Ticker

6/recent/ticker-posts

Ad Code

Responsive Advertisement

ಜನರಿಗೆ ಪಾರಂಪರಿಕ ವೈದ್ಯ ಪದ್ಧತಿ ತುಂಬಾ ಅಗತ್ಯವಿದೆ-ಕಮ್ಮರಚೇಡು ಸಂಸ್ಥಾನ ಮಠದ ಪೂಜ್ಯ ಕಲ್ಯಾಣಶ್ರೀ

ಬಳ್ಳಾರಿ,ಜೂ.0 1-ಪಿಜ್ಜಾ, ಬರ್ಗರ್, ಪಾನಿಪುರಿ, ಚಿಕನ್ ಕಬಾಬ್, ಮಟನ್ ಕಬಾಬ್ ನಂತಹ  ಪದಾರ್ಥಗಳನ್ನು ಸೇವಿಸುವ ಜನರು ಇಂದು ನಾನಾ ರೀತಿಯ ಜಾಡ್ಯಗಳಿಗೆ ಬಲಿಯಾಗಿ ನರಳುತ್ತಿದ್ದಾರೆ. ಇಂಥವರಿಗೆಲ್ಲ ಪಾರಂಪರಿಕ ವೈದ್ಯಕೀಯ ಪದ್ಧತಿಯಿಂದ ಚಿಕಿತ್ಸೆ ನೀಡಿ ಸಿರಿ ಧಾನ್ಯದ ಅಹಾರ ಸೇವನೆಗೆ ಉತ್ತೇಜಿಸಬೇಕಿದೆ ಎಂದು ಕಮ್ಮರಚೇಡು ಸಂಸ್ಥಾನ ಮಠದ ಪೂಜ್ಯ ಕಲ್ಯಾಣಶ್ರೀಗಳು ಪ್ರತಿಪಾದಿಸಿದರು. 

ಬಸವ ಭವನ ಶ್ರೀ ಅನಾದಿಲಿಂಗೇಶ್ವರ ದೇವಸ್ಥಾನ ಹಿಂಭಾಗದಲ್ಲಿರುವ ಶಾಸ್ತ್ರಿನಗರದ ಪ್ರಾಕೃತಿಕ ವೈದ್ಯರ ಮನೆಯಲ್ಲಿ ಹರಿಜ್ಞಾನ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಆಶೀರ್ವಚನ ನೀಡಿದ ಪೂಜ್ಯರು, ವ್ಯಾಧಿ ಯಾರಿಗೂ ಬಿಟ್ಟಿದ್ದಲ್ಲ. ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು ರೋಗದಿಂದ ನರಳಿದ್ದರು. ಜಾಡ್ಯ ಮನುಷ್ಯರಿಗಲ್ಲದೇ ಮರಕ್ಕೆ ಬರುತ್ತದೆಯೇ? ಎನ್ನುವ ಕಾಲ ಒಂದಿತ್ತು. ಇದೀಗ ಮರಗಳಿಗೂ ಜಾಡ್ಯ ಬರುತ್ತಿದೆ. ಪರಿಸರ, ಪ್ರಕೃತಿ ನಾಶವಾಗುತ್ತಿದೆ. ಇದರಿಂದ ಆರೋಗ್ಯದ ಮೇಲೂ ದುಷ್ಟರಿಣಾಮ ಬೀರುತ್ತಿದೆ. ಸಾವಯವ ಗೊಬ್ಬರದಿಂದ ಉತ್ಪನ್ನವಾದ ಧಾನ್ಯಗಳು, ಸಿರಿ ಧಾನ್ಯಗಳನ್ನು ಸೇವಿಸುವುದರಿಂದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಸಜ್ಜೆ, ನವಣಿಯಂತಹ ಧಾನ್ಯಗಳು, ಕರಿಬೇವು, ನುಗ್ಗೆ, ಹಿರೇಕಾಯಿ, ಬೆಂಡೆಕಾಯಿಯಂತಹ ನಾರಿನ ತರಕಾರಿಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು. ಇದರಿಂದ ಬಿಪಿ, ಶುಗರ್ ನಿಯಂತ್ರಣದಲ್ಲಿಡುವುದಷ್ಟೇ ಅಲ್ಲ. ಆರೋಗ್ಯವಾಗಿ ಸದೃಢರಾಗಿರಲು ಸಾಧ್ಯ ಎಂದರು.

ಜನರು ಇಂದು ಐಷಾರಾಮಿ ಬದುಕಿಗೆ ಮಾರು ಹೋಗುತ್ತಿದ್ದಾರೆ. ಕುಳಿತು ಊಟ ಮಾಡುವುದು, ನೆಲದಲ್ಲಿ ಕುಳಿತುಕೊಳ್ಳುವುದು, ನೆಲದಲ್ಲಿಯೇ ಕುಳಿತು ಅಡುಗೆ ಮಾಡುವ ಪದ್ಧತಿಯಿಂದ ದೇಹದ ಅಂಗಾಂಗಗಳಿಗೆ ಚಟುವಟಿಕೆ ಲಭಿಸುತ್ತದೆ. ಇದೆಲ್ಲ ಇದೀಗ ಮಾಯವಾಗಿ ಸೋಫಾ, ಡೈನಿಂಗ್ ಟೇಬಲ್ ಬಂದಿವೆ. ಕೆಲಸದ ಏಕತಾನತೆ, ಮಾನಸಿಕ ಮತ್ತು ದೈಹಿಕ ಒತ್ತಡಗಳಿಗೆ ಸಿಲುಕಿ ನರರೋಗ, ಪಾಶ್ರ್ವವಾಯು, ಗ್ಯಾಸ್ ಮೊದಲಾದ ದೈಹಿಕ ಜಾಡ್ಯಗಳಿಗೆ ಸಿಲುಕಿ ಜನರು ನರಳುತ್ತಿದ್ದಾರೆ. ನರ್ಸಿಂಗ್ ಹೋಮ್ ಗಳಿಗೆ ಹೋದರೆ ಅಲ್ಲಿ ವಿವಿಧ ರೀತಿಯ ಚಿಕಿತ್ಸೆಗೆ ಒಳಪಡಿಸಲಾಗುತ್ತಿದೆ. ಆಧುನಿಕ ಔಷಧಿಗಳು ದೇಹಕ್ಕೆ ಮಾರಕ. ಪಾರಂಪರಿಕ ವೈದ್ಯಕೀಯ ಪದ್ಧತಿಯಲ್ಲಿ ಪ್ರಾಕೃತಿಕವಾಗಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಜನರು ತಮ್ಮ ಯಾವುದೇ ದೈಹಿಕ ಜಾಡ್ಯಗಳಿಗೆ ಪಾರಂಪರಿಕ ವೈದ್ಯಕೀಯ ಪದ್ಧತಿ ಮೊರೆ ಹೋಗಬೇಕು. ಇದರಿಂದ ಬೇರು ಸಮೇತ ರೋಗದ ಮೂಲವನ್ನು ಕಿತ್ತೆಸೆಯಲು ಸಾಧ್ಯ. ಬಳ್ಳಾರಿಯಲ್ಲಿ ಎಂ.ವಸಂತ್ ಕುಮಾರ್ ಅವರು ಪಾರಂಪರಿಕ ವೈದ್ಯಕೀಯ ಪದ್ಧತಿ ಶಿಬಿರಗಳನ್ನು ಪ್ರತಿ ವಾರ ಎಲ್ಲಾ ವಾರ್ಡುಗಳಲ್ಲಿ ಹಮ್ಮಿಕೊಳ್ಳಲಿ. ನಮ್ಮ ಮಠದಲ್ಲೂ ಶಿಬಿರ ಏರ್ಪಡಿಸಿದರೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದರು. 

ಬಳ್ಳಾರಿ, ರಾಯಚೂರು ಮತ್ತು ಕೊಪ್ಪಳ ಹಾಲು ಒಕ್ಕೂಟದ ಮಾಜಿ ಜಿಲ್ಲಾಧ್ಯಕ್ಷರು, ಬಿಜೆಪಿಯ ಧುರೀಣರು ಆದ ಎರ್ರಂಗಳಿ ತಿಮ್ಮಾರೆಡ್ಡಿ ಅವರು ಮಾತನಾಡಿ, ಎಡ ಗೈ ಮೇಲೆತ್ತಲು ಸಾಧ್ಯವಾಗದಂತಹ ಪರಿಸ್ಥಿತಿ ಇತ್ತು. ಪ್ರಾಕೃತಿಕ ವೈದ್ಯರ ಮನೆಗೆ ಬಂದಾಗಿನಿಂದ ಮೊದಲಿನಂತಾಗಿದ್ದೇನೆ ಎಂದರು.  

ಶ್ರೀ ಜಂಬುನಾಥೇಶ್ವರ ಪುರೋಹಿತರ ಕೇಂದ್ರದ ಎಸ್‍ಎಂ ಪ್ರಕಾಶ ಶಾಸ್ತ್ರಿ ಎಂಐ ಮಠ ಅವರು ಮಾತನಾಡಿ, ಪಾರಂಪರಿಕ ವೈದ್ಯಕೀಯ ಪದ್ಧತಿ ಇಂದು ತುಂಬಾ ಅಗತ್ಯವಿದೆ. ವಸಂತ್ ಕುಮಾರ್ ಅವರು ಈ ಪ್ರಾಕೃತಿಕ ವೈದ್ಯಕೀಯ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗಲಿ. ಇವರಿಂದ ಜನರ ಆರೋಗ್ಯದಲ್ಲಿ ಚೇತರಿಕೆ ಕಾಣಲಿ ಎಂದು ಹಾರೈಸಿದರು. 

ಜ್ಯೋತಿಷಿ ಶಿವಲಿಂಗಯ್ಯ ಶಾಸ್ತ್ರಿ ಮಠಂ ಇವರು ಮಾತನಾಡಿ, ಜನರಿಗೆ ಪಾರಂಪರಿಕ ವೈದ್ಯಕೀಯ ಪದ್ಧತಿ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಿದೆ. ಮಾನಸಿಕ ಹಾಗೂ ದೈಹಿಕ ರೋಗಗಳಿಗೆ ಪಾರಂಪರಿಕ ವೈದ್ಯಕೀಯ ಪದ್ಧತಿಯಡಿ ಚಿಕಿತ್ಸೆಗೆ ಒಳಗಾದರೆ ಆರೋಗ್ಯದಲ್ಲಿ ಯಾವುದೇ ದುಷ್ಪರಿಣಾಮಗಳು ಉಂಟಾಗುವುದಿಲ್ಲ ಎಂದರು. 

ಚೇಳ್ಳಗುರ್ಕಿಯ ಎರಿಸ್ವಾಮಿ, ಮಹಿಳೆಯರಾದ ಲೀಲಾವತಿ, ಆದೋನಿಯ ಪೂಜಾ ಇನ್ನಿತರರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಹರಿಜ್ಞಾನ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಎಂ.ಇ.ಜೋಷಿ, ವಸಂತ್ ಕುಮಾರ್ ಅವರ ಆರೋಗ್ಯ ಕ್ಷೇತ್ರದ ಸಾಮಾಜಿಕ ಸೇವೆಯ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು. 

ಪ್ರಾಕೃತಿಕ ವೈದ್ಯ ಮನೆತನದ ಪರಸಪ್ಪನವರಿಗೆ ಇದೇವೇಳೆ ಸನ್ಮಾನಿಸಿ ಗೌರವಿಸಲಾಯಿತು. ಗಂಗಾಧರ್ ಎಂ.ಇವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಎಂ.ವಸಂತ್ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. 

Post a Comment

0 Comments

Ad Code

Responsive Advertisement