Ticker

6/recent/ticker-posts

Ad Code

Responsive Advertisement

ಗ್ಯಾಸ್ ಸಿಲೆಂಡರ್ 50 ರೂ ಹೆಚ್ಚಳದ ವಿರುದ್ಧ ಎಸ್.ಯು.ಸಿ.ಐ(ಸಿ) ಪ್ರತಿಭಟನೆ

 ಬಳ್ಳಾರಿ ಮೇ 07. ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಸಮಿತಿಯಿಂದ ಕೇಂದ್ರ ಬಿಜೆಪಿ ಸರ್ಕಾರದ ಗೃಹ ಬಳಕೆಯ ಗ್ಯಾಸ್ ಸಿಲೆಂಡರ್ ಬೆಲೆ ಏರಿಕೆ ನಿರ್ಧಾರ ಖಂಡಿಸಿ ಹಳೆ ಬಸ್ ನಿಲ್ದಾಣದ ಮುಂಭಾಗದಲ್ಲಿ ಪ್ರತಿಭಟಿಸಲಾಯಿತು. ‘ಜನಗಳ ಜೇಬು ಲೂಟಿ ಮಾಡುವ ಮೋದಿ ಸರ್ಕಾರಕ್ಕೆ ಧಿಕ್ಕಾರ’!, ‘ಬಿಜೆಪಿ ಸರ್ಕಾರದ ಬೆಲೆ ಏರಿಕೆ ನೀತಿಗೆ ಧಿಕ್ಕಾರ’!, ‘ಗಾಯದ ಮೇಲೆ ಬರೆ ಎಳೆಯುವ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ’ !, ‘ಅಂಬಾನಿ-ಅದಾನಿಗಳ ಏಜೆಂಟ್ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ!’, ‘ಜನ ದ್ರೋಹಿ ಮೋದಿ ಸರ್ಕಾರವನ್ನು ಖಂಡಿಸಿ!’ ಮುಂತಾದ ಘೋಷಣೆಗಳನ್ನು ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಕೂಗಿದರು.

   
    ಈ ಸಂದರ್ಭದಲ್ಲಿ ಎಸ್.ಯು.ಸಿ.ಐ (ಸಿ) ಜಿಲ್ಲಾ ಸಮಿತಿಯ ಸದಸ್ಯರಾದ ಕಾ.ಸೋಮಶೇಖರ್ ಗೌಡ ಅವರು ಮಾತನಾಡುತ್ತಾ “ಕೇಂದ್ರ ಮೋದಿ ಸರ್ಕಾರ ಗೃಹ ಬಳಕೆಯ ಗ್ಯಾಸ್ ಸಿಲೆಂಡರ್ ಬೆಲೆಯನ್ನು ಮತ್ತೊಮ್ಮೆ ರೂ.50ರಷ್ಟು ಹೆಚ್ಚಳ ಮಾಡಿದೆ. ಇತ್ತೀಚಗಷ್ಟೆ ಮಾರ್ಚ್ ತಿಂಗಳಲ್ಲಿ ರೂ.50ರಷ್ಟು ಹೆಚ್ಚಳ ಮಾಡಿತ್ತು. ಒಟ್ಟಾರೆ ಈಗ ಗೃಹ ಬಳಕೆಯ ಗ್ಯಾಸ್ ಸಿಲೆಂಡರ್ ಬೆಲೆ ರೂ.1000 ದಾಟಿದೆ. ಅಲ್ಲದೆ ವಾಣಿಜ್ಯ ಬಳಕೆಯ ಸಿಲೆಂಡರ್ ಬೆಲೆಯನ್ನು ಸಹ ಕ್ರಮವಾಗಿ ರೂ250, ರೂ.102ರಷ್ಟು ಇತ್ತೀಚಗಷ್ಟೆ ಹೆಚ್ಚಳ ಮಾಡಿತ್ತು. ಈಗಾಗಲೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನರಿಗೆ ಮೋದಿ ಸರ್ಕಾರ ಮೇಲಿಂದ ಮೇಲೆ ಬರೆ ಹಾಕುತ್ತಲೆ ಇದೆ. ಕೋವಿಡ್ ಮಹಾಮಾರಿಯಿಂದ ಬದುಕು ಕಳೆದುಕೊಂಡ ಸಾಮಾನ್ಯ ಜನರನ್ನು ಬೀದಿಗೆ ಬರುವಂತೆ ಮಾಡಿದೆ. ಈ ಸರ್ಕಾರದ ಕಣ್ಣು, ಕಿವಿಗಳು ಕೆಲಸ ಮಾಡುತ್ತಿವೆಯೇ ? ಈ ಸರ್ಕಾರಕ್ಕೆ ಕಿಂಚಿತ್ತಾದರೂ ಜನರ ಬಗ್ಗೆ ಕಾಳಜಿಯಿದೆಯೇ? ಬೆಲೆ ಏರಿಕೆಯನ್ನು ನಿಯಂತ್ರಿಸುವುದಾಗಿ ಚುನಾವಣೆಯ ಸಂದರ್ಭದಲ್ಲಿ ಉದ್ದುದ್ದ ಭಾಷಣಗಳನ್ನು ಮಾಡಿದ್ದ ಮೋದಿಯವರು ಈಗೇನು ಮಾಡುತ್ತಿದ್ದಾರೆ? ಈ ಸರ್ಕಾರ ಯಾರ ಪರವಾಗಿದೆ? ಎಂದು ಪ್ರಶ್ನಿಸಿದರು. ಕಾರ್ಪೋರೇಟ್ ಮಾಲೀಕರಿಗೆ ರಿಯಾಯಿತಿ ನೀಡುವುದರಲ್ಲಿ, ಅವರ ಸಾಲಗಳನ್ನು ಮನ್ನಾ ಮಾಡುವುದರಲ್ಲಿ ಮಾತ್ರ ಈ ಸರ್ಕಾರಕ್ಕೆ  ಎಲ್ಲಿಲ್ಲದ ಉತ್ಸಾಹ” ಎಂದು ಕಿಡಿಕಾರಿದರು. 

 ಎಸ್‍ಯುಸಿಐ (ಸಿ) ಜಿಲ್ಲಾ ಸಮಿತಿಯ ಸದಸ್ಯರಾದ ಕಾ.ಎ. ದೇವದಾಸ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ “ಕೇಂದ್ರ ಬಿಜೆಪಿ ಸರ್ಕಾರ ಕಳೆದ 7 ವರ್ಷಗಳಲ್ಲಿ  ಕಾರ್ಪೋರೆಟ್ ಮಾಲೀಕರ ರೂ.10.7 ಲಕ್ಷ ಕೋಟಿ ಸಾಲವನ್ನು  ಮನ್ನಾ ಮಾಡಿದೆ. ಶೇ.33ರಷ್ಟಿದ್ದ ಕಾರ್ಪೋರೇಟ್ ತೆರಿಗೆಯನ್ನು ಶೇ.22ಕ್ಕೆ ಇಳಿಸಿದೆ. ಅತಿ ಶ್ರೀಮಂತರ ಪಟ್ಟಿಯಲ್ಲಿ ಅಂಬಾನಿ ಹಾಗೂ ಅದಾನಿ, ಏಷಿಯಾದಲ್ಲೇ ಮೊದಲೆರೆಡು ಸ್ಥಾನದಲ್ಲಿ ಮಿಂಚುತ್ತಿದ್ದಾರೆ. ಕೋವಿಡ್‍ಯಿಂದಾಗಿ ಜನ ತತ್ತರಿಸುತ್ತಿರುವಾಗ ಅಂಬಾನಿ ಆಸ್ತಿ 3-4 ಪಟ್ಟು ಹೆಚ್ಚಾಗಿದೆ. ಇದೆಲ್ಲ ಯಾರ ಕೃಪೆಯಿಂದ? ಮೋದಿ ಸರ್ಕಾರ ಸಂಪೂರ್ಣವಾಗಿ ಜನ ವಿರೋಧಿ ಹಾಗೂ ಕಾರ್ಪೋರೇಟ್ ಮಾಲೀಕರ ಪರವಾಗಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಬಂಡವಾಳಶಾಹಿ ಪರ ನೀತಿಗಳನ್ನೇ ಬಿಜೆಪಿ ಸರ್ಕಾರ ಮುಂದುವರೆಸುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಯಾವುದೇ ವ್ಯತ್ಯಾಸಗಳಿಲ್ಲ. ಯಾವ ಪಕ್ಷ ಅಧಿಕಾರಕ್ಕೇರಿದರೂ ಜನರಿಗೆ ಸಮಸ್ಯೆಗಳಿಂದ ಮುಕ್ತಿ ಸಿಗುವುದಿಲ್ಲ. ಈ ಹಿನ್ನಲೆಯಲ್ಲಿ ಜನತೆ ಹೋರಾಟಕ್ಕೆ ಧುಮುಕಬೇಕು. ಗಲ್ಲಿ ಗಲ್ಲಿಗಳಲ್ಲಿ, ಬಡಾವಣೆಗಳಲ್ಲಿ ಜನ ಸಮಿತಿ ರಚಿಸಿಕೊಂಡು ಸಂಘಟಿತರಾಗಬೇಕು. ಜನರ ನೈಜ ಬೇಡಿಕೆಗಳಿಗಾಗಿ ಹೋರಾಟಗಳನ್ನು ಬೆಳೆಸುತ್ತಾ, ಬಂಡವಾಳಶಾಹಿ ವ್ಯವಸ್ಥೆಯನ್ನು ಕೊನೆಗೊಳಿಸುವ ಸಮಾಜವಾದಿ ಹೋರಾಟಕ್ಕೂ ತಯಾರಾಗಬೇಕಿದೆ. ಇದೊಂದೆ ಜನರಿಗಿರುವ ದಾರಿ” ಎಂದು ಕರೆ ನೀಡಿದರು. 

  ಈ ಸಂದರ್ಭದಲ್ಲಿ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಗೋವಿಂದ್, ಶಾಂತಾ, ಸದಸ್ಯರಾದ ಜಗದೀಶ್, ಈಶ್ವರಿ, ವಿಜಯಲಕ್ಷ್ಮಿ, ರಾಜಾ, ರವಿಕಿರಣ್ ಪಕ್ಷದ ಬೆಂಬಲಿಗರು, ನಾಗರಿಕರು ಪಾಲ್ಗೊಂಡಿದ್ದರು.





 


Post a Comment

0 Comments

Ad Code

Responsive Advertisement