ಉದ್ಯಮಿಯಾಗಿ ಸ್ಥಳೀಯರಿಗೆ ಉದ್ಯೊಗ ನೀಡಿ: ಶಾಸಕ ಸೋಮಶೇಖರರೆಡ್ಡಿ
ಬಳ್ಳಾರಿ,ಜೂ.20:ಬಳ್ಳಾರಿ ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ವಿಫುಲ ಅವಕಾಶಗಳಿದ್ದು, ಕೈಗಾರಿಕಾ ನೀತಿಯಲ್ಲಿನ ಸಮಗ್ರ ಮಾಹಿತಿಯನ್ನು ತಿಳಿದುಕೊಂಡು ತಮಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇರುತ್ತದೆಯೋ ಆ ಕ್ಷೇತ್ರಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದಾಗುವುದರ ಮೂಲಕ ಉದ್ಯಮಿಯಾಗಿ ಸಾವಿರಾರರು ಜನರಿಗೆ ಉದ್ಯೋಗ ನೀಡುವ ಕೆಲಸ ಮಾಡಬೇಕು ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಅವರು ಸಲಹೆ ನೀಡಿದರು.
ಜಿಲ್ಲಾಡಳಿತ,ಜಿಪಂ, ಜಿಲ್ಲಾ ಕೈಗಾರಿಕಾ ಕೇಂದ್ರ ಹಗೂ ಟೆಕ್ಸಾಕ್ ಸಂಯುಕ್ತ ಆಶ್ರಯದಲ್ಲಿ ನಗರದ ಜಿಪಂ ನಜೀರ್ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕೈಗಾರಿಕಾ ನೀತಿ 2020-25ರ ಕುರಿತ ಜಾಗೃತಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹೊಸ ಕೈಗಾರಿಕಾ ನೀತಿಯಲ್ಲಿ ಏನಿದೆ ಮತ್ತು ಯಾವ ರೀತಿ ಕೈಗಾರಿಕೆಗಳನ್ನು ಸ್ಥಾಪಿಸಬೇಕು ಹಾಗೂ ಯಾವ ರೀತಿಯ ಸಹಾಯಧನ ಹಾಗೂ ಇನ್ನೀತರ ಸೌಲಭ್ಯಗಳು ಲಭಿಸುತ್ತೇವೆ ಎಂಬುದನ್ನು ಭಾವಿ ಕೈಗಾರಿಕೋದ್ಯಮಿಗಳು ಹಾಗೂ ಹಾಲಿ ಉದ್ದಿಮೆದಾರರು ಅರಿತುಕೊಂಡು ಕೈಗಾರಿಕೆಗಳನ್ನು ಸ್ಥಾಪಿಸಿ ಸ್ಥಳೀಯರಿಗೆ ಉದ್ಯೋಗ ನೀಡುವ ಕೆಲಸ ಮಾಡಬೇಕು ಎಂದರು.
ಬಳ್ಳಾರಿ ಜಿಲ್ಲೆಯು ಇಡೀ ದೇಶದಲ್ಲಿಯೇ ಕೈಗಾರಿಕೆಗಳಿಗೆ ಹೆಸರುವಾಸಿಯಾಗಿದೆ.ದಕ್ಷಿಣ ಏಷ್ಯಾದಲ್ಲಿಯೇ ದೊಡ್ಡದಾದ ಜಿಂದಾಲ್ ಕೈಗಾರಿಕೆ ನಮ್ಮಲ್ಲಿದೆ. ದೇಶ-ವಿದೇಶಗಳೆಡೆ ನಮ್ಮಲ್ಲಿನ ಜೀನ್ಸ್ ಉಡುಪುಗಳನ್ನು ರಫ್ತು ಮಾಡಲಾಗುತ್ತಿದೆ. ಆರ್ಸೆಲ್ ಮಿತ್ತಲ್ ಸೇರಿದಂತೆ ಇನ್ನೂ ಮೂರ್ನಾಲ್ಕು ಬೃಹತ್‍ಕೈಗಾರಿಕೆಗಳು ಜಿಲ್ಲೆಗೆ ಬರುತ್ತಿವೆ ಎಂದು ಅವರು ವಿವರಿಸಿದರು.
ಕೈಗಾರಿಕೆ ಸ್ಥಾಪಿಸುತ್ತೇವೆ ಅಂತೇಳಿ ಸಾಲ-ಸೌಲಭ್ಯ ತೆಗೆದುಕೊಂಡು ಅನ್ಯ ಉದ್ದೇಶಕ್ಕೆ ಬಳಸಿದ್ರೇ ಕೈಗಾರಿಕೆಗಳು ಸ್ಥಾಪನೆಯಾಗುವುದಿಲ್ಲ ಮತ್ತು ತಾವು ಮುಂದೆ ಬರುವುದಿಲ್ಲ ಎಂಬುದನ್ನು ಸೂಚ್ಯವಾಗಿ ಹೇಳಿದ ಶಾಸಕ ಸೋಮಶೇಖರರೆಡ್ಡಿ ಅವರು ಯಾವ ಉದ್ದೇಶಕ್ಕಾಗಿ ಸಾಲತೆಗೆದುಕೊಂಡಿದ್ದೀರೋ ಆ ಉದ್ದೇಶ ಈಡೇರಿಸಲು ಶ್ರಮವಹಿಸಿ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಕೈಗಾರಿಕೆಗಳು ಸ್ಥಾಪಿಸಲು ಮುಂದೆ ಬರುವವವರಿಗೆ ಮುದ್ರಾ,ಪಿಎಂಇಜಿಪಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದ್ದು,ಅವುಗಳ ಸದುಪಯೋಗ ಪಡೆದುಕೊಳ್ಳುವಂತೆ ಅವರು ಇದೇ ಸಂದರ್ಭದಲ್ಲಿ ಕರೆ ನೀಡಿದರು.
ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಮಾತನಾಡಿ,ಕೈಗಾರಿಕೆಗಳು ಬರುವುದರಿಂದ ಸಮಗ್ರ ಬೆಳವಣಿಗೆಯಾಗಲು ಸಾಧ್ಯ. ಕೌಶಲ್ಯಯುಕ್ತ ತರಬೇತಿ ಹೊಂದಿದ ಸಿಬ್ಬಂದಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಜಿಲ್ಲಾಡಳಿತ ಒದಗಿಸಲಿದ್ದು, ಭಾವಿ ಕೈಗಾರಿಕೋದ್ಯಮಿಗಳು ಹಾಗೂ ಹಾಲಿ ಉದ್ದಿಮೆದಾರರು ಈ ಜಿಲ್ಲೆಯಲ್ಲಿ ಹೂಡಿಕೆ ಮಾಡಿ ಕೈಗಾರಿಕೆಗಳನ್ನು ಸ್ಥಾಪಿಸುವುದರ ಮೂಲಕ ಸ್ಥಳೀಯರಿಗೆ ಉದ್ಯೋಗ ನೀಡುವ ಕೆಲಸ ಮಾಡಬೇಕು ಎಂದರು.
ಯಾವ ಕ್ಷೇತ್ರದಲ್ಲಿ ಹೂಡಿಕೆ ಮಾಡಿದರೇ ಅನುಕೂಲ ಎಂಬುದನ್ನು ತಿಳಿದುಕೊಂಡು ಮುಂದುವರಿಯುವುದು ಸೂಕ್ತ;ಈ ನಿಟ್ಟಿನಲ್ಲಿ ಕೈಗಾರಿಕಾ ನೀತಿ ಕುರಿತ ಜಾಗೃತಿ ಶಿಬಿರದಲ್ಲಿ ತಿಳಿಸಿಕೊಡಲಾಗುತ್ತಿದ್ದು,ಸದುಪಯೋಗ ಪಡೆದುಕೊಳ್ಳಿ ಎಂದರು.
*ಉದ್ದಿಮೆದಾರರಿಗೆ ಕೈಗಾರಿಕೆ ಸ್ಥಾಪನೆಯ ಬಗ್ಗೆ ಮಾಹಿತಿ ನೀಡಿಕೆ: ಈ ಜಾಗೃತಿ ಶಿಬಿರದಲ್ಲಿ ಜಿಲ್ಲೆಯ ಉದ್ದಿಮೆದಾರರಿಗೆ ಕೈಗಾರಿಕಾ ಸ್ಥಾಪನೆ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದರು.
ಈ ಸಮಾವೇಶದಲ್ಲಿ ಭಾವಿ ಕೈಗಾರಿಕೋದ್ಯಮಿಗಳು ಹಾಗೂ ಹಾಲಿ ಉದ್ದಿಮೆದಾರರು ಭಾಗವಹಿಸಿ ಜಿಲ್ಲೆಯಲ್ಲಿ ಕೈಗಾರಿಕಾ ಘಟಕಗಳ ಸ್ಥಾಪನೆ ಹಾಗೂ ಕೈಗಾರಿಕೆಗಳ ಸ್ಥಾಪನೆಗಾಗಿ ಇರುವ ಮೂಲ ಭೂತ ಸೌಕರ್ಯ ಹಾಗೂ ವಿವಿಧ ಆರ್ಥಿಕ ಉತ್ತೇಜನಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.
ಸದರಿ ಸಮಾವೇಶದಲ್ಲಿ ಟೆಕ್ಸಾಕ್, ವಿಟಿಪಿಸಿ, ಬಿಐಎಸ್, ಎಂಎಸ್‍ಎಇಡಿಐ, ಹಾಗೂ ವಿವಿಧ ಸರ್ಕಾರಿ ಸೌಮ್ಯದ ಅಧಿಕಾರಿಗಳು ಮಾಹಿತಿಯನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಎಸ್ಪಿ ಸೈದುಲು ಅಡಾವತ್, ಜಿಪಂ ಸಿಇಒ ಜೆ.ಲಿಂಗಮೂರ್ತಿ, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಸಿ.ಶ್ರೀನಿವಾಸ್ ಅವರು ಮಾತನಾಡಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸೋಮಶೇಖರ ಬಂಕದ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ನಾಗರಾಜ ಅವರು ನಿರೂಪಿಸಿದರು.
ಈ ಸಂದರ್ಭದಲ್ಲಿ ಭಾವಿ ಕೈಗಾರಿಕೋದ್ಯಮಿಗಳು ಹಾಗೂ ಹಾಲಿ ಉದ್ದಿಮೆದಾರರು,ಕೈಗಾರಿಕಾ ನೀತಿ ಕುರಿತು ವಿಷಯ ಮಂಡಿಸಲು ಆಗಮಿಸಿದ್ದ ಸಂಪನ್ಮೂಲ ವ್ಯಕ್ತಿಗಳು ಇದ್ದರು.
ಪ್ರಧಾನಮಂತ್ರಿಗಳ ಉದ್ಯೋಗ ಸೃಜನೆ ಅಡಿ ಸಾಲ ಪಡೆದು ಯಶಸ್ವಿಯಾಗಿ ಉದ್ಯಮವನ್ನು ಸ್ಥಾಪಿಸಿದ 12 ಜನ ನವ ಉದ್ಯಮಿಗಳಿಗೆ ಗೌರವಿಸಿ ಸತ್ಕರಿಸಲಾಯಿತು.
0 Comments