ಬಳ್ಳಾರಿ(ಕಂಪ್ಲಿ).ಜೂ.29: ಪಟ್ಟಣದ ತಹಸಿಲ್ದಾರ್ ಕಛೇರಿ ಸಭಾಂಗಣದಲ್ಲಿ ಶಾಸಕರಾದ ಜೆ.ಎನ್.ಗಣೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಬೇಕಿದ್ದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆಯನ್ನು ಅನಿವಾರ್ಯ ಕಾರಣಗಳಿಂದ ಜು.6ಕ್ಕೆ ಮುಂದೂಡಲಾಗಿದೆ ಎಂದು ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ತಹಸಿಲ್ದಾರರಾದ ಗೌಸಿಯಬೇಗಂ ತಿಳಿಸಿದರು. ಅವರು ಇಂದು ಪತ್ರಕರ್ತರೊಂದಿಗೆ ಮಾತನಾಡಿ ತಾಲ್ಲೂಕಿನಲ್ಲಿ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣಕ್ಕಾಗಿ ಫಾರಂ 53ರಲ್ಲಿ 73 ಅರ್ಜಿಗಳು ಸಲ್ಲಿಕೆಯಾಗಿದ್ದು, ಇಂದು 26 ಅರ್ಜಿಗಲ ವಿಚಾರಣೆ ನಡೆಸಿ ಸೂಕ್ತ ತೀರ್ಮಾನವನ್ನು ತೆಗೆದಕೊಳ್ಳಬೇಕಿತ್ತು, ಹಾಗೂ ಫಾರಂ 57ರಲ್ಲಿ 979 ಅರ್ಜಿಗಳು ಸಲ್ಲಿಕೆಯಾಗಿದ್ದು, ಇದರಲ್ಲಿ 550 ಅರ್ಜಿಗಳನ್ನು ತಿರಸ್ಕರಿಸಲಾಗಿದೆ.
ಯಾಕೆಂದರೆ ಇವುಗಳಲ್ಲಿ ಕೆರೆ, ಕಾಲುವೆ, ಹಳ್ಳ, ನದಿ ಪರಂಪೂಕುಗಳಲ್ಲಿ ಸಾಗುವಳಿ ಮಾಡುತ್ತಿದ್ದು, ಇದನ್ನು ಸಕ್ರಮೀಕರಣಗೊಳಿಸಲು ಬರುವುದಿಲ್ಲವಾದ್ದರಿಂದ ತಿರಸ್ಕರಿಸಲಾಗಿದ್ದು, ಇನ್ನುಳಿದ 429 ಅರ್ಜಿಗಳನ್ನು ಪರಿಶೀಲನೆ ಮಾಡಬೇಕಾಗಿದೆ ಎಂದು ವಿವರಿಸಿದರು. ಕಳೆದ ಹಲವು ವರ್ಷಗಳಿಂದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯ ಸಭೆಗಳು ನಡೆದಿಲ್ಲ,ಈ ಹಿನ್ನೆಲೆಯಲ್ಲಿ ಇತ್ಯರ್ಥ ಪಡಿಸಬೇಕಾದ ಅರ್ಜಿಗಳು ಅಧಿಕವಾಗಿದ್ದು, ಮುಂದಿನ ಸಭೆಯಲ್ಲಿ ಇವುಗಳಿಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳುತ್ತೇವೆ ಎಂದರು. ಬುಧವಾರ ಪಟ್ಟಣದಲ್ಲಿ ಪ್ರಥಮ ಬಾರಿಗೆ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಭೆ ನಡೆಯುತ್ತಿದ್ದು, ತಮ್ಮ ಅರ್ಜಿಗಳಿಗೆ ಸೂಕ್ತ ಪರಿಹಾರ ಸಿಗುವ ಹಿನ್ನೆಲೆಯಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಸಾರ್ವಜನಿಕರು ಆಗಮಿಸಿದ್ದರು. ಆದರೆ ಸಭೆ ಮುಂದೂಡಿದ್ದರಿಂದ ಹ್ಯಾಪು ಮೋರೆಹಾಕಿಕೊಂಡು ತಮ್ಮ ಗ್ರಾಮಗಳಿಗೆ ಹಿಂತಿರುಗಿದರು.

0 Comments