Ticker

6/recent/ticker-posts

Ad Code

Responsive Advertisement

ಮೊದಲಕಲ್ಲು (ಆದಿಕಲ್ಲು) ಶೇಷದಾಸರು (ಹರಿಪಾದ ಸೇರಿದ ದಿನ ವೈಶಾಖ ಶುದ್ಧ ಅಷ್ಟಮಿ , (ಕಾಲವು ಕ್ರಿ.ಶ. 1806-1885)

ಮೊದಲಕಲ್ಲು ಗದ್ವಾಲ ಸಂಸ್ಥಾನದಲ್ಲಿ ಒಂದು ಪವಿತ್ರ ಕ್ಷೇತ್ರವೆನಿಸಿದೆ. ಊರಿನ ಎರಡೂ ಬದಿಗಳಲ್ಲಿ ತುಂಗಭದ್ರಾ ಮತ್ತು ಕೃಷ್ಣಾ ನದಿಗಳು ಹರಿಯುತ್ತಿದ್ದು ಸ್ವಯಂವ್ಯಕ್ತ ಶ್ರೀನಿವಾಸನ ಕ್ಷೇತ್ರವಾಗಿದೆ. ಪಕ್ಕದಲ್ಲಿರುವ ದೊಡ್ಡ ಬಂಡೆಯಲ್ಲಿ ರಂಗನಾಥ, ಶ್ರೀನಿವಾಸ, ಮಹಾಲಕ್ಷ್ಮೀ ,ವರಾಹ ಮತ್ತು ನರಹರಿಯ ಮೂರ್ತಿಗಳು ಮೂಡಿವೆ. ಪಕ್ಕದಲ್ಲಿ ಕೊಳವಿದ್ದು ಅದನ್ನು ಪುಷ್ಕರಣಿ ಎಂದು ಕರೆಯುತ್ತಾರೆ. 


ಗದ್ವಾಲಕ್ಕೆ ಸ್ವಲ್ಪದೂರದಲ್ಲಿ ದರೂರ ಎಂಬ ಗ್ರಾಮದಲ್ಲಿ ಶೇಷಪ್ಪನೆಂಬುವನು ಕುಲಕರ್ಣಿ ಮನೆತನದಲ್ಲಿ ಕ್ರಿ.ಶ. 1806ರಲ್ಲಿ ಜನ್ಮ ತಾಳಿದನು. ಭಾರದ್ವಾಜ ಗೋತ್ರದವನಾದ ಇವನನ್ನು ಜನ ಬಹು ಆದರದಿಂದ ನೋಡುತ್ತಿದ್ದರು. ಗದ್ವಾಲ ಸಂಸ್ಥಾನದ ರಾಜ  ದರ್ಬಾರಕ್ಕೆ ಬರುತ್ತಿದ್ದ ಆನಂದದಾಸರು ಮತ್ತು ಯಳಮೇಲಿ ಹಯಗ್ರೀವ ಆಚಾರ್ಯರು ಉದ್ದಾಮ ಪಂಡಿತರಿದ್ದು ಶೇಷಪ್ಪನ ಅತಿಥಿಗಳಾಗಿ ಆದರಿಸಲ್ಪಡುತ್ತಿದ್ದರು. ಸಂಸ್ಥಾನದ ರಾಜನು ಕಠಿಣ ಮನಸ್ಸಿನವನಾಗಿದ್ದು ಅಧಿಕಾರಿಗಳನ್ನು ಸಂಶಯ ದೃಷ್ಟಿಯಿಂದ ನೋಡುತ್ತಿದ್ದ. ಶೇಷಪ್ಪನು ಅವನ ಸಂಸ್ಥಾನದಲ್ಲಿ ಕುಲಕರ್ಣಿ ವೃತ್ತಿ ಮಾಡುತ್ತಿದ್ದು  ನಂಬಿಕೆಯ  ವ್ಯಕ್ತಿಯಾಗಿದ್ದು ಎಲ್ಲರಿಗೂ ಬೇಕಾದವನಾಗಿದ್ದ. ದುರಹಂಕಾರಿಯಾದ ಅರಸನು ಇವನ ಮೇಲೆ ಸುಳ್ಳು ಆರೋಪ ಹೊರಿಸಿ ಸೇವಕರಿಂದ ದಂಡಿಸಿ ತುಂಬಾ ಅಪಮಾನ ಮಾಡಿದ. ಅಭಿಮಾನಿಯಾದ ಶೇಷಪ್ಪನು ತನ್ನ ವೃತ್ತಿಯನ್ನು ತ್ಯಜಿಸಿದನು. ಇಂತಹ ಉತ್ತಮ ಮತ್ತು ನಂಬುಗೆಯ ಶೇಷಪ್ಪನಿಗೆ ಆದ ಆವಮಾನ ನೋಡಿ ಜನ ಮಮ್ಮಲ ಮರುಗಿದರು. ಶೇಷಪ್ಪನು ತನ್ನ ಊರಾದ ದರೂರಿಗೆ ಹೋಗದೇ ಚಿಂತಲರೇವಲಿಯಲ್ಲಿ ಶ್ರೀವ್ಯಾಸರಾಯರಿಂದ ಪ್ರತಿಷ್ಠಾಪಿಸಿದ ಹನುಮನ ಸೇವೆಯಲ್ಲಿ ನಿರತನಾದ.

ಮನೆಯ ಜನಕ್ಕೆ ನಾನು ಬರುವುದಿಲ್ಲ. ಲೌಕಿಕವೃತ್ತಿಗೆ ತಿರುಗಿ ಬರಲಾರೆ ಎಂದು ಖಡಾಖಂಡಿತವಾಗಿ ಹೇಳಿದ. ನರನ ಸೇವೆ ಮಾಡೆ. ಹರಿಯ ಸೇವೆಯಲ್ಲಿ ನಿರತನಾಗಿರುವೆನು ಎಂದು ದೃಢನಿರ್ಧಾರದಿಂದ ಸತಿಸುತ ಇವರನ್ನು ತಿರುಗಿ  ಕಳಿಸಿದ. 

ಶೇಷಪ್ಪನು  ಕೃಷ್ಣೆಯಲ್ಲಿ ಸ್ನಾನ ಮಾಡಿ ಕೃಷ್ಠೆಯ  ನೀರಿನಿಂದ  ದೇವರಿಗೆ ಅಭಿಷೇಕ ಮಾಡಿ ಒಂಟಿ ಕಾಲಲ್ಲಿ ನಿಂತು ಆಂಜನೇಯನ ಮಂತ್ರ ಪಠಿಸುತ್ತ ಬೇವಿನ ಎಲೆಗಳನ್ನು ಅರೆದು ಗುಳಿಗೆ ಮಾಡಿ ಭುಂಜಿಸುತ್ತಿದ್ದನು.. ಮತ್ತೆ ಸಾಯಂಕಾಲ ನದಿ ಸ್ನಾನ ಹನುಮನ ಸೇವೆ ಇವನ ನಿತ್ಯ ದಿನಚರಿ ಆದವು. ದೇವರ ದರ್ಶನ ಮತ್ತು ಅನುಗ್ರಹ ಬೇಗನೇ ಆಗದೇ ಇದ್ದಾಗ ಹಾವಿನ ಹುತ್ತದಲ್ಲಿ ಕೈಹಾಕಿ ಕಡಿಸಿಕೊಂಡು ಸಾಯಬೇಕೆಂದಾಗ  ಹಾವು ಇವನಿಗೆ  ಏನೂ ಮಾಡದೇ ಹೆಡೆ ತೋರಿಸಿ ಹೊರಟು ಹೋಯಿತು. ಒಂದು ದಿನ ಸ್ವಪ್ನದಲ್ಲಿ ವಿಜಯದಾಸರು ಅಭಯವನ್ನಿತ್ತು ನಿನ್ನ ಮನೋಸಿಧ್ಧಿಯಾಗುವದು. ಚಿಂತೆ ಬೇಡ ಎಂದು ಹಲವು ಮಾರ್ಗ ಮತ್ತು ಉಪಾಯಗಳನ್ನು ಹೇಳಿದರು. ವಿಜಯದಾಸರು ತಿಳಿಸಿದಂತೆ ತಿಮ್ಮಪ್ಪ ಎಂಬ ಗೃಹಸ್ಥನು ಇವರಿಗೆ ಅಡಿಗೆ ಮಾಡಿ ಉಣ ಬಡಿಸಿ ಶೇಷಪ್ಪನ ಸೇವೆಯಲ್ಲಿ ಇರತೊಡಗಿದ. ಅಖಂಡ ಎರಡು ವರ್ಷಗಳ ಮಂತ್ರೋಪಾಸನೆಯಿಂದ  ಶೇಷಪ್ಪನಿಗೆ ಆಂಜನೇಯನ ಅನುಗೃಹದಿಂದ ಶ್ರೀರಾಮದೇವರ ದರ್ಶನ ಭಾಗ್ಯ ಉಂಟಾಯಿತು . ಇವನ ಕೀರ್ತಿ  ಎಲ್ಲೆಡೆ ಹರಡಿ ಈತನನ್ನು ಜನರು ಗೌರವಿತೊಡಗಿದರು. ಈತನ ವಾಕ್ ಸಿಧ್ಧಿಯು ಚುರುಕುಗೊಂಡು ಎಲ್ಲ ಮಾತುಗಳು ಸತ್ಯವಾಗತೊಡಗಿದವು.

ಮುಂದೆ ಚಿಕ್ಕಲಪರವಿಯಲ್ಲಿ ಶ್ರೀಅಶ್ವತ್ಥನರಸಿಂಹದೇವರ ಸೇವೆ ಮಾಡಿ ಚಿಪ್ಪಗಿರಿಗೆ ಬಂದರು. ವಿಜಯದಾಸರು ಇವರಿಗೆ ಸ್ವಪ್ನದಲ್ಲಿ ದರ್ಶನ ಕೊಟ್ಟು “ಗುರುವಿಠಲ” ಎಂಬ ಅಂಕಿತನಾಮ ಕರುಣಿಸಿದರು ಮತ್ತು ನವವೃಂದಾವನದಲ್ಲಿ ನರಹರಿತೀರ್ಥರ ಮತ್ತು ವ್ಯಾಸರಾಯರ ಸೇವೆ ಮಾಡು ನೀನು ಉದ್ಧಾರವಾಗುವಿಯೆಂದು ತಿಳಿಸಿದರು. ಯಂತ್ರೋದ್ಧಾರಕ ಪ್ರಾಣದೇವರ ಸೇವೆ ಮಾಡಿ “ನಂಬಿದೆ ನಿನ್ನ  ಮುಖ್ಯಪ್ರಾಣ “ ಎಂಬ ಮೊಟ್ಟಮೊದಲಿನ ಹಾಡನ್ನು ರಚಿಸಿ ಅರ್ಚಿಸಿದರು. ಅಲ್ಲಿ ಪ್ರಾಣದೇವರ ದರ್ಶನಲಾಭವು ಅವರಿಗಾಯಿತು.   ಈಗಾಗಲೇ ಅವರ ಹೆಸರು ಸಾಕಷ್ಟು  ಪ್ರಖ್ಯಾತವಾಗಿತ್ತು. 

ಚಿಂತಲರೇವಲಕ್ಕೆ ಬಂದ ಕೂಡಲೇ ಅವರ ದರ್ಶನಕ್ಕೆ ಜನರು ಮುಗಿಬಿದ್ದರು. ದೊಡ್ಡದೊಡ್ಡ ಜನರಿಂದ ಮಾನ್ಯತೆ ಪಡೆಯತೊಡಗಿದರು.

ಹಿಂದೆ ವೈಕುಂಠದಾಸರಾಗಿದ್ದವರೇ ನಂತರ ಪಂಗನಾಮ ತಿಮ್ಮಯ್ಯನಾಗಿದ್ದು ಈಗ ಶೇಷದಾಸರಾಗಿ ಅಪರೋಕ್ಷ ಜ್ಞಾನ ಪಡೆಯಲು ಸಾಧನೆ ಮಾಡುತ್ತಿರುವರು. ಇವೆಲ್ಲವುಗಳಿಂದ ವಾಕ್ ಸಿಧ್ಧಿ ಮತ್ತು ಅನೇಕ ಸಿದ್ಧಿಗಳು ಉಂಟಾದವು. ಇದರಿಂದ ಇವರಿಗೆ ಧನ, ಕನಕ, ವಸ್ತ್ರ ಮುಂತಾದ ವಸ್ತು ವಡವೆಗಳು ದಾನವಾಗಿ ಬರುತ್ತಿದ್ದವು. ವಿಷಯ ಸುಖಕ್ಕೆ ಇವೆಲ್ಲ ಸಾಧನೆಗಳು ಎಂದು ಅರಿತಿದ್ದ ಅವರು ಚಿಂತಿತರಾಗಿ ಮೊದಲಕಲ್ಲಿನಲ್ಲಿ ಪ್ರಾಣದೇವರ ಅನುಜ್ಞೆಯಂತೆ ತಪ ಮಾಡಿ ಇಷ್ಟಾರ್ಥ ಪಡೆಯಲು ಮೊದಲಕಲ್ಲಿಗೆ ಬಂದರು. ಹೊರಡುವ ಮುಂಚೆ ಒಂದು ಸುಳಾದಿ ರಚಿಸಿ ಭಜಿಸಿದರು. “ಘನದಯಾನಿಧಿಯಾದ ಪವನರಾಯನೇ ನಮೋ , ಪುನರಪಿ ನಮೋ ನಿನ್ನ ಪಾದ ಸರಸೀರುಹಕ್ಕೆ”

ಮೊದಲಕಲ್ಲಿನ ಶಿವದೇವಾಲಯದಲ್ಲಿ ದಾಸರು ಮಹಾದೇವನನ್ನು ಕುರಿತು ಉಗ್ರ ತಪಸ್ಸು ಮಾಡಿ ಮಹಾದೇವನನ್ನು ಒಲಿಸಿಕೊಂಡು ಅನುಗ್ರಹ ಪಡೆದು ನಂತರ ಹರಿವಾಯುಗಳ ನಿರಂತರ ಧ್ಯಾನದಿಂದ ಹರಿ ಮತ್ತು ಗುರುಗಳ ಅನುಗ್ರಹ ಪಡೆದರು. ದಾಸರ ಕೀರ್ತಿ ದೇಶ, ದೇಶಗಳಲ್ಲಿ ಪಸರಿತೊಡಗಿತು. ಇವರ ಆಶೀರ್ವಾದದಿಂದ ಸಜ್ಜನರ, ದು:ಖ, ಚಿಂತೆ ಪರಿಹಾರವಾಗತೊಡಗಿದವು. ದಾಸರು 43 ಸುಳಾದಿ, 13 ಉಗಾಭೋಗ, 4 ಕೀರ್ತನೆಗಳನ್ನು ರಚಿಸಿದರು. ಇವರ ಸುಳಾದಿಗಳು ಬಹು ಮಹತ್ವ ಪಡೆದಿವೆ. 

ಶೇಷದಾಸರು ಅನೇಕ ಪವಾಡಗಳನ್ನು ತೋರಿಸಿದ್ದಾರೆ. ಅವುಗಳಲ್ಲಿ ಪ್ರಮುಖವು ..

1 ಬ್ರಹ್ಮರಾಕ್ಷಸನ ಬಾಧೆಗಳಿಂದ ಪರಿಹಾರ ಸೂಚಿಸಿ , ಬಾಧೆ ಪರಿಹಾರ ಮಾಡಿದ್ದು

2 ಕಾಶಿಯಾತ್ರೆ ಮಾಡುವ ಒಂದು ಕುಟುಂಬಕ್ಕೆ ಮೊದಲಕಲ್ಲಿನಲ್ಲಿಯೇ ಗಂಗೆ ತರಿಸಿ ಸ್ನಾನ  ಮಾಡಿಸಿದ್ದು. 

ತಾವು ಜನ್ಮ ತಳೆದ ದರೂರಿನಲ್ಲಿ ಸಜ್ಜನರ ಸಹಕಾರದಿಂದ ಪಾರ್ಥಸಾರಥಿಯನ್ನು ಪ್ರತಿಷ್ಠಾಪಿಸಿದರು. ಜನರ ಅನುಕೂಲಕ್ಕಾಗಿ ವಾಸದ ಮನೆಗಳು , ಮತ್ತಿತರ ವ್ಯವಸ್ಥೆ ಮಾಡಿದರು. ಅವರ  ವಾಸಕ್ಕೆ ಒಂದು ಗೃಹ ನಿರ್ಮಾಣವಾಯಿತು. ಮೊಮ್ಮಗನಿಗೆ ಅಲ್ಲಿಯೇ ಮುಂಜಿವೆ ಮಾಡಿಸಿ ಗದ್ವಾಲಿನಲ್ಲಿ ಮೂರು ದಿನಗಳಿದ್ದು  ಮತ್ತೆ ಮೊದಲುಕಲ್ಲು ಸೇರಿದರು. ಮುಂದೆ ವೈಶಾಖ ಶುಧ್ಧ ಪಂಚಮಿಯಂದು ದಾಸರಿಗೆ ದೇಹಾಲಸ್ಯವಾಯಿತು. ತಮ್ಮದು  ಇನ್ನು ಮೂರೇ ದಿನಗಳೆಂದು ಅರಿತು ತಮ್ಮ ಮಕ್ಕಳಾದ ಭೀಮದಾಸರು, ಗೋವಿಂದದಾಸರು ಇವರಿಗೆ  ಅಂಕಿತ ಅನುಗ್ರಹಿಸಿ ಉಪದೇಶ ಮಾಡಿದರು. ಶಾಲಿವಾಹನ ಶಕೆ 1807 ಪಾರ್ಥಿವ ಸಂವತ್ಸರದ ವೈಶಾಖ ಶುದ್ಧ ಅಷ್ಟಮಿಯ ದಿನ ಎಂಭತ್ತು ವರ್ಷದ ದಾಸರು  ತಮ್ಮ ಶರೀರ ತ್ಯಜಿಸಿ ಹರಿಪಾದ ಸೇರಿದರು.

ವೈಶಾಖ ಶುದ್ಧ ಅಷ್ಟಮಿಯಂದು ಮೊದಲಕಲ್ಲಿನಲ್ಲಿ ಇವರ ಆರಾಧನೆಯು ವಿಜ್ರಂಭಣೆಯಿಂದ ನಡೆಯುತ್ತದೆ. ಅರ್ಜುನ ಆಂಶದವರಾದ ಇವರು , ರವಿವಾರ ಸುಳಾದಿ, ಸೋಮವಾರ ಸುಳಾದಿ ಎಂಬ ಉತ್ತಮವಾದ ಸುಳಾದಿಗಳನ್ನು ರಚಿಸಿದ್ದಾರೆ. ಪಂಚಪ್ರಮೇಯ ಎಂಬ ಕೃತಿಯನ್ನು ರಚಿಸಿದ್ದಾರೆ. 

ಒಟ್ಟಾರೆ ದಾಸಸಾಹಿತ್ಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಹರಿದಾಸರ ಪಂಕ್ತಿಯಲ್ಲಿ ಶೋಭಿಸುತ್ತಿದ್ದಾರೆ.  

ಶ್ರೀಮಧ್ವೇಶಾರ್ಪಣಮಸ್ತು

Post a Comment

0 Comments

Ad Code

Responsive Advertisement