ಬಳ್ಳಾರಿ,ಜೂ.03: 11ಇ/ಪೋಡಿ/ಭೂ ಪರಿವರ್ತನೆಯ ನಕ್ಷೆಗಳು ಸಕಾಲದಲ್ಲಿ ಸಿಗುತ್ತಲ್ಲವೇ ಎಂಬ ಚಿಂತೆ ಬೇಡ. ಇನ್ಮುಂದೆ ಸ್ವಾವಲಂಭಿ ಎಂಬ ಅಪ್ಲಿಕೇಶನ್ ಬಳಸಿ ಸಾರ್ವಜನಿಕರೇ ಖಾಸಗಿ ಜಮೀನಿನ 11ಇ/ಪೋಡಿ/ಭೂ ಪರಿವರ್ತನೆಯ ನಕ್ಷೆಗಳನ್ನು ತಯಾರಿಸಿಕೊಳ್ಳಬಹುದಾಗಿದೆ. ಇದಕ್ಕೆ ಸರಕಾರವೇ ಅವಕಾಶ ಮಾಡಿಕೊಟ್ಟಿರುವುದು ವಿಶೇಷ. ಸರ್ವೇ ಇಲಾಖೆಯಲ್ಲಿ ಪ್ರತಿ ವರ್ಷ 10 ಲಕ್ಷಕ್ಕೂ ಮೇಲ್ಪಟ್ಟು 11ಇ/ಫೊಡಿ/ಪೂರ್ವ ಭೂಪರಿವರ್ತನ ಅರ್ಜಿಗಳು ಸ್ವೀಕೃತವಾಗುತ್ತಿದ್ದು, ಕಾರ್ಯ ನಿರ್ವಹಿಸುತ್ತಿರುವ ಭೂಮಾಪಕರ ಸಂಖ್ಯೆ ಕಡಿಮೆ ಇರುವ ಕಾರಣ ಸಾರ್ವಜನಿಕರು ನಕ್ಷೆ ಪಡೆಯಲು ತಿಂಗಳು ಹಾಗೂ ವರ್ಷಗಳ ಕಾಲ ಕಾಯಬೇಕಾಗಿರುತ್ತದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಉಂಟಾಗಿರುತ್ತದೆ. ಇದನ್ನು ತಡೆಗಟ್ಟಲು ಕರ್ನಾಟಕ ಸರ್ಕಾರ ಸರ್ವೇ ಇಲಾಖೆಯೊಂದಿಗೆ ಕೂಡಿ “ಸ್ವಾವಲಂಭಿ” ಎಂಬ ಹೊಸ ಅಪ್ಲಿಕೇಶನ್ ಜಾರಿಗೆ ತಂದಿದೆ. ಸದರಿ ಅಪ್ಲಿಕೇಶನ್ ಬಳಸಿ, ಸಾರ್ವಜನಿಕರು ಖಾಸಗಿ ಜಮೀನಿನ 11ಇ/ಫೊಡಿ/ಭೂ ಪರಿವರ್ತನೆ ನಕ್ಷೆಯನ್ನು ನಾಗರಿಕರೇ ತಯಾರಿಸಕೊಳ್ಳಬಹುದಾಗಿರುತ್ತದೆ.
ಸದರಿ ನಕ್ಷೆ ತಯಾರಿಸಲು ಸಾರ್ವಜನಿಕರು ಆನ್ ಲೈನ್‍ನಲ್ಲಿ rdservices.karnataka.gov.in ನಲ್ಲಿ ಅಥವಾ ನಾಡಕಚೇರಿಯ ಎಜೆಎಸ್‍ಕೆ (AJSK) ಸೇವಾಕೇಂದ್ರದಲ್ಲಿ ಅರ್ಜಿದಾರರ ವಿವರಗಳು, ಜಮೀನಿನ ವಿವರಗಳು, ಖರೀದಿದಾರರ ವಿವರಗಳನ್ನು ತುಂಬಿ ಹಾಗೂ ಹಣ ಸಂದಾಯ ಮಾಡಿ ಅರ್ಜಿ ಸಲ್ಲಿಸಬಹುದು ಎಂದು ಅಪರ ಜಿಲ್ಲಾಧಿಕಾರಿಗಳಾದ ಪಿ.ಎಸ್.ಮಂಜುನಾಥ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ವಾವಲಂಭಿ ಅಪ್ಲಿಕೇಶನ್ ಬಳಸಿ ನಕ್ಷೆ ತಯಾರಿಸಲು ಕಾರ್ಯ ಹರಿವು ಇಂತಿದೆ: ಆನ್‍ಲೈನ್‍ನಲ್ಲಿ rdservices.karnataka.gov.in web pageತೆರೆಯಬೇಕು. ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಒಟಿಪಿ ಬಳಸಿ ನಿಮ್ಮದೇ ಆದ ಲಾಗಿನ್ ಸೃಜಿಸಿಬೇಕು. ನೀವು ಸಲ್ಲಿಸ ಬಯಸುವ ಸೇವೆಯನ್ನು ಅಂದರೆ 11ಇ/ಫೊಡಿ/ಭೂ ಪರಿವರ್ತನೆ ಇದರಲ್ಲಿ ಯಾವ ನಕ್ಷೆಯನ್ನು ತಯಾರಿಸಬೇಕೆಂಬುದರ ಸೇವೆಯನ್ನು ಆಯ್ಕೆ ಮಾಡಬೇಕು. ಅರ್ಜಿದಾರರ ಹೆಸರು ಮತ್ತು ವಿಳಾಸವನ್ನು ನಮೂದಿಸಬೇಕು. ಆಧಾರ್ ಬಳಸಿ ನಿಮ್ಮ ಗುರುತನ್ನು ದೃಢೀಕರಿಸಿಕೊಳ್ಳಬೇಕು. ನಿಮ್ಮ ಜಮೀನು ಇರುವ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮದ ಹೆಸರು ಹಾಗೂ ಸರ್ವೇ ನಂಬರನ್ನು ಆಯ್ಕೆ ಮಾಡಬೇಕು. ವಹಿವಾಟಿನ ವಿಸ್ತೀರ್ಣ ಅಂದರೆ ಕ್ರಯಕ್ಕೆ ಕೊಡುವ ಅಥವಾ ಕ್ರಯಕ್ಕೆ ಪಡೆಯುವ ವಿಸ್ತೀರ್ಣವನ್ನು ನಮೂದಿಸಬೇಕು. ಪೇಮೆಂಟ್ (PAYMENT) ಆಯ್ಕೆ ಮಾಡಿ ಶುಲ್ಕವನ್ನು ಆನ್ ಲೈನ್ ನಲ್ಲಿ ಪಾವತಿ ಮಾಡಬೇಕು. ನಿಗದಿತ ಶುಲ್ಕ ಪಾವತಿ ಮಾಡಿದ ನಂತರ ನಿಮ್ಮ ಮಾಹಿತಿಯನ್ನು ಉಳಿಸಬೇಕು ಅಂದರೆ ಉಳಿಸು ಆಯ್ಕೆ ಮಾಡಿ (SAVE) ಮಾಡಬೇಕು. ನೀವು ಮಾಹಿತಿ SAVEಮಾಡಿದ 10 ದಿನಗಳೊಳಗೆ ಸರ್ವೇ ಇಲಾಖೆಯು ಪರಿಶೀಲಿಸಿ ಅಸ್ತಿತ್ವದಲ್ಲಿರುವ ನಕ್ಷೆಯನ್ನು ನಿಮ್ಮ ಲಾಗಿನ್ ಗೆ ಕಳುಹಿಸುತ್ತದೆ.
ನಕ್ಷೆಯನ್ನು ಮುದ್ರಿಸಿಕೊಂಡು ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಉಪವಿಭಾಗ (sub-divide) ಮಾಡಿ ಅದನ್ನು ಸಹಿಮಾಡಿ ನಿಮ್ಮ ಲಾಗಿನ್‍ನಲ್ಲಿ ಅಪ್ ಲೋಡ್ ಮಾಡಬೇಕು. ನೀವು ಅಪ್‍ಲೋಡ್ ಮಾಡಿದ ನಕ್ಷೆಯನ್ನು ಸರ್ವೇ ಇಲಾಖೆ ಪರಿಶೀಲಿಸುತ್ತದೆ ಹಾಗೂ ಅನುಮೋದಿಸಲಾಗುತ್ತದೆ. ನಿಮ್ಮ ಲಾಗಿನ್ ನಿಂದ ಅನುಮೋದಿತ ನಕ್ಷೆಯನ್ನು ಡೌನ್‍ಲೋಡ್ ಮಾಡಿ ಹಾಗೂ ಬಳಸಿಕೊಳ್ಳಬಹುದು. ಸದರಿ ಕಾರ್ಯವನ್ನು ಮಾಡಲು ಅವಶ್ಯವಿದ್ದಲ್ಲಿ ನಿವೃತ್ತಿ ಹೊಂದಿರುವ ಭೂಮಾಪಕರು/ಪರವಾನಗಿ ಭೂಮಾಪಕರು ಅಥವಾ ತಿಳುವಳಿಕೆಯುಳ್ಳ ನಾಗರಿಕನ ಸಹಾಯ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಸ್ವಾವಲಂಭಿ ಅಪ್ಲಿಕೇಶನ್ ಕಾರ್ಯ ಹರಿವು ಅನುಸರಿಸಿ ಸಾರ್ವಜನಿಕರು ನಕ್ಷೆಯನ್ನು ತಯಾರಿಸುವ ಮೂಲಕ ಇಲಾಖೆಯಲ್ಲಿ ಆಗುತ್ತಿರುವ ಕಾಲ ವಿಳಂಬವನ್ನು ತಡೆಯಬಹುದು.
ಸ್ವಾವಲಂಭಿ ಅಪ್ಲಿಕೇಶನ್ ಬಗ್ಗೆ ಯಾವುದಾದರೂ ಅನುಮಾನಗಳಿದ್ದಲ್ಲಿ ಜಿಲ್ಲಾ ಅಥವಾ ಆಯಾ ತಾಲೂಕಿನ ಸರ್ವೇ ಇಲಾಖೆಯನ್ನು ಸಂಪರ್ಕಿಸಿ ಮಾಹಿತಿ ಪಡೆದು ನಿಮ್ಮ ಜಮೀನುಗಳ ನಕ್ಷೆಯನ್ನು ನೀವುಗಳೇ ತಯಾರಿಸಕೊಳ್ಳಬಹುದು ಹಾಗೂ ಸ್ವಾವಲಂಭಿ ಅಪ್ಲಿಕೇಶನ್‍ನ್ನು ಬಳಸಿ ಸದುಪಯೋಗ ಸಾರ್ವಜನಿಕರು ಸದುಪಯೋಗ ಮಾಹಿತಿ ಪಡೆದುಕೊಳ್ಳಬಹುದು ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
.jpg)
0 Comments