ಬೆಂಗಳೂರು, ಮೇ 13, (ಕರ್ನಾಟಕ ವಾರ್ತೆ) :ಕಂದಾಯ ಇಲಾಖೆಯು “ರೈತರ ಮನೆ ಬಾಗಿಲಿಗೆ ಕಂದಾಯ ದಾಖಲೆಗಳು”, “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ” ಕಾರ್ಯಕ್ರಮಗಳ ಮೂಲಕ ನಾಗರೀಕರು ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳೊಂದಿಗೆ ನೇರವಾಗಿ ಹಂಚಿಕೊಳ್ಳಲು ಮತ್ತು ತಾವು ಇರುವಲ್ಲಿಯೇ ದಾಖಲಾತಿಗಳನ್ನು ಪಡೆಯುವ ಮತ್ತು “ಸ್ವಾವಲಂಬಿ” ಮೊಬೈಲ್ ಆಪ್ ಮೂಲಕ ತಮ್ಮ ಸ್ವಂತ ಖಾಸಗೀ ಜಮೀನಿನ ನಕ್ಷೆಯನ್ನು ಸ್ವಯಂ ಸರ್ವೇ ಮಾಡಿಕೊಳ್ಳುವ ಅವಕಾಶವನ್ನು ರೂಪಿಸಿದೆ.
ಇದೀಗ “ಮನೆ ಬಾಗಿಲಿಗೆ ಪಿಂಚಣಿ” ಯೋಜನೆಯಡಿಯಲ್ಲಿ ದೂರವಾಣಿ ಮೂಲಕವೇ ಪಿಂಚಣಿ ಕೋರಿಕೆ ಸ್ವೀಕರಿಸಿ 72 ಗಂಟೆಯಲ್ಲಿ ಪಿಂಚಣಿ ಮಂಜೂರಾತಿ ನೀಡುವ ವಿನೂತನ ಕಾರ್ಯಕ್ರಮವನ್ನು ರೂಪಿಸಿದೆ.
ಇಂದು ವಿಧಾನಸೌಧದ ಬ್ಯಾಂಕ್ವೆಟ್‍ಹಾಲ್ ಸಭಾಂಗಣದಲ್ಲಿ ಕಂದಾಯ ಇಲಾಖೆಯಿಂದ ಹಮ್ಮಿಕೊಳ್ಳಲಾದ “ಹಲೋ ಕಂದಾಯ ಸಚಿವರೇ” 72 ಗಂಟೆಗಳಲ್ಲಿ ಮನೆ ಬಾಗಿಲಿಗೆ ಪಿಂಚಣಿ ಮೊಬೈಲ್ ಆಪ್‍ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ಮುಖ್ಯಮಂತ್ರಿಗಳು ಆಡಳಿತವನ್ನು ಜನರ ಮನೆ ಬಾಗಲಿಗೆ ತರಲು ಸರ್ಕಾರ ಜನಪರ ಯೋಜನೆಗಳನ್ನು ಈಗಾಗಲೇ ಜಾರಿಗೆ ತಂದಿದೆ. ಆಸಿಡ್ ದಾಳಿಗೆ ಒಳಗಾದವರಿಗೆ ಪಿಂಚಣಿ ಜೊತೆಗೆ 5 ಲಕ್ಷ ರೂ ನೆರವಿನ ಸ್ವಯಂ ಉದ್ಯೋಗ ಒದಗಿಸುವ ಸಂಬಂಧ ಧನ ಸಹಾಯ ಮಾಡಲಾಗುವುದು ಹಾಗೂ ಇವರಿಗೆ ಸ್ವಂತ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.
ನಾಗರೀಕರು ಶುಲ್ಕ ರಹಿತ (Toll Free) ಸಂಖ್ಯೆ 155245 ಗೆ ಉಚಿತವಾಗಿ ದೂರವಾಣಿ ಕರೆ ಮಾಡಿ ತಮ್ಮ ಆಧಾರ್ ಸಂಖ್ಯೆ ಒದಗಿಸಿ ಪಿಂಚಣಿ ಸೌಲಭ್ಯ ಕೋರಿಕೆ ಸಲ್ಲಿಸಬಹುದು. ತಮ್ಮ ವ್ಯಾಪ್ತಿಯ ಗ್ರಾಮ ಲೆಕ್ಕಾಧಿಕಾರಿಗಳು ಅರ್ಜಿದಾರರ ಮನೆ ಬಾಗಿಲಿಗೆ ಭೇಟಿ ನೀಡಿ “ನವೋದಯ” ಮೊಬೈಲ್ ಆಪ್ ಮೂಲಕ ಅರ್ಜಿದಾರರಿಂದ ಮಾಹಿತಿ ಹಾಗೂ ದಾಖಲಾತಿಗಳನ್ನು ಸಂಗ್ರಹಿಸಲಾಗುವುದು.
ಗ್ರಾಮ ಲೆಕ್ಕಾಧಿಕಾರಿಗಳು ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಡ್ಡಾಯವಾಗಿ ಆಧಾರ್ ಕಾರ್ಡ್, ಬ್ಯಾಂಕ್ ಅಥವಾ ಅಂಚೆ ಖಾತೆ ವಿವರ, ವಿಳಾಸ ಮತ್ತು ವಯಸ್ಸಿಗೆ ಸಂಬಂಧಿಸಿದ ದಾಖಲಾತಿ (ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ ಅಥವಾ ಸರ್ಕಾರ ವಿತರಿಸಿದ ಗುರುತಿನ ಚೀಟಿ) ಪ್ರತಿ ನೀಡುವುದು.
ಗ್ರಾಮ ಲೆಕ್ಕಾಧಿಕಾರಿಗಳು ಮೊಬೈಲ್ ಆಪ್ ಮೂಲಕ ಫಲಾನುಭವಿಯ ಭಾವಚಿತ್ರವನ್ನು ಸೆರೆ ಹಿಡಿದು ಅರ್ಹರಿಗೆ 72 ಗಂಟೆಯೊಳಗೆ ನಾಡಕಚೇರಿಯ ಉಪತಹಶೀಲ್ದಾರರಿಂದ ಪಿಂಚಣಿ ಮಂಜೂರಾತಿಗೆ ಅನುಮೋದನೆ ನೀಡಿ, ನಂತರ ಫಲಾನುಭವಿಗಳ ಮನೆ ಬಾಗಿಲಿಗೆ ಪಿಂಚಣಿ ಮಂಜೂರಾತಿ ಆದೇಶವನ್ನು ವಿತರಣೆ ಮಾಡಲಾಗುವುದು.
ಕಂದಾಯ ಸಚಿವ ಆರ್.ಅಶೋಕ ಮಾತನಾಡಿ, ರಾಜ್ಯ ಸರ್ಕಾರ 72 ಲಕ್ಷ ಜನರಿಗೆ ಮಾಸಿಕ ಪಿಂಚಣಿ ಯೋಜನೆ ರೂಪಿಸಿದ್ದು, ಇದಕ್ಕೆ ಸುಮಾರು 10 ಸಾವಿರ ಕೋಟಿ ಅನುದಾನ ಒದಗಿಸಲಾಗಿದೆ. ಆಸಿಡ್ ದಾಳಿಗೆ ಒಳಗಾದವರಿಗೆ ಮಾಸಿಕ ಪಿಂಚಣಿಯನ್ನು 3 ಸಾವಿರ ರೂಗಳಿಂದ 10 ಸಾವಿರ ರೂಗಳಿಗೆ ಹೆಚ್ಚಿಸಲಾಗಿದೆ. 52 ಲಕ್ಷ ರೈತರ ಮನೆಗೆ ಕಂದಾಯ ದಾಕಲೆಗಳನ್ನು ತಲುಪಿಸಲಾಗಿದೆ. 1252.89 ಕೋಟಿ ರೂಗಳನ್ನು ಬೆಳೆ ಹಾನಿ ಪರಿಹಾರವಾಗಿ ರೈತರಿಗೆ ಸರ್ಕಾರ ನೀಡಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಲೋಕಸಭೆ ಸದಸ್ಯ ಪಿ.ಸಿ.ಮೋಹನ್, ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ರಿಜ್ವಾನ್ ಅರ್ಷದ್, ಶಾಸಕರಾದ ಎಂ.ಕೃಷ್ಣಪ್ಪ, ಎಂ.ಪಿ.ಕುಮಾರಸ್ವಾಮಿ, ಬಿ.ಬಿ.ಎಂ.ಪಿ. ಆಯುಕ್ತ ತುಷಾರ್ ಗಿರಿನಾಥ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ಪ್ರಸಾದ್, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್‍ಕುಮಾರ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್, ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯದ ನಿರ್ದೇಶಕರಾದ ಸತೀಶ್‍ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಗಣ್ಯರು ಉಪಸ್ಥಿತರಿದ್ದರು.
0 Comments