Ticker

6/recent/ticker-posts

Ad Code

Responsive Advertisement

ಶೇಷಾದ್ರಿ ರಸ್ತೆಯಲ್ಲಿ ವೈಟ್‌ಟಾಪಿಂಗ್ ಕಾಮಗಾರಿಯನ್ನು ನಿಗಧಿತ ಅವಧಿಯೊಳಗೆ ಮುಕ್ತಾಯ: ಮುಖ್ಯ ಆಯುಕ್ತರಿಂದ ಅಭಿನಂದನೆ.

ನಗರದ ಅತಿ ಪ್ರಮುಖ ರಸ್ತೆಯಾದ ಶೇಷಾದ್ರಿ ರಸ್ತೆ(ಕೆ.ಆರ್ ವೃತ್ತದಿಂದ ಸುಬ್ಬಣ್ಣ ವೃತ್ತ[ಮೌರ್ಯ ವೃತ್ತ] 1.2 ಕಿ.ಮೀ ಉದ್ದ)ಯಲ್ಲಿ ಕೈಗೆತ್ತಿಕೊಂಡಿದ್ದ ವೈಟ್‌ಟಾಪಿಂಗ್ ಕಾಮಗಾರಿಯನ್ನು ನಿಗಧಿತ ಅವಧಿ(60 ಕೆಲಸದ ದಿನ)ಯೊಳಗಾಗಿ ಕಾಮಗಾರಿಯನ್ನು ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

ಶೇಷಾದ್ರಿ ರಸ್ತೆಯ ವೈಟ್‌ಟಾಪಿಂಗ್ ಕಾಮಗಾರಿಯನ್ನು ಕೈಗೊಳ್ಳಲು ಉಲ್ಲೇಖಿತ ಪತ್ರದಂತೆ 60 ದಿನಗಳ ಅವಧಿಯಲ್ಲಿ ಪೂರ್ಣಗೊಳಿಸುವ ಷರತ್ತುಗೊಳಪಟ್ಟು ಸಂಚಾರಿ ಪೊಲೀಸರಿಂದ ಅನುಮತಿಯನ್ನು ಪಡೆಯಲಾಗಿತ್ತು. ಅದರಂತೆ ಸ್ಥಳೀಯ ಸಂಚಾರಿ ಪೊಲೀಸ್ ರವರ ಸಹಕಾರದೊಂದಿಗೆ ಶೇಷಾದ್ರಿ ರಸ್ತೆಯಲ್ಲಿ ಕೆ.ಆರ್ ವೃತ್ತದಿಂದ ಸುಬ್ಬಣ್ಣ ವೃತ್ತ(ಮೌರ್ಯ ವೃತ್ತ) ದವರೆಗಿನ ಸಂಚಾರವನ್ನು ನಿರ್ಬಂಧಗೊಳಿಸಿ, ಸುಬ್ಬಣ್ಣ ವೃತ್ತ(ಮೌರ್ಯ ವೃತ್ತ)ದಿಂದ ಕೆ.ಆರ್ ವೃತ್ತದ ಕಡೆಗಿನ ಸಂಚಾರಕ್ಕೆ ಯಾವುದೇ ತೊಡಕಾಗದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ದಿನಾಂಕ: 04.04.2022ರಂದು ಕಾಮಗಾರಿಯನ್ನು ಪ್ರಾರಂಭಿಸಲಾಗಿತ್ತು. 

ವೈಟ್ ಟಾಪಿಂಗ್ ಕಾಮಗಾರಿಯನ್ನು 60 ಕೆಲಸದ ದಿನಗಳನ್ನು ಪರಿಗಣಿಸಿ ದಿನಾಂಕ 12.06.2022 ರೊಳಗೆ ಪೂರ್ಣಗೊಳಿಸಲು ಉದ್ದೇಶಿಸಿ ಮಹಾರಾಣಿ ಕಾಲೇಜು ಹತ್ತಿರವಿರುವ ಪಾದಚಾರಿ ಮೇಲುಸೇತುವೆಯ ಮೇಲೆ ಸಮಯ ಸೂಚಿಸುವ ಗಡಿಯಾರ (Countdown Clock)ಅನ್ನು ಕೂಡಾ ಅಳವಡಿಸಲಾಗಿತ್ತು.

ಮೂರು ಹಂತಗಳಲ್ಲಿ ಕಾಮಗಾರಿಯನ್ನು ನಿರ್ವಹಿಸಲು ಉದ್ದೇಶಿಸಿ ಮೊದಲಿಗೆ ಕೆ.ಆರ್ ವೃತ್ತದಿಂದ ಸುಬ್ಬಣ್ಣ ವೃತ್ತ(ಮೌರ್ಯ ವೃತ್ತ) ದವರೆಗಿನ ಕಾಮಗಾರಿಯನ್ನು 20 ದಿನಗಳಲ್ಲಿ ಪೂರ್ಣಗೊಳಿಸಿ ಸಂಚಾರಕ್ಕೆ ಅನುವು ಮಾಡಿ ಎರಡನೆಯ ಹಂತದಲ್ಲಿ ಸುಬ್ಬಣ್ಣ ವೃತ್ತದಿಂದ ಕೆ.ಆರ್ ವೃತ್ತದ ಕಡೆಗಿನ ರಸ್ತೆಯ ಅರ್ಧಭಾಗದಲ್ಲಿ ಸಂಚಾರಕ್ಕೆ ಅನುವು ಮಾಡಿ ಉಳಿದರ್ಧ ಭಾಗದಲ್ಲಿ ಕಾಮಗಾರಿಯನ್ನು ನಿರ್ವಹಿಸಿ 20 ದಿನಗಳಲ್ಲಿ ಪೂರ್ಣಗೊಳಿಸಲಾಗಿರುತ್ತದೆ. ಮೂರನೆಯ ಹಂತದಲ್ಲಿ ಸುಬ್ಬಣ್ಣ ವೃತ್ತದಿಂದ ಕೆ.ಆರ್ ವೃತ್ತದ ಕಡೆಗಿನ ರಸ್ತೆಯಲ್ಲಿ ಈಗಾಗಲೇ ಎರಡನೆಯ ಹಂತದಲ್ಲಿ ಪೂರ್ಣಗೊಳಿಸಲಾಗಿದ್ದ ರಸ್ತೆಯ ಭಾಗಕ್ಕೆ ಸಂಚಾರವನ್ನು ಬದಲಾವಣೆ ಮಾಡಿಕೊಂಡು ಉಳಿಕೆ ಭಾಗದಲ್ಲಿ ಕಾಮಗಾರಿಯನ್ನು ಕೈಗೊಂಡು ಪೂರ್ಣಗೊಳಿಸಲಾಗಿರುತ್ತದೆ.


ಕಾಮಗಾರಿಯನ್ನು ನಿರ್ವಹಿಸುವ ವೇಳೆ ಮೇ ಮಾಹೆಯಲ್ಲಿ(ಸುಮಾರು 10ದಿನಗಳು) ನಗರದಲ್ಲಿ ಮಳೆಯಾಗಿದ್ದರಿಂದ ಕಾಮಗಾರಿಯನ್ನು ನಿರ್ವಹಿಸಲು ತೊಡಕಾದರೂ ಸಹ ಯಂತ್ರೋಪಕರಣಗಳು ಮತ್ತು ಮಾನವ ಸಂಪನ್ಮೂಲಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಿಕೊಂಡು ಶೇಷಾದ್ರಿ ರಸ್ತೆಗೆ ವೈಟ್‌ಟಾಪಿಂಗ್ ಅಳವಡಿಸಿ ಕಾಮಗಾರಿಯನ್ನು ಯೋಜನೆ-ಕೇಂದ್ರ ವಿಭಾಗದ ಮುಖ್ಯ ಅಭಿಯಂತರರಾದ ಲೋಕೇಶ್ ಹಾಗೂ ಅವರ ನೇತೃತ್ವದ ತಂಡದ ವತಿಯಿಂದ ನಿಗಧಿತ 60 ಕೆಲಸದ ದಿನಗಳಲ್ಲಿ ಪೂರ್ಣಗೊಳಿಸಿ ಸಂಚಾರಕ್ಕೆ ಅನುವು ಮಾಡಲಾಗಿರುತ್ತದೆ. 

ನಿಗಧಿತ ಸಮಯದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿರುವುದಕ್ಕೆ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಸಂಬಂಧಪಟ್ಟ ಅಧಿಕಾರಿಗಳಿಗೆ ಅಭಿನಂದನೆಗಳನ್ನು ತಿಳಿಸಿ, ಕಾಮಗಾರಿಯ ಅನುಷ್ಠಾನ ವೇಳೆ ಸಹಕರಿಸಿದ ಸಾರ್ವಜನಿಕರಿಗೆ, ಸಂಚಾರಿ ಪೊಲೀಸ್ ಇಲಾಖೆಯವರಿಗೆ ಪಾಲಿಕೆ ವತಿಯಿಂದ ವಂದನೆಗಳನ್ನು ತಿಳಿಸಿರುತ್ತಾರೆ.


ಹೆಚ್ಚಿನ ಸಂಪರ್ಕಕ್ಕಾಗಿ:

ಲೋಕೇಶ್, ಮುಖ್ಯ ಅಭಿಯಂತರರು, ಯೋಜನೆ ಕೇಂದ್ರ, ಬಿಬಿಎಂಪಿ.

ಮೊ.ಸಂ: 9480683176

Post a Comment

0 Comments

Ad Code

Responsive Advertisement