ್ತದೆ. ಅಷ್ಟೇ ಜಗತ್ಪ್ರಸಿದ್ಧಿಯೂ ಆಗುತ್ತದೆ. ಎಂದರಂತೆ.

ಹರಿಇಚ್ಛೆ ಎಂಬಂತೆ ಇಲ್ಲಿ ಶ್ರೀ ಅಕ್ಷೋಭ್ಯತೀರ್ಥರು  ತಮ್ಮ ಶಿಷ್ಯನ ಆಯ್ಕೆಗಾಗಿ ಹವಣಿಸುತ್ತಿದ್ದರು.  ವೈರಾಗ್ಯ ಭಾವ ತಾಳಿದ ಆ ತರುಣ ಸಂಪೂರ್ಣ ಗುರುಗಳಲ್ಲಿ ಶರಣಾದರು, ಸನ್ಯಾಸ ದೀಕ್ಷೆ ಬೇಡಿದಾಗ, ನಿಮಗೆ ಸನ್ಯಾಸದೀಕ್ಷೆ ಮಾತ್ರವಲ್ಲ ಪೀಠವನ್ನೇ ಕೊಡುತ್ತೇವೆ ಎನ್ನುತ್ತಾರೆ, ಈ ಮಾತು ಕೇಳಿದ ದೋಂಢೋಪಂತರು, ನನಗೆ ಪೀಠ ಬೇಡ, ಪಾಠ ಬೇಕು ಎಂದರಂತೆ. ಹರಿಇಚ್ಛೆಯಂತೆ , 

ಆಶ್ರಮದ ವಿಷ್ಯ ಕೇಳಿದ ಹೆತ್ತವರು ಇವರಿಗೆ ಮದುವೆ ಮಾಡಿದರು.ಗೃಹಸ್ಥಜೀವನಕ್ಕೆ ಕಾಲಿಟ್ಟ ಆ ಕನ್ಯೆಯು ಕೋಣೆಯಲ್ಲಿ ಇವರು ಐದು ಹೆಡೆಗಳ ಬಹುದೊಡ್ಡ ಸರ್ಪರೂಪಕಂಡು, ಮೂರ್ಛಿತಳಾಗಿ, ಮನೆಯವರೆಲ್ಲ ಬಂದು ಇವರ ಶೇಷನ ರೂಪ ನೋಡಿ  ದಿಗ್ಭ್ರಾಂತರಾದರು. ಆಗ ಇವರ ತಂದೆಗೆ ಮಗನ ಜೀವನದ ಉದ್ದೇಶ ಸ್ಪಷ್ಟವಾಯಿತು. ಇವರು ಸಂಸಾರಕ್ಕೆ ಬಂದವರಲ್ಲ. ಒಂದೆರಡು ಮಕ್ಕಳ ಪಾಲಿಸಲು ಅಲ್ಲ. ಭಗವಂತನ ಸಂಕಲ್ಪವೇ  ಬೇರೆ ಇದೆ. ಶ್ರೀಮದಾಚಾರ್ಯರ ಗ್ರಂಥದ ಮೂಲ ಸ್ವರೂಪದ ಅರ್ಥವನ್ನು ತಿಳಿಯಲು ಶ್ರೀಟೀಕಾರಾಯರ ಗ್ರಂಥಗಳ ಆಶ್ರಯ ಬೇಕೇ ಬೇಕು. ಆ ಅರ್ಥದಲ್ಲಿ ಹೇಳಬೇಕೆಂದರೆ ಶಾಸ್ತ್ರಪ್ರಪಂಚಕ್ಕೆ ತಮ್ಮ ಗ್ರಂಥಗಳನ್ನೇ ತಾಯಿಯ ಸ್ಥಾನದಲ್ಲಿ ಕೊಟ್ಟು ಆಶ್ರಯದಾತರಾದವರು. 

ಗುರುಗಳ ಅಪೇಕ್ಷೆಯಂತೆ ಆಶ್ರಮ ಸ್ವೀಕರಿಸಿದರು.  ಶ್ರೀಜಯತೀರ್ಥರಾದರು. 

ಜಯ ಎಂದರೆ 18. ಹದಿನೆಂಟು ಟೀಕಾಗ್ರಂಥ ಬರೆದ ಮಹನೀಯರು. ಶಸ್ತ್ರಪಾಣಿಯಾದವರು,ಶಾಸ್ತ್ರವಾಣಿಯೇ ಆದರು. 

 ದ್ವೈತವೇದಾಂತ ಅಧ್ಯಯನಕ್ಕೆ ಆರಂಭಿಸಿದರು.   ಆಚಾರ್ಯರ ಗ್ರಂಥಗಳನ್ನು ಗುರುಗಳು ಪಾಠ ಆರಂಭಿಸಿದರು.  ಜಯತೀರ್ಥರು ತಮ್ಮ ಗ್ರಂಥದಲ್ಲೇ ಹೇಳುವಂತೆ ಅಕ್ಷೋಭ್ಯತೀರ್ಥರು ಗಿಳಿಗೆ ಪಾಠ ಹೇಳುವಂತೆ ಹೇಳುತ್ತಿದರಂತೆ.   

ಹನ್ನೆರಡು ವರ್ಷ ಕಠಿಣ ತಪಸ್ಸನ್ನಾಚರಿಸಿದರು. ಪಂಚಗವ್ಯದಲ್ಲಿ ಒಣಗಿದೆಲೆಗಳನ್ನು ಮಾತ್ರ ಸ್ವೀಕಾರ ಮಾಡಿದರು.ಭಗವಂತನ, ಶ್ರೀದುರ್ಗಾದೇವಿಯ ಅನುಗ್ರಹಕ್ಕೆ ಪಾತ್ರರಾದರು. ಗ್ರಂಥರಚನೆಗೆ ಯರಗೋಳದ ಗುಹೆಯಲ್ಲಿ ಇರಲಾರಂಭಿಸಿದರು. 

ಗ್ರಂಥರಚನೆ ಸಮಯದಲ್ಲಿ ವಿದ್ವಾಂಸರಾಗಿದ್ದ ವಿದ್ಯಾರಣ್ಯರು ಆಗಮಿಸಿ ಇವರ ಗ್ರಂಥ ನೋಡಿ ಬಾಲವಾಕ್ಯದಂತಿದೆ ಎಂದರಂತೆ, ಆಗ ಶ್ರೀಜಯತೀರ್ಥರು ಆ ಗ್ರಂಥವನ್ನು ವಿಶ್ಲೇಷಿಸಿ ಹೇಳಿದಾಗ , ಇವರ ವಾದಕೌಶಲಕ್ಕೆ ಬೆರಗಾಗಿ, ಶ್ರೀವಿದ್ಯಾರಣ್ಯರು ಅತೀವ ಸಂತೋಷಭರಿತರಾಗಿ, ಶ್ರೀಟೀಕಾರಾಯರ ಗ್ರಂಥವನ್ನು ಆನೆಯ ಮೇಲಿಟ್ಟು ಮೆರವಣಿಗೆ ಮಾಡಿದರೆಂದು ಇತಿಹಾಸದಿಂದ ತಿಳಿದು ಬರುತ್ತದೆ. 

ಇಂದ್ರನಾಂಶ,ಶೇಷನ ಅಂಶರಾದ ಶ್ರೀಜಯತೀರ್ಥರ ಸನ್ನಿಧಾನ ಯರಗೋಳ ಗುಹೆಯಲ್ಲಿಯೂ ಸರ್ಪದರೂಪದಲ್ಲಿ ಇದೆ. 

ಶ್ರೀ ಜಯತೀರ್ಥರ ಗ್ರಂಥಗಳನ್ನು "ಟೀಕಾಗ್ರಂಥ"ಗಳೆಂದೂ, ಶ್ರೀ ಜಯತೀರ್ಥರನ್ನು "ಟೀಕಾಚಾರ್ಯ" ರೆಂದೂ ಕರೆಯುತ್ತಾರೆ.

ಶ್ರೀ ಜಯತೀರ್ಥರು ತಮ್ಮ ಬಹಳಷ್ಟು ಟೀಕಾ ಗ್ರಂಥಗಳನ್ನು "ಯರಗೋಳ" ಗುಹೆಯಲ್ಲಿ ರಚಿಸಿದರು.  


ಶ್ರೀಟೀಕಾರಾಯರ ಟೀಕಾ ಗ್ರಂಥರತ್ನಗಳು

ಆಚಾರ್ಯರ "ತಂತ್ರಸಾರ"ಕ್ಕೆ - ಜಯತೀರ್ಥರ ಟೀಕಾ - ಪದ್ಯಮಾಲ, ಆಚಾರ್ಯರ "ಗೀತಾ ತಾತ್ಪರ್ಯ"ಕ್ಕೆ - ಜಯತೀರ್ಥರ ಟೀಕಾ - ನ್ಯಾಯದೀಪಿಕಾ, ಆಚಾರ್ಯರ "ಪ್ರಮಾಣಲಕ್ಷಣ"ಕ್ಕೆ ಶ್ರೀ ಜಯತೀರ್ಥರ ಟೀಕಾ - "ಪ್ರಮಾಣಪದ್ಧತಿ, ಆಚಾರ್ಯರ"ಅನುವ್ಯಾಖ್ಯಾನ" ಕ್ಕೆ ಟೀಕಾ - "ಶ್ರೀಮನ್ಯಾಯಸುಧಾ" ಬ್ರಹ್ಮ ಸೂತ್ರ ಭಾಷ್ಯಕ್ಕೆ ಟೀಕಾ - ತತ್ವಪ್ರಕಾಶಿಕ, ಗೀತಾಭಾಷ್ಯಕ್ಕೆ - ಪ್ರಮೇಯ ದೀಪಿಕಾ ಎಂಬ ಟೀಕಾ ಗ್ರಂಥ, ಇವುಗಳ ಜೊತೆ ಮತ್ತಷ್ಟು ಗ್ರಂಥಗಳು ಇವರಿಂದ ರಚಿತವಾಗಿವೆ. 

ಮುಂದೆ ಶ್ರೀವಿದ್ಯಾಧಿರಾಜತೀರ್ಥರನ್ನು ಉತ್ತರಾಧಿಕಾರಿ ಯನ್ನಾಗಿ ನೇಮಕ ಮಾಡಿದರು. ಅವರನ್ನು ಮತ್ತಷ್ಟು ತಯಾರು ಮಾಡಿ ಸಮಾಜಕ್ಕೆ ಕೊಡುಗೆಯಾಗಿ ಕೊಟ್ಟರು, ದೇಶ ಪರ್ಯಟನೆ ಮಾಡಿ, ಪರವಾದಿಗಳನ್ನು ಸೋಲಿಸಿ, ವಾದಿಸಿಂಹರೆನಿಸಿ, ಮಧ್ವಸಿದ್ಧಾಂತವನ್ನು ಬೇರೂರಿಸಿದರು.

ಜನೋಪಕಾರಿಯಾದ ಇವರು ಯರಗೋಳದಲ್ಲಿದ್ದಾಗ, ಅಲ್ಲಿನ ಊರ ಗೌಡ ಇವರ ಬಳಿ ಆಗಮಿಸಿ, ಗುರುಗಳೇ, ಜನರಿಗಾಗಿ ಕೆರೆ ಕಟ್ಟಿಸಿರುವೆ, ಆದರೆ ಆ ಕೆರೆಯಲ್ಲಿ ನೀರೇ ನಿಲ್ಲುತ್ತಿಲ್ಲ. ಪದೇ ಪದೇ ಒಣಗಿ ಹೋಗುತ್ತಿದೆ. ನನ್ನ ಶ್ರಮ ವ್ಯರ್ಥವಾಯಿತಲ್ಲ. ಜನಕ್ಕೆ ಉಪಯೋಗವಾಗಲಿಲ್ಲವಲ್ಲ ಎಂದು ಚಿಂತೆಯಲ್ಲಿದ್ದೆ, ಆಗ  ನಿಮ್ಮಲ್ಲಿ ಬರುವಂತೆ ಸ್ವಪ್ನ ಸೂಚನೆಯಾಯಿತು. ಎಂದು ಹೇಳಿದಾಗ ದಯಾಳುವಾದ ಶ್ರೀಜಯತೀರ್ಥರು ಮುಷ್ಟಿ ಮೃತ್ತಿಕೆಯನ್ನು ಕೊಟ್ಟು ಕೆರೆಯಲ್ಲಿ ಹಾಕಲು ಹೇಳಿದರಷ್ಟೇ, ಇಂದಿಗೂ ಆ ಕೆರೆಯಲ್ಲಿ ನೀರು ಬತ್ತದೆ ಪುಷ್ಕಳವಾಗಿದೆ. ವೃಂದಾವನ ನಂತರದ ಮಹಿಮಗಳಂತೂ ಅಪಾರ. 

ಇಂತಹ ಶ್ರೀ ಜಯತೀರ್ಥರ ಸೇವಾಫಲದ ವರಪ್ರಸಾದವಾಗಿ,  ಬಾಳಾಚಾರ್ಯರು ಭಾಗೀರಥಿ ಬಾಯಿ ದಂಪತಿಗಳಲ್ಲಿ ಮಗುವೊಂದು ಜನಿಸಿತು. ಭಾಗವತಸಾರೋದ್ಧಾರ ರಚಿಸಿದ ಭಾಗವತಪುಷ್ಪವೇ ಮಾದಿನೂರು ಶ್ರೀವಿಷ್ಣುತೀರ್ಥರು. ಟೀಕಾಕೃತ್ಪಾದರ ಶ್ರೀಜಯತೀರ್ಥರ ಅನುಗ್ರಹದಿ ಜನಿಸಿದ ಕೂಸಿಗೆ, ಜಯತೀರ್ಥಾಚಾರ್ಯ ಎಂದೇ ಹೆಸರಿಟ್ಟಿದ್ದರು.

ಸಾರಿ ಭಜಿಸಿರೋ ಟೀಕಾರಾಯರಂಘ್ರಿಯ

ಮಧ್ವಸಿದ್ಧಾಂತ ಬೆಳಗಿದವರು ಕೋಟಿಸೂರ್ಯಪ್ರಭೆಯ ಶ್ರೀಜಯತೀರ್ಥರು. ಇವರ ಜೀವನವೇ ಅತ್ಯಂತ ವಿಲಕ್ಷಣವಾದದ್ದು. ಇದ್ದ ಅಲ್ಪ ಸಮಯದಲ್ಲಿ ಸುಮಾರು ಇಪ್ಪತ್ತು ವರುಷಗಳ ಕಾಲ ಶಸ್ತ್ರಾಸ್ತ್ರ ವಿದ್ಯೆಯಲ್ಲಿ ಪ್ರವೀಣರು. ನಂತರದಲ್ಲಿ ಮನುಷ್ಯ ಮಾತ್ರರಿಂದ ಸಾಧ್ಯವೇ ಆಗದ ಕಠಿಣಾತಿಕಠಿಣ ತಪಸ್ಸು. ಜನರ ಸಂಕಷ್ಟಕ್ಕೆ ಮರುಗಿ ಪರಿಹಾರ, ಸಾಂತ್ವನ ನೀಡುತ್ತಿದ್ದ  ಕರುಣಾಹೃದಯಿ. ಎದುರಾರೈ ಈ ಮಹನೀಯರಿಗೆ ಸಮನಾರೈ,

ಸಾರಿ ಭಜಿಸಿರೋ ಟೀಕಾರಾಯರಂಘ್ರಿಯ, ಫೋರಪಾತಕಾಂಬುಧಿಯ ಪಾರು ಮಾಳ್ಪರಾ, ಜಯರಾಯ, ಜಯರಾಯ, ಕಾಗಿಣಿನಿಲಯ ಕವಿಜನಗೇಯ, ಜಯರಾಯರ ನೋಡಿರೈ,

 ಜ ಎಂದು ನುಡಿಯಲು ಜಯಶೀಲನಾಗುವ, 

ಯ ಎಂದು ನುಡಿಯಲು ಯಮನಂಜುವ. 

ತೀ ಎಂದು ನುಡಿಯಲು ತಿಮಿರಪಾತಕ ಹಾನಿ 

ರ್ಥ ಎಂದು ನುಡಿಯಲು ತಾಪತ್ರಯ ಪರಿಹಾರ. ಎಂದು ಪರಿಪರಿಯಾಗಿ, ವಿಧವಿಧವಾಗಿ, ಯತಿಶ್ರೇಷ್ಠರಿಂದ, ಹರಿದಾಸರಿಂದ ,ಅನನ್ಯವಾಗಿ  ಸ್ತುತಿಸಲ್ಪಟ್ಟವರು. 

 ಶ್ರೀಮದಾಚಾರ್ಯರ ಗ್ರಂಥಗಳೇ ಬದುಕೆಂದು ಭಾವಿಸಿರುವವರ, ಶ್ರೀ ಸುಧೆಯ ಸವಿಯುಂಡು ಜೀವಿಸುತ್ತಿರುವವರ, ನಿಷ್ಕಲ್ಮಷ ಭಕ್ತಿಯಿಂದ ಸ್ತುತಿಸುವವರ ಹೃದಯ ಮಂದಿರದಲ್ಲಿ  ಶ್ರೀಜಯತೀರ್ಥರ ಸನ್ನಿಧಾನ ಇದೆ ಇದರಲ್ಲಿ ಸಂದೇಹವಿಲ್ಲ. ಶ್ರೀಜಯತೀರ್ಥರ ಆರಾಧನಾ ಪ್ರಯುಕ್ತ ಅಲ್ಪಮತಿಗೆ ತಿಳಿದಷ್ಟು ಬರೆದ ಲೇಖನ ಕುಸುಮ.

ಲೇಖಕರು : ವಿದ್ಯಾಶ್ರೀ ಕುಲಕರ್ಣಿ ಮಾನವಿ. 



ಕನ್ನಡ ಅಧ್ಯಾಪಕಿ, ಪೂರ್ಣಪ್ರಮತಿಶಾಲೆ ಬೆಂಗಳೂರು

Post a Comment

0 Comments

Ad Code

Responsive Advertisement