Ticker

6/recent/ticker-posts

Ad Code

Responsive Advertisement

ಕೆರೆ ಹಬ್ಬ ಮಾಡಿ ಜಲದೇವತೆಗೆ ನಮನ ಹೇಳಿ

ಎಲ್ಲಿ ನೋಡಿದರೂ ಊರಹಬ್ಬ, ಗುಡಿ ಜಾತ್ರೆ, ಹೊಸ ದೇವರುಗಳ ಸಂಭ್ರಮ ಸಡಗರ. ವಿಶೇಷವಾಗಿ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹೊಸದೊಂದು ಹಬ್ಬದ ವಾತಾವರಣ ಉಂಟು ಮಾಡಿದೆ. ನೆಂಟರು-ಇಷ್ಟರೊಂದಿಗೆ ಬಾಡೂಟ ಸವಿದು-ಸಂತೋಷಿಸುವ ಸಮಯವಾಗಿದೆ. ಇದೊಂದು ಸಾಮಾಜಿಕ ಮೈತ್ರೀ ವಾತಾವರಣ ಉಂಟುಮಾಡುವ ಪ್ರಕ್ರಿಯೆ ಆಗಿದೆ.

ಒಂದು ಗ್ರಾಮಕ್ಕೆ ಒಂದು ಕೆರೆಯು ಇರುತ್ತದೆ. ಕೆಲವು ಕಡೆ ಒಂದೇ ಗ್ರಾಮಕ್ಕೆ ಎರಡು-ಮೂರು ಕೆರೆಗಳು ಇರುವುದು ಉಂಟು. ಕೆರೆಯ ಆಸರೆಯಿಂದ ಕುಡಿಯಲು ನೀರು ಸಿಗುತ್ತದೆ. ಕೆರೆಯ ಆಸರೆಯಲ್ಲಿ ಬೆಳೆಯು ಬೆಳೆದು ಧಾನ್ಯ ಸಮೃದ್ಧಿಯನ್ನು ಪಡೆಯುತ್ತೇವೆ. ಕೆಲವು ಕೆರೆಗಳಲ್ಲಿ ಮೀನು ಸಾಗಾಣಿಕೆಯು ನಡೆಯುತ್ತದೆ. ಇಷ್ಟೆಲ್ಲಾ ಕೆರೆಯಿಂದ ನಾವು ಬಳುವಳಿಯಾಗಿ ಪಡೆಯುವಾಗ ನಾವೇಕೆ ಕೆರೆ ಹಬ್ಬ ಮಾಡಬಾರದು.

ಮೊದಲು ಕೆರೆಯ ವಿಸ್ತೀರ್ಣ ತಿಳಿದುಕೊಳ್ಳಿ. ಒತ್ತುವರಿಯಾಗಿದ್ದರೆ ತೆರೆವುಗೊಳಿಸಲು ತತ್ಸಂಬಂಧ ಅಧಿಕಾರಿಗಳ ಸಹಾಯ ಪಡೆಯಿರಿ. ಕೆರೆಯ ಇತಿಹಾಸ ತಿಳಿಯಿರಿ. ಅದನ್ನು ಕಟ್ಟಿಸಿದ ಪುಣ್ಯಾತ್ಮರನ್ನು ನೆನೆದು ನಮಸ್ಕಾರಗಳನ್ನು ಸಮರ್ಪಿಸಿರಿ. ಕೆರೆಯ ಕಟ್ಟೆ ತೂಬು ಶಿಥಿಲವಾಗಿದ್ದರೆ ಸರಿಪಡಿಸಿ, ಕೆರೆಹೂಳನ್ನು ತೆಗೆದು ನಂತರ ಕೆರೆಯ ಹಬ್ಬವನ್ನು ಆಚರಿಸಿರಿ.

ಬಾಡೂಟ-ಹೋಳಿಗೆ ಊಟವನ್ನು ಏರ್ಪಡಿಸಿ ಶ್ರೀ ಗಂಗಾದೇವಿಗೆ ಪೂಜಿಸಲಿರಿಸಿ. ಜಾತಿ, ಮತ, ಧರ್ಮ ಪಕ್ಕಕ್ಕೆ ಇಟ್ಟು ಇಡೀ ಗ್ರಾಮದ ಜನರು ಒಟ್ಟಾಗಿ ಕೆರೆಯ ಹುಟ್ಟಿದ ಹಬ್ಬವನ್ನು ಆಚರಿಸಿ. ಇದರಿಂದ ನಿಮ್ಮ ಊರಿನ ಕೆರೆ ಜಲಕಳೆಯಿಂದ ನಗುನಗುತ್ತಿರುತ್ತದೆ. ಬೇಸಿಗೆಯಲ್ಲೂ ಕುಡಿಯುವ ನೀರಿಗೆ ಬರ ಬರುವುದಿಲ್ಲ. ನಿಮ್ಮ ನಮ್ಮ ಜೀವನವನ್ನು ಬಂಗಾರಗೊಳಿಸುವ ಕೆರೆಹಬ್ಬ ಪ್ರಾರಂಭಿಸಿರಿ. ಜೀವಜಲಕ್ಕೆ ನಿಮ್ಮ ಪ್ರಣಾಮಗಳನ್ನು ಸಲ್ಲಿಸಿರಿ. 

ಕೆರೆಹಬ್ಬದಂದು, ನಿಮ್ಮೂರಿನ ಕುಂಟೆ, ತೆರೆದ ಬಾವಿ, ಐತಿಹಾಸಿಕ ಕಲ್ಯಾಣಿಗಳಿಗೂ ಪೂಜೆ ಮಾಡುವುದನ್ನು ಮರೆಯದಿರಿ.

- ಕೆ.ರಾಜಣ್ಣ, ಮಾಲೂರು


Post a Comment

0 Comments

Ad Code

Responsive Advertisement