ಮಧುಗಿರಿ : ಪಟ್ಟಣದ ತುಮಕೂರು ರಸ್ತೆಯಲ್ಲಿರುವ ನ್ಯಾಯಾಲಯದ ಆವರಣದಲ್ಲಿ ಭಾನುವಾರ ಜಿಲ್ಲಾ ನ್ಯಾಯಾಂಗ ಇಲಾಖೆ, ಲೋಕೋಪಯೋಗಿ ಇಲಾಖೆ ಮತ್ತು ಮಧುಗಿರಿ ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ 2 ನೇ ಮಹಡಿಯಲ್ಲಿ ನೂತನ 4 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಕಟ್ಟಡಕ್ಕೆ ಶಂಕು ಸ್ಥಾಪನೆ ನೆರವೇರಿಸಲಾಯಿತು.
ಕಾರ್ಯಕ್ರಮವನ್ನು ವರ್ಚುಯಲ್ ಮೂಲಕ ಉದ್ಘಾಟಿಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮಾತನಾಡಿ ಮಧುಗಿರಿಗೆ 2014 ರಲ್ಲೇ 4 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಕಟ್ಟಡಕ್ಕೆ ಶಿಫಾರಸ್ಸು ಮಾಡಲಾಗಿದ್ದು, 2019 ರಲ್ಲಿ ಮಂಜೂರಾತಿ ಸಿಕ್ಕಿದೆ. ಈಗಿರುವ ನ್ಯಾಯಾಲಯ ಸಂಕೀರ್ಣದ 2ನೇ ಅಂತಸ್ತಿನಲ್ಲಿ 4 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಕಟ್ಟಡ ನಿರ್ಮಿಸಲು ಎ.3 ರ ಭಾನುವಾರ ಉದ್ಘಾಟನೆ ಮಾಡಲಾಗಿದೆ ಎಂದರು.
ಹೈಕೋರ್ಟ್ ನ್ಯಾಯಮೂರ್ತಿ ರಂಗಸ್ವಾಮಿ ನಟರಾಜ್ ಮಾತನಾಡಿ ಮಧುಗಿರಿ ಪಟ್ಟಣದಲ್ಲಿರುವ ನ್ಯಾಯಾಲಯದ ಕಟ್ಟಡ ಬಹಳಷ್ಟು ಸುಂದರವಾಗಿದ್ದು, ಇಲ್ಲಿನ ಬೆಟ್ಟ-ಗುಡ್ಡಗಳಿಂದ ಕೂಡಿದ ಪರಿಸರ ಬಹಳಷ್ಟು ಉತ್ತಮವಾಗಿದೆ ಇಂತಹ ಸುಂದರ ಕಟ್ಟಡ ಬೇರೆ ಯಾವುದೇ ತಾಲೂಕಿನಲ್ಲೂ ಇಲ್ಲ. ಈ ನ್ಯಾಯಾಲಯದ 2 ನೇ ಅಂತಸ್ತಿನಲ್ಲಿ 4 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಕಟ್ಟಡ ಆರಂಭವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕೋರ್ಟ್ ಕೆಲಸಗಳಿಗೆ ಜಿಲ್ಲೆಯ ನ್ಯಾಯಾಲಕ್ಕೆ ಅಲೆಯುತ್ತಿದ್ದ ಕಕ್ಷಿದಾರರಿಗೆ ದೂರದೂರುಗಳಿಗೆವಾಲೆದಾಡುವ ಪರಿಸ್ಥಿತಿ ತಪ್ಪಲಿದ್ದು, ಖರ್ಚು ಕಡಿಮೆಯಾಗಲಿದೆ. ಈ ಸೌಲಭ್ಯ ಕಕ್ಷಿದಾರರಿಗೆ ತಲುಪುವಂತೆ ವಕೀಲರು ಕೆಲಸ ನಿರ್ವಹಿಸಬೇಕು ಎಂದು ಕಿವಿ ಮಾತು ಹೇಳಿದರು.
ಶಾಸಕ ಎಂ.ವಿ. ವೀರಭದ್ರಯ್ಯ ಮಾತನಾಡಿ ಪ್ರಪಂಚದಲ್ಲಿಯೇ ಭಾರತ ಅತ್ಯುತ್ತಮ ಪ್ರಜಾಪ್ರಭುತ್ವವನ್ನು ಹೊಂದಿದ್ದು, ದೇಶದ ನ್ಯಾಯಾಂಗ ವ್ಯವಸ್ಥೆ ವಿಶ್ವದ ಎಲ್ಲಾ ದೇಶಗಳಿಗಿಂತಲೂ ಅತ್ಯುತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ. ತಾಲೂಕಿನ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ತುರ್ತಾಗಿ ಇತ್ಯರ್ಥಗೊಳಿಸಬೇಕೆಂದು ನ್ಯಾಯಾದೀಶರಿಗೆ ಮನವಿ ಮಾಡಿದರು. ನ್ಯಾಯಾಲಯದ ಆವರಣದಲ್ಲಿ ತಾಲೂಕು ವಕೀಲರ ಸಂಘದ ನೂತನ ಕಟ್ಟಡಕ್ಕೆ ಅನುದಾನ ನೀಡಲಾಗುವುದು ಮತ್ತು ಉದ್ಯಾನವನ ನಿರ್ಮಿಸಲು ಎಲ್ಲಾ ರೀತಿಯ ಸಹಕಾರ ನೀಡಲು ಬದ್ದ ಎಂದರು.
ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘದ ಕಟ್ಟಡ ನಿರ್ಮಾಣಕ್ಕೆ ಸರ್ಕಾರದ ವತಿಯಿಂದ 2.17 ಎಕರೆ ಜಮೀನು ಮಂಜೂರಾಗಿದ್ದು, ತುರ್ತಾಗಿ ವಕೀಲರ ಸಂಘದ ಕಟ್ಟಡ ನಿರ್ಮಿಸಲು ಅನುದಾನ ಮಂಜೂರು ಮಾಡಿಕೊಡಬೇಕೆಂದು ಹೈಕೋರ್ಟ್ ನ್ಯಾಯಮೂರ್ತಿಗಳು ಮತ್ತು ಶಾಸಕ ಎಂ.ವಿ. ವೀರಭದ್ರಯ್ಯ ನವರಿಗೆ ಕಾರ್ಯಕ್ರಮ ದಲ್ಲಿ ವಕೀಲರ ಸಂಘದ ಅಧ್ಯಕ್ಷ ಪಿ.ಸಿ. ಕೃμÁ್ಣರೆಡ್ಡಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ತುಮಕೂರು ಆಡಳಿತಾತ್ಮಕ ನ್ಯಾಯಮೂರ್ತಿ ಜಿ.ನರೇಂದರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹೈಕೋರ್ಟ್ ಮಹಾವಿಲೇಖನಾಧಿಕಾರಿ ಶಿವಶಂಕರೇಗೌಡ, ರಾಜ್ಯ ವಕೀಲರ ಪರಿಷತ್ ಸದಸ್ಯರಾದ ಮಧುಸೂಧನ್ ಮತ್ತು ಬಸವರಾಜು, ಮಧುಗಿರಿಯ ನ್ಯಾಯಾಧೀಶರಾದ ತಾರಕೇಶ್ವರ ಗೌಡ ಪಾಟೀಲ್, ಹೆಚ್.ಎ. ಶಿಲ್ಪ, ಸಾಗರ್ ಗೌಡ ಪಾಟೀಲ್, ಸೌಮ್ಯಶ್ರೀ ಹವಳದ, ಕಾವ್ಯಶ್ರೀ, ವಕೀಲರ ಸಂಘದ ಕಾರ್ಯದರ್ಶಿ ಇ. ರಂಗನಾಥ್, ಖಜಾಂಚಿ ಜಿ. ರಂಗನಾಥ್, ಹಿರಿಯ ವಕೀಲರಾದ ಹೆಚ್.ಕೆ.ವಿ ರೆಡ್ಡಿ, ಪಂಚಾಕ್ಷರಯ್ಯ, ಬಿ.ಆರ್. ರಾಮಕೃಷ್ಣಯ್ಯ, ಜಿ.ಬಿ. ಹಾಲಪ್ಪ, ಪದಾಧಿಕಾರಿಗಳಾದ ಜಿ.ಎನ್. ನರಸಿಂಹಮೂರ್ತಿ, ಹೆಚ್.ಟಿ. ತಿಮ್ಮರಾಜು ಇತರ ವಕೀಲರಿದ್ದರು.

0 Comments