Ticker

6/recent/ticker-posts

Ad Code

Responsive Advertisement

ಮಲ್ಲೇಪುರಂ ಅವರ ಆಂತರಿಕ ಶಕ್ತಿಯನ್ನು ವಿಶ್ಲೇಷಿಸುವುದು ಕಷ್ಟಸಾಧ್ಯ: ವೀಣಾ ಬನ್ನಂಜೆ

ಸರಳತೆ ಮತ್ತು ಶಿಸ್ತಿಗೆ ಸೂಕ್ತ ಉದಾಹರಣೆ ಮಲ್ಲೇಪುರಂ ಜಿ. ವೆಂಕಟೇಶ್. ಇವರ ಆಂತರಿಕ ಶಕ್ತಿಯನ್ನು ವಿಶ್ಲೇಷಿಸುವುದು ಕಷ್ಟಸಾಧ್ಯ. ಇದಕ್ಕೆ ಸಾಕ್ಷಿ ಅವರ ಸಾಹಿತ್ಯ ಕೊಡುಗೆಗಳು. ಸಂಸ್ಕೃತ ಸಾಹಿತ್ಯಗಳು ನಮ್ಮಿಂದ ದೂರವಾಗುವ ಸಂದರ್ಭದಲ್ಲಿ ಅದರ ಮೇಲೆ ಅಧ್ಯಯನ ನಡೆಸಿ ಅದನ್ನು ಕನ್ನಡಕ್ಕೆ ತರುವಲ್ಲಿ ಮಲ್ಲೇಪುರಂ ಅವರ ಪಾತ್ರ ಅವಿಸ್ಮರಣೀಯ. ಇವರ ಸಾಹಿತ್ಯಿಕ ಹಸಿವು ಮತ್ತು ಕನ್ನಡಕ್ಕೆ ತನ್ನನ್ನು ತಾನು ಅರ್ಪಿಸಿಕೊಂಡ ಬಗೆ ಇವರನ್ನು ಒಬ್ಬ ಸಾಧಕನಾಗಿ ಇಂದು ನಮ್ಮ ಮುಂದೆ ನಿಲ್ಲಿಸಿದೆ ಎಂದು ಕನ್ನಡ ಲೇಖಕಿ, ಆಧ್ಯಾತ್ಮ ಚಿಂತಕಿ ಡಾ. ವೀಣಾ ಬನ್ನಂಜೆ ಹೇಳಿದರು.



ಅವರು ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅಭಿನಂದನಾ ಸಮಿತಿಯ ಆಶ್ರಯದಲ್ಲಿ ಬೆಂಗಳೂರಿನ ಗಾಂಧೀ ಭವನದ ಮಹಾದೇವ ದೇಸಾಯಿ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರೊ. ಮಲ್ಲೇಪುರಂ 70ರ ಅಭಿನಂದನೆ ಮತ್ತು ಸಮಾಹಿತ ಹಾಗೂ ಸಪ್ತತಿ ಗ್ರಂಥಗಳ ಲೋಕಾರ್ಪಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಒಬ್ಬ ಮಹಾನುಭಾವ ಒಂದು ಕೃತಿ ಓದುವುದರಿಂದ ಬರೆಯುವುದರಿಂದ ಬೆಳೆಯಲಾರ, ಬದಲಾಗಿ ಆ ಕೃತಿಗೆ ತನ್ನನ್ನು ತಾನು ಹೇಗೆ ಅರ್ಪಿಸಿಕೊಂಡಿದ್ದಾನೆ ಎನ್ನುವುದರ ಮೇಲೆ ಆತನ ಸಾಹಿತ್ಯ ಪ್ರೀತಿ ಅಡಗಿದೆ ಎನ್ನುವುದನ್ನು ಮಲ್ಲೇಪುರಂ ಅವರು ತೋರಿಸಿಕೊಟ್ಟು ನಮಗೆಲ್ಲಾ ಮಾರ್ಗದರ್ಶಕರಾಗುವಷ್ಟು ಮಾದರಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಇಂದು ಬಿಡುಗಡೆಯಾದ ಕೃತಿಗಳು ಪೂರಕ ಎಂದು ಅಭಿಪ್ರಾಯಪಟ್ಟರು.

ಗ್ರಂಥ ಲೋಕಾರ್ಪಣೆಗೊಳಿಸಿ ನವದೆಹಲಿಯ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪದ್ಮಭೂಷಣ ಡಾ. ಚಂದ್ರಶೇಖರ ಕಂಬಾರ ಮಾತನಾಡಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಭಿನ್ನವಾಗಿ ಯೋಚಿಸುವವರಲ್ಲಿ ಮಲ್ಲೇಪುರಂ ಜಿ. ವೆಂಕಟೇಶ್ ಅವರು ಪ್ರಮುಖರು. ಅವರ ಸಂಸ್ಕೃತ ಪಾಂಡಿತ್ಯ ಅಭೂತಪೂರ್ವ. ನಾಟಕ, ಶಾಸ್ತ್ರ, ಸಂಸ್ಕೃತ ವಿಷಯಗಳಲ್ಲಿ ಮಲ್ಲೇಪುರಂ ಜ್ಞಾನ ಅಪೂರ್ವಾದುದು. ಅನೇಕ ಬೇರೆ ಬೇರೆ ಭಾಷಾ ಗ್ರಂಥಗಳನ್ನು ಕನ್ನಡಕ್ಕೆ ಅನುವಾದಿಸಿ ಕನ್ನಡ ನಾಡಿಗೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಇದು ನಮ್ಮೆಲ್ಲರಿಗೆ ಹೆಮ್ಮೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನವದೆಹಲಿ ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲ ವಹಿಸಿದ್ದರು. ಸಮಾರಂಭದಲ್ಲಿ ತುಮಕೂರಿನ ಶ್ರೀ ಸಿದ್ಧಗಂಗಾಮಠದ ಮ.ನಿ.ಪ್ರ.ಸ್ವ. ಸಿದ್ಧಲಿಂಗ ಮಹಾಸ್ವಾಮಿಗಳು, ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಅಧ್ಯಕ್ಷ ಡಾ. ವೂಡೇ ಪಿ. ಕೃಷ್ಣ, ಒರಿಸ್ಸಾ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರೊಛಾನ್ಸಲರ್ ಪ್ರೊ. ಪಿ.ವಿ. ಕೃಷ್ಣಭಟ್ಟ, ವಿಶ್ರಾಂತ ನ್ಯಾಯಮೂರ್ತಿ ಎನ್. ಕುಮಾರ್ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು.

ಕಾರ್ಯಕ್ರಮದಲ್ಲಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರ ಕುರಿತಾದ ನುಡಿಚಿತ್ರ ವೇದಿಕೆಯಲ್ಲಿ ಪ್ರಸ್ತುತಗೊಂಡು ಗಮನ ಸೆಳೆಯಿತು . ಮಲ್ಲೇಪುರಂ 70ರ ಅಭಿನಂದನ ಸಮಿತಿ ಅಧ್ಯಕ್ಷ ಡಾ. ಕೆ.ಜಿ. ಲಕ್ಷ್ಮೀನಾರಾಯಣಪ್ಪ ಪ್ರಸ್ತಾವಿಸಿ ಸ್ವಾಗತಿಸಿದರು,  ಸೌಮ್ಯಾ ಶ್ರೀಧರ್ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಅನೇಕ ಸಾಹಿತಿ, ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.


Post a Comment

0 Comments

Ad Code

Responsive Advertisement