ನಗರದ ಜೆಪಿನಗರ 8ನೇ ಫೇಸ್ ಕೊತ್ತನೂರು ಕೆರೆಯ ವ್ಯಾಪ್ತಿಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಹಲವು ಸವಲತ್ತುಗಳನ್ನು ಒದಗಿಸಿದ್ದು, ಸರಳ ಸಮಾರಂಭದಲ್ಲಿ ಸ್ಥಳೀಯ ಶಾಸಕ ಎಂ.ಕೃಷ್ಣಪ್ಪ ಅವರಿಗೆ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ರಾಜ್ಕಿರಣ್ ರಾಯ್ ಅವರು ಅಧಿಕೃತವಾಗಿ ಹಸ್ತಾಂತರಿಸಿದರು.
ಕೆರೆಯ ಅಂಗಳದ ಉದ್ಯಾನದಲ್ಲಿ ಕೊತ್ತನೂರು ಕೆರೆ ಅಭಿವೃದ್ಧಿ ಸಂಘ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಕಾರ್ಯವನ್ನು ಶ್ಲಾಘಿಸಿದ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ, ಈ ಸೌಕರ್ಯಗಳಿಂದ ಸುತ್ತಮುತ್ತಲ ವಾಸಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರಲ್ಲದೆ, ಈ ಸಾಧನಗಳನ್ನು ಬಳಸಿಕೊಳ್ಳುವಂತೆ ಸ್ಥಳೀಯರಿಗೆ ಕರೆ ನೀಡಿದರು.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಾಮಾಜಿಕ ಫೌಂಡೇಶನ್ ಕೊತ್ತನೂರು ಕೆರೆ ವ್ಯಾಪ್ತಿಯಲ್ಲಿ ಗ್ರಾನೈಟ್ನ ಅಸನಗಳು, ತೆರೆದ ಪ್ರದೇಶದ ಜಿಮ್ಗಳ ಸಾಧನಗಳು, ಮಕ್ಕಳಿಗಾಗಿ ಆಟಿಕೆಗಳು ಸೇರಿದಂತೆ ನಾಮಫಲಕಗಳು, ತ್ಯಾಜ್ಯ ವಿಲೇವಾರಿ ಸಾಧನಗಳನ್ನು ಅಳವಡಿಸಿದ್ದು, ಈ ನಾಗರೀಕ ಸೌಕರ್ಯಗಳಿಗಾಗಿ ಬ್ಯಾಂಕ್ 17.39 ಲಕ್ಷ ರೂ.ಗಳನ್ನು ವ್ಯಯಿಸಿದೆ.
ಇಂತಹ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದಕ್ಕೆ ತಮಗೆ ಸಂತಸವಾಗಿದೆ ಎಂದು ಹೇಳಿದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ರಾಜ್ಕಿರಣ್ ರಾಯ್, ಸ್ಥಳೀಯ ನಾಗರೀಕರು ಈ ಸೇವೆಗಳ ಲಾಭ ಪಡೆದು ಉತ್ತಮವಾಗಿ ನಿರ್ವಹಿಸಲಿ ಎಂದು ಆಶಿಸಿದರು.ಇದೇ ವೇಳೆ ಕೊತ್ತನೂರು ಕೆರೆ ಅಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಆರ್. ಶಿವಸ್ವಾಮಿ ಅವರು ಸಭಿಕರನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಬಿಬಿಎಂಪಿ ಮಾಜಿ ಸದಸ್ಯರುಗಳಾದ ನಾರಾಯಣ, ಜಯರಾಮ್ ಸೇರಿದಂತೆ ಸ್ಥಳೀಯ ನಾಗರೀಕರು ಉಪಸ್ಥಿತರಿದ್ದರು.

0 Comments