ಮಧುಗಿರಿ : ಗುಬ್ಬಿ ತಾಲೂಕಿನ ಪೆದ್ದನಹಳ್ಳಿಯಲ್ಲಿ ದಲಿತ ಯುವಕರ ಹತ್ಯೆ ನಡೆಸಿರುವ ಘಟನೆಯನ್ನು ಖಂಡಿಸಿ ವಿವಿಧ ದಲಿತಪರ ಸಂಘಟನೆಗಳಿಂದ ಉಪವಿಭಾಗಾಧಿಕಾರಿಗಳಿಗೆ ಮನವಿ ನೀಡಲಾಯಿತು.
ಪಟ್ಟಣದ ಉಪವಿಭಾಗ ಕಛೇರಿಯ ಮುಂದೆ ಅದಿಜನ್ ಹಾಗೂ ಆದಿಜಾಂಭವ ಮಹಾಸಭಾ, ದಲಿತ ಒಕ್ಕೂಟ, ಮಾದಿಗ ದಂಡೋರ, ವಾಲ್ಮೀಕಿ ಸಂಘಟನೆಗಳಿಂದ ಪ್ರತಿಭಟನೆ ನಡೆಸಿ ಪರಿಶಿಷ್ಟ ಜಾತಿಯ ಪಿ.ಎಂ.ಗಿರೀಶ್ ಹಾಗೂ ಪರಿಶಿಷ್ಟ ಪಂಗಡದ ಗಿರೀಶ್ ಎಂಬ ಇಬ್ಬರು ದಲಿತರನ್ನು ಅಮಾನುಷವಾಗಿ ಕೊಲೆ ಮಾಡಿರುವುದನ್ನು ಖಂಡಿಸಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಆದಿಜನ್ ಪಂಚಾಯ್ತಿಯ ಕೋಟೆಕಲ್ಲಪ್ಪ ಮಾತನಾಡಿ ನಮ್ಮ ಆಂದೋಲನದ ತಂಡವು ಆ ಗ್ರಾಮಕ್ಕೆ ಭೇಟಿ ನೀಡಿ, ಮೃತರ ಕುಟುಂಬದವರನ್ನು ವಿಚಾರ ಮಾಡಿ ಮಾಹಿತಿ ಪಡೆದಿದ್ದು, ಈ ಕೃತ್ಯಕ್ಕೆ ಸಂಬಂದಿಸಿದಂತೆ ಮೃತರ ಕುಟುಂಬದವರು ಭಯದ ವಾತವಾರಣದಲ್ಲಿ ಬದುಕುತ್ತಿದ್ದಾರೆ. ಇವರಿಗೆ ಗ್ರಾಮದ ಜನರು ಸ್ಪಂದಿಸುತ್ತಿಲ್ಲ. ಹಾಗಾಗಿ ಈ ಕುಟುಂಬಕ್ಕೆ ಕಾನೂನು ರಕ್ಷಣೆ ತುಂಬ ಆಗತ್ಯವಾಗಿದೆ ಎಂದರು.
ಆದಿಜಾಂಭವ ಮಹಾಸಭಾ ತಾಲೂಕು ಅಧ್ಯಕ್ಷ ಡಾ.ಮಹರಾಜು ಮಾತನಾಡಿ ಕೊಲೆಯಾದ ಮೃತರ ಕುಟುಂಬಕ್ಕೆ ಸರ್ಕಾರವು ಈ ಕೂಡಲೇ ತಲಾ ಐದು ಎಕರೆ ಜಮೀನು ನೀಡುವ ಜೊತೆಗೆ ಅ ಕುಟುಂಬಗಳ ನಿರ್ವಹಣೆಗಾಗಿ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಿ ಸಮಾಜದಲ್ಲಿ ಎಲ್ಲರಂತೆ ಬದುಕು ಕಟ್ಟಿಕೊಳ್ಳುವ ಅವಕಾಶ ನೀಡಬೇಕು ಎಂದರು.
ದಲಿತ ಒಕ್ಕೂಟದ ಅಧ್ಯಕ್ಷ ಡಾ.ಸಂಜೀವ್ ಮೂರ್ತಿ ಮಾತನಾಡಿ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳು ಕಳೆದರು ಎಸ್.ಸಿ ಎಸ್.ಟಿ. ಜನಾಂಗದವರಿಗೆ ಮುಕ್ತವಾಗಿ ಇತರ ಜಾತಿಗಳವರ ಜೊತೆ ಬೆರೆತು ಬಾಳುವ ಅವಕಾಶಗಳನ್ನು ಸರ್ಕಾರಗಳು ಜನಪ್ರತಿನಿಧಿಗಳು ಮಾಡುತ್ತಿಲ್ಲ ಅನ್ಯಕೋಮಿನ ಜನರು ಕಾನೂನು ಕೈಗೆತ್ತಿಕೊಂಡು ಇಂತಹ ಕೃತ್ಯಗಳು ನಡೆಸುತ್ತಿದ್ದಾರೆಂದರೆ ನಮ್ಮ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎನ್ನಬಹುದು ನೊಂದ ಕುಟುಂಬಕ್ಕೆ ಮನೆ ನಿರ್ಮಾಣ ಮಾಡಿಕೊಡಬೇಕು ಅವರ ಮಕ್ಕಳು ಉನ್ನತ ಶಿಕ್ಷಣವನ್ನು ಪಡೆಯುವಂತೆ ಮಾಡಿ ಅವರಲ್ಲಿ ಅತ್ಮಸ್ಥೈರ್ಯ ತುಂಬಬೇಕು ಎಂದರು.
ಮಾದಿಗ ದಂಡೋರ ರಾಜ್ಯಾ ಉಪಾಧ್ಯಕ್ಷ ತೊಂಡೋಟಿ ರಾಮಾಂಜಿನಪ್ಪ ಮಾತನಾಡಿ ಇಬ್ಬರು ದಲಿತ ಯುವಕರನ್ನು ದೌರ್ಜನ್ಯದಿಂದ ಕೊಲೆ ಮಾಡಿರುವುದನ್ನು ನಮ್ಮ ಸಂಘಟನೆಗಳು ಉಗ್ರವಾಗಿ ಖಂಡಿಸುತ್ತವೆ ದಲಿತ ಸಮುದಾಯದ ಮೇಲೆ ಶೋಷಣೆಯಾಗುತ್ತಿದೆ ಸಂವಿಧಾನದಲ್ಲಿ ಹೇಳಿರುವ ಭದ್ರತೆ ನಮ್ಮ ಸಮುದಾಯಗಳಿಗೆ ಸರಿಯಾಗಿ ನೀಡುತ್ತಿಲ್ಲ ದೌರ್ಜನ್ಯ ಕಾಯ್ದೆ-1989 ಹೀಗಾಗಲೇ ಇದೆ ಅದಕ್ಕೆ ತಕ್ಕಂತೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು, ಮೃತರ ಕುಟಂಬಕ್ಕೆ ಸರ್ಕಾರದ ವತಿಯಿಂದ 25 ಲಕ್ಷ ರೂಗಳನ್ನು ಪರಿಹಾರವಾಗಿ ಒದಗಿಸಿಕೊಡಬೇಕು, ಮಕ್ಕಳ ಉನ್ನತ ಶಿಕ್ಷಣಕ್ಕೆ ಕ್ರಮವಹಿಸಬೇಕು ಹಾಗೂ ನೊಂದ ದಲಿತರ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಿಕೂಡಬೇಕು ಎಂದರು.
ಮನವಿ ಸ್ವೀಕರಿಸಿ ಮಾತನಾಡಿದ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ ನಿಮ್ಮ ಸಂಘಟನೆಗಳ ಎಲ್ಲಾ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ಪ್ರತಿಭಟನೆಯಲ್ಲಿ ವಕೀಲ ಮಹೇಶ್, ವಾಲ್ಮೀಕಿ ಸಂಘದ ಗರಣಿ ವೆಂಕಟರವಣಪ್ಪ, ರಂಗನಾಥ್, ಬ್ರಹ್ಮಸಮುದ್ರ ಸತ್ಯನಾರಾಯಣ,ಯರ್ರಗುಂಟೆ ಅಶ್ವಥ್, ತೊಂಡೋಟಿ ಮಾಲಿಂಗ,ಬೆಂಕಿಪುರ ಸಿದ್ದಪ್ಪ, ತೋಟಮಡು ತಿಮ್ಮಯ್ಯ,ಬೆಂಕಿ ಸಿದ್ದಪ್ಪ, ಎಂ.ಡಿ.ನಾಗರಾಜ್,ರೆಡ್ಡಿಹಳ್ಳಿ ನಾಗೇಂದ್ರ, ಕಾಂತರಾಜ್, ನರಸಿಂಹಯ್ಯ, ನುಡುಪಣ್ಣ, ಹನುಮಂತರಾಯಪ್ಪ ಹಾಗೂ ಸಂಘಟನೆಯ ಮುಖಂಡರು ಭಾಗವಹಿಸಿದ್ದರು..
ವರದಿ:ನಾಗೇಶ್ ಜೀವಾ ಮಧುಗಿರಿ.

0 Comments