Ticker

6/recent/ticker-posts

Ad Code

Responsive Advertisement

ಗೃಹಸಚಿವ ಆರಗ ಜ್ಞಾನೇಂದ್ರ ವಜಾಗೊಳಿಸಲು ಬಿಎಸ್ಪಿ ಆಗ್ರಹ

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಮಹತ್ತರ ಜವಾಬ್ದಾರಿ ಹೊತ್ತಿರುವ ಗೃಹ ಇಲಾಖೆಗೆ, ಕಾನೂನು ಸುವ್ಯವಸ್ಥೆಯ ಪರಿಜ್ಞಾನವೇ ಇಲ್ಲದ ಆರಗ ಜ್ಞಾನೇಂದ್ರ ಮಂತ್ರಿಯಾಗಿ ಇರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ತಕ್ಷಣ ಅವರನ್ನು ವಜಾ ಮಾಡಬೇಕೆಂದು ಬಹುಜನ ಸಮಾಜ ಪಾರ್ಟಿ ರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ ಆಗ್ರಹಿಸಿದ್ದಾರೆ.


 ಬೆಂಗಳೂರಿನಲ್ಲಿ ಬೈಕ್ ಡಿಕ್ಕಿಗೆ ಸಂಬಂಧಪಟ್ಟ ಗಲಭೆಯಲ್ಲಿ ಮೃತಪಟ್ಟ ಚಂದ್ರು ಎಂಬ ದಲಿತ ಯುವಕನಿಗೆ ಸಂಬಂಧಪಟ್ಟಂತೆ, ಆತನಿಗೆ ಉರ್ದು ಭಾಷೆ ಗೊತ್ತಿಲ್ಲದ ಕಾರಣಕ್ಕೆ ಚುಚ್ಚಿ ಚುಚ್ಚಿ ಕೊಲೆ ಮಾಡಲಾಯಿತು ಎಂಬ ಅತ್ಯಂತ ಬಾಲಿಶ ಮತ್ತು ಪ್ರಚೋದನಾಕಾರಿ ಹೇಳಿಕೆಯನ್ನು ನೀಡಿ, ರಾಜ್ಯದಲ್ಲಿ ದಲಿತ ಮತ್ತು ಮುಸಲ್ಮಾನರ ನಡುವೆ ಕೋಮುಗಲಭೆ ನಡೆಸುವ ಹುನ್ನಾರವನ್ನು ಸ್ವತಹ ಗೃಹ ಸಚಿವರೇ ನಡೆಸಿದ್ದು ಅಕ್ಷಮ್ಯ ಅಪರಾಧವಾಗಿದೆ ಎಂದು ಕಿಡಿಕಾರಿದ್ದಾರೆ.

ಇವರಿಗೆ ರಾಜ್ಯದಲ್ಲಿ ಶಾಂತಿ ಸೌಹಾರ್ದತೆಯನ್ನು ಕಾಪಾಡುವ ಯಾವುದೇ ಕಾಳಜಿ ಇಲ್ಲದಿರುವುದು ಅವರ ಹಲವಾರು ಹೇಳಿಕೆಗಳು ಮತ್ತು ನಡವಳಿಕೆಗಳು ಸಾಕ್ಷಿಯಾಗಿವೆ.

ಮೈಸೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ಸಿಗರು ನನ್ನ ಮೇಲೆ ಅತ್ಯಾಚಾರ ನಡೆಸುತ್ತಿದ್ದಾರೆ ಎಂದು ಹೇಳಿ ನಗೆಪಾಟಲಿಗೆ ಈಡಾಗಿದ್ದರು.

 ನಂತರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪೊಲೀಸರು ಅತ್ಯಂತ ಭ್ರಷ್ಟರು ಮತ್ತು ಕೊಲೆಗಡುಕರು ಎಂದು ಹೇಳಿ ಇಡೀ ಪೊಲೀಸ್ ಇಲಾಖೆಯ ಮಾನ ಕಳೆಯುವ ಕೆಲಸ ಮಾಡಿದ್ದರು. ಇಲಾಖೆಯಲ್ಲಿರುವ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳನ್ನು ಸಹ ಇವರ ಹೇಳಿಕೆ ಅಣಕಿಸುವಂತಿತ್ತು ಎಂದಿದ್ದಾರೆ. ಹಾಗೆಯೇ ಇತ್ತೀಚೆಗೆ ಹಿಜಾಬ್, ಜಟ್ಕಾ ಕಟ್, ಹಲಾಲ್ ಕಟ್, ದೇವಸ್ಥಾನಗಳ 

ಮಳಿಗೆಗಳಲ್ಲಿ  ಇತರರು ವ್ಯಾಪಾರ ಮಾಡುವಂತಿಲ್ಲ ಎಂಬ ವಿಚಾರದಲ್ಲಿ ಹಾಗೂ ಮಸೀದಿಗಳ ಆಜಾನ್ ಗೆ ಸಂಬಂಧಪಟ್ಟಂತೆ ರಾಜ್ಯದಲ್ಲಿ ನಡೆಯುತ್ತಿರುವ ಅನಗತ್ಯ ಬೆಳವಣಿಗೆಗಳು ಗೃಹಸಚಿವರ ವೈಫಲ್ಯದಿಂದಲೆ ಆಗಿರುವಂತಹದ್ದು ಎಂದು ಟೀಕಿಸಿದ್ದಾರೆ.

ಕೆಲವು ಸಮಾಜಘಾತುಕ ಶಕ್ತಿಗಳು, ಅದರಲ್ಲೂ ವಿಶ್ವಹಿಂದು ಪರಿಷತ್, ಶ್ರೀರಾಮಸೇನೆ, ಎಬಿವಿಪಿ ಮತ್ತು ಬಿಜೆಪಿ ಹಾಗೂ ಸಂಘ ಪರಿವಾರ ದಲ್ಲಿರುವ ಕೆಲವು ಧರ್ಮಾಂಧರು ಮತ್ತು ಕಿಡಿಗೇಡಿಗಳು ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿಸಲು ನೀಡುತ್ತಿರುವ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸದೆ ಪೊಲೀಸ್ ಇಲಾಖೆ ನಿಷ್ಕ್ರಿಯವಾಗಲು ಆರಗ ಜ್ಞಾನೇಂದ್ರ ಅವರೇ ನೇರ ಹೊಣೆಯಾಗಿದ್ದಾರೆ.

 ಇವರ ಹೊಣೆಗೇಡಿತನದಿಂದ ವಿವಾದ ಸೃಷ್ಟಿಸುವವರಿಗೆ ಕುಮ್ಮಕ್ಕುನೀಡಿದಂತಾಗಿದೆ. ಯಾರಿಗೂ ಸಹ ಕಾನೂನು ಮತ್ತು ಪೊಲೀಸ್ ವ್ಯವಸ್ಥೆಯ ಮೇಲೆ ಭಯವಿಲ್ಲದಂತಾಗಿ ಜನಸಾಮಾನ್ಯರ ನಂಬಿಕೆಯನ್ನು ಕಳೆದುಕೊಳ್ಳುವ ಪರಿಸ್ಥಿತಿ ಸೃಷ್ಟಿಯಾಗಿದೆ.  ಗೃಹಸಚಿವರ ಇಷ್ಟೆಲ್ಲಾ ವೈಫಲ್ಯಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಮ್ಮ ಕುರ್ಚಿ ಉಳಿಸಿಕೊಳ್ಳಲು ಸರ್ಕಸ್ ಮಾಡುತ್ತಿದ್ದಾರೆ.

ಗೃಹ ಸಚಿವರು ಮತ್ತು ರಾಜ್ಯ ಸರ್ಕಾರದ ವೈಫಲ್ಯವನ್ನು ರಾಜ್ಯಪಾಲರು ಮತ್ತು ರಾಷ್ಟ್ರಪತಿ ಗಂಭೀರವಾಗಿ ಪರಿಗಣಿಸಿ ತಕ್ಷಣ ಗೃಹಸಚಿವರನ್ನು ವಜಾಗೊಳಿಸಲು ಮುಖ್ಯಮಂತ್ರಿಗೆ ಸೂಚಿಸಬೇಕೆಂದು ಬಹುಜನ ಸಮಾಜ ಪಾರ್ಟಿ ಆಗ್ರಹಿಸುತ್ತದೆ ಎಂದಿದ್ದಾರೆ.

ರಾಜ್ಯದ ಜನರಿಗೆ ಬೇಕಾಗಿರುವುದು ಶಾಂತಿ-ಸೌಹಾರ್ದತೆಯೇ ಹೊರತು, ಅಶಾಂತಿ ಮತ್ತು ಕೋಮುಗಲಭೆಗಳಲ್ಲ ಎಂಬ  ಕನಿಷ್ಠ ಪ್ರಜ್ಞೆಯೂ ಇಲ್ಲದಂತೆ ವರ್ತಿಸುತ್ತಿರುವ ಅರಗ ಜ್ಞಾನೆಂದ್ರ ಗೃಹ ಸಚಿವರಾಗಿ ಮುಂದುವರಿಯುವ  ನೈತಿಕತೆಯನ್ನು ಹೊಂದಿಲ್ಲ.

ರಾಜ್ಯ ಬಿಜೆಪಿಯ ವರ್ತನೆಯನ್ನು ನೋಡಿದರೆ ರಾಜ್ಯದಲ್ಲಿ ತಾಂಡವಾಡುತ್ತಿರುವ ನಿರುದ್ಯೋಗ, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ನಿಯಂತ್ರಣ ಮಾಡುವುದರಲ್ಲಿ ಸಂಪೂರ್ಣವಾಗಿ ವಿಫಲವಾಗಿರುವುದರಿಂದ ಮುಂದಿನ ಚುನಾವಣೆಯಲ್ಲಿ  ಸೋಲುವ ಭೀತಿಯಿಂದ ಕಂಗಾಲಾಗಿದ್ದಾರೆ ಎನಿಸುತ್ತದೆ.

ಯಾವುದೇ ಜನಪರ ಕಾರ್ಯಕ್ರಮಗಳು ಮತ್ತು ಅಭಿವೃದ್ಧಿ ಯೋಜನೆಗಳು ಇಲ್ಲದಿರುವುದರಿಂದ ಹಿಂದೂ-ಮುಸ್ಲಿಂ ಕೋಮು ಗಲಭೆ ಸೃಷ್ಟಿಸಿ, ರಾಜ್ಯದ ಜನರನ್ನು ಧರ್ಮದ ಹೆಸರಿನಲ್ಲಿ ವಿಭಾಗಿಸಿ ಅಧಿಕಾರವನ್ನು ಪಡೆಯುವ ಕುತಂತ್ರ ರೂಪಿಸಿದ್ದಾರೆ ಎನಿಸುತ್ತದೆ. ಹಾಗಲ್ಲದಿದ್ದರೆ ತಕ್ಷಣ ಗೃಹಸಚಿವರಾದ ಅರಬರೆ ಜ್ಞಾನೇಂದ್ರ ಅವರನ್ನು ವಜಾಗೊಳಿಸಿ ಜನತೆಯ ಗೊಂದಲವನ್ನು ನಿವಾರಿಸಬೇಕೆಂದು ಬಹುಜನ ಸಮಾಜ ಪಾರ್ಟಿ ಮುಖ್ಯಮಂತ್ರಿಯವರನ್ನು ಆಗ್ರಹಿಸುತ್ತದೆ.


Post a Comment

0 Comments

Ad Code

Responsive Advertisement