ಬಳ್ಳಾರಿ,ಏ.28: ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಪೊಲೀಸ್ ಇಲಾಖೆ ಪಾತ್ರ ಪ್ರಮುಖವಾಗಿದ್ದು, ಪ್ರಕರಣಗಳನ್ನು ಬಗೆಹರಿಸುವುದರಲ್ಲಿ ಮತ್ತು ಮಾನವೀಯತೆಯಲ್ಲಿ ಕರ್ನಾಟಕ ಪೊಲೀಸ್ ರಾಷ್ಟ್ರದಲ್ಲೇ ಉತ್ತಮ ಪೊಲೀಸ್ ಪಡೆಯಾಗಿದೆ; ಇದು ನಮ್ಮ ಹೆಮ್ಮೆ ಎಂದು ಸಾರಿಗೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಹೇಳಿದರು. ಜಿಲ್ಲೆಯ ಸಿರುಗುಪ್ಪ ಪಟ್ಟಣದ ಎಪಿಎಂಸಿ ಆವರಣದಲ್ಲಿ ಪೊಲೀಸ್ ಉಪ-ಅಧೀಕ್ಷಕರ ಕಚೇರಿಯನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ಉತ್ತಮ ಸಮಾಜ ನಿರ್ಮಾಣದಲ್ಲಿ ಪೊಲೀಸಸರು ದೊಡ್ಡ ಜವಾಬ್ದಾರಿ ನಿಭಾಯಿಸುತ್ತಿದ್ದು, ನೂತನ ಪೊಲೀಸ್ ಕಛೇರಿ ಉದ್ಘಾಟನೆಯೊಂದಿಗೆ ಜಿಲ್ಲೆಗೆ ಮತ್ತೊಂದು ವ್ಯವಸ್ಥೆಯ ಸೇರ್ಪಡೆ ಆಗಿದೆ. ಇದರಿಂದ ಜನರಿಗೆ ಇನ್ನಷ್ಟು ಉತ್ತಮ ಸೇವೆಗಳನ್ನು ಒದಗಿಸಬಹುದಾಗಿದೆ ಎಂದರು.
ಮನೆಗಳಲ್ಲಿ ತಪ್ಪುಗಳನ್ನ ಮಾಡಿದಾಗ ತಿದ್ದಿ, ತೀಡಿ ಸರಿ ದಾರಿ ತೋರಲು ತಂದೆ ತಾಯಿ ಇರುತ್ತಾರೆ, ಹಾಗೆಯೇ ಸಮಾಜದಲ್ಲಿ ತಪ್ಪುಗಳು ಆಗದಂತೆ ನೋಡಿಕೊಂಡು, ಶಾಂತಿ-ಸುವ್ಯವಸ್ಥೆ ಕಾಪಾಡುವ ಕೆಲಸ ಪೊಲೀಸರು ಮಾಡುತ್ತಾರೆ ಎಂದು ತಿಳಿಸಿದರು. ಇವತ್ತು ಮಹಿಳೆ ಮತ್ತು ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಮಹಿಳಾ ದೌರ್ಜನ್ಯ ವಿಷಯ ಹಾಗೂ ಪರಿಶಿಷ್ಟ ಜಾತಿ , ಪಂಗಡಗಳ ಮೇಲೆ ದೌರ್ಜನ್ಯ ಸೇರಿದಂತೆ ಯಾವುದೇ ಪ್ರಕರಣ ಕೈಗೆತ್ತಿಕೊಂಡಲ್ಲಿ ಅಪರಾಧಿಗಳಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು. ಇತ್ತೀಚಿನ ದಿನಗಳಲ್ಲಿ ಅಮಾಯಕರನ್ನು ಮೋಸ ಮಾಡುವ ಸೈಬರ್ ಕ್ರೈಮ್ ಪ್ರಕರಣಗಳು ಎಲ್ಲಾ ಕಡೆ ಹೆಚ್ಚುತ್ತಿದ್ದು, ಬ್ಯಾಂಕ್‍ನಿಂದ ಕಾಲ್ ಮಾಡ್ತಿದ್ದೇವೆ, ದಾಖಲೆ ಪರಿಶೀಲನೆ ಮಾಡ್ತಿದ್ದೇವೆ, ಓಟಿಪಿ ಕೊಡಿ ಅಂತ ಕಾಲ್ ಮಾಡಿ, ಅಮಾಯಕ ಜನರ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಇಂತಹ ಪ್ರಕರಣಗಳನ್ನ ತಡೆಯಬೇಕಿದ್ದು, ಕಷ್ಟ ಪಟ್ಟು ದುಡಿಯುವ ಅಮಾಯಕರನ್ನ ಕಾಪಾಡುವ ಜವಾಬ್ದಾರಿ ಪೊಲೀಸರ ಮೇಲಿದೆ ಎಂದು ಹೇಳಿದರು.

0 Comments