ಬಳ್ಳಾರಿ, ಜೂ. 05:ಧ್ಯಾನ, ಧಾರ್ಮಿಕತೆ, ಸಂಪ್ರದಾಯಗಳ ಆಚರಣೆಗಳ ಮೂಲಕ ನೆಮ್ಮದಿಯನ್ನು ಪಡೆಯುವುದು ಸುಲಭ ಸಾಧ್ಯ ಎಂದು ಶಿವಶಾಂತವೀರ ಶರಣು ಆಶೀರ್ವಾದ ಮಾಡಿದ್ದಾರೆ. ಬಸವಭವನದಲ್ಲಿ ಭಾನುವಾರ ನಡೆದ ಚಿಕೇನಕೊಪ್ಪದ ಶ್ರೀಚನ್ನವೀರಶ ಶರಣರ 27ನೇ ಪುಣ್ಯ ಸ್ಮರಣೋತ್ಸವ ಮತ್ತು 1008 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದ ಸಾನಿಧ್ಯವಹಿಸಿ ಅವರು ಆಶೀರ್ವಚನ ಮಾಡಿದರು. ಮೈಗಂಟಿದ ಮೈಲಿಗೆಯನ್ನು ಕಳೆಯಲು ಏನೆಲ್ಲಾ ಪ್ರಯತ್ನ ಮಾಡುವುದು ಸಹಜ. ಆದರೆ, ಮನಸ್ಸಿಗಂಟಿದ ಮೈಲಿಗೆಯನ್ನು ಕಳೆಯಲು ಆಧ್ಯಾತ್ಮ, ಧರ್ಮ, ಧ್ಯಾನಗಳು ಅತ್ಯಗತ್ಯ. ಚಿಕೇನಕೊಪ್ಪದ ಘನಮೌನಿ ಚನ್ನವೀರಶರಣ ತತ್ವ, ಚಿಂತನೆ ಮತ್ತು ಆಶೀರ್ವಚನಗಳು ಸಮಾಜದ ಒಳಿತಿಗಾಗಿ ಹೇಳಲ್ಪಟ್ಟವು ಎಂದರು.
ಬದುಕಿಗೆ ಬೆಳಕು ಮುಖ್ಯ. ಜ್ಞಾನದ ಬೆಳಕು, ಆಧ್ಯಾತ್ಮದ ಬೆಳಕು, ಸನ್ಮಾರ್ಗದ ಬೆಳಕು ಸಂಸಾರದಲ್ಲಿ ಸಾಮರಸ್ಯದ ಅನುಭವಗಳನ್ನು ಮೂಡಿಸುತ್ತಾ ಸಮನ್ವಯದ ಜೀವನಕ್ಕೆ ಪ್ರೋತ್ಸಾಹ ನೀಡುತ್ತದೆ. ಈ ಮೂಲಕ ಶಾಂತಿ, ನೆಮ್ಮದಿ, ಸಹಬಾಳ್ವೆ, ಸಹೋದರತ್ವಗಳು ಸಹಜವಾಗಿಯೇ ಮೂಡುತ್ತವೆ ಎಂದರು. ಉಪನ್ಯಾಸ ನೀಡಿದ ಪ್ರಭುಲಿಂಗೇಶ್ವರ ಮಠದ ಮಹಾದೇವ ಸ್ವಾಮೀಜಿ ಅವರು, ಚಿಕೇನಕೊಪ್ಪ ಚನ್ನವೀರಶರಣರು ಪ್ರತಿಯೊಬ್ಬ ಮಹಿಳೆಯರಲ್ಲಿ ದೇವತೆಯನ್ನು ಕಾಣುವ ಹಿನ್ನಲೆಯಲ್ಲಿ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯ ನಿರಂತರವಾಗಿ ಶ್ರೀಮಠವು ನಡೆಸುತ್ತಿದೆ. ಇದರ ಜೊತೆಯಲ್ಲಿ ನೇತ್ರ ತಪಾಸಣೆ, ಶಸ್ತ್ರಚಿಕಿತ್ಸೆಯಂಥಹಾ ಸೇವೆಯನ್ನೂ ಶ್ರೀಮಠದ ಸೇವಕರು ನಡೆಸುತ್ತಿರುವುದು ಶ್ಲಾಘನೀಯ ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಂಗ್ರೆಸ್ ಮುಖಂಡ ಅಲ್ಲಂ ವೀರಭದ್ರಪ್ಪ ಅವರು, ಚಿಕೇನಕೊಪ್ಪದ ಚನ್ನವೀರಶರಣರು ನಮ್ಮನ್ನು ಭೌತಿಕವಾಗಿ ಅಗಲಿದ್ದರೂ, ಅವರ ಧಾರ್ಮಿಕ ಆಚರಣೆಗಳು, ಬೋಧಿಸಿದ ತತ್ವ, ನೀತಿ, ಸಂಪ್ರದಾಯಗಳು ನಮ್ಮನ್ನು ಸದಾ ಚೇತನಾಶೀಲರನ್ನಾಗಿ ಸದೃಢರನ್ನಾಗಿಸುತ್ತಿವೆ ಎಂದರು. ವೇದಿಕೆಯಲ್ಲಿ ಸೀತಾರಾಂತಾಂಡದ ರಾಮಪ್ಪ ಪೂಜಾರ್, ಶ್ರೀರಕ್ಷಾ ಫೌಂಡೇಷನ್‍ನ ಅಧ್ಯಕ್ಷ ಸುನೀಲ್ ರಾವೂರ್ ಉಪಸ್ಥಿತರಿದ್ದರು. ಗುರು ಕಂಪ್ಯೂಟರ್ಸ್‍ನ ಪೂಜಾ ಮತ್ತು ಮೃತ್ಯುಂಜಯ ಬಾಬು ಹಾಗು ಕುಟುಂಬದ ಸದಸ್ಯರು, ಜೆ.ಬಿ. ಹಳ್ಳಿ ಜುನ್ನಾ ಅಮೃತ, ಜುನ್ನಾ ಬಸವರೆಡ್ಡಿ ಮತ್ತು ಕುಟುಂಬದ ಸದಸ್ಯರು, ಬಳ್ಳಾರಿಯ ಡಿ. ರಾಜೇಶ್ವರಿ ಮತ್ತು ಡಿ. ನಾಗರಾಜ್ ಕುಟುಂಬದ ಸದಸ್ಯರು, ವೈ, ಕಗ್ಗಲ್ ಗ್ರಾಮದ ಅಶೋಕ್ ಸಿದ್ಧಾಪುರ ಮಠದ ಜಗದೀಶ್ವರಸ್ವಾಮಿ ಹಾಗೂ ಶಾರದ ಯಶೋದ ಕುಟುಂಬದ ಸದಸ್ಯರು, ಬಳ್ಳಾರಿಯ ಪಿ. ಚನ್ನವೀರಗೌಡ ಮತ್ತು ಕುಟುಂಬದ ಸದಸ್ಯರು, ಭ್ರಮರಾಂಭ ಮೋಟಾರ್ಸ್‍ನ ಎ. ನೀಲಾವತಿ ಮತ್ತು ಎ. ಚನ್ನಬಸಪ್ಪ ಮತ್ತು ಕುಟುಂಬದ ಸದಸ್ಯರು, ಎಚ್. ಕಿರಣ, ಎಚ್.ಎನ್. ಗಿರೀಶ ಹಾಗೂ ಡಾ. ಎಚ್. ಎನ್. ಶಿವಶರಣ ಮತ್ತು ಕುಟುಂಬದ ಸದಸ್ಯರು, ಲಲಿತಮ್ಮ ಮತ್ತು ಜಡೆ ಪ್ರಕಾಶ್ ಹಾಗೂ ಕುಟುಂಬದ ಸದಸ್ಯರು ಶ್ರೀಗಳ ತುಲಾಬಾರ ನೆರವೇರಿಸಿದರು. ಸಿದ್ಧಾಪುರದ ಶಿವಲಿಂಗಯ್ಯ ಶಾಸ್ತ್ರಿಗಳು ಪ್ರಾಸ್ತಾವಿಕ ಭಾಷಣ ಮಾಡಿ, ಚಿಕೇನಕೊಪ್ಪ ಚನ್ನವೀರಶರಣರ ಆಧ್ಯಾತ್ಮಿಕ ಶಕ್ತಿ, ಪವಾಡಗಳು, ಧಾರ್ಮಿಕ ಚಿಂತನೆಗಳು ಮತ್ತು ಆಚರಣೆಗಳ ಕುರಿತು ಹೇಳಿದರು. ಶಂಕ್ರಯ್ಯ ಆರ್. ಗುರುಮಠ ಮತ್ತು ಸಂಗಡಿಗರು ಸಂಗೀತ ಕಾರ್ಯಕ್ರಮ ನೆರವೇರಿಸಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಕೆ.ಬಿ. ಸಿದ್ಧಲಿಂಗಪ್ಪ ಅವರು ಕಾರ್ಯಕ್ರಮ ನಿರೂಪಿಸಿದರು.

0 Comments