ಸ್ವಚ್ಛ ಬಳ್ಳಾರಿ ಸ್ವಸ್ಥ ಬಳ್ಳಾರಿಗೆ ಸಾರ್ವಜನಿಕರು ಕೈಜೋಡಿಸಿ:ಮೇಯರ್ ರಾಜೇಶ್ವರಿ
ಬಳ್ಳಾರಿ,ಜೂ.02: ಬಳ್ಳಾರಿ ಮಹಾನಗರಪಾಲಿಕೆ ವತಿಯಿಂದ ‘’ಸ್ವಚ್ಛಬಳ್ಳಾರಿ ಸ್ವಸ್ಥ ಬಳ್ಳಾರಿ’’ ಅಭಿಯಾನದಡಿ ‘ವೇದಿಕೆ ನಮ್ಮದು ಪ್ರತಿಭೆ ನಿಮ್ಮದು’ ಎಂಬ ಧ್ಯೇಯವಾಕ್ಯದಡಿ ನಗರದ ನಿವಾಸಿಗಳು/ಶಾಲಾ/ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿರುವ ವಿವಿಧ ಸ್ಪರ್ಧೆಗಳ ಉದ್ಘಾಟನಾ ಸಮಾರಂಭವು ನಗರದ ಜಿಲ್ಲಾ ಕ್ರೀಡಾಂಗಣದ ಒಳಾಂಗಣ ಸಭಾಂಗಣದಲ್ಲಿ ಬುಧವಾರ ನಡೆಯಿತು.ಮಹಾನಗರ ಪಾಲಿಕೆಯ ಮೇಯರ್ ಎಂ.ರಾಜೇಶ್ವರಿ ಆವರು ಸ್ಪರ್ಧೆಗಳಿಗೆ ಚಾಲನೆ ನೀಡಿ ಸ್ಪರ್ಧಾಳುಗಳಿಗೆ ಶುಭಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಳ್ಳಾರಿಯನ್ನು ಸ್ವಚ್ಛ ಮತ್ತು ಸ್ವಸ್ಥವನ್ನಾಗಿಸುವ ನಿಟ್ಟಿನಲ್ಲಿ ಮಹಾನಗರಪಾಲಿಕೆಯು ವಿವಿಧ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಅನುಷ್ಠಾನಗೊಳಿಸುತ್ತಿದ್ದು, ಸಾರ್ವಜನಿಕರು ಇದಕ್ಕೆ ಕೈಜೋಡಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದರು.ಮಹಾನಗರ ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಅವರು ಮಾತನಾಡಿ, ಸ್ವಚ್ಛ ಬಳ್ಳಾರಿ ಮತ್ತು ಸ್ವಸ್ಥ ಬಳ್ಳಾರಿ ಅಭಿಯಾನದಲ್ಲಿ ಸಾರ್ವಜನಿಕರ ಹಾಗೂ ಯುವಕರ ಸಹಭಾಗಿತ್ವ ಉತ್ತೇಜನಕ್ಕಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದರು.ಜಿಲ್ಲಾ ಕ್ರೀಡಾಂಗಣ ಮೈದಾನದಲ್ಲಿ ಬ್ಯಾಡ್ಮಿಂಟನ್, ಚೆಸ್, ಕೇರಮ್ ಮತ್ತು ಸ್ವಿಮಿಂಗ್ ಸ್ಪರ್ಧೆಗಳು ನಡೆದವು.
ನೂರಾರು ನಿವಾಸಿಗಳು ಮತ್ತು ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಗುರುವಾರ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ವಾಲಿಬಾಲ್, ಥ್ರೋಬಾಲ್ ಸ್ಪರ್ಧೆಗಳು ನಡೆಯಲಿವೆ.
ಉಳಿದಂತೆ ರಸಪ್ರಶ್ನೆ, ಚರ್ಚಾಸ್ಪರ್ಧೆ ಹಾಗೂ ಚಿತ್ರಕಲಾ ಸ್ಪರ್ಧೆಗಳಿಗೆ ಸಂಬಂಧಿಸಿದಂತೆ, ಸ್ಪರ್ಧಾರ್ಥಿಗಳಿಂದ ಕನಿಷ್ಠ ಸಂಖ್ಯೆಯ ಅರ್ಜಿಗಳು ಸ್ವೀಕೃತವಾಗಿರುವುದರಿಂದ ಸದರಿ ಸ್ಪರ್ಧೆಗಳು ಸ್ಪರ್ಧಾತ್ಮಕತೆಯಿಂದ ಕೂಡಿರದೇ ಇಲ್ಲದಿರುವುದರಿಂದ ಅವುಗಳನ್ನು ರದ್ದುಪಡಿಸಲಾಗಿದೆ.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ವಿವಿಧ ಸ್ಥಾಯಿಸಮಿತಿಗಳ ಅಧ್ಯಕ್ಷರುಗಳು, ಅಧಿಕಾರಿಗಳು ಹಾಗೂ ಪಾಲಿಕೆ ಸದಸ್ಯರು ಆದ ಮುಲ್ಲಂಗಿ ನಂದೀಶ್,ರಾಮಂಜಿ,ಗಾದೆಪ್ಪ ಮತ್ತಿತರರು ಉಪಸ್ಥಿತರಿದ್ದರು.

0 Comments