Ticker

6/recent/ticker-posts

Ad Code

Responsive Advertisement

Flash News: ಅನುಭವವಿಲ್ಲದ ಗೃಹಸಚಿವ: ಸಿದ್ದು

ಹುಬ್ಬಳ್ಳಿ, ಏ.6: ರಾಜ್ಯದ ಗೃಹಸಚಿವ ಆರಗ ಜ್ಞಾನೇಂದ್ರರವರಿಗೆ ಅನುಭವವೇ ಇಲ್ಲ, ಅವರಿಗೆ ಇಲಾಖೆಯನ್ನು ನಿಭಾಯಿಸಲು ಬರುವುದೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕಟುವಾಗಿ ಟೀಕಿಸಿದ್ದಾರೆ.

ನಗರದ ವಿಮಾನ ನಿಲ್ದಾಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಗೋರಿಪಾಳ್ಯದಲ್ಲಿ ನಡೆದ ಚಂದ್ರು ಹತ್ಯೆ ಪ್ರಕರಣ ಕುರಿತಂತೆ ಉರ್ದು ಬರುವುದಿಲ್ಲ ಎಂಬ ಕಾರಣಕ್ಕೆ ಹತ್ಯೆ ನಡೆದಿದೆ ಎಂಬ ಸಚಿವರ ಹೇಳಿಕೆ ಎಷ್ಟು ಸೂಕ್ತ? ಎಂದು ಖಾರವಾಗಿ ಪ್ರಶ್ನಿಸಿದರು. ಕೊಲೆ ಯಾರದ್ದೇ ಆಗಿರಲಿ ನಾನು ಖಂಡಿಸುತ್ತೇನೆ, ಚಂದ್ರು ಹತ್ಯೆ ಪ್ರಕರಣದಲ್ಲಿ ಆರೋಪಿ ಯಾರೇ ಇರಲಿ ಶಿಕ್ಷೆಯಾಗಲೇಬೇಕು, ಅವರಿಗೆ ನೇಣಿಗೆ ಹಾಕಿ, ಜೀವಾವಧಿ ಶಿಕ್ಷೆ ಕೊಡಿ, ಆದರೆ ಸಚಿವರು ನೀಡಿರುವ ಹೇಳಿಕೆ ಎಷ್ಟು ಸರಿ ಎಂದು ಅವರು ನುಡಿದರು. ಮೈಸೂರಿನಲ್ಲಿ ಗ್ಯಾಂಗ್‌ರೇಪ್ ನಡೆದಿದ್ದಾಗಲೂ ಗೃಹ ಸಚಿವರು `ಅಷ್ಟುಹೊತ್ತಿಗೆ ಏಕೆ ಹೋಗಿದ್ದರು’ ಎಂಬ ಹೇಳಿಕೆ ನೀಡಿದ್ದರು. ಓರ್ವ ಗೃಹಸಚಿವರು ಇಂಥ ಹೇಳಿಕೆಗಳನ್ನು ನೀಡಬಹುದೇ? ಇಂಥವರು ಗೃಹಸಚಿವರಾಗಲು ಅರ್ಹರೇ? ಎಂದು ಸಿದ್ಧರಾಮಯ್ಯ ಪ್ರಹಾರ ಮಾಡಿದರು. ಧಾರ್ಮಿಕ ಭಾವನೆಗಳನ್ನು ಕೆರಳಿಸುವಂಥದ್ದನ್ನು ನಾವು ಯಾವಾಗಲೂ ಖಂಡಿಸುತ್ತೇವೆ ಎಂದ ಅವರು ಸಚಿವರಿಗೆ ಸಿ.ಎಂ.ಸಹ ಕುಮ್ಮಕ್ಕು ಕೊಡ್ತಾರೆ ಎಂದು ನುಡಿದರು. ಜನರ ಬಳಿ ಹೋಗಲು ಸಾಧನೆ ಇಲ್ಲದ್ದರಿಂದ ಬಿಜೆಪಿಯವರು ಸಮಾಜದಲ್ಲಿನ ಸಾಮರಸ್ಯ ಹಾಳು ಮಾಡುತ್ತಿದ್ದಾರೆ ಎಂದು ಕಿಡಿಕಾರಿದ ಅವರು, ಹಲಾಲ್‌ಕಟ್, ಮಸೀದಿಯಲ್ಲಿ ಮೈಕ್ ಬಳಕೆ, ಮಾವಿನ ಹಣ್ಣು ಮಾರಾಟ ಇತ್ಯಾದಿ ವಿಷಯಗಳ ವಿವಾದ ಸೃಷ್ಟಿ ಮಾಡುವ ಮೂಲಕ ಮತಗಳ ಕ್ರೊಢೀಕರಣಕ್ಕೆ ಬಿಜೆಪಿ ಮುಂದಾಗುತ್ತಿದೆ ಎಂದು ಟೀಕಿಸಿದರು. ಅಡುಗೆ ಎಣ್ಣೆ, ಗ್ಯಾಸ್, ಗೊಬ್ಬರ ಇತ್ಯಾದಿ ಎಲ್ಲದರ ದರ ಏರಿಕೆಯಾಗಿದ್ದು ಬಂಡವಾಳ ಹೂಡಿಕೆದಾರರು ಕರ್ನಾಟಕಕ್ಕೆ ಬರದೇ ತಮಿಳ್ನಾಡಿಗೆ ಹೋಗುತ್ತಿದ್ದಾರೆ. ಈ ವಿಷಯದ ಕುರಿತು ಬಿಜೆಪಿ ಮಾತನಾಡುವುದಿಲ್ಲ. ಧರ್ಮದ ಹೆಸರಿನಲ್ಲಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ, ಇದು ಜನರಿಗೆ ಸ್ಪಷ್ಟವಾಗಿ ಅರ್ಥವಾಗುತ್ತಿದೆ ಎಂದು ಅವರು ನುಡಿದರು.

Varthajala daily, Bengaluru

Post a Comment

0 Comments

Ad Code

Responsive Advertisement