ಕಲಾವಿದರ ಕುಟುಂಬದಲ್ಲಿ ಜನಿಸಿ ಕಲೆಯ ನಡುವೆ ಬೆಳೆದ ಕುಮಾರಿ ಶೀತಲ ಹೇಮಂತ್ ಗೆ ಸಹಜವಾಗಿಯೇ ಬಹಳ ಸಣ್ಣ ವಯಸ್ಸಿನಿಂದಲೇ ನೃತ್ಯ ಸಂಗೀತಗಳ ಕಡೆ ಒಲವು ಹೆಚ್ಚು. ಕರ್ನಾಟಕದ ಗೌರವಾನ್ವಿತ ಭರತನಾಟ್ಯ ಗುರುಗಳಲೊಬ್ಬರಾದ ತನ್ನ ತಾಯಿ, ಗುರು ಶ್ರೀಮತಿ ಪದ್ಮಾ ಹೇಮಂತ್ ರವರ ಬಳಿ ಭರತನಾಟ್ಯದ ಕ್ರಮ ಶಿಕ್ಷಣವನ್ನು ಪಡೆದಿದ್ದಾರೆ ಶೀತಲ್. ಸ್ವಂತ ತಾಯಿಯೇ ಆದರೂ, ಪಾಠದ ವಿಷಯದಲ್ಲಿ ತಮ್ಮ ಗುರುಗಳು ಬಹಳ ಶಿಸ್ತಿನವರೆಂದು ನಗುತ್ತಲೇ ಒಪ್ಪಿಕೊಳ್ಳುತ್ತಾರೆ ಶೀತಲ್. ಇನ್ನೇನು ಎಂ ಬಿ ಎ ಸ್ನಾತಕೋತ್ತರ ಪದವಿಯನ್ನು ಮುಗಿಸಲಿರುವ ಶೀತಲ್ ಹೇಮಂತ್ ಭರತನಾಟ್ಯ ವಿಷಯದಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮಾಸ್ಟರ್ ಇನ್ ಪರ್ಫಾಮಿಂಗ್ ಅರ್ಟ್ಸ್ ವ್ಯಾಸಂಗ ಮಾಡುತ್ತಿದ್ದಾರೆ.
ಉತ್ತಮ ಶ್ರೇಣಿಯಲ್ಲಿ ಭರತನಾಟ್ಯ ವಿದ್ಯುತ್ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿರುವ ಶೀತಲ್ ರವರು ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯದ ಭರತನಾಟ್ಯದಲ್ಲಿ ಹಿರಿಯ ಪರೀಕ್ಷೆಯಾದ ಅಲಂಕಾರ್ ಪರೀಕ್ಷೆಯನ್ನು ಸತತವಾಗಿ ಎರಡೂ ವರ್ಷಗಳು ನಾಡಿಗೇ ಪ್ರಥಮ ಥ್ಯಾಂಕ್ ಗಳಿಸಿ ಕರ್ನಾಟಕಕ್ಕೆ ಗೌರವ ತಂದಿದ್ದಾರೆ.
ಕರ್ನಾಟಕ ಸರ್ಕಾರದ ಸಂಗೀತ ನೃತ್ಯ ಅಕಾಡೆಮಿಯ ಶಿಷ್ಯವೇತನದ ಜೊತೆಗೆ ಕೇಂದ್ರ ಸರ್ಕಾರದ ಪ್ರತಿಷ್ಠಿತ ಸಿಸಿಆರ್ಟಿ ಶಿಷ್ಯವೇತನವನ್ನೂ' ಪಡೆದಿದ್ದಾರೆ.
ನಾಡಿನಾದ್ಯಂತ, ದೇಶದಾದ್ಯಂತ ತಮ್ಮ ಏಕವ್ಯಕ್ತಿ ಪ್ರದರ್ಶನವನ್ನು ನೀಡಿ ಅಪಾರವಾದ ಜನಮನ್ನಣೆಗೆ ಪಾತ್ರರಾಗಿದ್ದಾರೆ ಶೀತಲ್. ತಮ್ಮ ತಾಯಿ ಗುರು ಶ್ರೀಮತಿ ಪದ್ಮ ಹೇಮಂತ್ರವರ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ತಮ್ಮ ನೃತ್ಯ ಸಂಸ್ಥೆ, ಸಂಗೀತ್ ನೃತ್ಯ ಭಾರತಿ ಅಕಾಡೆಮಿಯ ತಂಡದ ಅನೇಕ ಪ್ರದರ್ಶನಗಳಲ್ಲಿ ಪ್ರಮುಖ ಭೂಮಿಕೆಯನ್ನು ನಿಭಾಯಿಸುತ್ತಾ ದೇಶದ ಉದ್ದಗಲಕ್ಕೂ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದಾರೆ.
ನೃತ್ಯದ ಜೊತೆಗೆ ಸಂಗೀತದಲ್ಲೂ ಆಸಕ್ತಿ ಇರುವ ಶೀತಲ್ ರವರ ಸಂಗೀತದ ಗುರುಗಳು ಅವರ ತಂದೆ ನಾಡಿನ ಹೆಸರಾಂತ ಪಿಟೀಲು ವಾದಕರು ಮತ್ತು ಸಂಗೀತ ಸಂಯೋಜಕರೂ ಆದ ವಿದ್ವಾನ್ ಬಿ ಆರ್ ಹೇಮಂತ್ ಕುಮಾರ್ ಮತ್ತು ವಿದುಷಿ ಬಿ ಆರ್ ಗೀತರವರು.
ನಾಟ್ಯ ಶಾರದೆ, ನೃತ್ಯ ಕನ್ನಿಕಾ ಮಿಸ್. ಎಂ ಇ ಎಸ್, ಲಾಸ್ಯ ಮೋಹಿನಿ, ನೃತ್ಯ ಪದ್ಮ ಮುಂತಾದವು ಬಹುಮುಖ ಪ್ರತಿಭೆಯ ಶೀತಲ್ ಸಂದ ಕೆಲವು ಪ್ರಶಸ್ತಿ-ಪುರಸ್ಕಾರಗಳು.
ನಾಡಿನ ಪ್ರತಿಷ್ಠಿತ ನೃತ್ಯೋತ್ಸವಗಳಲ್ಲಿ ಸಂಗೀತೋತ್ಸವಗಳಲ್ಲಿ ಭಾಗವಹಿಸಿದ ಹೆಗ್ಗಳಿಕೆ ಶೀತಲ್ ಅವರದು. ಪ್ರಸ್ತುತ ಸಂಗೀತ ನೃತ್ಯ ಭಾರತಿ ಅಕಾಡೆಮಿಯ ನೃತ್ಯ ಶಿಕ್ಷಕಿಯಾಗಿ ಅನೇಕ ಅರಳುವ ಪ್ರತಿಭೆಗಳಿಗೆ ಪ್ರೋತ್ಸಾಹದ ನೀರೆರೆಯುವ ಕೈಂಕರ್ಯ ನಡೆಸುತ್ತಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳ ನಿರೂಪಣೆಯಲ್ಲಿಯೂ ಆಸಕ್ತಿ ಹೊಂದಿರುವ ಶೀತಲ್ ಅನೇಕ ಕಾರ್ಯಕ್ರಮಗಳ ನಿರೂಪಣೆ ಮಾಡಿರುತ್ತಾರೆ. ಇಂಪಾದ ಧ್ವನಿಯ ಗಾಯಕಿ ಶೀತಲ್ ಹಾಡುಗಾರಿಕೆಯಲ್ಲೂ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ರಾಘವೇಂದ್ರ ರಾಜಕುಮಾರ್ ರವರ ಬಹುವರ್ಷಗಳ ನಂತರದ ಚಿತ್ರವಾಗಿ ಮೂಡಿಬಂದ ಶ್ರೀ ನಿಖಿಲ್ ಮಂಜು ರವರ ನಿರ್ದೇಶನದ 'ಅಮ್ಮನ ಮನೆ' ಚಿತ್ರದ ನಾಯಕಿಯಾಗಿಯೂ ನಟಿಸಿರುವ ಹೆಮ್ಮೆ ಶೀತಲ್ ರವರದು. ನಮ್ಮ ದೇಶದ ಪರಂಪರೆ ಸಂಸ್ಕೃತಿಯನ್ನು ಬಿಂಬಿಸುವ ಪ್ರದರ್ಶನ ಕಲೆಯ ಮೂಲಕ ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತಾವು ಹೆಚ್ಚು ತೊಡಗಿಸಿಕೊಳ್ಳಬೇಕೆಂದು ಶೀತಲ್ ರವರ ಹೆಬ್ಬಯಕೆ. ನಿರ್ದಿಷ್ಟವಾದ ಗುರಿ, ಅದನ್ನು ಸಾಧಿಸಲು ಬೇಕಾದ ಪರಿಶ್ರಮ, ಶಿಸ್ತು, ಸಕಾರಾತ್ಮಕ ಮನೋಭಾವ ಇವುಗಳೆಲ್ಲದರ ಜೊತೆಗೆ ವಿದ್ಯೆಗೆ ತಕ್ಕ ವಿನಯ ಹೊಂದಿರುವ ಇಂತಹ ಅಪರೂಪದ ಪ್ರತಿಭೆಗಳು ನಮ್ಮ ದೇಶದ ಆಸ್ತಿ. ಇಂಥ ಕಲೆಯ ವಿವಿಧ ಪ್ರಕಾರಗಳಲ್ಲಿ ತಮ್ಮನ್ನು ತಾವು ಯಶಸ್ವಿಯಾಗಿ ತೊಡಗಿಸಿಕೊಂಡಿರುವ ಸಹೃದಯಿ, ನಿಗರ್ವಿ, ಸರಳ ಮತ್ತು ಸಜ್ಜನಿಕೆಯ ಸ್ವಭಾವದ ಶೀತಲ್ ಹೇಮಂತ್ ರವರಿಗೆ ಮತ್ತಷ್ಟು ಮಗದಷ್ಟು ಪ್ರೋತ್ಸಾಹ ಸಿಕ್ಕಿ ಅವರ ಉದಾತ್ತವಾದ ಕನಸುಗಳು ನನಸಾಗಲೆಂದು ಹೃತ್ಪೂರ್ವಕವಾಗಿ ಹಾರೈಸೋಣ.



0 Comments