ಹಂದಿಹಾಳು ಗ್ರಾಮಸ್ಥರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸಲು ಆಶ್ವಾಸನೆ: ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ
ಬಳ್ಳಾರಿ,ಜೂ.18: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ನಿಮಿತ್ತ ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಬಳ್ಳಾರಿ ತಾಲೂಕಿನ ಹಂದಿಹಾಳು ಗ್ರಾಮದಲ್ಲಿ ಶನಿವಾರ ಗ್ರಾಮವಾಸ್ತವ್ಯ ನಡೆಸಿದರು.
ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಂದಿಹಾಳು ಗ್ರಾಮಕ್ಕೆ ಮುಖ್ಯವಾಗಿ ಒಳಚರಂಡಿ ವ್ಯವಸ್ಥೆಯ ಸಮಸ್ಯೆ ಇದ್ದು, ಮಳೆ ಬಂದಾಗ ಗ್ರಾಮದ ಮುಖ್ಯ ರಸ್ತೆಗಳಲ್ಲಿ ಮತ್ತು ತಗ್ಗು ಪ್ರದೇಶದ ಮನೆಗಳಲ್ಲಿ ನೀರು ಹರಿದು ಜನರ ಜೀವನಕ್ಕೆ ತೊಂದರೆಯುಂಟಾಗುತ್ತಿದ್ದು, ರಸ್ತೆಯನ್ನು ಎತ್ತರಕ್ಕೆ ಮಾಡುವಂತೆ ಮತ್ತು ಅದಕ್ಕೆ ಬೇಕಾದ ರಸ್ತೆ ಆಗಲೀಕರಣ ವರದಿ ಸಿದ್ಧಪಡಿಸುವಂತೆ ಅಲ್ಲಿದ್ದ ಲೋಕೋಪಯೋಗಿ ಇಲಾಖೆಯ ಇಂಜಿನೀಯರ್‍ಗಳಿಗೆ ಸೂಚನೆ ನೀಡಿದರು.
ಹಂದಿಹಾಳು ಗ್ರಾಮದ ಪ್ರೌಢಶಾಲೆಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಮೀನಿನ ಕೊರತೆಯಿದ್ದು, 5 ಎಕರೆ ಜಾಗವನ್ನು ಖರೀದಿಸಿ ಸರಕಾರದ ಅನುದಾನದಲ್ಲಿ ಶಾಲೆಯನ್ನು ನಿರ್ಮಿಸಿಕೊಡುವೆ ಎಂದು ಗ್ರಾಮಸ್ಥರಿಗೆ ಆಶ್ವಾಸನೆ ನೀಡಿದರು.
ಹಂದಿಹಾಳು ಗ್ರಾಮವು ಬಹುತೇಕ ನೀರಾವರಿ ಭೂಮಿ ಹೊಂದಿದ್ದು, ಎಚ್‍ಎಲ್‍ಸಿ ಕಾಲುವೆಯಿಂದ ಬರುವ ನೀರು ಕೊನೆಯ ಹಂತದ ಭೂಮಿಗಳಿಗೆ ನೀರು ತಲುವುದಿಲ್ಲ ಎಂದು ಆಳಲು ತೋಡಿಕೊಂಡ ಗ್ರಾಮದ ರೈತನ ಸಮಸ್ಯೆಗೆ ದನಿಯಾದ ಅವರು, ಎಚ್‍ಎಲ್‍ಸಿ ಕಾಲುವೆಯಿಂದ ಯಾರು ಆಕ್ರಮಣವಾಗಿ ನೀರನ್ನು ಬಳಸುವಂತಿಲ್ಲ ಮತ್ತು ಕಾಲುವೆಗಳಿಗೆ ಹಾಕಲಾದ ಮೋಟಾರ್,ಪಂಪ್‍ಸೆಟ್‍ಗಳನ್ನು 2 ವಾರದೊಳಗೆ ತೆರವುಗಳಿಸುವಂತೆ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಈ ಗ್ರಾಮವಾಸ್ತವ್ಯ ನಡೆಸುವುದಕ್ಕಿಂತ ಎರಡು-ಮೂರು ವಾರಕ್ಕೂ ಮುಂಚೆಯೇ ಗ್ರಾಮಕ್ಕೆ ತಹಸೀಲ್ದಾರ್ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಕಳುಹಿಸಿ ಪಿಂಚಣಿ, ಪಹಣಿ, ದಾಖಲೆಗಳ ತಿದ್ದುಪಡಿ, ರೇಶನ್ ಕಾರ್ಡ್ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು ಬಗೆಹರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ತಿಳಿಸಿದರು.ಬಹುತೇಕವಾಗಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಸಮಸ್ಯೆಗಳಾದ ಪಹಣಿಯಲ್ಲಿನ ಲೋಪದೋಷಗಳು, ಪೌಡಿ ಖಾತೆಗಳು, ಇನಾಂ ಭೂಮಿಗಳ ಪಟ್ಟಾ ಮಂಜುರಾತಿ, ವೃದ್ಧಾಪ್ಯ ವೇತನ, ಮಾಸಿಕ ವೇತನಗಳ, ಪಡಿತರ ಚೀಟಿಗಳಿಗೆ ಸಂಬಂಧಿಸಿದಂತೆ ಸ್ಥಳದಲ್ಲಿಯೇ ಬಗೆಹರಿಸುವುದೇ ಈ ಗ್ರಾಮವಾಸ್ತವ್ಯದ ಮುಖ್ಯ ಉದ್ದೇಶವಾಗಿದೆ ಎಂದು ಅವರು ಹೇಳಿದರು.ಸಾಮಾನ್ಯವಾಗಿ ಗ್ರಾಮದಲ್ಲಿ ರಸ್ತೆ ದುರಸ್ತಿ, ಚರಂಡಿ ಸರಿಪಡಿಸುವಿಕೆ, ಮತ್ತು ಚರಂಡಿ ನೀರು ಹೋಗದಂತೆ ವ್ಯವಸ್ಥೆ, ಬೀದಿದೀಪಗಳ ವ್ಯವಸ್ಥೆ, ಸ್ವಚ್ಛತೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಮುಂದೆ ಪ್ರಸ್ತಾಪಿಸಿದರು.ಈ ಕುರಿತಂತೆ ಸ್ಪಂದಿಸಿದ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು, ವಿವಿಧ ಅನುದಾನಗಳಲ್ಲಿ ನಿರ್ಮಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.ನಂತರದಲ್ಲಿ ಅಂಗವಿಕಲರಿಗೆ ಉದ್ಯೋಗ ಚೀಟಿ ವಿತರಣೆ ಮಾಡಿದರು. ಪಿಂಚಣಿ ಸಂಬಂಧಿಸಿದ ಹಾಗೂ ಸಾಮಾಜಿಕ ಭದ್ರತಾ ಯೋಜನೆಗೆ ಸಂಬಂಧಿಸಿದ ವಿವಿಧ ಅದೇಶಗಳು ಮತ್ತು ಮನವಿ ಪತ್ರಗಳನ್ನು ಸ್ವೀಕರಿಸಿದರು.
ಎಲ್ಲರ ಅಹವಾಲುಗಳನ್ನು ಸಮಾಧಾನದಿಂದ ಆಲಿಸಿದ ಡಿಸಿ ಮಾಲಪಾಟಿ ಅವರು ತಮ್ಮ ಸಮಸ್ಯೆಗಳನ್ನು ಶೀಘ್ರವೇ ಪರಿಹರಿಸಲಾಗುವುದು ಎಂದು ಜನರಿಗೆ ಅಶ್ವಾಸನೆ ನೀಡಿದರು.
ಇದಕ್ಕೂ ಮುಂಚೆ ಹಂದಿಹಾಳು ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಅಭಿಯಾನದ ನಿಮಿತ್ತ ಬಳ್ಳಾರಿ ತಾಲೂಕಿನ ತಹಶೀಲ್ದಾರರಾದ ಹೆಚ್.ವಿಶ್ವನಾಥ ಅವರು ಜಿಲ್ಲಾಧಿಕಾರಿಗಳ ಪರವಾಗಿ ಗ್ರಾಮದ ಪ್ರತಿ ಮನೆಗೂ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿದರು ಮತ್ತು ಗ್ರಾಮದೆಲ್ಲೆಡೆ ಸಂಚರಿಸಿ ರಸ್ತೆಗಳು, ಚರಂಡಿ, ಅಂಗನವಾಡಿ ಕೇಂದ್ರಗಳು, ಕುಡಿಯುವ ನೀರಿನ ಶುದ್ಧೀಕರಣ ಘಟಕ, ಗ್ರಂಥಾಲಯ, ಆಯುರ್ವೇದ ಚಿಕಿತ್ಸಾಲಯ, ಸ್ವಚ್ಛತೆ ಹಾಗೂ ಇನ್ನೀತರ ಮೂಲಸೌಕರ್ಯ ವ್ಯವಸ್ಥೆಯನ್ನು ಪರಿಶೀಲಿಸಿ, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಅಭಿಯಾನದ ನಿಮಿತ್ತ ವೇದಿಕೆ ಆವರಣದಲ್ಲಿ ಹಾಕಲಾಗಿದ್ದ ವಿವಿಧ ಇಲಾಖೆಗಳ ವಸ್ತು ಪ್ರದರ್ಶನಗಳು ಮತ್ತು ಜಾಗೃತಿ ವೇದಿಕೆಗಳು ಗಮನಸೆಳೆಯಿತು.
ಈ ಸಂದರ್ಭದಲ್ಲಿ ಹಂದಿಹಾಳು ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ, ಉಪಾಧ್ಯಕ್ಷೆ ಕೆ.ಶಾಂತಿ, ಪ್ರಭಾರ ಎಸಿ ಸುನೀತಾ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ ಬಾರಿಕರ್ ಹಾಗೂ ಗ್ರಾಪಂ ಸದಸ್ಯರು ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
.jpg)
0 Comments