ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಿವಾಸದ ಮೇಲೆ ದಾಳಿ ಮಾಡುವ ಮೂಲಕ ಸಂಸದ ತೇಜಸ್ವಿ ಸೂರ್ಯರವರು ಬೆಂಗಳೂರಿಗೆ ಕಳಂಕ ತಂದಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಹೇಳಿದರು.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಗದೀಶ್ ವಿ ಸದಂ, “ಕೇಂದ್ರಾಡಳಿತ ಪ್ರದೇಶವಾದ ದೆಹಲಿಯ ಪೊಲೀಸ್ ಇ
ಲಾಖೆಯು ಕೇಂದ್ರ ಸರ್ಕಾರ ಹಿಡಿತದಲ್ಲಿದೆ. ಈ ಅವಕಾಶವನ್ನು ದುರ್ಬಳಕೆ ಮಾಡಿಕೊಂಡ ಬಿಜೆಪಿಯ ಗೂಂಡಾ ಕಾರ್ಯಕರ್ತರು ಕೇಜ್ರಿವಾಲ್ ನಿವಾಸದ ಮೇಲೆ ದಾಳಿ ಮಾಡಿದ್ದಾರೆ. ಆ ಗೂಂಡಾಗಳ ಗುಂಪನ್ನು ನಮ್ಮ ಬೆಂಗಳೂರಿನ ಸಂಸದರು ಮುನ್ನಡೆಸಿರುವುದು ಬೇಸರ ಸಂಗತಿ. ಶಾಂತಿ, ಸಭ್ಯತೆ, ಸಂಸ್ಕೃತಿಗೆ ಹೆಸರಾಗಿರುವ ಬೆಂಗಳೂರಿನ ಜನಪ್ರತಿನಿಧಿಯಾಗಿ, ಇಂತಹ ಕೆಲಸ ಮಾಡಲು ತೇಜಸ್ವಿ ಸೂರ್ಯರವರಿಗೆ ನಾಚಿಕೆಯಾಗಿಲ್ಲವೇ?” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ದೆಹಲಿಯಲ್ಲಿ ನೆಲೆಸಿರುವ ಕಾಶ್ಮೀರಿ ಪಂಡಿತರ ಕುಟುಂಬಗಳಿಗೆ ಕೇಜ್ರಿವಾಲ್ ಸರ್ಕಾರವು ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಉಚಿತ ವಿದ್ಯುತ್, ಉಚಿತ ಕುಡಿಯುವ ನೀರು, ಗುಣಮಟ್ಟದ ಶಿಕ್ಷಣ, ಅತ್ಯಾಧುನಿಕ ಆರೋಗ್ಯ ಸೇವೆ ಮುಂತಾದ ಮೂಲಸೌಕರ್ಯಗಳು ಅಲ್ಲಿರುವ ಕಾಶ್ಮೀರಿ ಪಂಡಿತರ ಕುಟುಂಬಗಳಿಗೆ ಸಿಗುತ್ತಿವೆ. ರಾಜ್ಯ ಬಿಜೆಪಿ ಸರ್ಕಾರವು ಇಲ್ಲಿ ನೆಲೆಸಿರುವ ಕಾಶ್ಮೀರಿ ಪಂಡಿತರ ಕುಟುಂಬಗಳಿಗೆ ಯಾವ ಸೌಲಭ್ಯಗಳನ್ನು ನೀಡುತ್ತಿದೆ ಎಂದು ತೇಜಸ್ವಿ ಸೂರ್ಯ ತಿಳಿಸಲಿ” ಎಂದು ಜಗದೀಶ್ ವಿ ಸದಂ ಸವಾಲು ಹಾಕಿದರು.
“ಗೂಂಡಾ ಕಾರ್ಯಕರ್ತರನ್ನು ಬಳಸಿಕೊಂಡು ಸಿಎಂ ನಿವಾಸದ ಮೇಲೆ ದಾಳಿ ಮಾಡುವ ಬೆಳವಣಿಗೆಯು ಪ್ರಜಾಪ್ರಭುತ್ವಕ್ಕೆ ಮಾರಕ. ದೇಶದ ರಾಜಕೀಯದಲ್ಲಿ ಉತ್ತಮ ಬದಲಾವಣೆ ಹಾಗೂ ಆಡಳಿತದಲ್ಲಿ ಸುಧಾರಣೆ ತರುವುದರಲ್ಲಿ ಆಮ್ ಆದ್ಮಿ ಪಾರ್ಟಿ ನಿರತವಾಗಿದೆ. ಇಂತಹ ದಾಳಿಗಳಿಂದ ಎಎಪಿಯನ್ನು ಹೆದರಿಸಬಹುದು ಎಂಬ ಭ್ರಮೆಯಿಂದ ಬಿಜೆಪಿ ಹೊರಬರಬೇಕು. ತೇಜಸ್ವಿ ಸೂರ್ಯರವರು ದೆಹಲಿ ಸಿಎಂ ಕೇಜ್ರಿವಾಲ್‌ರವರ ಕ್ಷಮಾಪಣೆ ಕೇಳಬೇಕು” ಎಂದು ಜಗದೀಶ್ ವಿ ಸದಂ ಆಗ್ರಹಿಸಿದರು.

0 Comments