ಬಳ್ಳಾರಿ ಮೇ 12. ಶಾಸಕ ಬಿ.ನಾಗೇಂದ್ರ ಅವರ ಸಂಬಂಧಿ ಎರಿಸ್ವಾಮಿ ಆಲಿಯಾಸ್ ಬಳ್ಳಾರಿ ಮಾಮ ಹಾಗೂ ಮಹಾನಗರ ಪಾಲಿಕೆ ಸದಸ್ಯ ಆಸಿಫ್ ನಡುವಿನ ಆಪ್ತ ಸಂಬಂಧ ಇದೀಗ ಹಳಸಿಹೋಗಿದ್ದು ಶಿಷ್ಯನೇ ಗುರುವಿನ ವಿರುದ್ಧ ತಿರುಗಿ ಬಿದ್ದಿದ್ದಾನೆ.
ಎರ್ರಿಸ್ವಾಮಿ ಮೇಯರ್ ಪಟ್ಟ ಕೊಡಿಸುವುದಾಗಿ ಹೇಳಿ ಬರೋಬ್ಬರಿ ಮೂರುವರೆ ಕೋಟಿ ಹಣ ಪಡೆದು ವಂಚನೆ ಮಾಡಿದ್ದಾರೆಂಬ ಕಾರಣಕ್ಕೆ ಬಳ್ಳಾರಿ ಮಾಮನ ವಿರುದ್ಧ ಮಹಾನಗರ ಪಾಲಿಕೆ 30ನೇ ವಾರ್ಡಿನ ಸದಸ್ಯ ಆಸೀಫ್ ನೇರವಾಗಿ ಕೌಲ್ ಬಜಾರ್ ಪೊಲೀಸ್ ಠಾಣೆಗೆ ಹೋಗಿ ಎಫ್‍ಐಆರ್ ದಾಖಲು ಮಾಡಿದ್ದಾನೆ. ಈ ಹಿನ್ನೆಲೆಯಲ್ಲೀಗ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ, ಕಾರ್ಯಕರ್ತರಲ್ಲಿ ಭಾರೀ ಮುಜುಗರ ಸೃಷ್ಟಿಸಿದೆ. ನರಕಕ್ಕೆ ನವ ದ್ವಾರ, ನಾಕಕ್ಕೆ ಒಂದೇ ದಾರಿ ಎನ್ನುವ ಹಾಗೆ ಪಾಪದ ಕಾರ್ಯ ಮಾಡುವುದು ಯಾರಿಗಾದರೂ ಸುಲಭ. ಪುಣ್ಯದ ಕಾರ್ಯ ಮಾಡುವುದು ಬಹಳ ಕಷ್ಟ ಎನ್ನುವಂಥ ಪರಿಸ್ಥಿತಿ ಗುರು-ಶಿಷ್ಯರ ಪಡಿಪಾಟಲು ನೋಡಿಯೇ ಈ ಮಾತು ಹೇಳಿದಂತಾಗಿದೆ. ಇಷ್ಟಕ್ಕೂ ಮಹಾನಗರ ಪಾಲಿಕೆ ಸದಸ್ಯ ಆಸೀಫ್ ಬಳ್ಳಾರಿ ಮಾಮನ ವಿರುದ್ಧ ಸೆಟೆದು ನಿಂತಿರುವುದಾದರೂ ಏಕೆ? ಕುಳಿತು ಮಾತನಾಡಿ ಬಗೆಹರಿಸಬಹುದಾದ ಒಂದು ಸಣ್ಣ ಸಮಸ್ಯೆಯನ್ನು ಶಾಸಕ ಬಿ.ನಾಗೇಂದ್ರ ಈ ವಿಷಯದಲ್ಲಿ ತಟಸ್ಥರಾಗಿದ್ದೇಕೆ? ಆಸೀಫ್ ಬಳ್ಳಾರಿ ಮಾಮನ ವಿರುದ್ಧವೇ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇಕೆ? ಎನ್ನುವ ಹಲವಾರು ಪ್ರಶ್ನೆಗಳು ಇದೀಗ ಹುಟ್ಟು ಹಾಕುವ ಮೂಲಕ ಶಾಸಕ ಬಿ.ನಾಗೇಂದ್ರ ಪಟಾಲಂ ಸೇರಿದಂತೆ ಇಡೀ ಬಳ್ಳಾರಿ ಜಿಲ್ಲೆಯಲ್ಲೇ ಸ್ವಾರಸ್ಯಕರ, ಕುತೂಹಲಕರ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
*ವಂಚನೆ ಆರೋಪ ಪ್ರಕರಣ ದಾಖಲು:* ಬಿಜೆಪಿ ಶಾಸಕ ಜಿ.ಸೋಮಶೇಖರ್ ರೆಡ್ಡಿ ಮುಸ್ಲಿಂ ವಿರುದ್ಧ ನೀಡಿದ್ದ ಹೇಳಿಕೆಯನ್ನು ಸಹಿಸಿಕೊಳ್ಳದೇ ಮುಸ್ಲಿಮರು ಪರ್ಯಾಯ ವ್ಯಕ್ತಿಗಾಗಿ ಹುಡುಕಾಟದಲ್ಲಿದ್ದ ವೇಳೆ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಆ ಅವಕಾಶವನ್ನು ಪಡೆದು ಕೌಲ್ ಬಜಾರ್ ಪ್ರದೇಶದ 10 ವಾರ್ಡ್ ಗಳಲ್ಲಿ ಕಾಪೆರ್ರೇಟರ್ ಗಳನ್ನ ಗೆಲ್ಲಿಸಿಕೊಂಡು ಮುಂದಿನ ವಿಧಾನ ಸಭಾ ಚುನಾವಣೆಗೆ ತಮ್ಮ ದಾರಿಯನ್ನ ಸುಗಮವಾಗಿಸಿಕೊಂಡಿದ್ದರು. ಇದೀಗ ವಂಚನೆಯ ಆರೋಪದ ಅಡಿ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಶಾಸಕರ ಸಂಬಂಧಿ ಎರಿಸ್ವಾಮಿ ಆಲಿಯಾಸ್ ಬಳ್ಳಾರಿ ಮಾಮನ ವಿರುದ್ಧ ಪ್ರಕರಣ ದಾಖಲಾಗಿದೆ. ಇದರಿಂದ ಕೌಲ್ ಬಜಾರ್ ಪ್ರದೇಶದ ಮುಸ್ಲಿಂ ಬಾಹುಳ್ಯವಿರುವ ಮತದಾರರು ಇನ್ನುಮುಂದೆ ನಾಗೇಂದ್ರ ಅವರನ್ನು ಬೆಂಬಲಿಸುವುದು ಕಷ್ಟಸಾಧ್ಯ ಎನ್ನುವ ಮಾತು ಕೇಳಿ ಬರುತ್ತಿದೆ. ವಾದಿಯ ಕೂಡ ವಾದ ಸಲ್ಲ, ಹೆಳವನ ಕೂಡ ದಾರಿ ಸಲ್ಲ ಎನ್ನುವಂತೆ ಮಹಾನಗರ ಪಾಲಿಕೆ ಸದಸ್ಯ ಆಸೀಫ್ ಇದೀಗ ಎರಿಸ್ವಾಮಿ ವಿರುದ್ಧವೇ ಬಂಡೆದ್ದು ನಿಂತಿರುವುದರಿಂದ ಬಿ.ನಾಗೇಂದ್ರ ಅವರ ಮುಂದಿನ ರಾಜಕೀಯ ಜೀವನ ಹಾಗೂ ಅವರ ಇಮೇಜ್ ಡ್ಯಾಮೇಜ್ ಆಗುವ ಎಲ್ಲ ಸಾಧ್ಯತೆಗಳೂ ಗೋಚರಿಸುತ್ತಿವೆ. ನಾಗೇಂದ್ರರ ಪರಮಾಪ್ತ ಬಿಆರ್‍ಎಲ್ ಸೀನ ಜೈಲಿಗೆ ಹೋದ ಬೆನ್ನಲ್ಲೇ ಇದೀಗ ಮತ್ತೊಬ್ಬ ಪರಮಾಪ್ತ, ಹತ್ತಿರದ ಸಂಬಂಧಿ ಎರಿಸ್ವಾಮಿ ವಿರುದ್ಧವೇ ಕೇಸು ದಾಖಲಿಸಲಾಗಿದೆ. ಯಾವ ಕ್ಷಣದಲ್ಲಾದರೂ ಎರ್ರಿಸ್ವಾಮಿಗೆ ಬಂಧನವಾಗುವ ಭೀತಿ ಎದುರಾಗಿದೆ. ಇದರಿಂದ ನಾಗೇಂದ್ರ ಅವರ ರಾಜಕೀಯ ಜೀವನದ ಮೇಲೂ ಬಹುದೊಡ್ಡ ಆಘಾತ ಕಾದಿದೆ ಎಂದು ಹೇಳಲಾಗುತ್ತಿದೆ.
ಎರಿಸ್ವಾಮಿ ಆಲಿಯಾಸ್ ಬಳ್ಳಾರಿ ಮಾಮ ಬೇರಾರೂ ಅಲ್ಲ. ಗ್ರಾಮೀಣ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಅವರ ಸಂಬಂಧಿ. ಆಂಧ್ರಪ್ರದೇಶದ ಸಚಿವ ಜಯರಾಮ ಅವರ ಸೋದರಿಯ ಪತಿ. ನಾಗೇಂದ್ರ ಅವರ ಚುನಾವಣೆಯಲ್ಲಿ ಫೈನಾನ್ಷಿಯರ್ ಆಗಿ ಗಮನ ಸೆಳೆದವರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾಗೇಂದ್ರ ಗೆಲುವಿನ ರೂವಾರಿ. ಎರಿಸ್ವಾಮಿ ಮೂಲತಃ ಬಡ್ಡಿ ವ್ಯವಹಾರ ಮಾಡುವ ದಂಧೆ ನಡೆಸುವವರು. ನಾಗೇಂದ್ರ ಅವರ ಎಲ್ಲ ವ್ಯವಹಾರಗಳಿಗೆ ಫೈನಾನ್ಷಿಯರ್ ಆಗಿರುವ ಎರಿಸ್ವಾಮಿ ನಾಗೇಂದ್ರ ಮೂಲಕ ಆಸಿಫ್ ಗೆ ಟಿಕೆಟ್ ಕೊಡಿಸಿದ್ದಲ್ಲದೆ, ಗೆಲ್ಲಲು ಕೂಡ ಕಾರಣರಾಗಿದ್ದರು. ಕಾಂಗ್ರೆಸ್ ಅಲೆಯಲ್ಲಿ ಗೆದ್ದು ಬಂದ ಆಸೀಫ್ ಗೆ ಎರಿಸ್ವಾಮಿ ಮೇಯರ್ ಹುದ್ದೆ ಕೊಡಿಸುವ ಭರವಸೆ ನೀಡಿದ್ದರು. ಇಲ್ಲಿಯೇ ಎಡವಟ್ಟು ಆಗಿರುವುದು ಅಂತ ಜನರು ಮಾತನಾಡುತ್ತಿದ್ದಾರೆ. ನಾಗೇಂದ್ರ ಅವರಿಗೂ ಕೂಡ ಕೌಲ್ ಬಜಾರ್ ಮೇಲೆ ಬಹಳ ಪ್ರೀತಿ. ಪಾಲಿಕೆ ಸದಸ್ಯತ್ವದಿಂದ ಇದೀಗ ಬಳ್ಳಾರಿಯ ಪ್ರಥಮ ಪ್ರಜೆಯಾಗುತ್ತೇನೆ ಎನ್ನುವ ಹಿಗ್ಗಿನಲ್ಲಿದ್ದ ಆಸಿಫ್ ಗುರುವಿಗೆ 3.5 ಕೋಟಿ ಹಣ ನೀಡಿ ಮೇಯರ್ ಪಟ್ಟಕ್ಕಾಗಿ ಅಂಗಲಾಚಿದ್ದಾನೆ. ಕಾರಣಾಂತರದಿಂದ ಆಸೀಪ್ ಗೆ ಮೇಯರ್ ಪಟ್ಟ ಕೈ ತಪ್ಪಿ ಹೋಗಿದೆ. ಇದರಿಂದ ಆಸೀಫ್ ಮತ್ತು ಎರಿಸ್ವಾಮಿ ನಡುವೆ ಬಿರುಕು ಮೂಡಲು ಕಾರಣವಾಗಿದೆ ಎನ್ನಲಾಗುತ್ತಿದೆ. ಆದರೂ ಎರಿಸ್ವಾಮಿ ಶಿಷ್ಯನ ಬಳಿ ಹಣ ಪಡೆದು ಮೇಯರ್ ಪಟ್ಟ ಕೊಡಿಸುವಷ್ಟು ಪ್ರಭಾವಿಯೇ? ಆಸಿಫ್ ಯಾವ ಕೋನದಲ್ಲಿ ಎರಿಸ್ವಾಮಿ ಅವರಿಗೆ ಇಷ್ಟೋದು ಹಣ ನೀಡಿದ? ಎರಿಸ್ವಾಮಿ ಹಣ ಪಡೆದು ಯಾಕೆ ಕೈ ಕೊಟ್ಟ? ಹಾಗಾದರೆ ನಂದೀಶ್ ಕೂಡ ಮೇಯರ್ ಆಗಲು ಹವಣಿಸಿದ್ದರು. ಅವರಿಗೆ ಯಾಕೆ ಮೇಯರ್ ಪಟ್ಟ ಕೈ ತಪ್ಪಿತು? ಹಾಲಿ ಮೇಯರ್ ರಾಜೇಶ್ವರಿ, ಉಪ ಮೇಯರ್ ಮಾಲನ್ ಬೀ ಎಷ್ಟು ಕೋಟಿಗಳನ್ನು ನೀಡಿದ್ದಾರೆ? ಈ ರೀತಿಯ ಪ್ರಶ್ನೆಗಳು ನಾಗರಿಕರಲ್ಲಿ ಕೇಳಿ ಬರುತ್ತಿವೆ. ಈ ನಡುವೆ ಆಸಿಫ್ ಅತ್ತ ಮೇಯರ್ ಪಟ್ಟವೂ ದಕ್ಕದೆ, ಇತ್ತ ಹಣವೂ ಸಿಗದೇ ಬಾಲ ಸುಟ್ಟುಕೊಂಡ ಬೆಕ್ಕಿನಂತಾದ? ನೇರವಾಗಿ ಸಿಬಿ ಪೊಲೀಸ್ ಠಾಣೆಗೆ ತೆರಳಿ ಎರಿಸ್ವಾಮಿ ವಿರುದ್ಧ ವಂಚನೆ ಹಾಗೂ ಕೊಲೆ ಬೆದರಿಕೆ ಆರೋಪದಡಿ ಪ್ರಕರಣ ಏಕೆ ದಾಖಲಿಸಿದ? ಇಂತಹ ಹಲವಾರು ಪ್ರಶ್ನೆಗಳು ಜನರಲ್ಲಿ ಚರ್ಚೆಯಾಗುತ್ತಿವೆ.
ಇದುವರೆಗೆ ಬಳ್ಳಾರಿ ಜಿಲ್ಲೆಗೆ ಅದೆಷ್ಟೋ ಎಸ್‍ಪಿಗಳು ಬಂದು ಹೋಗಿದ್ದಾರೆ. ಯಾರೂ ಖಡಕ್ ಆಗಿ ಪ್ರಭಾವಿಗಳನ್ನು ಸದೆಬಡಿದಿರಲಿಲ್ಲ. ಸೈದುಲು ಅಡಾವತ್ ಅವರಲ್ಲಿನ ಗಟ್ಟಸುತನ, ದಿಟ್ಟತೆ, ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಎಸ್‍ಪಿ ಅವರ ನಡೆ ಎಲ್ಲರ ಪ್ರಶಂಸೆಗೆ ಕಾರಣವಾಗಿದೆ. ಸೈದುಲು ಅಡಾವತ್ ರಂತಹ ದಕ್ಷ ಅಧಿಕಾರಿ ರಾಜಕೀಯ ಪ್ರಭಾವ ಇರುವವರನ್ನು ಸಲೀಸಾಗಿ ಹೆಡಮುರಿಗೆ ಕಟ್ಟುತ್ತಿದ್ದಾರೆ. ಆ ಮೂಲಕ ಬಳ್ಳಾರಿಗರಲ್ಲಿ ಪೊಲೀಸ್ ಇಲಾಖೆ ಕುರಿತು ನಂಬಿಕೆ ಮೂಡಿಸುತ್ತಿದ್ದಾರೆ. ಜನಮಾನಸದಲ್ಲಿ ಪ್ರಭಾವ ಬೀರಿದ್ದ ರಾಜಕೀಯ ವ್ಯಕ್ತಿಗಳ, ಪುಢಾರಿಗಳ ಜಂಘಾ ಬಲವನ್ನೇ ಕುಸಿಯುವಂತೆ ಮಾಡುತ್ತಿದ್ದಾರೆ. ಇತ್ತೀಚೆಗೆ ಕಿಡ್ನ್ಯಾಪ್ ಮತ್ತು ಕೊಲೆ ಬೆದರಿಕೆ ಆರೋಪದ ಅಡಿ ಅಪ್‍ಕಮಿಂಗ್ ಎಂಎಲ್‍ಎ ಎಂದು ಬೀಗುತ್ತಿದ್ದ ಬಿಆರ್‍ಎಲ್ ಸೀನನನ್ನು ಹುಡುಕಿಕೊಂಡು ಬಂದು ಹೆಡೆಮುರಿಗೆ ಕಟ್ಟಿದ್ದಾರೆ. ಇದೀಗ ಎರಿಸ್ವಾಮಿಯ ವಿರುದ್ಧವೇ ಸಿಬಿ ಠಾಣೆಯಲ್ಲಿ ಆಸೀಫ್ ದೂರು ನೀಡಿದ್ದಾರೆ. ಎರಿಸ್ವಾಮಿ ವಿರುದ್ಧ ಕೊಲೆ ಬೆದರಿಕೆ ಮತ್ತು ವಂಚನೆ ಆರೋಪದಡಿ ಪ್ರಕರಣ ದಾಖಲಾಗಿದೆ. ಇದರ ಜಾಡು ಹಿಡಿದು ಹೊರಟಿರುವ ಎಸ್‍ಪಿ ಸೈದುಲು ಅಡಾವತ್ ಯಾವುದೇ ಕ್ಷಣದಲ್ಲಾದರೂ ಎರಿಸ್ವಾಮಿಯನ್ನು ಸಹ ಹೆಡೆಮುರಿಗೆ ಕಟ್ಟುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಪಾಲಿಕೆ ಸದಸ್ಯ ಆಸೀಫ್ ಇವರ ಕರ್ಮಕಾಂಡಗ ಹೊರಗೆ ಹಾಕಿದ್ದಾರೆ ಹೊರೆತು, ಈ ವರಗೆ ಹಲವಾರು ಕಾಮಗಾರಿಗಳು, ವರ್ಗಾವಣೆಗಳಿಗೆ ಮಾಮೂಲು ನೀಡಿದ ಯಾವುದೇ ಅಧಿಕಾರಿಗಳು,ಗುತ್ತಿಗೆದಾರರು ಮರ್ಮವನ್ನು ಹೊರಹಾಕಲಿಲ್ಲ. ಇದಕ್ಕೆ ಕೂಡಾ ಕಿಂಗ್‍ಪಿನ್ ಯಾರೆನ್ನುವುದು ಹೊರಬೀಳಬೇಕಿದೆ ಎಂದು ಜನರು ಅಭಿಪ್ರಾಯವನ್ನು ವ್ಯಕ್ತಪಡಿಸುತಿದ್ದಾರೆ.

0 Comments