ಇತ್ತೀಚಿಗೆ ಪತ್ರಿಕೆಗಳಲ್ಲಿ ವರದಿಯಾಗಿರುವಂತೆ, ‘ಮೊದಲೇ ಲೇಬಲ್ ಹಚ್ಚಿದ’ ಮತ್ತು ಪ್ಯಾಕೆಟ್ ಮಾಡಿರುವ ಮೊಸರು, ಲಸ್ಸಿ ಹಾಗೂ ಮಜ್ಜಿಗೆಯ ಮೇಲೆ ಶೇ.5 ಜಿಎಸ್‍ಟಿ ವಿಧಿಸಲು ಮತ್ತು ಡೈರಿ ಯಂತ್ರೋಪಕರಣಗಳಿಗೆ ಹಾಗೂ ಹಾಲು ಕರೆಯುವ ಯಂತ್ರಗಳಿಗೆ ಜಿಎಸ್‍ಟಿಯನ್ನು ಶೇ.12 ರಿಂದ ಶೇ.18 ಕ್ಕೆ ಏರಿಸಲು, ಚಂಡೀಗಢದಲ್ಲಿ ನಡೆದ 47ನೇ ಜಿಎಸ್‍ಟಿ ಕೌನ್ಸಿಲ್ ಸಭೆಯಲ್ಲಿ ತೆಗೆದುಕೊಂಡಿರುವ ಅತ್ಯಂತ ರೈತ ವಿರೋಧಿ ಹಾಗೂ ಜನ ವಿರೋಧಿ ನಿರ್ಧಾರವನ್ನು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ಉಗ್ರವಾಗಿ ಖಂಡಿಸುತ್ತದೆ ಮತ್ತು ಕೂಡಲೇ ವಾಪಸ್ ತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತದೆ.
ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ಮತ್ತು ಜೀವ ವಿರೋಧಿ ಕೃಷಿ ನೀತಿಗಳಿಂದಾಗಿ ರೈತರ ಆತ್ಮಹತ್ಯೆ ಮತ್ತು ರೈತರು ಕೃಷಿಯಿಂದ ವಿಮುಖವಾಗಿ ನಗರದಲ್ಲಿ ವಲಸೆ ಕಾರ್ಮಿಕರ ಸೈನ್ಯವನ್ನು ಸೇರುವುದು ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಹೈನುಗಾರಿಕೆಯು ಸ್ವಲ್ಪಮಟ್ಟಿಗೆ ರೈತರು ಉಸಿರಾಡುವಂತೆ ಮಾಡಿದೆ. ಕೇವಲ ಹೈನುಗಾರಿಕೆಯ ಮೇಲೆ ಲಕ್ಷಾಂತರ ಕುಟುಂಬಗಳು ಆಧಾರವಾಗಿವೆ. ಅದರಲ್ಲಿ ಶೇ.71 ಮಹಿಳೆಯರು. ಭಾರತದಲ್ಲಿರುವ ಸಹಕಾರಿ ವ್ಯವಸ್ಥೆಯಿಂದಾಗಿ, ಹಾಲು ಉತ್ಪಾದನೆಯು ಅಪೌಷ್ಟಿಕತೆಯಿಂದ ನರಳುವ ಮಕ್ಕಳಿಗೆ ಪೌಷ್ಟಿಕಾಂಶ, ಗ್ರಾಮೀಣ ಬಡಜನತಗೆ, ಅದರಲ್ಲೂ ಮಹಿಳೆಯರಿಗೆ ಸ್ವಲ್ಪಮಟ್ಟಿಗೆ ಆದಾಯ, ಜೀವನ ಭದ್ರತೆ, ಉದ್ಯೋಗಗಳನ್ನು ಒದಗಿಸುತ್ತಿದೆ. ಹೈನುಗಾರಿಕೆಯು ಭಾರತದಲ್ಲಿ ವಿಪರೀತವಾಗಿ ಏರುತ್ತಿರುವ ನಿರುದ್ಯೋಗ, ಬೆಲೆ ಏರಿಕೆ, ಬಡತನಗಳ ಬೇಗೆಯಿಂದ ಬಡ ಗ್ರಾಮೀಣ ಜನರನ್ನು ಸ್ವಲ್ಪಮಟ್ಟಿಗೆ ಕಾಪಾಡಿದೆ. ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿ ಹೈನುಗಾರಿಕೆಯೇ ಗ್ರಾಮೀಣ ಜನರ ಜೀವ ಉಳಿಸಿದ್ದು. ಕೇಂದ್ರ ಸರ್ಕಾರದ ಜಿಎಸ್‍ಟಿ ಹೇರಿಕೆಯು ಇದರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಖಂಡಿತ.
ಬಡ, ಸಣ್ಣ ಹಾಗೂ ಮಧ್ಯಮ ರೈತರು ಹೈನುಗಾರಿಕೆಯ ಮೇಲೆ ಕೇಂದ್ರ ಬಿಜೆಪಿ ಸರ್ಕಾರದ ದಾಳಿಗಳು ಬಹಳ ಹಿಂದೆಯೇ ಆರಂಭವಾಗಿವೆ. ಆರ್‍ಸಿಇಪಿ ಒಪ್ಪಂದಕ್ಕೆ ಸಹಿ ಹಾಕಿ ವಿದೇಶಿ ಹೈನು ಉತ್ಪನ್ನಗಳು ಭಾರತದ ದಾಳಿಗೆ ಲಗ್ಗೆಯಿಟ್ಟು ಇಲ್ಲಿನ ರೈತರ ಹೈನುಗಾರಿಕೆಗೆ ತೀವ್ರತರವಾದ ಹೊಡೆತ ನೀಡಲು ಕೇಂದ್ರ ಬಿಜೆಪಿ ಸರ್ಕಾರ ತಯಾರಾಗಿತ್ತು. ಆದರೆ ಅದು ರೈತರ ಬಲಿಷ್ಟ ಪ್ರತಿರೋಧದ ಹಿನ್ನೆಲೆಯಲ್ಲಿ ವಾಪಾಸಾಗಿತ್ತು. ರಾಜ್ಯ ಸರ್ಕಾರವೂ ಹಾಲಿಗೆ ಹೆಚ್ಚಿನ ಸಹಾಯಧನ ನೀಡುತ್ತಿಲ್ಲ, ಬದಲು ಕಡಿತ ಮಾಡುತ್ತಿದೆ. ಇದೀಗ ಮತ್ತೊಂದು ಕೋನದಿಂದ ಹೈನುಗಾರಿಕೆಯ ಮೇಲೆ ಹೊಡೆತ ನೀಡುತ್ತಿದೆ. ಅಮುಲ್, ಕೆಎಂಎಫ್‍ನಂತಹ ಸಹಕಾರಿ ಸಂಘಗಳು ಅಧಿಕವಾಗಿ ಶೇಖರಣೆಯಾಗುವ ಹಾಲು ಉತ್ಪನ್ನಗಳನ್ನು ಬಳಸಿಕೊಳ್ಳಲು, ನೇರ ಹಾಲು ಮಾರಾಟದ ಜೊತೆಗೆ ಮೊಸರು, ಲಸ್ಸಿ, ಮಜ್ಜಿಗೆ, ಬೆಣ್ಣೆ, ತುಪ್ಪ, ಹಾಲಿನಿಂದ ತಯಾರಿಸುವ ಖಾದ್ಯ ಹಾಗೂ ಸಿಹಿ ಪದಾರ್ಥಗಳನ್ನೂ ಕೂಡ ತಯಾರಿಸಿ ಮಾರುತ್ತಿದೆ. ಹಾಗಾಗಿ ಇದು ದೊಡ್ಡ ಸಂಖ್ಯೆಯಲ್ಲಿ ರೈತರು ಹೈನುಗಾರಿಕೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಿದೆ ಮತ್ತು ಉತ್ತಮ ಗುಣಮಟ್ಟದ ಉತ್ಪನ್ನಗಳು ಸಾಮಾನ್ಯ ಜನರಿಗೆ ಸಿಗುವಂತಾಗಿದೆ.
ಆದರೆ ಕೇಂದ್ರ ಬಿಜೆಪಿ ಸರ್ಕಾರವು ಬಡ, ಸಣ್ಣ ಹಾಗೂ ಮಧ್ಯಮ ರೈತರನ್ನು ಬಲಿಕೊಟ್ಟು, ಕಾರ್ಪೊರೆಟ್ ಕಂಪನಿಗಳು ಹೈನುಗಾರಿಕೆಯನ್ನು ಆಕ್ರಮಿಸಿಕೊಳ್ಳಲು ಅನುವು ಮಾಡಿಕೊಡಲು ಮತ್ತು ಬಡ ರೈತರಿಂದಲೂ ತೆರಿಗೆ ವಸೂಲಿ ಮಾಡಿ ಬಂಡವಾಳಿಗರ ಸೇವೆ ಮಾಡಲು ಜಿಎಸ್‍ಟಿ ವಿಧಿಸುತ್ತಿದೆ. ಇದರಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆ ಏರಿಕೆಯಾಗುತ್ತದೆ. ಡೈರಿ ಯಂತ್ರೋಪಕರಣಗಳ ಮತ್ತು ಹಾಲು ಕರೆಯುವ ಯಂತ್ರಗಳಿಗೆ ಜಿಎಸ್‍ಟಿ ಏರಿಸುವುದರಿಂದ ಸಣ್ಣ ಪ್ರಮಾಣದಲ್ಲಿ ಯಂತ್ರೋಪಕರಣಗಳನ್ನು ಬಳಸುವ ರೈತರಿಗೆ ಹೊರೆಯಾಗುತ್ತದೆ ಮತ್ತು ನಷ್ಟವನ್ನು ಅನುಭವಿಸಬೇಕಾಗುತ್ತದೆ. ಇದರಿಂದಾಗಿ ರೈತರು ಹೈನುಗಾರಿಕೆ ಮುಂದುವರೆಸಲು ಸಾಧ್ಯವಾಗದೆ, ಹೈನುಗಾರಿಕೆಯಿಂದಲೂ ವಿಮುಖರಾಗಬೇಕಾಗುತ್ತದೆ. ಇದು ಹೈನುಗಾರಿಕೆಯ ಕಾರ್ಪೊರೇಟೀಕರಣಕ್ಕೆ ಸಹಾಯವಾಗುತ್ತದೆ.
ಆದ್ದರಿಂದ, ಕಾರ್ಪೊರೆಟ್ ಕಂಪೆನಿಗಳು ಹಾಗೂ ವಿದೇಶಿ ಒಪ್ಪಂದಗಳಿಗೆ ಪೂರಕವಾಗಿ ಡೈರಿ ಉತ್ಪನ್ನಗಳ ಮೇಲೆ ತೆರಿಗೆಯನ್ನು ಹಾಕಬೇಕೆಂದಿರುವ ನಿರ್ಧಾರವನ್ನು ಕೂಡಲೇ ವಾಪಸ್ ತೆಗೆದುಕೊಳ್ಳಬೇಕು ಮತ್ತು ಇದರ ವಿರುದ್ಧ ರೈತ ಸಮುದಾಯ ಹೋರಾಟವನ್ನು ನಡೆಸಲು ಸಜ್ಜಾಗಬೇಕು ಎಂದು ಎಐಕೆಕೆಎಂಎಸ್ ಕರೆ ನೀಡುತ್ತದೆ.
0 Comments