Ticker

6/recent/ticker-posts

Ad Code

Responsive Advertisement

ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ವಿರೋಧಿ ಬಜೆಟ್ - ಬಿಎಸ್ಪಿ

  ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಂಡಿಸಿದ ₹2,65,730 ಕೋಟಿ ಮೊತ್ತದ ಬಜೆಟ್ ನಲ್ಲಿ,  ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಅರ್ಧಕ್ಕಿಂತ ಹೆಚ್ಚಿರುವ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳಿಗೆ ಕೇವಲ  ₹400 ಕೋಟಿ ಹಾಗೂ ಅಲ್ಪಸಂಖ್ಯಾತ ವರ್ಗಗಳಿಗೆ ಕೇವಲ ₹200 ಕೋಟಿ ಗಿಂತ ಕಡಿಮೆ ಅನುದಾನ ನೀಡುವ ಮೂಲಕ ಬಿಜೆಪಿ ಸರ್ಕಾರ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ವಿರೋಧಿ ಎಂದು ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ ಟೀಕಿಸಿದ್ದಾರೆ.

ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳಿಗೆ ಕನಿಷ್ಠವೆಂದರೂ ₹4 ಸಾವಿರ ಕೋಟಿ ರೂಪಾಯಿಗಳ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿಗೆ ₹2 ಸಾವಿರ ಕೋಟಿ ರೂಪಾಯಿಗಳ ಅನುದಾನ ಒದಗಿಸಬೇಕಾಗಿತ್ತು.

ಅದರಲ್ಲೂ ಕಳೆದ ವರ್ಷ ಅಲ್ಪಸಂಖ್ಯಾತರ ಅಭಿವೃದ್ಧಿಗೆ  ₹1700 ಕೋಟಿ ನೀಡಲಾಗಿತ್ತು. ಈ ಬಾರಿ ಕೇವಲ ₹200ಕೋಟಿ ಗಿಂತ ಕಡಿಮೆ ಅನುದಾನ ನೀಡಿರುವುದು ಬಿಜೆಪಿ ಸರ್ಕಾರದ ಮಲತಾಯಿ ಧೋರಣೆಗೆ ಸಾಕ್ಷಿಯಾಗಿದೆ ಎಂದಿದ್ದಾರೆ.

 ಎಸ್ ಸಿ  ಎಸ್ ಪಿ ಮತ್ತು ಟಿ ಎಸ್ಪಿ ಯೋಜನೆಗೆ ಕಳೆದ ಬಾರಿ ₹26005 ಕೋಟಿ ಅನುದಾನ ನೀಡಿದ್ದ ಸರ್ಕಾರ ಈ ಬಾರಿ ₹28234 ಕೋಟಿಗೆ ಹೆಚ್ಚಳ ಮಾಡಿದೆ.

ಆದರೆ ಕಳೆದ ಬಾರಿ ನೀಡಿದ್ದ ಅನುದಾನದಲ್ಲಿ ಕೇವಲ ₹16450 ಕೋಟಿ ಮಾತ್ರ ಬಿಡುಗಡೆ ಮಾಡಿದೆ. ಅಂದರೆ ₹9555 ಕೋಟಿ ಹಣ ಬಿಡುಗಡೆ ಮಾಡಿಲ್ಲ.

   ಹಾಗೆಯೇ ಸುಮಾರು 25 ಇಲಾಖೆಗಳ 47 ಯೋಜನೆಗಳಿಗೆ ಮೀಸಲಿರಿಸಿದ್ದ  ₹1744 ಕೋಟಿ ಹಣವನ್ನು ಖರ್ಚು ಮಾಡದೆ ಹಿಂದಿರುಗಿಸುವುದು ಬಿಜೆಪಿ ಸರ್ಕಾರದ ದಲಿತ ವಿರೋಧಿ ನೀತಿಗೆ ಸಾಕ್ಷಿಯಾಗಿದೆ.

ಬಜೆಟ್ ನಲ್ಲಿ ಹಣ ಘೋಷಿಸಿ ಮೇಲ್ವರ್ಗಗಳನ್ನು ಎಸ್ಸಿ, ಎಸ್ಟಿಗಳ ವಿರುದ್ಧ ಎತ್ತಿಕಟ್ಟುವ ಸರ್ಕಾರ, ಬಜೆಟ್ ಅನುಷ್ಠಾನದಲ್ಲಿ ಎಸ್ಸಿ ಎಸ್ಟಿಗಳಿಗೆ ದ್ರೋಹ ಬಗೆಯುತ್ತಿರುವುದಕ್ಕೆ ಇದು ಸಾಕ್ಷಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಕೋವಿಡ್ ಸಂಕಷ್ಟಕ್ಕೆ ಸಿಲುಕಿ ಲಕ್ಷಾಂತರ ಜನ ಉದ್ಯೋಗ ಕಳೆದುಕೊಂಡು ಬಡತನಕ್ಕೆ ಸಿಲುಕಿದ್ದಾರೆ.    ಹಾಗಾಗಿ ಹೊಸ ಉದ್ಯೋಗಗಳ ಸೃಷ್ಟಿಗೆ ವ್ಯಾಪಕ ಯೋಜನೆ ರೂಪಿಸಿ ನಿರುದ್ಯೋಗಿಗಳ ನೆರವಿಗೆ ಧಾವಿಸಬೇಕಿತ್ತು. ಹಾಗೆಯೇ ಪೆಟ್ರೋಲ್, ಡೀಸೆಲ್ ಮತ್ತು ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿದೆ. 

ನಿಜವಾಗಿಯೂ ಈ ಬಿಜೆಪಿ ಸರ್ಕಾರಕ್ಕೆ ಜನರ ಮೇಲೆ ಪ್ರಾಮಾಣಿಕ ಕಳಕಳಿ ಇದ್ದಿದ್ದರೆ ಪೆಟ್ರೋಲ್, ಡೀಸೆಲ್ ಮತ್ತು ಅಗತ್ಯವಸ್ತುಗಳ ಬೆಲೆ ಇಳಿಕೆಗೆ ಬಜೆಟ್ ನಲ್ಲಿ ಕ್ರಮ ಕೈಗೊಳ್ಳಬೇಕಿತ್ತು.    ಆದರೆ ಇಡೀ ಬಜೆಟ್ ನಲ್ಲಿ ಅಗತ್ಯವಸ್ತುಗಳ ಬೆಲೆ ಇಳಿಕೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಸರ್ಕಾರದ ದೂರದೃಷ್ಟಿ ಕೊರತೆಗೆ ಉದಾಹರಣೆಯಾಗಿದೆ ಎಂದಿದ್ದಾರೆ.

 ಕೋವಿಡ್ ಸಂದರ್ಭದಲ್ಲಿ ಬಹುತೇಕ ಬಡವರು ಮತ್ತು ಹಿಂದುಳಿದ ವರ್ಗಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರು.

 ಹಾಗಾಗಿ ಈ ಬಜೆಟ್ ನಲ್ಲಿ ಇಂತಹ ಮಕ್ಕಳಿಗೆ ಲ್ಯಾಪ್ ಟಾಪ್ ಅಥವಾ ಸ್ಮಾರ್ಟ್ ಫೋನ್ ನೀಡುವ ಯೋಜನೆ ರೂಪಿಸಬಹುದಿತ್ತು.

ಶಿಕ್ಷಣವೂ ಸೇರಿದಂತೆ  ಮಕ್ಕಳ ಸಮಗ್ರ ಅಭಿವೃದ್ಧಿಗೆ ಬಜೆಟ್ ನಲ್ಲಿ ರೂ ₹40,944 ಕೋಟಿ ಅನುದಾನ ಒದಗಿಸಿದ್ದರೂ ಬಡವರ ಮಕ್ಕಳ ಬಗ್ಗೆ ನಿರ್ದಿಷ್ಟ ಯೋಜನೆ ಇಲ್ಲದಿರುವುದು ಈ ಸರ್ಕಾರ ಬಡವರ ವಿಚಾರದಲ್ಲಿ ಎಷ್ಟೊಂದು ದಿವ್ಯನಿರ್ಲಕ್ಷ್ಯ ವಹಿಸಿದೆ ಎನ್ನುವುದಕ್ಕೆ ಸಾಕ್ಷಿ ಎಂದಿದ್ದಾರೆ.

ಸರ್ಕಾರಿ ಶಾಲಾ ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿಗೆ ₹500 ಕೋಟಿ ಹಾಗೂ ಪೀಠೋಪಕರಣಕ್ಕೆ ನೂರು ಕೋಟಿ ಅನುದಾನ ನೀಡಲಾಗಿದೆ.

ಕೋವಿಡ್ ಕಾಲದಲ್ಲಿ ಬಹುತೇಕ ಶಾಲೆಗಳು ಬಂದ್ ಆಗಿದ್ದವು. ಹಾಗಾಗಿ ಸರ್ಕಾರಿ ಶಾಲೆಗಳಲ್ಲಿ ತಂತ್ರಜ್ಞಾನ ಆಧಾರಿತ ಡಿಜಿಟಲ್ ತರಗತಿಗಳನ್ನು ರೂಪಿಸುವಲ್ಲಿ ಯಾವುದೇ ಯೋಜನೆ ಇಲ್ಲ ಎಂದು ಟೀಕಿಸಿದ್ದಾರೆ.

ಇನ್ನು ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಬಿಸಿಯೂಟ ನೌಕರರು, ಪೌರಕಾರ್ಮಿಕರು ಹಾಗೂ ಗ್ರಾಮ ಸಹಾಯಕರನ್ನು ಖಾಯಂಗೊಳಿಸಿ ಉದ್ಯೋಗ ಮತ್ತು ಜೀವನ ಭದ್ರತೆ ಒದಗಿಸುವ ಯೋಚನೆ ಮಾಡಿಲ್ಲ. ಬದಲಾಗಿ ಕೇವಲ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿ ವಂಚಿಸಲಾಗಿದೆ.

ಅಗಾಧ ಸಂಖ್ಯೆಯಲ್ಲಿರುವ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೆ ಯಾವುದೇ ಯೋಜನೆ ಹಾಗೂ ಭರವಸೆ ಇಲ್ಲ ಎಂದು ಖಂಡಿಸಿದ್ದಾರೆ.

 ಇನ್ನು ಕೃಷಿ ವಲಯ ಮತ್ತು  ರೈತರಿಗೆ ಶಕ್ತಿ ತುಂಬುವುದು ಎಂದರೆ ಸೂಕ್ತ ವಿದ್ಯುತ್, ನೀರು, ಗೊಬ್ಬರ, ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಹಾಗೂ ಮಾರುಕಟ್ಟೆ ಒದಗಿಸುವುದು. ಅದರ ಬಗ್ಗೆ ಹೆಚ್ಚಿನ ಗಮನ ನೀಡಿಲ್ಲ.

ಬದಲಿಗೆ ದೊಡ್ಡ ದೊಡ್ಡ ನೀರಾವರಿ ಯೋಜನೆಗಳನ್ನು ರೈತ ಪರ ಎಂದು ಹೇಳುವುದು ಮೂರ್ಖತನ ಮಾತ್ರವಲ್ಲ ರೈತರಿಗೆ ಬಗೆಯುವ ದ್ರೋಹ ಕಿಡಿಕಾರಿದ್ದಾರೆ.

ಇನ್ನು ಆರೋಗ್ಯ ಕ್ಷೇತ್ರಕ್ಕೆ ಬಂದರೆ ಹಾಲಿ ಇರುವ ಸರ್ಕಾರಿ ಜಿಲ್ಲಾ, ತಾಲೂಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮೂಲ ಸೌಕರ್ಯ ಒದಗಿಸಿ, ವೈದ್ಯರು, ದಾದಿಯರ ನೇಮಕ, ಲ್ಯಾಬ್, ಸ್ಕ್ಯಾನಿಂಗ್ ಯಂತ್ರಗಳು ಹಾಗೂ ಔಷಧ ಮುಂತಾದ ಅಗತ್ಯಗಳನ್ನು ಪೂರೈಸಿದರೆ ಬಲಗೊಳ್ಳುತ್ತದೆ.

ಆ ಬಗ್ಗೆ ಬಜೆಟ್ ನಲ್ಲಿ ಚಕಾರ ಎತ್ತಿಲ್ಲ. ಬದಲಿಗೆ ನಗರಗಳಲ್ಲಿ ನಮ್ಮ ಕ್ಲಿನಿಕ್ ಸ್ಥಾಪನೆಗೆ ಒತ್ತು ನೀಡಿರುವುದು ಬಿಬಿಎಂಪಿ ಮತ್ತು ಸ್ಥಳೀಯ ಚುನಾವಣಾ ಗಿಮಿಕ್ ಅಲ್ಲದೆ ಮತ್ತೇನು ಅಲ್ಲ.

ಬಿಜೆಪಿ ಸರ್ಕಾರ ಇಡೀ ಬಜೆಟ್ ನಲ್ಲಿ ಉದ್ಯೋಗ ಸೃಷ್ಟಿ, ಶಿಕ್ಷಣ ಮತ್ತು ಆರೋಗ್ಯ ಹಾಗೂ ಕೃಷಿ ಕ್ಷೇತ್ರಗಳಲ್ಲಿ ಸುಸ್ಥಿರ ಅಭಿವೃದ್ಧಿ ಮತ್ತು ಬದಲಾವಣೆಗೆ ಯೋಜನೆ ರೂಪಿಸದೆ, ಬಿಬಿಎಂಪಿ ಮತ್ತು ಮುಂದಿನ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜನರಲ್ಲಿ ಭ್ರಮೆ ಬಿತ್ತುವ ತಂತ್ರಕ್ಕೆ ಒತ್ತು ನೀಡಲಾಗಿದೆ. ಇದು ರಾಜ್ಯದ ಜನತೆಗೆ ವಂಚನೆಯಲ್ಲದೆ ಮತ್ತೇನೂ ಅಲ್ಲ ಎಂದು ಟೀಕಿಸಿದ್ದಾರೆ.


Post a Comment

0 Comments

Ad Code

Responsive Advertisement