Ticker

6/recent/ticker-posts

Ad Code

Responsive Advertisement

ಗುರುಸಾರ್ವಭೌಮರ ವೇದಾಂತ ಸಾಮ್ರಾಜ್ಯ ಪಟ್ಟಾಭಿಷೇಕವಾದ ದಿನ

 ಇಂದು, ಕಲಿಯುಗದ ಕಾಮಧೇನು ಎನಿಸಿಕೊಂಡಿರುವ ಶ್ರೀರಾಘವೇಂದ್ರ ಗುರುಸಾರ್ವಭೌಮರ ವೇದಾಂತ ಸಾಮ್ರಾಜ್ಯ ಪಟ್ಟಾಭಿಷೇಕವಾದ ದಿನ.



    ಪಾಠ ಪ್ರವಚನ ಮಾಡಿಕೊಂಡಿದ್ದ ಶ್ರೀವೆಂಕಟನಾಥರು *ಶ್ರೀರಾಘವೇಂದ್ರತೀರ್ಥ* ರಾದ ಸುದಿನ. ಮನು ಕುಲದ ಬೆಳಕಾಗಿ, ಜಗತ್ತಿನ ಕುಲಕೋಟಿಯನ್ನು ಉದ್ಧರಿಸುತ್ತಿರುವ ಮಹಾನುಭಾವರಾದ *ಶ್ರೀರಾಯ* ರನ್ನು ಈ ಪರ್ವ ಕಾಲದಲ್ಲಿ ಸ್ಮರಿಸೋಣ. 

*ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ|* *ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ||*

   ತಮಿಳುನಾಡಿನ *ಭುವನಗಿರಿ* ಯಲ್ಲಿ ವಾಸವಿದ್ದ  *ಶ್ರೀತಿಮ್ಮಣ್ಣ ಭಟ್ಟ ಹಾಗೂ ಸಾಧ್ವಿ ಶ್ರೀಮತಿ ಗೋಪಿಕಾಂಬ* ವಾಸವಿದ್ದರು. ಇವರಿಗೆ  1595ರಲ್ಲಿ ಒಂದು ಗಂಡು ಸಂತಾನವಾಯಿತು. ತಿರುಪತಿ ತಿಮ್ಮಪ್ಪನ ಅನುಗ್ರಹದಿಂದ ಹುಟ್ಟಿದ ಮಗುವಿಗೆ ವೆಂಕಟನಾಥ ಎಂದು ನಾಮಕರಣ ಮಾಡಲಾಯಿತು.

  ಬಾಲ್ಯದಲ್ಲಿಯೇ ಸಾಕಷ್ಟು ತೀಕ್ಷ್ಣಮತಿಯಾಗಿದ್ದ ವೆಂಕಟನಾಥ ವಿದ್ಯಾರ್ಥಿಯಾಗಿದ್ದಾಗ ಬಹುವಿದ್ಯಾ ಪ್ರಾವಿಣ್ಯತೆ ಗಳಿಸಿದ್ದರು.‌ ಅವರ ಸಹೋದರ ಶ್ರೀಗುರುರಾಜಾಚಾರ್ಯ ಹಾಗೂ ಭಾವ ಶ್ರೀನರಸಿಂಹಾಚಾರ್ಯರಲ್ಲಿ ಅಧ್ಯಯನ ನಡೆಸಿದ್ದರು.

ಸಕಲ ಶಾಸ್ತ್ರ ಕಲಿತ ಯುವಕನಾದ ವೆಂಕಣ್ಣನಿಗೆ ಸರಸ್ವತಿ ಎಂಬ ಕನ್ಯೆಯೊಡನೆ ವಿವಾಹವಾಯಿತು. 

    ನಂತರ ನಡೆದದ್ದೆಲ್ಲಾ ಪವಾಡವೇ. ಯುವಕ ವೆಂಕಣ್ಣ ಕುಂಭಕೋಣಂನಲ್ಲಿದ್ದ *ಶ್ರೀಸುಧೀಂದ್ರತೀರ್ಥ* ರಲ್ಲಿ ಆಶ್ರಯ ಪಡೆದರು. ಇವರ ಗುರುಗಳಾದ 64 ವಿದ್ಯೆಗಳಲ್ಲಿ ನಿಪುಣರಾದ *ಶ್ರೀವಿಜಯೀಂದ್ರತೀರ್ಥ* ರು ವೆಂಕಣ್ಣನ ಮೇಲೆ ಅಗಾಧವಾದ ಪ್ರಭಾವ ಬೀರಿದರು. ಮುಂದೆ ಯಾರಿಗೆ ಪೀಠ ನೀಡಬೇಕೆಂಬ ತವಕದಲ್ಲಿದ್ದ ಶ್ರೀಸುಧೀಂದ್ರತೀರ್ಥರಿಗೆ, ಶ್ರೀವೆಂಕಣ್ಣನಿಗೇ ಪೀಠ ನೀಡುವಂತೆ *ಶ್ರೀಮೂಲರಾಮ* ದೇವರ ಅನುಗ್ರಹವಾಯಿತು. ಇತ್ತ ವೆಂಕಣ್ಣನಿಗೂ ಸ್ವಪ್ನದಲ್ಲಿ *ವಾಗ್ದೇವಿ* ಕಾಣಿಸಿಕೊಂಡು ವೇದಾಂತ ಸಾಮ್ರಾಜ್ಯ ಸಿಂಹಾಸನ ಏರುವಂತೆ ಸೂಚಿಸಿದಳು.

 ಇದರಿಂದ ಪ್ರೇರಿತರಾದ ವೆಂಕಟನಾಥರಿಗೆ  ಕ್ರಿ.ಶ 1621ರ ದುರ್ಮತಿನಾಮ ಸಂವತ್ಸರ ಫಾಲ್ಗುಣ ಶುದ್ಧ ಬಿದಿಗೆಯಂದು ತಮಿಳುನಾಡಿನ ತಂಜಾವೂರಿನಲ್ಲಿ *ಸನ್ಯಾಸಾಶ್ರಮ* ನೀಡಿದ ಶ್ರೀಸುಧೀಂದ್ರತೀರ್ಥರು ವೆಂಕಟನಾಥರಿಗೆ *ಶ್ರೀರಾಘವೇಂದ್ರತೀರ್ಥ* ಎಂಬ ಅಭಿದಾನ ಅನುಗ್ರಹಿಸಿದರು. ತುರಿಯಾಶ್ರಮ(ಸನ್ಯಾಸ) ಸ್ವೀಕರಿಸಿದ ರಾಘವೇಂದ್ರತೀರ್ಥರು ಹಂಸನಾಮಕ ಪರಮಾತ್ಮನ ಪರಂಪರೆಯ ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನದ 16ನೇ ಯತಿಗಳಾದರು.

 ಸಕಲ ಶಾಸ್ತ್ರ ಕೋವಿದರಾದ, 64 ವಿದ್ಯೆಗಳಲ್ಲಿ ಪ್ರವೀಣರಾದ, ದುರ್ಮತಿಗಳನ್ನು ವಾದದಲ್ಲಿ ತಮ್ಮ ಸಿಂಹಗರ್ಜನೆಯಿಂದ ಓಡಿಸಿದ್ದ ಮಹಾನುಭಾವರಾದ ಶ್ರೀವಿಜಯೀಂದ್ರತೀರ್ಥರು. ಇವರ ಪೂರ್ಣಾನುಗ್ರಹ ಪಡೆದಿದ್ದ ಧೀಮಂತ ಸನ್ಯಾಸಿ ಶ್ರೀಸುಧೀಂದ್ರತೀರ್ಥ ಶ್ರೀಪಾದರು ಜಗತ್ತಿಗೆ *ಅನರ್ಘ್ಯರತ್ನ* ವನ್ನು ಕೊಡುಗೆಯಾಗಿ ನೀಡಿದ ದಿನವಿದು.

ಸಕಲ ಶಾಸ್ತ್ರಗಳನ್ನು ಕರತಲಾಮಲಕ ಮಾಡಿಕೊಂಡಿದ್ದ ವೆಂಕಟನಾಥರು ವೇದಾಂತ ಸಾಮ್ರಾಜ್ಯದ ಸಿಂಹಾಸನದಲ್ಲಿ *ಶ್ರೀರಾಘವೇಂದ್ರತೀರ್ಥ* ರಾಗಿ, ಭಕ್ತರ ಮನೋಭಿಷ್ಟ ಕರುಣಿಸುವ *ಕಲ್ಪಧ್ರುಮ* ವಾಗಿ, ದೀನರ ಪಾಲಿಗೆ ಕಷ್ಟ ನಿವಾರಿಸಿ ಸುಖ ನೀಡುವ *ಕಾಮಧೇನು* ವಾಗಿ, ನೊಂದವರ ಪಾಲಿನ *ಕಲ್ಪವೃಕ್ಷ* ವಾಗಿ, ಕೋಟ್ಯಾನುಕೋಟಿ ಜನರ ಪಾಲಿಗೆ *ಶ್ರೀರಾಘವೇಂದ್ರ ಗುರು ಸಾರ್ವಭೌಮ* ರಾಗಿ, ಅನಾಥರ ಪಾಲಿಗೆ *ರಾಘವೇಂದ್ರಸ್ವಾಮಿ* ಗಳಾಗಿ ಇಂದಿಗೂ ಅನುಗ್ರಹಿಸುತ್ತಿರುವ ಮಹಾನುಭಾವರು. 

ವೈಕುಂಠದಲ್ಲಿ *ಶ್ರೀಹರಿಯ* ಸೇವಾ ಕಿಂಕರನಾದ *ಶಂಕುಕರ್ಣ* ನ ಅವತಾರ ಇವರು. ಮೊದಲನೇ ಅವತಾರದಲ್ಲಿ *ಪ್ರಹ್ಲಾದರಾಜ* ರಾಗಿ, ಎರಡನೇ ಅವತಾರದಲ್ಲಿ *ಬಾಹ್ಲಿಕರಾಜ* ನಾಗಿ, ಮೂರನೇ ಅವತಾರದಲ್ಲಿ *ಶ್ರೀವ್ಯಾಸರಾಜ* ರಾಗಿ ಅವತರಿಸಿದ ಶಂಕುಕರ್ಣ ಜಗತ್ತಿನ ದೀನರನ್ನು ಉದ್ಧರಿಸಲು *ಶ್ರೀರಾಘವೇಂದ್ರಸ್ವಾಮಿ* ಗಳಾಗಿ ಅವತರಿಸಿದ ದಿನವಿದು.

 ಭಕ್ತರ ಪಾಲಿಗೆ *ರಾಯರು* ಆಗಿರುವ ಶ್ರೀರಾಘವೇಂದ್ರಗುರುಸಾರ್ವಭೌಮರನ್ನು *ಅನುದಿನ ನಮಿಸೋಣ, ಅನುಕ್ಷಣ ಸ್ಮರಿಸೋಣ.*

*ಓಂ ಶ್ರೀರಾಘವೇಂದ್ರಾಯ ನಮಃ*....🙏🙏🙏

ಶ್ರೀಶ ಚರಣಾರಾಧಕ:

ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ,

ಆನೇಕಲ್.

Post a Comment

0 Comments

Ad Code

Responsive Advertisement