ಬಳ್ಳಾರಿ,ಮೇ.12-ಜಿಲ್ಲೆಯ ಐತಿಹಾಸಿಕ ಪ್ರಸಿದ್ಧಿ ಪಡೆದ ರೂಪನಗುಡಿ ಗ್ರಾಮದ ಶ್ರೀ ವೆಂಕಟೇಶ್ವರಸ್ವಾಮಿ ದೇವಸ್ಥಾನ ಸಂಪೂರ್ಣ ನವೀಕರಣಗೊಂಡಿದ್ದು ಮೇ 14ರಂದು ಕಲ್ಯಾಣೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಹಿರಿಯ ರಾಜಕೀಯ ಧುರೀಣ ಎನ್.ಪ್ರತಾಪ್ ರೆಡ್ಡಿ ಅವರು ಪುರಾತನ ಕಾಲದ ಈ ದೇವಸ್ಥಾನವನ್ನು ಪುನರುಜ್ಜೀವನಗೊಳಿಸಿದ್ದು ವೆಂಕಟರಮಣನ ಭಕ್ತರು ಹಾಗೂ ಇತಿಹಾಸಪ್ರಿಯರು ರೆಡ್ಡಿ ಅವರ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ವೆಂಕಟೇಶ್ವರ ಸ್ವಾಮಿಯು ಶ್ರೀಚಕ್ರದ ಮೇಲೆ ಪ್ರತಿಷ್ಟಾಪಿಸಲಾಗಿದ್ದು ಕಲ್ಯಾಣೋತ್ಸವ ಹಾಗೂ ಬ್ರಹ್ಮ ರಥೋತ್ಸವಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.
ಮೇ 14ರಂದು ರಾತ್ರಿ ಕಲ್ಯಾಣೋತ್ಸವ ಹಾಗೂ ಮೇ 16ರಂದು ಸಂಜೆ 6.05 ಕ್ಕೆ ಬ್ರಹ್ಮರಥೋತ್ಸವ ಕಾರ್ಯಕ್ರಮ ನೆರವೇರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಆಶಿಸಿದ್ದಾರೆ.
ರೂಪನಗುಡಿ ಗ್ರಾಮದಲ್ಲಿರುವ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನ 12 ನೇ ಶತಮಾನದಲ್ಲಿ ಪ್ರತಿಸ್ಥಾಪಿಸಲ್ಪಟ್ಟಿದೆ. ಶ್ರೀಚಕ್ರದ ಮೇಲೆ ನಿಂತ ಮಹಾ ಮಹಿಮೆಯುಳ್ಳ ಶ್ರೀ ವೆಂಕಟರಮಣ ಸ್ವಾಮಿ ವಿಗ್ರಹವು 800 ವರ್ಷಗಳಿಂದಲೂ ಪೂಜಿಸಲ್ಪಡುತ್ತಿದೆ. ಈ ಭಾಗದಲ್ಲಿ ಈ ದೇವಸ್ಥಾನ ಇರುವುದೇ ಒಂದು ಭಾಗ್ಯದ ಸಂಕೇತ. ಇದೊಂದು ಐತಿಹಾಸಿಕ ಪುರಾತನ ದೇವಸ್ಥಾನವಾಗಿದ್ದು, ಸುತ್ತಮುತ್ತಲಿನ ಗ್ರಾಮದ ಸಕಲ ಭಕ್ತಾದಿಗಳು ಭಾಗವಹಿಸಿ ತನು, ಮನ, ಧನ, ದಾನ್ಯಗಳಿಂದ ಸೇವೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಪ್ರತಾಪರೆಡ್ಡಿ ಅವರು ಕೋರಿದ್ದಾರೆ.
ದಿವಂಗತ ನಾರಾ ಗೌರಣ್ಣ ಅವರ ಪುತ್ರರಾಗಿರುವ ನಾರಾ ಪ್ರತಾಪ್ ರೆಡ್ಡಿ ಅವರು, ರೆಡ್ಡಿ ಜನಸಂಘದ ಅಧ್ಯಕ್ಷರೂ ಆಗಿದ್ದು ಪ್ರಸ್ತುತ ದೇವಸ್ಥಾನ ಜೀರ್ಣೋದ್ಧಾರ ನವೀಕರಣಗೊಳಿಸುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ಇವರ ಪತ್ನಿ ನಾರಾ ಶೈಲಜಾ ರೆಡ್ಡಿ ಅವರು ಕೂಡ ಪತಿಯ ಜೊತೆಗೆ ನಿಂತು ದೇವಸ್ಥಾನದ ಸಂಪೂರ್ಣ ಪ್ರಗತಿಗೆ ಶ್ರಮಿಸಿದ್ದಾರೆ. ಈ ದಂಪತಿಗಳಿಂದಾಗಿ ಈ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಮೊದಲಿನಂತೆ ವೈಭವಯುತವಾಗಿ ಹಮ್ಮಿಕೊಳ್ಳಲು ಸಿದ್ಧತೆಗಳು ನಡೆದಿವೆ. ಆಸ್ತಿಕ ಮಹಾಶಯರು ತಿರುಪತಿಗೆ ತೆರಳಲು ಸಾಧ್ಯವಾಗದೇ ಇದ್ದ ಪಕ್ಷದಲ್ಲಿ ರೂಪನಗುಡಿಯ ಈ ಶ್ರೀ ವೆಂಕಟೇಶ್ವರಸ್ವಾಮಿ ದೇವಸ್ಥಾನವನ್ನು ದರ್ಶಿಸಿ ಕೃತಾರ್ಥರಾಗಬಹುದು.

0 Comments