Ticker

6/recent/ticker-posts

Ad Code

Responsive Advertisement

ಟೀಕೆ-ಟಿಪ್ಪಣಿಗಳು ರಚನಾತ್ಮಕವಾಗಿ ಇರಲಿ: ಬಸವರಾಜ ಬೊಮ್ಮಾಯಿ

ಬೆಂಗಳೂರು, ಜುಲೈ 01 ( ಕರ್ನಾಟಕ ವಾರ್ತೆ):ಮಾ ಧ್ಯಮಗಳಲ್ಲಿ ಬರುವ ಟೀಕೆ-ಟಿಪ್ಪಣಿಗಳು ರಚನಾತ್ಮಕವಾಗಿರಬೇಕು. ಇಂತಹ ಟೀಕೆ-ಟಿಪ್ಪಣಿಗಳನ್ನು ನಾವು ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಯಶಸ್ವಿ ರಾಜಕಾರಣಿ ಆಗಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿ, ಬೆಂಗಳೂರು ಪ್ರೆಸ್ ಕ್ಲಬ್, ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಶುಕ್ರವಾರ ಪ್ರೆಸ್ ಕ್ಲಬ್‍ನಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ “ಪತ್ರಿಕೋದ್ಯಮದ ಸವಾಲುಗಳು ಅಂದು - ಇಂದು – ಮುಂದು” ವಿಚಾರ ಸಂಕಿರಣವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಆರೋಗ್ಯಕರ ಟೀಕೆ ಟಿಪ್ಪಣಿಗಳು ಸಮಾಜದ ಸ್ವಾಸ್ತ್ಯಕ್ಕೆ ಅಗತ್ಯವಿದೆ. ಅದರಿಂದ ನಮ್ಮ ತಪ್ಪುಗಳನ್ನು ಸುಧಾರಿಸಿಕೊಳ್ಳಲು ಸಾಧ್ಯ. ಬರೀ ಹೊಗಳಿಕೆ ಒಳ್ಳೆಯದಲ್ಲ ಎಂದರು.

ಕನ್ನಡ ಪತ್ರಿಕೆದ್ಯೋಮ ಈ ನಾಡಿನ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದೆ. ಜನಜೀವನ ಮಟ್ಟ ಹೆಚ್ಚಿಸಲು,  ಕರ್ನಾಟಕವನ್ನು ಪ್ರಗತಿಪರ ರಾಜ್ಯವಾಗಿ ಬಿಂಬಿಸಲು, ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಮತ್ತು ಮೌಲ್ಯಾಧಾರಿತ ವಿಚಾರಗಳಿಗೆ ಶಕ್ತಿ ತುಂಬಲು ಪತ್ರಕರ್ತರು ಶ್ರಮಿಸಿದ್ದಾರೆ. ಪತ್ರಿಕೆಗಳಲ್ಲಿ ಬರುವ ಸಂಪಾದಕೀಯಗಳನ್ನು, ವಿಶ್ಲೇಷಣಾತ್ಮಕ ಲೇಖನಗಳನ್ನು ನಾವು ತಪ್ಪದೇ ಓದುತ್ತಿದ್ದೆವು ಎಂದು ಹೇಳಿದರು.

ಸ್ವಾತಂತ್ರ್ಯ ನಂತರದ ಆರಂಭಿಕ ಅವಧಿಯಲ್ಲಿ ಇದ್ದ ಪತ್ರಿಕೆಗಳಲ್ಲಿ ಅಂದಿನ ಲೇಖನಗಳನ್ನು ನೋಡಿದರೆ ಬಹಳ ಉಪಯುಕ್ತ ಮಾಹಿತಿ ಸಿಗುತ್ತದೆ ಎಂದರು.

ಪತ್ರಕರ್ತರ ವೃತ್ತಿ ಬಹಳ ವಿಶಿಷ್ಟವಾದುದು. ತಂತ್ರಜ್ಞಾನ ಪತ್ರಿಕೋದ್ಯಮದಲ್ಲಿ ಹಲವಾರು ಬದಲಾವಣೆ ತಂದಿದೆ. ವರದಿಗಾರಿಕೆ ಸುಲಭವೂವಾಗಿದೆ. ಇದು ಅನುಕೂಲಕರ. ಆದರೆ ಅಪರಾಧ ವರದಿ ಮಾಡುವಾಗ ಗುರಿ ಯಾರು ಎಂಬ ಸ್ಪಷ್ಟ ಕಲ್ಪನೆ ಇರಬೇಕು. ಮಹಿಳೆಯರು, ಮಕ್ಕಳು, ವೃದ್ಧರು ನೋಡುತ್ತಿರುತ್ತಾರೆ. ಅವರ ಮೇಲಾಗುವ ಪರಿಣಾಮಗಳ ಬಗ್ಗೆಯೂ ಗಮನ ಇರಬೇಕು ಎಂದರು.

ಪತ್ರಕರ್ತರು ಮತ್ತು ರಾಜಕಾರಣಿಗಳ ನಡುವೆ ಬಿಡಲಾಗದ ಸಂಬಂಧ ಇದೆ. ನಾವು ನೀಡುವ ಮಾಹಿತಿ, ಆಡುವ ಮಾತನ್ನು ಜನರಿಗೆ ತಲುಪಿಸಲು ಪತ್ರಕರ್ತರು ಬೇಕೇಬೇಕು ಎಂದರು.









ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಪತ್ರಕರ್ತರೊಂದಿಗಿನ ಒಡನಾಡವನ್ನು ಸ್ಮರಿಸಿಕೊಂಡರು. ನನಗೂ ಪತ್ರಿಕೋದ್ಯಮಕ್ಕೂ ಅವಿನಾನುಭವ ಸಂಬಂಧವಿದೆ. ಕಳೆದ ನಾಲ್ಕು ದಶಕಗಳಿಂದ ಜೊತೆ – ಜೊತೆಯಾಗಿ ಕರ್ತವ್ಯ ನಿರ್ವಹಿಸಿದ್ದೇವೆ. ತಂದೆಯ ಜೊತೆ ಮೈಸೂರು ಸಂಸ್ಥಾನದ ಪ್ರಜಾಪ್ರತಿನಿಧಿ ಸಭೆಗೆ ಹೋಗುತ್ತಿದ್ದೆ. ಆಗ ಸಭೆಯನ್ನು ಪತ್ರಿಕಾ ಗ್ಯಾಲರಿಯಲ್ಲಿ ಕುಳಿತು ವೀಕ್ಷಿಸುವ ಕುತೂಹಲ ಇತ್ತು. ಆಗ ಪತ್ರಿಕಾ ಗ್ಯಾಲರಿಯಲ್ಲಿ ಹಿರಿಯ ಪತ್ರಕರ್ತರ ಜಯಶೀಲರಾಯರ ಪರಿಚಯವಾಯಿತು ಎಂದು ಸ್ಮರಿಸಿದರು.

ಕೇಂದ್ರ ವಿದೇಶಾಂಗ ಸಚಿವನಾಗಿದ್ದಾಗ ಪಾಕಿಸ್ತಾನ ಪ್ರವಾಸ ಮಾಡುವ ಸಂದರ್ಭ ಬಂದಿತು.  ಆಗ ಕರ್ನಾಟಕದಿಂದ ಪತ್ರಿಕಾ ನಿಯೋಗವನ್ನು ಕರೆದೊಯ್ಯಲಾಗಿತ್ತು. ಹಾಯ್ ಬೆಂಗಳೂರು ಪತ್ರಿಕೆಯ ರವಿ ಬೆಳಗೆರೆ ಅವರು ಪಾಕಿಸ್ತಾನಕ್ಕೆ ಬರಲು ಇಚ್ಛಿಸಿದರು. ಅಲ್ಲಿ ಪರಿಸ್ಥಿತಿ ಹೇಗಿದೆ ಎಂದು ನೋಡುವ ಧಾವಂತ ಅವರಿಗೆ. ಇಂತಹ ತುಡಿತ ಪತ್ರಕರ್ತರಿಗೆ ಇರಬೇಕು ಎಂದರು.

  ಪತ್ರಿಕೋದ್ಯಮ ಇಂದು ಬಹುವೇಗವಾಗಿ ಬೆಳೆಯುತ್ತಿದೆ ಹಲವಾರು ವೈಜ್ಞಾನಿಕ ಪರಿμÁ್ಕರವನ್ನು ಪಡೆಯುವ ಸನ್ನಿವೇಶದಲ್ಲಿ ಒಮ್ಮೊಮ್ಮೆ ಅದರ ಜೊತೆ – ಜೊತೆ ಹೋಗಲು ತುಂಬಾ ಪ್ರಯಾಸವಾಗುತ್ತದೆ. ಬದಲಾದ ತಂತ್ರಜ್ಞಾನಕ್ಕೆ ಪತ್ರಕರ್ತರು ಹೊಂದಿಕೊಳ್ಳಬೇಕಾಗುತ್ತದೆ ಎಂದರು.
ನಾನು ಮುಖ್ಯಮಂತ್ರಿ ಆಗಿದ್ದಾಗ ಪತ್ರಿಕಾಗೋಷ್ಠಿ ಆಯೋಜಿಸಿದಾಗ ಪತ್ರಕರ್ತರ ಪ್ರಶ್ನೆಗೆ, ಉಪ ಪ್ರಶ್ನೆಗೆ ಜಾಗೃತೆಯಿಂದ ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದೆವು. ಅಂತಹ ಕಠಿಣ ಪ್ರಶ್ನೆಗಳು ಉದ್ಘವ ವಾಗುತ್ತಿದ್ದವು. ಈಗ ಅಂತಹ ಕಠಿಣ ಸಂದರ್ಭ ಇಲ್ಲ ಎಂದರು.


ಸಮಾರಂಭದಲ್ಲಿ ಸಾರಿಗೆ ಸಚಿವರಾದ ಬಿ.ಶ್ರೀರಾಮುಲು, ಮುಖ್ಯಮಂತ್ರಿಗಳ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಎನ್.ಮಂಜುನಾಥ್ ಪ್ರಸಾದ್,     ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ  ಡಾ.ಪಿ.ಎಸ್. ಹರ್ಷ, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಕೆ. ಸದಾಶಿವ ಶೆಣೈ, ಹಿರಿಯ ಪತ್ರಕರ್ತರಾದ ಮಾಯಾ ಶರ್ಮಾ, ಸಂಯುಕ್ತ ಕರ್ನಾಟಕ ಗ್ರೂಪಿನ ಸಮೂಹ ಸಂಪಾದಕರಾದ ಹುಣಸವಾಡಿ ರಾಜನ್, ಪ್ರೆಸ್ ಕ್ಲಬ್ ಅಧ್ಯಕ್ಷರಾದ ಆರ್.ಶ್ರೀಧರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ಪ್ರೆಸ್ ಕ್ಲಬ್‍ನ ಪ್ರಧಾನ ಕಾರ್ಯದರ್ಶಿ ಬಿ.ಪಿ.ಮಲ್ಲಪ್ಪ, ಮತ್ತು ಮಾಧ್ಯಮ ಮಿತ್ರರು ಉಪಸ್ಥಿತರಿದ್ದರು. ಪತ್ರಕರ್ತ ಎ. ಹರಿಪ್ರಸಾದ್ ಅವರು ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments

Ad Code

Responsive Advertisement