ಬಳ್ಳಾರಿ ಜೂ.27: ನಗರದ ಜಿಲ್ಲಾಧಿಕಾರಿಗಳ ಕಛೇರಿಯ ಆವರಣದಲ್ಲಿ ಬಾಕಿಯಿರುವ ವಿಮ್ಸ್ ಗುತ್ತಿಗೆ ನೌಕರರಿಗೆ ಕೋವಿಡ್ ಭತ್ಯೆ ನೀಡುವಂತೆ ಆಗ್ರಹಿಸಿ ಪ್ರತಿಭಟಿಸಲಾಯಿತು. ಎಐಯುಟಿಯುಸಿಗೆ ಸಂಯೋಜನೆಗೊಂಡಿರುವ ವಿಮ್ಸ್ ಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿಗಳಾದ ಕಾ.ದೇವದಾಸ್ “ಕೋವಿಡ್ ಸಂದರ್ಭದಲ್ಲೂ ತಮ್ಮ ಪ್ರಾಣದ ಹಂಗು ತೊರೆದು ಗುತ್ತಿಗೆ ನೌಕರರು ಕೆಲಸ ನಿರ್ವಹಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ದುಡಿದ, ಒಂದು ಭಾಗದಷ್ಟು ಗುತ್ತಿಗೆ ನೌಕರರಿಗೆ ಕೋವಿಡ್ ಭತ್ಯೆ ನೀಡಿರುವುದು ಸಮಾಧನಕರ ಅಂಶವಾಗಿದ್ದರೂ, ಇನ್ನು ಸಾಕಷ್ಟು ಗುತ್ತಿಗೆ ನೌಕರರಿಗೆ ಕೋವಿಡ್ ಭತ್ಯೆ (Covid Risk allowance) ಇನ್ನೂವರೆಗೆ ನೀಡಿಲ್ಲ.
ಕಳೆದ 5-6 ತಿಂಗಳುಗಳಿಂದ ಒಂದಲ್ಲಾ ಒಂದು ಕಾರಣಗಳನ್ನು ಹೇಳುತ್ತಾ, ವಿಮ್ಸ್ ಆಡಳಿತ ಕೋವಿಡ್ ಭತ್ಯೆ ನೀಡುವುದನ್ನು ಮುಂದೂಡುತ್ತಲೇ ಇದೆ. ‘ರಾಜ್ಯ ಸರ್ಕಾರ ಭತ್ಯೆಯ ಹಣ ಇನ್ನು ಕಳುಹಿಸಿಲ್ಲ, ಕೋವಿಡ್ ಭತ್ಯೆ ಪಡೆಯಬೇಕಾದವರ ಪಟ್ಟಿ ಈಗಾಗಲೆ ಸರ್ಕಾರಕ್ಕೆ ಕಳುಹಿಸಲಾಗಿದೆ’ ಇದೇ ಉತ್ತರ ವಿಮ್ಸ್ ಆಡಳಿತದಿಂದ ದೊರೆಯುತ್ತಿದೆ. ತಮ್ಮ ಪ್ರಾಣ ಪಣಕ್ಕಿಟ್ಟು ದುಡಿದ ಗುತ್ತಿಗೆ ನೌಕರರನ್ನು ಈ ರೀತಿ ನಡೆಸಿಕೊಳ್ಳುತ್ತಿರುವುದು ನಿಜಕ್ಕೂ ಖಂಡನೀಯ. ಕೋವಿಡ್ ಭತ್ಯೆ ನೀಡುವ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು, ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಮಧ್ಯಪ್ರವೇಶ ಮಾಡಬೇಕಾಗಿ ಈ ಮೂಲಕ ಒತ್ತಾಯಿಸುತ್ತೇವೆ. ಒಂದು ವೇಳೆ ಸಮಸ್ಯೆ ಬಗೆಹರಿಸದಿದ್ದರೆ, ಮುಂದಿನ ದಿನಗಳಲ್ಲಿ ಕುಟುಂಬ ಸಮೇತ ವಿಮ್ಸ್ ಆವರಣದಲ್ಲಿ ಪ್ರತಿಭಟನಾ ಧರಣಿ ನಡೆಸಲಾಗುವುದು” ಎಂದು ಎಚ್ಚರಿಸಿದರು. ಜಿಲ್ಲಾಧಿಕಾರಿಗಳಾದ ಪವನ್‍ಕುಮಾರ್ ಮಾಲಪಾಟೀಲ್ ಅವರು “ಕೋವಿಡ್ ಭತ್ಯೆ ನೀಡುವಂತೆ ಸಚಿವರಿಗೆ, ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳಿಗೆ ಪತ್ರ ಬರೆಯುವುದಾಗಿ ಹಾಗೂ ವಿಮ್ಸ್ ನಿರ್ದೇಶಕರೊಂದಿಗೆ ಮಾತನಾಡುವುದಾಗಿ” ತಿಳಿಸಿದರು. ಪ್ರತಿಭಟನೆಯ ನೇತೃತ್ವವನ್ನು ಮುಖಂಡರಾದ ಡಾ.ಪ್ರಮೋದ್, ಶಾಂತಾ, ಸುರೇಶ್ ವಹಿಸಿದ್ದರು. ಗುತ್ತಿಗೆ ನೌಕರರ ಸಂಘದ ಚಿಟ್ಟೆಮ್ಮ, ದುರ್ಗಮ್ಮ, ನಾಗಮ್ಮ, ಅಂಜಲಿ, ಜಯರಾಜ್, ಅಂಜನಿ ಮುಂತಾದವರು ಪಾಲ್ಗೊಂಡಿದ್ದರು.

0 Comments