Ticker

6/recent/ticker-posts

Ad Code

Responsive Advertisement

ಮನೆರಹಿತರ ಜೀವನದ ಜೊತೆ ವಿ.ಸೋಮಣ್ಣ ಚೆಲ್ಲಾಟ: ಎಎಪಿ

ಬೆಂಗಳೂರು ನಗರದಲ್ಲಿ ಒಂದು ಲಕ್ಷ ಮನೆ ನಿರ್ಮಿಸುವ ಯೋಜನೆ ಹಳ್ಳ ಹಿಡಿಸಿ, ಸ್ವಂತ ಸೂರಿಲ್ಲದ ಬಡ-ಮಧ್ಯಮ ವರ್ಗದ ಜನರ ಜೀವನದ ಜೊತೆಗೆ ವಸತಿ ಸಚಿವ ವಿ.ಸೋಮಣ್ಣ ಚೆಲ್ಲಾಟವಾಡುತ್ತಿದ್ದಾರೆ ಎಂದು ಆಮ್‌ ಆದ್ಮಿ ಪಾರ್ಟಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ ಸದಂ ಆರೋಪಿಸಿದರು.

ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಜಗದೀಶ್‌ ವಿ ಸದಂ, “ಬೆಂಗಳೂರಿನಲ್ಲಿ ಬಹುಮಹಡಿ ಕಟ್ಟಡಗಳಲ್ಲಿ ಒಂದು ಲಕ್ಷ ಮನೆ ನಿರ್ಮಿಸಿಕೊಡುವ ಯೋಜನೆಯನ್ನು 2017ರ ನವೆಂಬರ್‌ನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದರು. ನಂತರ ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಸರ್ಕಾರಗಳು ರಾಜ್ಯವನ್ನು ಆಳಿದರೂ, ಐದು ವರ್ಷಗಳಲ್ಲಿ ಒಂದೇ ಒಂದು ಮನೆಯೂ ಫಲಾನುಭವಿಗಳಿಗೆ ನೀಡಿಲ್ಲ. ಮೂರು ಪಕ್ಷಗಳಿಗೆ ಬಡವರ ಮೇಲೆ ಸ್ವಲ್ಪವೂ ಕಾಳಜಿಯಿಲ್ಲ ಹಾಗೂ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರುವ ಬದ್ಧತೆಯಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ” ಎಂದು ಹೇಳಿದರು.

“ಸಿದ್ದರಾಮಯ್ಯನವರ ಅವಧಿಯಲ್ಲಿ ಫಲಾನುಭವಿಗಳಿಂದ ತಲಾ 100 ರೂಪಾಯಿ ಪಡೆದು, 87,000ಕ್ಕಿಂತ ಕಡಿಮೆ ವಾರ್ಷಿಕ ಆದಾಯವಿರುವ 48,614 ಮಂದಿಯನ್ನು ಆಯ್ಕೆ ಮಾಡಲಾಗಿತ್ತು. ಆದರೆ ಬಿಜೆಪಿ ಸರ್ಕಾರವು 2021ರ ಮೇ ತಿಂಗಳಿನಲ್ಲಿ ಆ ಎಲ್ಲ ಫಲಾನುಭವಿಗಳನ್ನು ರದ್ದು ಪಡಿಸಿ, ಆದಾಯಮಿತಿಯನ್ನು 3 ಲಕ್ಷಕ್ಕೆ ಏರಿಕೆ ಮಾಡಿ, ಅರ್ಜಿ ಜೊತೆಗೆ 1 ಲಕ್ಷ ರೂಪಾಯಿ ಪಾವತಿಸಬೇಕೆಂದು ಆದೇಶ ಹೊರಡಿಸಿತು. ಬಿಜೆಪಿ ಸರ್ಕಾರದ ಈ ನಿರ್ಧಾರದಿಂದಾಗಿ, 39,000 ಜನರು ಹೊಸದಾಗಿ ಅರ್ಜಿ ಸಲ್ಲಿಸಿದರೂ ಕೇವಲ 5,000 ಜನರಿಗೆ ಮಾತ್ರ ಲಕ್ಷ ರೂಪಾಯಿ ಪಾವತಿಸಲು ಸಾಧ್ಯವಾಯಿತು. ಆ ವೇಳೆ ಲಕ್ಷ ರೂಪಾಯಿ ಇಲ್ಲದ ಬಡವರು ಯೋಜನೆಯಿಂದ ದೂರವಾದರು” ಎಂದು ಜಗದೀಶ್‌ ವಿ ಸದಂ ಹೇಳಿದರು.

“ಬಿಡಿಎ ವ್ಯಾಪ್ತಿಗೆ ಸೀಮಿತವಾಗಿರುವ ಲಕ್ಷ ಮನೆ ಯೋಜನೆಯನ್ನು ಇಡೀ ಬೆಂಗಳೂರು ನಗರ ಜಿಲ್ಲೆಗೆ ವಿಸ್ತರಿಸುವುದಾಗಿ ಎಚ್‌.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಘೋಷಿಸಿದ್ದರು. ಆದರೆ ಅವರು ಈ ಕುರಿತು ಯಾವುದೇ ಆದೇಶ ಹೊರಡಿಸಿಲ್ಲ. ಕೇವಲ ಘೋಷಿಸಿ ಸುಮ್ಮನಾಗುವ ಮೂಲಕ ಕುಮಾರಸ್ವಾಮಿಯವರು ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ. ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಕೂಡ, ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಿ ಫಲಾನುಭವಿಗಳ ಸಂಖ್ಯೆಯನ್ನು ಲಕ್ಷಕ್ಕೆ ತಲುಪಿಸುವ ಕೆಲಸವನ್ನು ಮಾಡಿಲ್ಲ” ಎಂದು ಜಗದೀಶ್‌ ವಿ ಸದಂ ಆರೋಪಿಸಿದರು.

“ಯೋಜನೆಗೆ ಅರ್ಜಿ ಸಲ್ಲಿಸುವ ಸಾಫ್ಟ್‌ವೇರ್‌ನಲ್ಲಿರುವ ದೋಷದಿಂದಾಗಿ ಜನರು ಪರದಾಡುವಂತಾಗಿದೆ. ಇದರಿಂದಾಗಿ ಅರ್ಜಿದಾರರಿಗೆ ತಮ್ಮ ವಿಧಾನಸಭಾ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರಗಳಲ್ಲಿ ಮನೆ ಆಯ್ಕೆಯಾಗುತ್ತಿದೆ. ಯಾರಾದರೂ ಇದನ್ನು ಪ್ರಶ್ನಿಸಿದರೆ, ಲಕ್ಷ ರೂಪಾಯಿ ವಾಪಸ್‌ ನೀಡುವ ಮೂಲಕ ಅವರನ್ನು ಯೋಜನೆಯಿಂದ ಹೊರಗಿಡಲಾಗುತ್ತಿದೆ. ವಸತಿ ಸಚಿವ ವಿ.ಸೋಮಣ್ಣ ಹಾಗೂ ಬಿಜೆಪಿ ಶಾಸಕರ ಹಿಂಬಾಲಕರಿಗೆ ಮಾತ್ರ ಮನೆಗಳು ಸಿಗಬೇಕೆಂದು ಈ ರೀತಿಯ ಹುನ್ನಾರ ಮಾಡಲಾಗುತ್ತಿದೆ” ಎಂದು ಜಗದೀಶ್‌ ವಿ ಸದಂ ಆಕ್ರೋಶ ವ್ಯಕ್ತಪಡಿಸಿದರು.

“ಲಕ್ಷ ರೂಪಾಯಿ ನೀಡಿದ ಅರ್ಜಿದಾರರು ಮೃತಪಟ್ಟರೆ, ಅವರ ಕುಟುಂಬ ಸದಸ್ಯರಿಗೆ ಯೋಜನೆಯನ್ನು ವರ್ಗಾವಣೆ ಮಾಡಬೇಕು. ಆದರೆ ಅರ್ಜಿದಾರರು ಮೃತಪಟ್ಟ ಕಾರಣಕ್ಕೆ ಅವರ ಕುಟುಂಬವನ್ನು ಯೋಜನೆಯಿಂದ ಹೊರಗಿಟ್ಟು, ಹಣವನ್ನು ವಾಪಸ್‌ ನೀಡುತ್ತಿರುವುದು ಖಂಡನೀಯ. ಇಂತಹ ಸಾಲುಸಾಲು ದೋಷಗಳಿದ್ದರೂ ಬಡ ಜನರಿಗಾಗಿ ಯಾವುದೇ ಕ್ರಮಕೈಗೊಳ್ಳದ ಸೋಮಣ್ಣ ಒಬ್ಬ ನಿಷ್ಪ್ರಯೋಜಕ ಮಂತ್ರಿ” ಎಂದು ಜಗದೀಶ್‌ ವಿ ಸದಂ ಟೀಕಿಸಿದರು.

“ವಿ.ಸೋಮಣ್ಣನವರು ತಮ್ಮ ವೈಫಲ್ಯವನ್ನು ಮರೆಮಾಚಲು, ಹಿಂದಿನ ಸಮ್ಮಿಶ್ರ ಸರ್ಕಾರವು ಭೂಸ್ವಾಧೀನ ಮಾಡಿಲ್ಲವೆಂದು ಸುಳ್ಳು ಹೇಳುತ್ತಿದ್ದಾರೆ. ಮಾರ್ಚ್‌ 7, 2019ರಂದು ಎನ್‌ಸಿಸಿ ಲಿಮಿಟೆಡ್‌, ರಾಮಲಿಂಗಂ, ಕೆಎಂಇ ಪ್ರಾಜೆಕ್ಟ್‌, ರಾಮ್ಕಿ ಇನ್‌ಫ್ರಾಸ್ಟ್ರಕ್ಚರ್‌ ಕಂಪನಿಗಳಿಗೆ ಮನೆ ನಿರ್ಮಿಸಲು ಕಾರ್ಯಾದೇಶ ಹೊರಡಿಸಲಾಗಿದೆ. ಭೂಸ್ವಾಧೀನವಾಗಿಲ್ಲದಿದ್ದರೆ ಕಾರ್ಯಾದೇಶ ನೀಡಲು ಸಾಧ್ಯವಾಗುತ್ತಿತ್ತೇ?” ಎಂದು ಜಗದೀಶ್‌ ವಿ ಸದಂ ಪ್ರಶ್ನಿಸಿದರು.

ಬೆಂಗಳೂರು ನಗರದ ಎಎಪಿ ಅಧ್ಯಕ್ಷ ಮೋಹನ್‌ ದಾಸರಿ ಮಾತನಾಡಿ, “ಬಿಜೆಪಿ ಅವಧಿಯಲ್ಲಿ ಅರ್ಜಿ ಸಲ್ಲಿಸಿರುವವರ ಜೊತೆಗೆ, ಸಿದ್ದರಾಮಯ್ಯ ಅವಧಿಯಲ್ಲಿ ಅರ್ಜಿ ಸಲ್ಲಿಸಿದ್ದ 48,614 ಜನರಿಗೆ ಕೂಡ ಸರ್ಕಾರವು ಮನೆಗಳನ್ನು ನೀಡಬೇಕು. ಮನೆಯನ್ನು ಹಂಚಿಕೆ ಮಾಡಿದ ಬಳಿಕವಷ್ಟೇ ಲಕ್ಷ ರೂಪಾಯಿ ಪಡೆಯಬೇಕು. ಜೊತೆಗೆ, ಅತಿವೃಷ್ಟಿಯಿಂದಾಗಿ ರಾಜ್ಯದ ವಿವಿಧೆಡೆ 2018ರಿಂದ 2021ರವರೆಗೆ ಸರ್ಕಾರಿ ಅಂಕಿಅಂಶದ ಪ್ರಕಾರವೇ 27 ಲಕ್ಷ ಜನರು ಮನೆ ಕಳೆದುಕೊಂಡಿದ್ದಾರೆ. ಈ ಪೈಕಿ ಕೇವಲ 47 ಕುಟುಂಬಗಳಿಗೆ ಮಾತ್ರ ಮನೆ ನಿರ್ಮಿಸಲು 5 ಲಕ್ಷ ರೂಪಾಯಿ ಅನುದಾನ ಸಿಕ್ಕಿದೆ. ವಿ.ಸೋಮಣ್ಣನವರ ನಿರ್ಲಕ್ಷ್ಯದಿಂದಾಗಿ ಸಂತ್ರಸ್ತರು ಟೆಂಟ್‌ ಹಾಕಿಕೊಂಡು ಬದುಕುತ್ತಿದ್ದಾರೆ. ತಕ್ಷಣವೇ ಎಲ್ಲರಿಗೂ 5 ಲಕ್ಷ ಬಿಡುಗಡೆ ಮಾಡಿ, ಮನೆ ನಿರ್ಮಾಣಕ್ಕೆ ನೆರವಾಗಬೇಕು” ಎಂದು ಆಗ್ರಹಿಸಿದರು.

ಆಮ್‌ ಆದ್ಮಿ ಪಾರ್ಟಿ ಮುಖಂಡರಾದ ಚನ್ನಪ್ಪಗೌಡ ನೆಲ್ಲೂರು, ಭಾನುಪ್ರಕಾಶ್, ಉಷಾ ಮೋಹನ್, ಸುಹಾಸಿನಿ ಫಣಿರಾಜ್ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

Post a Comment

0 Comments

Ad Code

Responsive Advertisement