ಬಳ್ಳಾರಿ ಜೂ.27 : ಕರ್ನಾಟಕ ರಾಜ್ಯದ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ "ಬಳ್ಳಾರಿಯು" ಒಂದಾಗಿರುತ್ತದೆ. ಸ್ವತಂತ್ರ ಪೂರ್ವದಿಂದಲೂ ಬಳ್ಳಾರಿ ರೈಲು ನಿಲ್ದಾಣ ಹಾಗೂ ಕಂಟೋನ್‍ಮೆಂಟ್, ರೈಲು ನಿಲ್ದಾಣಗಳು ರೈಲ್ವೆ ಸೌಲಭ್ಯಗಳನ್ನು ಜನತೆಗೆ ನೀಡುತ್ತಿವೆಯಾದರೂ ಬಳ್ಳಾರಿ ನಗರಕ್ಕೆ ಮತ್ತೊಂದು ಬೈಪಾಸ್ ರೈಲ್ವೆ ನಿಲ್ದಾಣ ಆಗಬೇಕೆಂದು ಒತ್ತಾಯಿಸಿ ರಾಜ್ಯ ರೈಲ್ವೆ ಕ್ರಿಯಾ ಸಮಿತಿ, ಜಿಲ್ಲಾ ವಕೀಲರ ಸಂಘ, ವೀರಶೈವ ವಿದ್ಯಾವರ್ಧಕ ಸಂಘ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ್, ತುಂಗಭದ್ರ ರೈತ ಸಂಘ, ಕರ್ನಾಟಕ ಜನ ಕಲ್ಯಾಣ ರಕ್ಷಣಾ ವೇದಿಕೆ, ಕರ್ನಾಟಕ ವಿಜ್ಞಾನ ಪರಿಷತ್ತಿನ ಪ್ರತಿನಿಧಿಗಳು ಕರ್ನಾಟಕ ಸರ್ಕಾರದ ಸಾರಿಗೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು, ಬಳ್ಳಾರಿ ಸಂಸದರಾದ ವೈ ದೇವೇಂದ್ರಪ್ಪ ಹಾಗೂ ಶಾಸಕ ಗಾಲಿ ಸೋಮಶೇಖರ ರೆಡ್ಡಿಯವರನ್ನು ಭೇಟಿಯಾಗಿ ವಿವಿಧ ರೈಲ್ವೆ ಬೇಡಿಕೆಗಳ ಬಗ್ಗೆ ಚರ್ಚಿಸಿ ಮನವಿ ಪತ್ರ ಅರ್ಪಿಸಿದರು.
ರಾಜ್ಯದ ಮುಖ್ಯಮಂತ್ರಿಗಳು ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಮನವಿ ಪತ್ರ ಕಳುಹಿಸಲಾಗಿದ್ದು, ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಶಾಸಕರ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಹಾಗೂ ರೈಲ್ವೆ ಅಧಿಕಾರಿಗಳನ್ನು ಭೇಟಿ ಮಾಡಿ, ಬಳ್ಳಾರಿ ನಗರದ ವಿವಿಧ ರೈಲ್ವೆ ಅಭಿವೃದ್ಧಿಗಳ ಬಗ್ಗೆ ಮನವಿ ಸಲ್ಲಿಸುವುದಾಗಿ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ಅಧ್ಯಕ್ಷ ಕೆ.ಎಂ.ಮಹೇಶ್ವರಸ್ವಾಮಿ ತಿಳಿಸಿದರು. ಬಳ್ಳಾರಿ ರೈಲು ನಿಲ್ದಾಣ ಜಕ್ಷನ್ ಆಗಿದ್ದು, (1) ಗುಂತಕಲ್ (2) ಹುಬ್ಬಳ್ಳಿ (3) ಚಿತ್ರದುರ್ಗ (4) ಹೊಸಪೇಟೆ ಮಾರ್ಗದಲ್ಲಿ ಸಂಚರಿಸುವ 4 ಬ್ರಾಡ್‍ಗೆಜ್ ಮಾರ್ಗಗಳಿವೆ. ಚಿತ್ರದುರ್ಗ- ಹೊಸಪೇಟೆ ಮಾರ್ಗದಲ್ಲಿ ಸಂಚರಿಸುವ ರೈಲುಗಳು ಬಳ್ಳಾರಿ ರೈಲು ನಿಲ್ದಾಣಕ್ಕೆ ಬಾರದೆ, ಕಂಟೋನ್‍ಮೆಂಟ್ ರೈಲು ನಿಲ್ದಾಣದಲ್ಲಿ ನಿಲುಗಡೆಯಾಗಿ, ಬಳ್ಳಾರಿ ರೈಲ್ವೆ ಬೈಪಾಸ್ ಮಾರ್ಗದಲ್ಲಿ ಸಂಚರಿಸುವಂತೆ ರೈಲ್ವೆ ಇಲಾಖೆ ರೈಲು ಸಂಖ್ಯೆ 06243 / 06244 ಹೊಸಪೇಟೆ - ಬೆಂಗಳೂರು - ಹೊಸಪೇಟೆ - ಪ್ರಯಾಣಿಕರ ರೈಲನ್ನು ಪರೀಕ್ಷಾರ್ಥವಾಗಿ ಸಂಚಾರ ಆರಂಭ ಮಾಡಿರುತ್ತದೆ. ಇದರಿಂದ ಪ್ರಯಾಣಮಾಡುವ ಜನತೆಗೆ ಅನಾನುಕೂಲವಾಗುತ್ತಿದೆ. ನೂತನ ಬಳ್ಳಾರಿ ಬೈಪಾಸ್ ನಿಲ್ದಾಣ ಆಗುವವರೆಗೆ ಈ ರೈಲು ಸಂಖ್ಯೆ ಸಂಖ್ಯೆ 06243 / 06244 ಹೊಸಪೇಟೆ - ಬೆಂಗಳೂರು - ಹೊಸಪೇಟೆ ಯಥಾವತ್ತಾಗಿ ಬಳ್ಳಾರಿ ರೈಲು ನಿಲ್ದಾಣಕ್ಕೆ ಬಂದು ಹೋಗಲೇಬೇಕು. ರೈಲ್ವೆ ಇಲಾಖೆಯವರು ಹೊಸಪೇಟೆ - ಚಿತ್ರದುರ್ಗ ಮಾರ್ಗದ ರೈಲುಗಳನ್ನು ಬಳ್ಳಾರಿ ರೈಲ್ವೆ ಬೈಪಾಸ್ ಮುಖೇನ ಕಳುಹಿಸುವ ಖಾಯಂ ಪ್ರಸ್ತಾವನೆ ಇಲಾಖೆ ಮುಂದೆ ಇದ್ದಲ್ಲಿ, ತಕ್ಷಣವೇ ನೂತನ ಬಳ್ಳಾರಿ ಬೈಪಾಸ್ - ರೈಲು ನಿಲ್ದಾಣ ಅವಶ್ಯಕತೆ ಇರುತ್ತದೆ. ಈ ಬಗ್ಗೆ ರೈಲ್ವೆ ಇಲಾಖೆ ಗಂಭೀರವಾಗಿ ಕಾರ್ಯಪ್ರವೃತ್ತರಾಗಬೇಕು. ಈಗಿರುವ ಬಳ್ಳಾರಿಯ ಹೊಸ ಬಸ್ ನಿಲ್ದಾಣದ ಹಿಂಭಾಗದಲ್ಲಿ ಹಾಗೂ ಸ್ಟೇಡಿಯಂ ಹತ್ತಿರ ಎರಡು ಬದಿಗೆ ಪ್ಲಾಟ್‍ಫಾರಂಗಳುಳ್ಳ ಬಳ್ಳಾರಿ ಬೈಪಾಸ್ ರೈಲು ನಿಲ್ದಾಣದ ನಿರ್ಮಾಣಕ್ಕೆ ತಕ್ಷಣ ಕ್ರಮವಹಿಸಬೇಕು. ಪ್ರಮುಖ ಜಂಕ್ಷನ್ ರೈಲು ನಿಲ್ದಾಣವಾಗಿರುವ ಬಳ್ಳಾರಿಯಲ್ಲಿ ಕೇವಲ 3 ಪ್ಲಾಟ್ ಫಾರಂಗಳಿವೆ. ದಿನವೊಂದಕ್ಕೆ 180 ರೈಲುಗಳು ಸಂಚರಿಸುವುದರಿಂದ ಪ್ರಯಾಣಿಕರ ರೈಲುಗಳು ಸಮಯಕ್ಕೆ ಸರಿಯಾಗಿ ಬಳ್ಳಾರಿಗೆ ಬರಲು ಸಾಧ್ಯವಾಗುತ್ತಿಲ್ಲ. ಪ್ಲಾಟ್ ಫಾರಂಗಳ ಕೊರತೆಯಿಂದ ಪ್ರಯಾಣೀಕರ ರೈಲುಗಳು ಔಟರ್‍ನಲ್ಲಿ ನಿಲುಗಡೆಯಾಗುತ್ತಿವೆ. ಇದರಿಂದ ಪ್ರಯಾಣೀಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಕಾರಣ ಕೂಡಲೆ ಇನ್ನೂ 2 ಪ್ಲಾಟ್‍ಫಾರಂಗಳನ್ನು ನೂತನವಾಗಿ ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ನಿರ್ಮಿಸಬೇಕು. ಬಳ್ಳಾರಿಯ ರೆಡಿಯೋಪಾರ್ಕ್ ಗೇಟ್ ನಂ. ಐಅ 111 ನಲ್ಲಿ ಈಗಾಗಲೇ ರೈಲ್ವೆ ಇಲಾಖೆಯವರು ತಮ್ಮ ಅನುದಾನದಲ್ಲಿ ರೈಲ್ವೆ ಮೇಲ್ಸೆತುವೆ ಬ್ರಿಜ್ ಅನ್ನು ನಿರ್ಮಿಸಿ ವರ್ಷವಾಗಿದೆ. ರಾಜ್ಯ ಸರ್ಕಾರ ಈ ಬ್ರಿಜ್ಡ್‍ಗೆ ಸಂಪರ್ಕ ಕಲ್ಪಿಸುವ ಕಾಮಗಾರಿಯನ್ನು ಆರಂಭಿಸಿರುವುದಿಲ್ಲ. ಕೂಡಲೇ ಈ ಕಾಮಗಾರಿ ರಾಜ್ಯ ಸರ್ಕಾರದಿಂದ ಆರಂಭಿಸಲು ಕೋರಿಕೆದರು. ದಿನವೊಂದಕ್ಕೆ 80 ಪ್ರಯಾಣಿಕರ ರೈಲುಗಳು ಹಾಗೂ 100 ಕ್ಕೂ ಅಧಿಕ ಗೂಡ್ಸ್ ರೈಲುಗಳು ಬಳ್ಳಾರಿ ಮುಖೇನ ಸಂಚರಿಸುತ್ತವೆ. ಒಟ್ಟು ದಿನವೊಂದಕ್ಕೆ 180 ರೈಲುಗಳು ಸಂಚರಿಸುವ ವೇಳೆ ಬಳ್ಳಾರಿಯ ರೆಡಿಯೋಪಾಕ್ ಗೇಟ್ ನಂ. ಐಅ 111, ಕಂಟೋನ್‍ಮೆಂಟ್ ಹತ್ತಿರದ ಸುಧಾಗೇಟ್ ನಂ. ಐಅ 110 ಹಾಗೂ ವೀರಶೈವ ಕಾಲೇಜಿನ ಗೇಟ್ ನಂ. ಐಅ 109 ಗಳನ್ನು ಮುಚ್ಚುವುದರಿಂದ ಗೇಟಿನ ಎರಡು ಬದಿಗಳಲ್ಲಿ ಬಹು ಸಮಯದವರೆಗೆ ವಾಹನಗಳ ನಿಲುಗಡೆ ಅನಿವಾರ್ಯವಾಗುತ್ತದೆ. ಕಾರಣ ಕೂಡಲೆ ಜನತೆ ಹಿತಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 63 ರ ವ್ಯಾಪ್ತಿಗೆ ಬರುವ ಕಂಟೋನ್‍ಮೆಂಟ್ ಹತ್ತಿರದ ಸುಧಾ ಗೆಟ್ ನಂ. ಐಅ 110 ರೈಲ್ವೆ ಗೇಟಿಗೆ ಮೇಲ್ಸೆತುವೆ ನಿರ್ಮಾಣ ಮಾಡಲೇಬೇಕು. ಬಳ್ಳಾರಿ ನಗರದ ಅಧಿದೇವತೆಯಾದ ಶ್ರೀ ದುರ್ಗಾಮಾತೆಯ ದೇವಸ್ಥಾನದ ಹತ್ತಿರು ವಿರುವ ಕೆಳಸೇತುವೆ ಹಲವಾರು ವರ್ಷಗಳಿಂದ ಸಂಚಾರ ದಟ್ಟಣೆಯಿಂದ ಕೂಡಿರುತ್ತದೆ. ಹಾಗೂ ಗವಿಯಪ್ಪ ವೃತ್ತ (ಮೋತಿ ಸರ್ಕಲ್) ಹತ್ತಿರದ ಮೇಲ್ಸೆತುವೆಯು ಕೂಡ ಸಂಚಾರದ ದಟ್ಟಣೆಯಿಂದ ಕೂಡಿರುತ್ತದೆ. ಇದರಿಂದಾಗಿ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಕಾರಣ ಈ ಎರಡು ಸೇತುವೆಗಳನ್ನು ಆಗಲಿಕರಣ (ಡಬ್ಲಿಂಗ್) ಮಾಡಬೇಕು. ಈ ಎಲ್ಲಾ ಯೋಜನೆಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ 50 + 50 ಹಣ ಹೂಡಿಕೆ ಆಧಾರದಲ್ಲಿ ಆಗುವುದರಿಂದ ರಾಜ್ಯ ಸರ್ಕಾರ ಕಾಮಗಾರಿಗಳಿಗೆ ಸ್ಪಂದನೆ ನೀಡಲು ಕೋರಿಕೆ. ನೈರುತ್ಯ ರೈಲ್ವೆ ವಲಯದ ಅಧಿಕಾರಿಗಳು ಕೂಡಲೇ ಈ ಮೇಲಿನ ರೈಲ್ವೆ ಅಭಿವೃದ್ಧಿಗಳ ಬಗ್ಗೆ ಕೂಡಲೇ ಕ್ರಮವಹಿಸಲು ವಿನಂತಿಸಿದರು. ರೈಲ್ವೆ ಕ್ರಿಯಾ ಸಮಿತಿಯ ಅಧ್ಯಕ್ಷರಾದ ಕೆ.ಎಂ. ಮಹೇಶ್ವರಸ್ವಾಮಿ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿದ ನಿಯೋಗದಲ್ಲಿ ಪದಾಧಿಕಾರಿಗಳಾದ ಬಂಡೆಗೌಡ, ಗಂಗಾವತಿ ವೀರೇಶ್, ಹೆಚ್.ಕೆ. ಗೌರಿಶಂಕರ, ವೀ.ವಿ.ಸಂಘದ ದರೂರು ಶಾಂತನಗೌಡ, ವಕೀಲರ ಸಂಘದ ಕೆ. ಎರ್ರಿಗೌಡ, ರೈತ ಸಂಘದ ಪುರೋಷೋತ್ತಮಗೌಡ, ಕ.ಸಾ.ಪ.ದ ನಿಷ್ಟಿರುದ್ರಪ್ಪ, ಜನಕಲ್ಯಾಣ ವೇದಿಕೆಯ ಜಿ.ಎಂ. ಬಸವರಾಜ, ವಿಜ್ಞಾನ ಪರಿಷತ್ತಿನ ಆರ್.ಹೆಚ್.ಎಂ. ಚನ್ನಬಸವಸ್ವಾಮಿ, ರೈಲ್ವೆ ಸಲಹಾ ಸಮಿತಿಯ ಕೋಳೂರು ಚಂದ್ರಶೇಖರಗೌಡ ಇನ್ನಿತರ ಸದಸ್ಯರುಗಳು ಭಾಗವಹಿಸಿದ್ದರು.

0 Comments