“ಯೋಗ ಸಂಭ್ರಮ”ಕ್ಕೆ ಹಂಪಿ ಸಕಲ ಸಜ್ಜು
ಹೊಸಪೇಟೆ(ವಿಜಯನಗರ),ಜೂ.20: ಕೇಂದ್ರ ಆಯುಷ್ ಮಂತ್ರಾಲಯ, ಆಯುಷ್ ಇಲಾಖೆ, ಜಿಲ್ಲಾಡಳಿತ,ಜಿಪಂ,ಜಿಲ್ಲಾ ಆಯುಷ್ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಅಜಾದಿ ಕಾ ಅಮೃತ್ ಮಹೋತ್ಸವ ನಿಮಿತ್ತ ಮಾನವತೆಗಾಗಿ ಯೋಗ ಎಂಬ ಧ್ಯೇಯವ್ಯಾಕ್ಯದಡಿ ವಿಶ್ವಪಾರಂಪರಿಕ ತಾಣವಾಗಿರುವ ಹಂಪಿಯ ಎದುರುಬಸವಣ್ಣ ಮಂಟಪದಲ್ಲಿ ಜೂ.21ರಂದು ನಡೆಯಲಿರುವ 08ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಹಂಪಿ ಸಂಪೂರ್ಣ ಸಜ್ಜಾಗಿದೆ.
ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ನೇತೃತ್ವದಲ್ಲಿ ಸಕಲ ಸಿದ್ಧತೆಗಳನ್ನು ವಿಜಯನಗರ ಜಿಲ್ಲಾಡಳಿತ ಮಾಡಿಕೊಂಡಿದ್ದು, ಹಂಪಿ ಹಾಗೂ ವಿಜಯನಗರ(ಹೊಸಪೇಟೆ) ಸರ್ವಂ ಯೋಗಮಯಂ ಎನ್ನುವಂತಾಗಿದೆ.ಎಲ್ಲೆಡೆಯೋ ‘ಯೋಗ’ವೇ ಸದ್ದು ಮಾಡುತ್ತಿದೆ.
ಹಂಪಿಯಲ್ಲಿ ನಡೆಯಲಿರುವ ಯೋಗ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಣೆಗಾಗಿ ಯೂಟ್ಯೂಬ್ ಲಿಂಕ್ ಕೂಡ ಕ್ರಿಯೆಟ್ ಮಾಡಲಾಗಿದೆ. ಮೈಸೂರಿನಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಯೋಗಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿರುವ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸಲು ಹೈಸ್ಪೀಡ್ ಇಂಟರ್‍ನೆಟ್ ಸಂಪರ್ಕ ಕಲ್ಪಿಸಲಾಗಿದೆ. 16 ಎಲ್‍ಇಡಿ ಪರದೆಗಳನ್ನು ಅಳವಡಿಸಲಾಗುತ್ತಿದೆ. ಭುವನ್ ಆ್ಯಪ್‍ನಲ್ಲಿ ಕಾರ್ಯಕ್ರಮದ ಕ್ಷಣಕ್ಷಣದ ಫೋಟೊ ಹಾಗೂ ವಿಡಿಯೋಗಳನ್ನು ಅಪ್ಲೋಡ್ ಮಾಡಲು ನುರಿತ ಹಿರಿಯ ಫೋಟೊಗ್ರಾಫರ್‍ಗಳನ್ನು ಜಿಲ್ಲಾಡಳಿತ ನಿಯೋಜಿಸಿದೆ.
6 ಸಾವಿರಕ್ಕೂ ಹೆಚ್ಚು ಜನರು ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು,ವಿವಿಧೆಡೆಯಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು,ಯೋಗಪಟುಗಳು,ಯೋಗಾಸಕ್ತರು,ಸಾರ್ವಜನಿಕರು ಪಾಲ್ಗೊಳ್ಳಲು ಹೊಸಪೇಟೆ ಸೇರಿ ಪ್ರತಿ ತಾಲೂಕಿನಿಂದಲೂ ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ.
ಜೂ.21ರಂದು ಬೆಳಗ್ಗೆ 6ಕ್ಕೆ ನಡೆಯಲಿರುವ ಕಾರ್ಯಕ್ರಮಕ್ಕೆ ಶ್ವಾಸಯೋಗ ಪೀಠದ ಶ್ವಾಸಗುರುಗಳು ಹಾಗೂ ಹರಿಹರ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ವಚನಾಂದ ಸ್ವಾಮೀಜಿ ದಿವ್ಯಸಾನ್ನಿದ್ಯ ವಹಿಸಲಿದ್ದು, ಗಣಿ,ಕಲ್ಲಿದ್ದಲ್ಲು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಲ್ಹಾದ್ ಜೋಶಿ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.
ಮುಜರಾಯಿ,ಹಜ್ ಮತ್ತು ವಕ್ಫ್ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ಅವರು ಘನಉಪಸ್ಥಿತಿ ವಹಿಸಲಿದ್ದು, ಪ್ರವಾಸೋದ್ಯಮ,ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆನಂದಸಿಂಗ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಆಯುಷ್ ಸಚಿವರಾದ ಸರ್ಬಾನಂದ ಸೊನೊವಾಲ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಆಯುಷ್ ಸೇವೆಗಳ ಸಚಿವರಾದ ಡಾ.ಕೆ.ಸುಧಾಕರ್,ಸಂಸದರಾದ ವೈ.ದೇವೇಂದ್ರಪ್ಪ, ಜಿ.ಎಂ.ಸಿದ್ಧೇಶ್ವರ, ಡಾ.ಸೈಯದ್ ನಾಸೀರ್ ಹುಸೇನ್ ಅವರು ಆಗಮಿಸಲಿದ್ದಾರೆ.
ಶಾಸಕರಾದ ಪಿ.ಟಿ.ಪರಮೇಶ್ವರ ನಾಯಕ್, ಎನ್.ವೈ.ಗೋಪಾಲಕೃಷ್ಣ, ಭೀಮಾನಾಯ್ಕ ಎಲ್.ಬಿ.ಪಿ.,ಜಿ.ಕರುಣಾಕರರೆಡ್ಡಿ, ಎಸ್.ವಿ.ರಾಮಚಂದ್ರ,ಡಾ.ಚಂದ್ರಶೇಖರ ಪಾಟೀಲ್, ಶಶೀಲ್ ನಮೋಶಿ,ವೈ.ಎಂ.ಸತೀಶ, ಹಂಪಿ ಗ್ರಾಪಂ ಅಧ್ಯಕ್ಷೆ ಹಂಪಮ್ಮ,ಉಪಾಧ್ಯಕ್ಷೆ ಪದ್ದಮ್ಮ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ವಿಜಯನಗರ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಬಿಬಿಎಂಪಿ ವಿಶೇಷ ಆಯುಕ್ತ(ಹಣಕಾಸು)ರಾದ ತುಳಸಿ ಮದ್ದಿನೇನಿ, ಆಯುಷ್ ಇಲಾಖೆ ಆಯುಕ್ತರಾದ ರಾಮಚಂದ್ರ, ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್, ಜಿಪಂ ಸಿಇಒ ಬೋಯರ್ ಹರ್ಷಲ್ ನಾರಾಯಣರಾವ್, ಎಸ್ಪಿ ಡಾ.ಅರುಣ.ಕೆ., ಜಿಲ್ಲಾ ಆಯುಷ್ ಅಧಿಕಾರಿ ಡಾ.ಸುಜಾತಾ ಪಾಟೀಲ್ ಸೇರಿದಂತೆ ವಿಜಯನಗರ ಜಿಲ್ಲೆಯ ಸಮಸ್ತ ಯೋಗಸಂಸ್ಥೆಗಳು ಉಪಸ್ಥಿತರಿರಲಿದ್ದಾರೆ.

0 Comments