Ticker

6/recent/ticker-posts

Ad Code

Responsive Advertisement

19 ಲಕ್ಷ ಇವಿಎಂ ನಾಪತ್ತೆ ಪ್ರಕರಣ: ಈವಿಎಂ ನಿಷೇಧಕ್ಕೆ ಬಿಎಸ್ಪಿ ಆಗ್ರಹ

ಸಾಮಾಜಿಕ ಕಾರ್ಯಕರ್ತರು ಮಾಹಿತಿ ಹಕ್ಕಿನಡಿ ಪಡೆದ ಅಂಕಿ-ಅಂಶಗಳ ಪ್ರಕಾರ ದೇಶದಲ್ಲಿ ಹತ್ತೊಂಬತ್ತು ಲಕ್ಷ ವಿದ್ಯುನ್ಮಾನ ಮತಯಂತ್ರಗಳು ನಾಪತ್ತೆಯಾಗಿರುವ ಘಟನೆ ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿರುವ ಸಂಕೇತವಾಗಿದೆ. ಆದ್ದರಿಂದ ತಕ್ಷಣ ಈವಿಎಂ ನಿಷೇಧ ಮಾಡಬೇಕೆಂದು ಬಹುಜನ ಸಮಾಜ ಪಾರ್ಟಿ ರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ.

      ತಕ್ಷಣ ಪಕ್ಷಾತೀತವಾಗಿ ಎಲ್ಲ ಪಕ್ಷಗಳಲ್ಲಿರುವ ಜನಪ್ರತಿನಿಧಿಗಳು ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ಈವಿಎಂ ನಿಷೇಧಕ್ಕೆ ವಿಶೇಷ ಅಧಿವೇಶನ ಕರೆಯಲು ಆಗ್ರಹಿಸಬೇಕು ಎಂದು ತಮ್ಮ ಪಕ್ಷ ಒತ್ತಾಯಿಸುತ್ತದೆ ಎಂದಿದ್ದಾರೆ.

     ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಸಂಸ್ಥೆಯಿಂದ 9,64,274 ಹಾಗೂ ಎಲೆಕ್ಟ್ರಾನಿಕ್ ಕಾರ್ಪೊರೇಷನ್ ಆಫ್ ಇಂಡಿಯಾ ಸಂಸ್ಥೆಯಿಂದ 9,29,992 ಈವಿಎಂ ಗಳು ನಾಪತ್ತೆಯಾಗಿವೆ ಎಂದು ಮಾಹಿತಿ ಹಕ್ಕಿನಡಿ ಪಡೆಯಲಾದ ದಾಖಲೆಗಳು ಹೇಳುತ್ತಿರುವುದು ಭಾರತದ ಪ್ರಜಾಪ್ರಭುತ್ವ ಎಷ್ಟು ಅಪಾಯದಲ್ಲಿದೆ ಎಂಬುದನ್ನು ಸಾಬೀತುಪಡಿಸುತ್ತಿವೆ.

    2014 -15 ರಲ್ಲಿ ಭಾರತೀಯ ಚುನಾವಣಾ ಆಯೋಗಕ್ಕೆ ಬಿಇಎಲ್ ಸಂಸ್ಥೆ ಪೂರೈಸಿರುವ 62, 183 ಈವಿಎಂ ಗಳು ಎಲ್ಲಿಗೆ ತಲುಪಿವೆ ಎಂಬುದರ ತನಿಖೆ ಈವರೆಗೂ ಆಗಿಲ್ಲವೆಂದರೆ ಆಶ್ಚರ್ಯವಾಗುತ್ತದೆ. ಇದರ ಬಗ್ಗೆ ಉನ್ನತಮಟ್ಟದ ತನಿಖೆ ಮತ್ತು ಚರ್ಚೆಯಾಗದ ಹೊರತು ಭಾರತದ ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

      2009 ರ ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಬಿಜೆಪಿಯ ಎಲ್. ಕೆ. ಅಡ್ವಾಣಿ, ಸುಬ್ರಹ್ಮಣ್ಯಂ ಸ್ವಾಮಿ, ಜಿವಿಎಲ್ ನರಸಿಂಹರಾವ್ ಪ್ರಬಲವಾಗಿ ಈವಿಎಂ ನಿಷೇಧದ ಬಗ್ಗೆ ಧ್ವನಿಯೆತ್ತಿದ್ದರು.

     ಈಗ ಅವರದೇ ಪಕ್ಷ ಕೇಂದ್ರ ಮತ್ತು ಬಹುತೇಕ ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಈಗಲೂ ಸಹ ದೇಶದ ಬಹುತೇಕ ನಾಗರಿಕರು ಮತ್ತು ಬಿಜೆಪಿಯೇತರ ಎಲ್ಲ ಪಕ್ಷಗಳ ಮುಖಂಡರು ಈವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವುದನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತಿರುವುದು ಪ್ರಜಾಪ್ರಭುತ್ವ ವಿರೋಧಿ ಧೋರಣೆಯಾಗಿದೆ ಎಂದಿದ್ದಾರೆ.

      ಚುನಾವಣಾ ಆಯೋಗ, ಕೇಂದ್ರ ಸರ್ಕಾರ ಮತ್ತು ಸುಪ್ರೀಂಕೋರ್ಟ್ ಈ ಗಂಭೀರ ವಿಚಾರಗಳ ಬಗ್ಗೆ ಮೌನವಾಗಿರುವುದು ಅನುಮಾನಕ್ಕೆ ಕಾರಣವಾಗಿದೆ.

       ಉತ್ತರ ಪ್ರದೇಶದ ಚುನಾವಣೆಯಲ್ಲಿ ಬಿಜೆಪಿ ಸೋಲಲಿದೆ ಎಂದು  ಭಾವಿಸಲಾಗಿತ್ತು. 

      ಕಾರಣ ಪೆಟ್ರೋಲ್, ಡೀಸೆಲ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ, ರೈತ ವಿರೋಧಿ ಕಾಯ್ದೆಗಳ ವಿರುದ್ಧದ ಹೋರಾಟ ಮತ್ತು ಲಖಿಮ್ ಪೂರ್ ಖೆರಿ ರೈತರ ಕೊಲೆ ಘಟನೆ, ಅತ್ರಾಸ್ ಮತ್ತು ಇತರ ಅತ್ಯಾಚಾರಗಳು, ಕೋವಿಡ್ ನಿರ್ವಹಣೆಯಲ್ಲಿ ವೈಫಲ್ಯದ ಸಂಕೇತವಾಗಿ ಗಂಗಾನದಿಯಲ್ಲಿ ತೇಲಿಬಂದ ಸಾವಿರಾರು ಶವಗಳು, ಅಲ್ಪಸಂಖ್ಯಾತರ ವಿರುದ್ಧದ ಸರ್ಕಾರದ ನೀತಿ ನಿಯಮಗಳು ಖಂಡಿತವಾಗಿಯೂ ಉತ್ತರಪ್ರದೇಶದಲ್ಲಿ ಬಿಜೆಪಿಗೆ ವಿರುದ್ಧವಾದ ಫಲಿತಾಂಶವನ್ನು ನೀಡುತ್ತಿದ್ದವು.

      ಜನರಿಲ್ಲದೆ ರೋಡ್ ಶೋ ರದ್ದುಗೊಳಿಸಿದ ಅಮಿತ್ ಶಾ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಪ್ರಚಾರಕ್ಕೆ ಅಡ್ಡಿ , ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಸೇರಿದಂತೆ ಹತ್ತು ಹಲವಾರು ಜನರನ್ನು ಉತ್ತರ ಪ್ರದೇಶದ ಜನ ಸರಿಯಾಗಿ ಚುನಾವಣಾ ಪ್ರಚಾರ ಮಾಡಲು ಸಹ ಬಿಟ್ಟಿರಲಿಲ್ಲ.

       ಇಷ್ಟಾದರೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದಿದ್ದಾರೆ.

      ಅದಕ್ಕೆ ಉದಾಹರಣೆಯಾಗಿ ಈವಿಎಂ ಬದಲಾಯಿಸಲು ನಮಗೆ ಒತ್ತಡ ಬಂದಿತ್ತು ಎಂಬ ಹೆಚ್ಚುವರಿ ಜಿಲ್ಲಾಧಿಕಾರಿಗಳ ಆಡಿಯೋ ಕ್ಲಿಪ್ ಸೋರಿಕೆ ಯಾಗಿದ್ದು ಅನುಮಾನವನ್ನು ಹೆಚ್ಚಿಸುತ್ತವೆ.

     ಹಾಗೆಯೇ ಇಬ್ಬರು ಹೆಚ್ಚುವರಿ ಜಿಲ್ಲಾಧಿಕಾರಿಗಳ ಅಮಾನತು ಸಹ ಈವಿಎಂಗೆ ಸಂಬಂಧಪಟ್ಟಂತ ವಿಚಾರಗಳಲ್ಲಿ ಆಗಿದೆ.

       ಈ ಎಲ್ಲವುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಭಾರತದಲ್ಲಿ ಖಂಡಿತವಾಗಿಯೂ ಈವಿಎಂ ದುರುಪಯೋಗಪಡಿಸಿಕೊಂಡು ಬಿಜೆಪಿ ಅಧಿಕಾರ ಪಡೆದುಕೊಳ್ಳುತ್ತಿದೆ ಎನ್ನುವ ಅನುಮಾನವನ್ನು ನಿರ್ಲಕ್ಷ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

      ಹಾಗೆಯೇ ವಿಶ್ವದ ಅತ್ಯಂತ ಮುಂದುವರಿದ ದೇಶಗಳಾದ ಜಪಾನ್, ಅಮೆರಿಕ, ಚೈನಾ, ಲಂಡನ್, ರಷ್ಯಾ ದೇಶಗಳಲ್ಲೂ ಸಹ ಇಂದಿಗೂ ಸಹ ಈವಿಎಂ ದುರುಪಯೋಗಪಡಿಸಿಕೊಳ್ಳ ಬಹುದು ಎಂಬ ಕಾರಣಕ್ಕೆ ಬ್ಯಾಲೆಟ್ ಪೇಪರ್ ಬಳಸಿ ಚುನಾವಣೆ ನಡೆಸಲಾಗುತ್ತಿದೆ. 

      ಹಾಗಾಗಿ ಚುನಾವಣಾ ಆಯೋಗ ಮತ್ತು ಸುಪ್ರೀಂಕೋರ್ಟ್ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಉಳಿವಿಗಾಗಿ ತಕ್ಷಣ ಈವಿಎಂ ನಿಷೇಧಿಸಿ ಬ್ಯಾಲೆಟ್ ಪೇಪರ್ ನಲ್ಲಿ ಚುನಾವಣೆ ನಡೆಸುವ ಮೂಲಕ ಎಲ್ಲಾ ಗೊಂದಲಗಳಿಗೂ ತೆರ ಎಳೆಯಬೇಕೆಂದು ಎಂದು ಹೇಳಿದ್ದಾರೆ.

      ಈ ಹಿಂದೆ ಆಮ್ ಆದ್ಮಿ ಪಕ್ಷ ದೆಹಲಿ ವಿಧಾನಸಭೆಯಲ್ಲಿ ಬಲವಾಗಿ ಇವಿಎಂ ಕುರಿತು ಅನುನುಮಾನ ವ್ಯಕ್ತಪಡಿಸಿದೆ.

     ಈಗ ಕರ್ನಾಟಕ ವಿಧಾನಸಭೆಯಲ್ಲಿ ಈ ಬಗ್ಗೆ ಗಂಭೀರವಾಗಿ ಚರ್ಚೆಯಾಗಿದೆ. ಇದರಂತೆ ಎಲ್ಲ ರಾಜ್ಯಗಳ ವಿಧಾನಸಭೆಗಳಲ್ಲಿ ಹಾಗೂ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ವಿಶೇಷ ಅಧಿವೇಶನ ಕರೆದು ಈವಿಎಂ ನಿಷೇಧದ ಬಗ್ಗೆ ಚರ್ಚೆ ನಡೆಸಬೇಕೆಂದು ಬಿಎಸ್ಪಿ ಒತ್ತಾಯಿಸುತ್ತದೆ ಎಂದಿದ್ದಾರೆ.

Post a Comment

0 Comments

Ad Code

Responsive Advertisement