ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಮೇಲೆ ಶೇಕಡಾ 40 ಪರ್ಸೆಂಟ್ ಕಮಿಷನ್ ಪಡೆಯುವ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದು ಈ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಜ್ವಲಂತ ಸಾಕ್ಷಿಯಾಗಿದೆ.
ತಕ್ಷಣ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾಗೊಳಿಸಿ ಬಂಧಿಸಬೇಕೆಂದು ಬಹುಜನ ಸಮಾಜ ಪಾರ್ಟಿ ರಾಜ್ಯಾಧ್ಯಕ್ಷ ಎಂ. ಕೃಷ್ಣ ಮೂರ್ತಿ ಆಗ್ರಹಿಸಿದ್ದಾರೆ.
ಈಗಾಗಲೇ ಕೆಲವು ತಿಂಗಳ ಹಿಂದೆ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ರಾಜ್ಯ ಬಿಜೆಪಿ ಸರ್ಕಾರ ಶೇ 40 ರಷ್ಟು ಕಮಿಷನ್ ಪಡೆಯುತ್ತಿದ್ದಾರೆ ಎಂದು ನೇರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ರಾಜ್ಯಪಾಲರಿಗೆ ಪತ್ರ ಬರೆದು ದೂರು ನೀಡಿದ್ದರು.
ಈ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದ್ದಾಗ, ಮುಖ್ಯಮಂತ್ರಿ ಮತ್ತು ಸಚಿವರು ಹಾಗೂ ಶಾಸಕರು, ಬಿಜೆಪಿ ನಾಯಕರು ಈ ಆರೋಪಗಳನ್ನು ಅಲ್ಲಗಳೆದಿದ್ದರು.
ಆದರೆ ಸ್ವತಹ ಬಿಜೆಪಿ ಕಾರ್ಯಕರ್ತ ಮತ್ತು ಗುತ್ತಿಗೆದಾರ ಆಗಿದ್ದ ಸಂತೋಷ್ ಪಾಟೀಲ್ ಆತ್ಮಹತ್ಯೆ ಈ ಬಿಜೆಪಿ ಸರ್ಕಾರದ ಮುಖವಾಡ ಕಳಚಿದೆ ಎಂದು ಟೀಕಿಸಿದ್ದಾರೆ.
ಈ ಘಟನೆ ಗುತ್ತಿಗೆದಾರರ ಆರೋಪ ಸತ್ಯವೆಂಬುದನ್ನು ಸಾಬೀತುಪಡಿಸಿದೆ.
ಹಾಗೆಯೇ ಗುತ್ತಿಗೆದಾರರ ಸಂಘದ ಆರೋಪ ಕುರಿತು ಉನ್ನತಮಟ್ಟದ ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯಪಾಲರನ್ನು ಬಹುಜನ ಸಮಾಜ ಪಾರ್ಟಿ ಆಗ್ರಹಿಸುತ್ತದೆ ಎಂದಿದ್ದಾರೆ.
ಪಂಚಾಯತ್ ರಾಜ್ ಮಾತ್ರವಲ್ಲ ಲೋಕೋಪಯೋಗಿ ಇಲಾಖೆ, ಜಲ ಸಂಪನ್ಮೂಲ ಮತ್ತು ಇಂಧನ ಇಲಾಖೆ ಹಾಗೂ ಕಂದಾಯ ಇಲಾಖೆಯ ಹಗರಣಗಳನ್ನು ಸಹ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯದ ಜನರನ್ನು ಗೋಹತ್ಯೆ ನಿಷೇಧ, ಮತಾಂತರ ನಿಷೇಧ, ಹಿಜಾಬ್, ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ, ಹಲಾಲ್ ಕಟ್, ಜಟಕಾ ಕಟ್, ಮುಸ್ಲಿಮರಿಂದ ಮಾವು ಖರೀದಿ ನಿರ್ಬಂಧ , ಮಸೀದಿಗಳ ಮೇಲೆ ಮೈಕ್ ನಿರ್ಬಂಧ ಮುಂತಾದ ಭಾವನಾತ್ಮಕ ವಿಚಾರಗಳಿಂದ ದಿಕ್ಕು ತಪ್ಪಿಸಿ, ಧರ್ಮದ ಹೆಸರಿನಲ್ಲಿ ಕಚ್ಚಾಡುವಂತೆಮಾಡಿ ರಾಜ್ಯದ ಖಜಾನೆಯನ್ನು ಶೇ 40 ಕಮಿಷನ್ ಮೂಲಕ ಕೊಳ್ಳೆ ಹೊಡೆಯುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ ಎಂಬುದಕ್ಕೆ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಸ್ಪಷ್ಟ ಉದಾಹರಣೆ ಕಿಡಿಕಾರಿದ್ದಾರೆ.
ಕೇಂದ್ರ ಬಿಜೆಪಿ ನಾಯಕತ್ವ ಮತ್ತು ಪ್ರಧಾನಿ ನರೇಂದ್ರ ಮೋದಿ 'ನಾವು ತಿನ್ನುವುದಿಲ್ಲ ತಿನ್ನಲು ಬಿಡುವುದಿಲ್ಲ' ಎಂಬ ಘೋಷಣೆ ಕೇವಲ ಜನರನ್ನು ದಿಕ್ಕು ತಪ್ಪಿಸಲು ಮಾತ್ರ ಎಂಬುದನ್ನು ಈ ಘಟನೆ ಸಾಬೀತುಪಡಿಸುತ್ತಿದೆ.
ತಕ್ಷಣ ಈ ಕುರಿತು ಉನ್ನತ ಮಟ್ಟದ ತನಿಖೆಯನ್ನು ಸಿಬಿಐ ಮೂಲಕ ಮಾಡಿಸಿ ಬಿಜೆಪಿ ತನ್ನ ಸಾಚಾತನವನ್ನು ಸಾಬೀತು ಮಾಡಲಿ ಎಂದು ಬಿಎಸ್ಪಿ ಒತ್ತಾಯಿಸುತ್ತದೆ ಎಂದಿದ್ದಾರೆ.
0 Comments