Ticker

6/recent/ticker-posts

Ad Code

Responsive Advertisement

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ನಿಮಿತ್ತ ರಾವಿಹಾಳು ಗ್ರಾಮದಲ್ಲಿ ಬಳ್ಳಾರಿ ಡಿಸಿ ಗ್ರಾಮವಾಸ್ತವ್ಯ

ರಾವಿಹಾಳು ಗ್ರಾಮಸ್ಥರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ

ಬಳ್ಳಾರಿ,ಮೇ 27: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ನಿಮಿತ್ತ ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಸಿರುಗುಪ್ಪ ತಾಲೂಕಿನ ರಾವಿಹಾಳು ಗ್ರಾಮದಲ್ಲಿ ಶುಕ್ರವಾರ ಗ್ರಾಮವಾಸ್ತವ್ಯ ನಡೆಸಿದರು.

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಅಭಿಯಾನದ ನಿಮಿತ್ತ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಗ್ರಾಮದ ಪ್ರತಿ ಮನೆಗೂ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿದರು ಮತ್ತು ಗ್ರಾಮದೆಲ್ಲೆಡೆ ಸಂಚರಿಸಿ ರಸ್ತೆಗಳು, ಚರಂಡಿ, ಕುಡಿಯುವ ನೀರಿನ ಶುದ್ಧೀಕರಣ ಘಟಕ, ಕೆರೆ, ಆಸ್ಪತ್ರೆ, ಸ್ವಚ್ಛತೆ ಹಾಗೂ ಇನ್ನೀತರ ಮೂಲಸೌಕರ್ಯ ವ್ಯವಸ್ಥೆಯನ್ನು ಖುದ್ದಾಗಿ ಪರಿಶೀಲಿಸಿದರು ಮತ್ತು ಅಧಿಕಾರಿಗಳಿಗೆ ಅಗತ್ಯ ಸೂಚನೆಗಳು ನೀಡಿದ್ದು ಕಂಡುಬಂದಿತು.

ಈ ಗ್ರಾಮವಾಸ್ತವ್ಯ ನಡೆಸುವುದಕ್ಕಿಂತ ಮೂರು ವಾರಕ್ಕೂ ಮುಂಚೆಯೇ ಗ್ರಾಮಕ್ಕೆ ತಹಸೀಲ್ದಾರ್ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಕಳುಹಿಸಿ ಪಿಂಚಣಿ, ಪಹಣಿ, ದಾಖಲೆಗಳ ತಿದ್ದುಪಡಿ, ರೇಶನ್ ಕಾರ್ಡ್ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು ಬಗೆಹರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ತಿಳಿಸಿದರು.

ಬಹುತೇಕವಾಗಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಸಮಸ್ಯೆಗಳಾದ ಪಹಣಿಯಲ್ಲಿನ ಲೋಪದೋಷಗಳು, ಪೌತಿ ಖಾತೆಗಳು, ಇನಾಂ ಭೂಮಿಗಳ ಪಟ್ಟಾ ಮಂಜೂರಾತಿ, ವೃದ್ಧಾಪ್ಯ ವೇತನ, ಮಾಸಿಕ ವೇತನಗಳ, ಪಡಿತರ ಚೀಟಿಗಳಿಗೆ ಸಂಬಂಧಿಸಿದಂತೆ ಸ್ಥಳದಲ್ಲಿಯೇ ಬಗೆಹರಿಸುವುದೇ ಈ ಗ್ರಾಮವಾಸ್ತವ್ಯದ ಮುಖ್ಯ ಉದ್ದೇಶವಾಗಿದೆ ಮತ್ತು ಜನಸಾಮಾನ್ಯರು ಕಚೇರಿಗಳಿಗೆ ಅನಗತ್ಯವಾಗಿ ಅಲೆದಾಡುವುದನ್ನು ತಪ್ಪಿಸಲು ಈ ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ರಾವಿಹಾಳು ಗ್ರಾಮದಲ್ಲಿ ನೂರಕ್ಕಿಂತ ಹೆಚ್ಚು ಆಧಾರ್‍ಕಾರ್ಡ್ ತಿದ್ದುಪಡಿ ಮಾಡಿಕೊಡಲಾಗಿದ್ದು, ಕೆಲವೇ ದಿನಗಳಲ್ಲಿ ಅವುಗಳನ್ನು ಫಲಾನುಭವಿಗಳ ಮನೆಗೆ ಕಳುಹಿಸಿಕೊಡುವ ಕೆಲಸ ಮಾಡಲಾಗಿದೆ ಮತ್ತು ಹೊಸ ಚುನಾವಣಾ ಗುರುತಿನ ಚೀಟಿ ನೊಂದಣಿ ಕುರಿತಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ರಾವಿಹಾಳು ಗ್ರಾಮದ ಬಹುತೇಕ ಜನರು ಸರಕಾರ ಅಥವಾ ಇನಾಂ ಭೂಮಿಯಲ್ಲಿ ವಾಸಿಸುತ್ತಿದ್ದು, ನಮಗೆ ಹಕ್ಕುಪತ್ರ ಅಥವಾ ಪಟ್ಟಾ ವಿತರಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರಗಳನ್ನು ಸಲ್ಲಿಸುವ ಮೂಲಕ ಗಮನಕ್ಕೆ ತಂದರು. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, 23 ಜನರಿಗೆ ಈಗಾಗಲೇ ಇನಾಂ ಭೂಮಿ ರದ್ದಾಗಿದ್ದು, ಅದು ಪಟ್ಟಾದಲ್ಲಿ ಆರ್‍ಟಿಸಿನಲ್ಲಿ ವರ್ಗಾವಣೆ ಮಾಡಲು ಬರುವುದಿಲ್ಲ ಈ ನಿಟ್ಟಿನಲ್ಲಿ ಒಟ್ಟು 23 ಇನಾಂ ಭೂಮಿಗಳಲ್ಲಿ 8 ಇನಾಂಗಳನ್ನು ರದ್ದುಮಾಡಿ, ಪಟ್ಟಾ ಆಗಿ ಮಾಡಲಾಗಿದೆ ಮತ್ತು ಇನ್ನುಳಿದ 15 ಇನಾಂ ಭೂಮಿಗಳನ್ನು ಸಹಾಯಕ ಆಯುಕ್ತರು ಮಾಡಿಕೊಡುತ್ತಾರೆ ಎಂದು ತಿಳಿಸಿದರು.

ಸರ್ಕಾರದ ಆದೇಶದಂತೆ ಈಗಾಗಲೇ ಇನಾಂ ರದ್ದಾಗಿರುವವರು ಹೊಸ ಅರ್ಜಿ 

ಫಾರಂ-1 ಸಲ್ಲಿಸಲು ಒಂದು ವರ್ಷ ಕಾಲಾವಕಾಶ ನೀಡಲಾಗಿದೆ ಎಂದು ಹೇಳಿದ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಅವರು, ರಾವಿಹಾಳು ಗ್ರಾಮದಲ್ಲಿ ಇನಾಂಗೆ ಸಂಬಂಧಿಸಿದಂತೆ 189 ಪ್ರಕರಣಗಳಿದ್ದು, ಅದರಲ್ಲಿ 40 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಈ ಕುರಿತಂತೆ ತ್ವರಿತವಾಗಿ 2 ತಿಂಗಳಲ್ಲಿ ಇನಾಂ ಭೂಮಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಭೂಮಿ ವೀಕ್ಷಣೆ ಹಾಗೂ ಪರಿಶೀಲನೆ ನಡೆಸಿ ಪಟ್ಟಾ ವಿತರಣೆ ಮಾಡುವ ಕೆಲಸ ಮಾಡುವಂತೆ ಇದೇ ಸಂದರ್ಭದಲ್ಲಿ ಡಿಸಿ ಮಾಲಪಾಟಿ ಅವರು ಸೂಚನೆ ನೀಡಿದರು.

ಸಾಮಾನ್ಯವಾಗಿ ಗ್ರಾಮದಲ್ಲಿ ರಸ್ತೆ ದುರಸ್ತಿ, ಚರಂಡಿ ಸರಿಪಡಿಸುವಿಕೆ, ಗ್ರಾಮದಲ್ಲಿರುವ ಕೆರೆಯ ಅಭಿವೃದ್ಧಿಕರಣ ಮತ್ತು ಚರಂಡಿ ನೀರು ಹೋಗದಂತೆ ವ್ಯವಸ್ಥೆ, ಬೀದಿದೀಪಗಳ ವ್ಯವಸ್ಥೆ, ಸ್ವಚ್ಛತೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಗ್ರಾಮಸ್ಥರು ಜಿಲ್ಲಾಧಿಕಾರಿಗಳೆದುರು ಪ್ರಸ್ತಾಪಿಸಿದರು.

ಈ ಕುರಿತಂತೆ ಸ್ಪಂದಿಸಿದ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು, ಬಹುತೇಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೆಕೆಆರ್‍ಡಿಬಿ ಮತ್ತು ಡಿಎಂಎಫ್ ಅನುದಾನದಲ್ಲಿ ನಿರ್ಮಿಸಲು ಮುಂದಿನ ದಿನಗಳಲ್ಲಿ ಶಾಸಕರೊಂದಿಗೆ ಚರ್ಚಿಸಲಾಗುವುದು ಎಂದರು.

ಆರೋಗ್ಯ ಕ್ಷೇಮಕೇಂದ್ರಕ್ಕೆ ಅಗತ್ಯ ಕಾಯಂ ವೈದ್ಯರು ಮತ್ತು ಸಿಬ್ಬಂದಿ,ಆಂಬ್ಯುಲೆನ್ಸ್ ಹಾಗೂ ಇನ್ನೀತರ ಸೌಕರ್ಯಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯಾಧಿಕಾರಿಗಳ ಜತೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.

ನಂತರದಲ್ಲಿ ಶಾಲೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಶಾಲೆಯ ಪಟ್ಟಾ ಭೂಮಿ ಸಮಸ್ಯೆಗಳಿದ್ದು ಮತ್ತು ದುರಸ್ತಿಕರಣಕ್ಕೆ ಸಂಬಂಧಿಸಿದಂತೆ ಅದಕ್ಕೆ ಬೇಕಾದ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿ ಹಾಗೂ ಪರಿಶೀಲಿಸಿದ ನಂತರ ಪಟ್ಟಾ ನೀಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಲೆಯ ಮೇಲ್ಛಾವಣಿ ಬದಲಾಯಿಸುವುದಕ್ಕೆ ಅದಕ್ಕೆ ಬೇಕಾದ ನಕಾಶೆ ತಯಾರಿಸಲು ಅಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು ಮತ್ತು ಶಾಲಾ ಮಕ್ಕಳಿಗೆ ಕೂಡಲು ಬೆಂಚ್‍ಗಳು ಮತ್ತು ಶಾಲಾ ಸಮವಸ್ತ್ರ, ಶೂಗಳನ್ನು ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.

ಸರ್ಕಾರ ಆದೇಶದಂತೆ ಪ್ರಸ್ತಕ ಸಾಲಿನಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ ಎಂದರು.

ಜಿಲ್ಲೆಯ ಸಿರುಗುಪ್ಪ ತಾಲೂಕಿನಲ್ಲಿ ಪ್ರಪ್ರಥಮ ಬಾರಿಗೆ ಗ್ರಾಪಂ ಕಡೆಯಿಂದ ಬಾಸ್ಕೆಟ್‍ಬಾಲ್ ಮೈದಾನ ನಿರ್ಮಾಣ ಮಾಡಿರುವುದಕ್ಕೆ ಜಿಲ್ಲಾಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದರು.

ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಪಡಿತರ ಚೀಟಿ, ಸಾಮಾಜಿಕ ಭದ್ರತಾ ಯೋಜನೆಗೆ ಸಂಬಂಧಿಸಿದ ವಿವಿಧ ಅದೇಶಗಳನ್ನು ವಿತರಿಸಿದರು. ಹಾಗೂ ಇದೇ ಸಂದರ್ಭದಲ್ಲಿ ಗ್ರಾಮಸ್ಥರ ಮನವಿ ಪತ್ರಗಳನ್ನು ಸ್ವೀಕರಿಸಿದರು.

ಎಲ್ಲರ ಅಹವಾಲುಗಳನ್ನು ಸಮಾಧಾನದಿಂದ ಆಲಿಸಿದ ಡಿಸಿ ಮಾಲಪಾಟಿ ಅವರು ತಮ್ಮ ಸಮಸ್ಯೆಗಳನ್ನು ಶೀಘ್ರ ಪರಿಹರಿಸಲಾಗುವುದು ಎಂದು ಜನರಿಗೆ ಅಶ್ವಾಸನೆ ನೀಡಿದರು.

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಅಭಿಯಾನದ ನಿಮಿತ್ತ ವೇದಿಕೆ ಆವರಣದಲ್ಲಿ ಹಾಕಲಾಗಿದ್ದ ವಿವಿಧ ಇಲಾಖೆಗಳ ವಸ್ತುಪ್ರದರ್ಶನ ಗಮನಸೆಳೆಯಿತು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಪಿ.ಎಸ್.ಮಂಜುನಾಥ್, ಶಾಸಕರಾದ  ಸೋಮಲಿಂಗಪ್ಪ, ತಹಸೀಲ್ದಾರ್ ಮಂಜುನಾಥ, ತಾಪಂ ಇಒ ಮಡಗಿನ ಬಸಪ್ಪ,ಗ್ರಾಪಂ ಅಧ್ಯಕ್ಷೆ ಪಾರ್ವತಮ್ಮ ಕುಬೇರಪ್ಪ, ಗ್ರಾಪಂ ಸದಸ್ಯ ಆರ್.ಟಿ.ಮಾದಣ್ಣ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಪಂ ಸದಸ್ಯರುಗಳು ಇದ್ದರು.




 


Post a Comment

0 Comments

Ad Code

Responsive Advertisement