Ticker

6/recent/ticker-posts

Ad Code

Responsive Advertisement

ಬೆಲೆ ಏರಿಕೆ ಖಂಡಿಸಿ ಎಎಪಿ ಮಹಿಳಾ ಘಟಕದಿಂದ ಪ್ರತಿಭಟನೆ

ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಆಮ್‌ ಆದ್ಮಿ ಪಾರ್ಟಿಯ ಮಹಿಳಾ ಘಟಕವು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್‌ ಪ್ರತಿಭಟನೆ ನಡೆಸಿತು.






ಇದೇ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಆಮ್‌ ಆದ್ಮಿ ಪಾರ್ಟಿಯ ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷ್ಯೆ ಕುಶಲಸ್ವಾಮಿ, “ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ದುರಾಡಳಿತದಿಂದಾಗಿ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಕೇಂದ್ರ ಸರ್ಕಾರವು ಅಡುಗೆ ಅನಿಲ, ಇಂಧನ ತೈಲ ಮುಂತಾದವುಗಳ ಬೆಲೆ ಏರಿಕೆ ಮಾಡುತ್ತಿದ್ದರೆ, ರಾಜ್ಯ ಸರ್ಕಾರವು ವಿದ್ಯುತ್‌, ಹಾಲಿನ ಬೆಲೆಯನ್ನು ಏರಿಸುತ್ತಿದೆ. ಉದ್ಯಮಿಗಳಿಗೆ ಲಾಭ ಮಾಡಿಕೊಟ್ಟು ಅವರಿಂದ ಪಕ್ಷಕ್ಕೆ ದೇಣಿಗೆ ಪಡೆಯುವ ದುರುದ್ದೇಶದಿಂದ ಸರ್ಕಾರಗಳು ಈ ರೀತಿ ಮಾಡುತ್ತಿವೆ. ಇದರ ಪರಿಣಾಮವಾಗಿ ಸಾಮಾನ್ಯ ಜನರು ಕಷ್ಟ ಅನುಭವಿಸುತ್ತಿದ್ದಾರೆ” ಎಂದು ಹೇಳಿದರು.

ಆಮ್‌ ಆದ್ಮಿ ಪಾರ್ಟಿಯ ಮಾಧ್ಯಮ ವಕ್ತಾರೆ ಉಷಾ ಮೋಹನ್‌ ಮಾತನಾಡಿ, “ಆಮ್‌ ಆದ್ಮಿ ಪಾರ್ಟಿಯು ಜನಸಾಮಾನ್ಯರ ಬಗ್ಗೆ ಕಾಳಜಿ ಹೊಂದಿರುವ ಏಕೈಕ ಪಕ್ಷವಾಗಿದ್ದು, ಬೆಲೆ ಏರಿಕೆಯನ್ನು ತೀವ್ರವಾಗಿ ಖಂಡಿಸುತ್ತದೆ. ದೆಹಲಿಯ ಎಎಪಿ ಸರ್ಕಾರವು ರಿಯಾಯಿತಿ ದರ ಅಥವಾ ಉಚಿತವಾಗಿ ಮೂಲ ಸೌಕರ್ಯಗಳನ್ನು ನೀಡಿ ಜನಸಾಮಾನ್ಯರಿಗೆ ನೆರವಾಗುತ್ತಿದೆ. ಅದಕ್ಕೆ ವಿರುದ್ಧವಾಗಿ, ಬಿಜೆಪಿ ಸರ್ಕಾರಗಳು ಜನರ ಬದುಕನ್ನು ಹೈರಾಣಾಗಿಸುತ್ತಿದೆ. ಒಂದೆಡೆ ಭ್ರಷ್ಟಾಚಾರದ ಮೂಲಕ ಜನರ ತೆರಿಗೆ ಹಣವನ್ನು ಲೂಟಿ ಮಾಡಿ, ಮತ್ತೊಂಡೆದೆ ಬೆಲೆ ಏರಿಕೆ ಮೂಲಕ ಜನರ ಉಳಿತಾಯದ ಹಣಕ್ಕೂ ಬಿಜೆಪಿ ಸರ್ಕಾರ ಕನ್ನ ಹಾಕುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಎಪಿಯ ಬೆಂಗಳೂರು ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಸುಹಾಸಿನಿ ಮಾತನಾಡಿ, “ನರೇಂದ್ರ ಮೋದಿಯವರ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಶೇ. 50ರಷ್ಟು ಸಬ್ಸಿಡಿಯೊಂದಿಗೆ ಕೇವಲ 400 ರೂಪಾಯಿಗೆ ಅಡುಗೆ ಅನಿಲ ಸಿಲೆಂಡರ್‌ ಸಿಗುತ್ತಿತ್ತು. ಜನರು ಖರೀದಿಸುವಾಗಲೇ ಸಬ್ಸಿಡಿ ಮೊತ್ತವನ್ನು ಕಳೆದು ಮಾರಾಟ ಮಾಡಿದರೆ ಸಬ್ಸಿಡಿ ಕಡಿತಗೊಳಿಸುವುದು ಜನರ ಗಮನಕ್ಕೆ ಬರುತ್ತದೆ ಎಂದು ಯೋಚಿಸಿದ ಮೋದಿ ಸರ್ಕಾರ, ಬ್ಯಾಂಕ್‌ ಖಾತೆಗೆ ಸಬ್ಸಿಡಿ ಮೊತ್ತವನ್ನು ಹಾಕಲು ಆರಂಭಿಸಿತು. ನಂತರ ಹಂತಹಂತವಾಗಿ ಸಬ್ಸಿಡಿ ಮೊತ್ತವನ್ನು 400ರಿಂದ ಸೊನ್ನೆಗೆ ಇಳಿಸಿತು. ಈಗ ಪದೇ ಪದೇ ಸಿಲಿಂಡರ್‌ ಬೆಲೆಯನ್ನು ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಗಾಯದ ಮೇಲೆ ಬರೆ ಎಳೆಯಲಾಗುತ್ತಿದೆ” ಎಂದು ಹೇಳಿದರು.

Post a Comment

0 Comments

Ad Code

Responsive Advertisement