*ಬಂಜಾರ ಸಮುದಾಯದ ಹಿರಿಯ ಮುಖಂಡ ಹಾಗೂ ಬೆಂಗಳೂರು ಎಸ್‌ಸಿ-ಎಸ್‌ಟಿ ನೌಕರರ ಕಲ್ಯಾಣ ಸಂಘಟನೆಯ ಅಧ್ಯಕ್ಷ ಗುರು ಎಂ. ಚವಾಣ್‌ರವರು ಆಮ್ ಆದ್ಮಿ ಪಾರ್ಟಿ ಸೇರಿದರು.
ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಗುರು ಚವಾಣ್‌ರವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಬೆಂಗಳೂರು ಎಎಪಿ ಉಪಾಧ್ಯಕ್ಷ ಸುರೇಶ್ ರಾಥೋಡ್, “ಕೇಂದ್ರೀಯ ವಿದ್ಯಾಲಯ ಸಂಘಟನ್‌ನ ಮೇಲ್ವಿಚಾರಕರಾಗಿ, ಜನಪದ ವಿಶ್ವವಿದ್ಯಾಲಯದ ಬೆಂಗಳೂರು ಜಿಲ್ಲಾ ಕ್ಷೇತ್ರ ಪ್ರತಿನಿಧಿಯಾಗಿ ಹಾಗೂ ಬೆಂಗಳೂರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನೌಕರರ ಕಲ್ಯಾಣ ಸಂಘಟನೆ ಅಧ್ಯಕ್ಷರಾಗಿ ಗುರು ಚವಾಣ್‌ರವರು ಸಮಾಜಕ್ಕಾಗಿ ದುಡಿದಿದ್ದಾರೆ. ಲಂಬಾಣಿ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಲು ಶ್ರಮಿಸಿದ್ದಾರೆ. ಸುಮಾರು 30 ವರ್ಷಗಳು ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಇಂತಹ ಅನುಭವಿ ನಾಯಕರು ಆಮ್ ಆದ್ಮಿ ಪಾರ್ಟಿಯ ಸೇರುತ್ತಿರುವುದು ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ” ಎಂದು ಹೇಳಿದರು.
ಗುರು ಚವಾಣ್‌ರವರು ಮಾತನಾಡಿ, “ದೇಶ ಹಾಗೂ ರಾಜ್ಯವನ್ನು ಆಳಿದ ಬಿಜೆಪಿ, ಕಾಂಗ್ರೆಸ್ ಮತ್ತಿತರ ಪಕ್ಷಗಳು ದಲಿತರು ಹಾಗೂ ಹಿಂದುಳಿದ ಸಮುದಾಯದವರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದವೇ ಹೊರತು, ಆ ವರ್ಗಗಳ ಜನರ ಏಳಿಗೆಗೆ ಶ್ರಮಿಸಲಿಲ್ಲ. ಆದರೆ ಆಮ್ ಆದ್ಮಿ ಪಾರ್ಟಿಯು ಬಂಜಾರ ಸಮುದಾಯ ಸೇರಿದಂತೆ ಎಲ್ಲ ಸಮುದಾಯಗಳನ್ನು ಸಮಾನವಾಗಿ ಕಾಣುತ್ತಿದೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆಡಳಿತದಲ್ಲಿ ಅಲ್ಲಿನ ಎಲ್ಲ ಸಮುದಾಯಗಳಿಗೆ ಅನುಕೂಲವಾಗುತ್ತಿದೆ. ಕರ್ನಾಟಕದಲ್ಲೂ ಅದೇ ಮಾದರಿಯ ಆಡಳಿತ ಬರಬೇಕು” ಎಂದು ಹೇಳಿದರು.
ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ಪ್ರಧಾನ ಕಾರ್ಯದರ್ಶಿ ಜಗದೀಶ್‌ಚಂದ್ರ ಮಾತನಾಡಿ, “ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ನಂತಹ ಭ್ರಷ್ಟ ಪಕ್ಷಗಳನ್ನು ಕರ್ನಾಟಕದ ಜನತೆ ತಿರಸ್ಕರಿಸಲು ಆರಂಭಿಸಿದ್ದಾರೆ. ಕೇಜ್ರಿವಾಲ್‌ರವರ ಪಾರದರ್ಶಕ ಹಾಗೂ ಜನಪರ ಆಡಳಿತದತ್ತ ಮುಖ ಮಾಡುತ್ತಿದ್ದಾರೆ. ಈಗಾಗಲೇ ಅನೇಕ ಯುವಕರು, ಗಣ್ಯರು, ಸಾಧಕರು ಪಕ್ಷವನ್ನು ಸೇರಿದ್ದಾರೆ. ಮುಂದಿನ ದಿನಗಳಲ್ಲಿ ಇದು ದೊಡ್ಡ ಪ್ರಮಾಣದಲ್ಲಿ ಮುಂದುವರಿಯಲಿದೆ” ಎಂದು ಹೇಳಿದರು.
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಎಎಪಿ ಮುಖಂಡ ಬೋಪಣ್ಣ ಹಾಗೂ ಇನ್ನಿತರ ಮುಖಂಡರು, ಗುರು ಚವಾಣ್ ಬೆಂಬಲಿಗರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

0 Comments