ಹಣ ಬಲ ಹಾಗೂ ತೋಳ್ಬಲವೇ ಮುಖ್ಯವಾಗಿರುವ ದೇಶದ ರಾಜಕೀಯದಲ್ಲಿ ಸಾಮಾನ್ಯ ಜನರನ್ನು ಬೆಳೆಸುವ ಮೂಲಕ ಆಮ್ ಆದ್ಮಿ ಪಾರ್ಟಿಯು ಬದಲಾವಣೆಗೆ ನಾಂದಿ ಹಾಡುತ್ತಿದೆ ಎಂದು ಪಕ್ಷದ ರಾಷ್ಟ್ರೀಯ ವಕ್ತಾರ ಹಾಗೂ ದೆಹಲಿ ಜಲಮಂಡಳಿ ಉಪಾಧ್ಯಕ್ಷ ರಾಘವ್ ಚಡ್ಡಾ ಹೇಳಿದರು.
ಬೆಂಗಳೂರಿನ ಪ್ರೆಸ್‌ಕ್ಲಬ್ ಸಭಾಂಗಣದಲ್ಲಿ ನಡೆದ ಎಎಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ರಾಘವ್ ಚಡ್ಡಾ, “ದೇಶದ ರಾಜಕೀಯದಲ್ಲಿ ಎಎಪಿಯು ಹೊಸ ಪಕ್ಷ ಮಾತ್ರವಲ್ಲದೇ, ದೊಡ್ಡ ಪ್ರಮಾಣದಲ್ಲಿ ಹೊಸ ಪೀಳಿಗೆಯನ್ನು ರಾಜಕೀಯದಲ್ಲಿ ಬೆಳೆಸುತ್ತಿರುವ ಪಕ್ಷ ಕೂಡ ಹೌದು. ಇದಕ್ಕೆ ತಾಜಾ ಉದಾಹರಣೆ ಎಂದರೆ, ಮೊಬೈಲ್ ರಿಪೇರಿ ಮಾಡುತ್ತಿದ್ದ ವ್ಯಕ್ತಿಯನ್ನು ಪಂಜಾಬ್ ಸಿಎಂ ಚನ್ನಿಯವರ ವಿರುದ್ಧ ಎಎಪಿ ಕಣಕ್ಕಿಳಿಸಿದೆ. ಬಿಜೆಪಿ ಹಾಗೂ ಕಾಂಗ್ರೆಸ್‌ನಂತಹ ಹಳೆಯ ಪಕ್ಷಗಳು ಇರುವಾಗಲೂ ಎಎಪಿ ವೇಗವಾಗಿ ಬೆಳೆಯುತ್ತಿರುವುದಕ್ಕೆ ದೇಶದ ಯುವಜನತೆಯೇ ಪ್ರಮುಖ ಕಾರಣ. ದೆಹಲಿ ಸಿಎಂ ಕೇಜ್ರಿವಾಲ್‌ರವರ ಆಡಳಿತ ವೈಖರಿ ಹಾಗೂ ಎಎಪಿಯ ಸಿದ್ಧಾಂತವು ಯುವಜನತೆಗೆ ಚೆನ್ನಾಗಿ ಅರ್ಥವಾಗುತ್ತಿದೆ. ಭ್ರಷ್ಟ ಪಕ್ಷಗಳನ್ನು ಬದಿಗೊತ್ತಿ, ಪಾರದರ್ಶಕ ಹಾಗೂ ಜನಪರ ಆಡಳಿತ ನೀಡುವ ಪಕ್ಷದತ್ತ ಒಲವು ತೋರುತ್ತಿದ್ದಾರೆ” ಎಂದು ಹೇಳಿದರು.
ಆಮ್ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷರಾದ ಪೃಥ್ವಿ ರೆಡ್ಡಿ ಮಾತನಾಡಿ, “ಆಮ್ ಆದ್ಮಿ ಪಾರ್ಟಿಯು ಅಧಿಕಾರಕ್ಕೆ ಬಂದಿದ್ದರಿಂದ ದೆಹಲಿಯ ಶಿಕ್ಷಣ, ಆರೋಗ್ಯ, ಸಾರಿಗೆ, ಆಡಳಿತ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಸುಧಾರಣೆಯಾಗಿದೆ. ಪಂಜಾಬ್‌ನಲ್ಲೂ ಕೆಲವೇ ದಿನಗಳಲ್ಲಿ ಅಂತಹ ಬದಲಾವಣೆ ಆರಂಭವಾಗುವ ಸಾಧ್ಯತೆ ದಟ್ಟವಾಗಿದೆ. ನಮ್ಮ ಬೆಂಗಳೂರು ಕೂಡ ಸರದಿ ಸಾಲಿನಲ್ಲಿದ್ದು, ಚುನಾವಣೆಗಾಗಿ ಕಾಯುತ್ತಿದೆ. ಬೆಂಗಳೂರಿನ ಗಲ್ಲಿಗಳಿಗೆ ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ಪ್ರಚಾರಕ್ಕೆ ತೆರಳಿದಾಗ ಅವರಿಗೆ ಜನರು ತೋರುತ್ತಿರುವ ಸಕಾರಾತ್ಮಕ ಸ್ಪಂದನೆಯು ಇದಕ್ಕೆ ಸಾಕ್ಷಿಯಾಗಿದೆ” ಎಂದು ಹೇಳಿದರು.
“ದೆಹಲಿಯ ಸರ್ಕಾರಿ ಶಾಲೆಗಳ ಈಜುಕೊಳಗಳ ಚಿತ್ರವು ಸಾಮಾಜಿಕ ತಾಣಗಳಲ್ಲಿ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಅಲ್ಲಿನ ಶಾಲೆಗಳ ಮೂಲಸೌಕರ್ಯಗಳು, ಹ್ಯಾಪಿನೆಸ್ ಪಠ್ಯಕ್ರಮ, ಬಿಸಿನೆಸ್ ಬ್ಲಾಸ್ಟರ್ಸ್ ಕಾರ್ಯಕ್ರಮಗಳು ಜಗತ್ತಿನ ಗಮನ ಸೆಳೆಯುತ್ತಿವೆ. ಇವುಗಳ ಬಗ್ಗೆ ತಿಳಿದ ಕರ್ನಾಟಕದ ಜನರು ನಮ್ಮ ಶಾಲೆಗಳು ಈ ಮಟಕ್ಕೆ ಬೆಳೆಯುವುದು ಯಾವಾಗ ಎಂದು ಯೋಚಿಸಲು ಆರಂಭಿಸಿದ್ದಾರೆ” ಎಂದು ಪೃಥ್ವಿ ರೆಡ್ಡಿ ಹೇಳಿದರು.
ಆಮ್ ಆದ್ಮಿ ಪಾರ್ಟಿ ಮುಖಂಡರಾದ ರೋಮಿ ಭಾಟಿ, ನಂಜಪ್ಪ ಕಾಳೇಗೌಡ, ಡಾ. ವಿ.ವೆಂಕಟೇಶ್, ರವಿಶಂಕರ್, ಜಗದೀಶ್ ವಿ ಸದಂ, ಮೋಹನ್ ದಾಸರಿ, ಸುರೇಶ್ ರಾಥೋಡ್, ಮಂಜುನಾಥ್ ಸ್ವಾಮಿ, ಶಾಂತಲಾ ದಾಮ್ಲೆ, ಮುಕುಂದ್ ಗೌಡ, ರಾಜಶೇಖರ್ ದೊಡ್ಡಣ್ಣ, ಚನ್ನಪ್ಪಗೌಡ ನೆಲ್ಲೂರು, ಬಿ.ಟಿ.ನಾಗಣ್ಣ, ಜ್ಯೋತೀಶ್ ಕುಮಾರ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
0 Comments