Ticker

6/recent/ticker-posts

Ad Code

Responsive Advertisement

ಮಲ್ಲೇಶ್ವರದಲ್ಲಿ ಶ್ರೀ ಗಂಗಮ್ಮ ದೇವಿಯ ಜಾತ್ರೆ ಹಾಗೂ ಕರಗ ಮಹೋತ್ಸವ

ಬೆಂಗಳೂರು : ನಗರದಲ್ಲಿ  ದೇವಸ್ಥಾನಗಳಿಗೆ ಪ್ರಸಿದ್ಧವಾಗಿರುವ ಮಲ್ಲೇಶ್ವರದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಓಂ ಶ್ರೀ  ಗಂಗಮ್ಮ ದೇವಿಯ ಜಾತ್ರೆ ಹಾಗೂ ಹಸೀ ಕರಗದ ಮಹೋತ್ಸವವು ಈ ಭಾಗದಲ್ಲಿ ಊರ ಹಬ್ಬವಾಗಿ ಸಂಭ್ರಮಾಚರಣೆಯಿಂದ ಆಚರಿಸಲಾಗುವ ಈ ಜಾತ್ರೆಗೆ ಸುಮಾರು ಒಂಬತ್ತು ದಶಕಗಳಿಗೂ ಮೀರಿದ ಇತಿಹಾಸವಿದೆ.


 1928 ರಲ್ಲಿ ಮೊಟ್ಟ ಮೊದಲ ಬಾರಿಗೆ ಆರಂಭಗೊಂಡು ಭಗವತಿಯ ಕೃಪೆಯಿಂದ ಸತತವಾಗಿ (ಕರೋನದ ಕಾರಣದಿಂದಾಗಿ ಕಳೆದೆರಡು ವರ್ಷ ಹೊರತುಪಡಿಸಿ) ಪ್ರತಿ ವರ್ಷ ಆಚರಿಸಿಕೊಂಡು ಬರಲಾಗುತ್ತಿರುವ  ಶ್ರೀ ಗಂಗಮ್ಮ ದೇವಿಯ ಜಾತ್ರೆ ಮತ್ತು ಹಸಿ ಕರಗದ ಮಹೋತ್ಸವವನ್ನು, ದೇವಿಯ  ಸಂಕಲ್ಪದಂತೆ ಈ ಬಾರಿಯೂ ಶ್ರದ್ಧಾ ಭಕ್ತಿ ಸಂಭ್ರಮಗಳಿಂದ ಆಚರಿಸಲು (ಸಾಂಭಾವ್ಯ ಸಾಂಕ್ರಾಮಿಕ ಕರೋನ 4 ನೇ ಅಲೆಯ ಮುನ್ನೆಚ್ಚರಿಕೆಯ ಬಗ್ಗೆ ಗಮನವಹಿಸಿ, ಮಾರ್ಗಸೂಚಿ ಅನುಸಾರ ಅಗತ್ಯ ಜಾಗರೂಕ ಅಂಶಗಳ ಪಾಲನೆಯ ಬಗ್ಗೆ ಬರುವ ಎಲ್ಲಾ ಭಕ್ತಾದಿಗಳಿಗೆ ತಿಳುವಳಿಕೆಯೊಂದಿಗೆ ಮನವಿ ಹಾಗೂ ಕಟ್ಟುನಿಟ್ಟಿನ ಸೂಚನೆಯೊಡನೆ) ನಿಶ್ಚಯಿಸಲಾಗಿದ್ದು, ಜಾತ್ರೆಯಲ್ಲಿ ಪಾಲ್ಗೊಳ್ಳಲು ನಮ್ಮ ದೇಶದಾದ್ಯಂತದಿಂದ ಮಾತ್ರವಲ್ಲದೆ, ದೂರದ ಅಮೇರಿಕಾದಿಂದಲೂ ಅಮ್ಮನವರ ಜಾತ್ರೆಯಲ್ಲಿ ಪಾಲ್ಗೊಳ್ಳಲು ಭಕ್ತರು ಬರುತ್ತಾರಿಲ್ಲಿಗೆ ಎಂಬ ವಿಷಯ, ಮಲ್ಲೇಶ್ವರದಲ್ಲಿ ನೆಲೆಸಿರುವ     ಶ್ರೀ ಗಂಗಮ್ಮ ದೇವಿ ತಾಯಿಯ ಮಹಿಮೆಯ ಬಗ್ಗೆ, ಆಕೆಯ ಭಕ್ತಾದಿಗಳಿಗಿರುವ ನಂಬಿಕೆಗೆ ಸಾಕ್ಷಿ. 

   ಇಂದು ಹದಿನಾರನೇ ತಾರೀಕು ಸೋಮವಾರ ಸಂಜೆ ಶ್ರೀ ಸರ್ಕಲ್ ಮಾರಮ್ಮ ದೇವಸ್ಥಾನದಿಂದ ಸಂಜೆ 5 ಗಂಟೆಗೆ ನಾಗರ ಜಡೆಯೊಂದಿಗೆ ಶಿವಕುಮಾರ್ ನಟರಾಜ್ ರವರೊಡಗೂಡಿ  'ಕ್ಷೀರ ಕುಂಭ'ಗಳನ್ಮು ಹೊತ್ತ ಭಕ್ತಾದಿಗಳು, ಮೆರವಣಿಗೆಯಲ್ಲಿ ಹೊರಟು ಕೋದಂಡರಾಮಪುರವನ್ನು ತಲುಪಿ ಸಂಜೆ 7ರ ಸುಮಾರಿಗೆ ಸ್ವಯಂ ಭಕ್ತರಿಂದಲೇ  ಶ್ರೀ ಗಂಗಮ್ಮ ದೇವಿಗೆ  ಕ್ಷೀರಾಭಿಷೇಕವನ್ನು (ಹಾಲಿನ ಅಭಿಷೇಕ) ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು  ಅಮ್ಮನವರಿಗೆ ಹಾಲಿನ ಅಭಿಷೇಕವನ್ನು ಮಾಡಿದ ಆನಂದವನ್ನು ಅವರುಗಳ ಮೊಗದಲ್ಲಿ ಕಾಣುವುದು ಒಂದು ಸುಯೋಗ ಎಂಬುದು ಈ ದೇವಿಯ ಭಕ್ತರಾದ ಆನಂದರವರ ಮಾತು. 

   ಮಂಗಳವಾರ 17 ನೇ ತಾರೀಕಿನಂದು ಬೆಳಿಗ್ಗೆ 6 ಗಂಟೆಗೆ, ಶ್ರೀ ಗಂಗಮ್ಮ ದೇವಿಗೆ ಮಾಂಗಲ್ಯ ಸೂತ್ರಧಾರಣೆ ಹಾಗೂ ಮಹಾಮಂಗಳಾರತಿ. ಮಧ್ಯಾಹ್ನ 12 ಕ್ಕೆ ಕುಂಭ ನೈವೇದ್ಯ ಹಾಗೂ ಮಹಾಮಂಗಳಾರತಿ. ಸಂಜೆ 7 ಗಂಟೆಗೆ ಕರಗಧಾರಿ ಕಿರಣ್ ಹಸೀ ಹೂವಿನ ಕರಗವನ್ನು ಹೊತ್ತು ದೇವಸ್ಥಾನದಿಂದ ಹೊರಟು ಕೋದಂಡರಾಮಪುರ, ವೈಯಾಲಿಕಾವಲ್ ಹಾಗೂ ಮಲ್ಲೇಶ್ವರಂ ರಸ್ತೆಗಳ ಮೂಲಕ ಸಂಚರಿಸಿ ದೇವಸ್ಥಾನವನ್ನು ಬೆಳಗಿನ ಜಾವ 2 ಗಂಟೆಯ ಸುಮಾರಿಗೆ ತಲುಪುತ್ತದೆ.

 ಬುಧವಾರ 18 ನೇ ತಾರೀಕಿನಂದು ಬೆಳಿಗ್ಗೆ ಒಂಬತ್ತುವರೆಗೆ ಸುಮಂಗಲಿ ಪೂಜೆ. ಮಧ್ಯಾಹ್ನ ಹನ್ನೆರಡಕ್ಕೆ ಶ್ರೀ ಸೋಲೈ ಮಣಿ ಹಾಗೂ ಕುಟುಂಬದವರ ವತಿಯಿಂದ  ಕೋದಂಡರಾಮಪುರ ಪ್ರೌಢಶಾಲೆಯ ಆಟದ ಮೈದಾನದಲ್ಲಿ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿರುತ್ತದೆ. ಸಂಜೆ 5.30 ರ ವೇಳೆಗೆ ಶ್ರೀ ದೇವಿಯ ರಥೋತ್ಸವವು ಕೋದಂಡರಾಮಪುರದ ಮುಖ್ಯರಸ್ತೆಯಿಂದ ಹೊರಟು  ವೈಯಾಲಿಕಾವಲ್, ಗುಟ್ಟಳ್ಳಿ ಮುಖ್ಯರಸ್ತೆ, ಮಲ್ಲೇಶ್ವರಂ 8 ನೇ ಅಡ್ಡರಸ್ತೆ, ಸಂಪಿಗೆ ಮುಖ್ಯರಸ್ತೆ, ಕಾಡುಮಲ್ಲೇಶ್ವರ ದೇವಸ್ಥಾನದ ಮಾರ್ಗವಾಗಿ ಬೆಳಗಿನ ಜಾವ 4 ಗಂಟೆ ಸುಮಾರಿಗೆ ದೇವಸ್ಥಾನವನ್ನು ತಲುಪುವುದು. 

   ಬುಧವಾರ ಸಂಜೆ 7 ಗಂಟೆ ಸುಮಾರಿಗೆ ಕರಗಧಾರಿ   ಸುಧಾಕರ್ ನಟರಾಜ್   ಹೂವಿನ ಪೇಟ ಕರಗವನ್ನು ಹೊತ್ತು ದೇವಸ್ಥಾನದಿಂದ ಹೊರಟು ಸಂಪಿಗೆ ಮುಖ್ಯರಸ್ತೆ, ಮಲ್ಲೇಶ್ವರಂ, ವೈಯಾಲಿಕಾವಲ್, ಗುಟ್ಟಹಳ್ಳಿ ರಸ್ತೆಗಳಲ್ಲಿ ಕರಗವು ಸಂಚರಿಸಿ ಬೆಳಿಗ್ಗೆ ಸುಮಾರು 4 ಗಂಟೆಗೆ ಮರಳಿ ಸನ್ನಿಧಾನಕ್ಕೆ ತಲುಪುವುದು ಎಂದು ಆಡಳಿತ ಮಂಡಳಿಯವರು ಈ ಜಾತ್ರಾ ಮಹೋತ್ಸವದ ವಿವರವನ್ನು ನಮ್ಮ ಬಾತ್ಮಿದಾರರಿಗೆ ನೀಡಿರುತ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ಎಲ್ಲರೂ ಅಮ್ಮನವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಭಕ್ತಾದಿಗಳಿಂದ ಸಾರ್ವಜನಿಕರಲ್ಲಿ ಈ ಮೂಲಕವೂ ವಿಜ್ಞಾಪನೆ ಮಾಡಿ ಕೊಳ್ಳಲಾಗಿದೆ.

Post a Comment

0 Comments

Ad Code

Responsive Advertisement